ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಪದವಿಗೆ ವಿಪುಲ ಅವಕಾಶ

ಅಣಕು ನ್ಯಾಯಾಲಯ ಸ್ಪರ್ಧೆ: ಎಚ್‌. ಕೆ. ಜಗದೀಶ್ ಅಭಿಮತ
Last Updated 7 ಏಪ್ರಿಲ್ 2018, 11:37 IST
ಅಕ್ಷರ ಗಾತ್ರ

ಉಡುಪಿ: ಕಾನೂನು ಪದವಿ ಪಡೆ ದವರಿಗೆ ಒಳ್ಳೆಯ ಉದ್ಯೋಗ ಅವಕಾ ಶಗಳಿವೆ ಎಂದು ಕಾನೂನು ಇಲಾಖೆಯ ನ್ಯಾಯ ಹಾಗೂ ಮಾನವ ಹಕ್ಕುಗಳ ವಿಭಾಗದ ವಿಶೇಷ ಕಾರ್ಯದರ್ಶಿ ಎಚ್‌.ಕೆ. ಜಗದೀಶ್ ಹೇಳಿದರು.

ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಕೀಲ ಪಿ. ಶಿವಾಜಿ ಶೆಟ್ಟಿ ಸ್ಮಾರಕ ಮೂರನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾನೂನು ಪದವಿ ವ್ಯಾಸಂಗ ಕೊನೆ ಆಯ್ಕೆ ಎಂಬ ವಾತಾವರಣ ಈ ಹಿಂದೆ ಇತ್ತು. ಸ್ನಾತಕೋತ್ತರ ಪದವಿಗೆ ಸೀಟು ಸಿಗದವರು, ಸರ್ಕಾರಿ ಉದ್ಯೋಗ ಸಿಗದವರು ಮಾತ್ರ ಆಗ ಹೆಚ್ಚಿನ ಸಂಖ್ಯೆಯಲ್ಲಿ ಕಾನೂನು ಕಾಲೇಜುಗಳಿಗೆ ಸೇರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದ್ದು, ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳನ್ನು ಮೊದಲ ಆದ್ಯತೆಯಲ್ಲಿ ಆಯ್ಕೆ ಮಾಡಿಕೊಂಡಂತೆ ಕಾನೂನು ಪದವಿ ಬಯಸುತ್ತಿದ್ದಾರೆ ಎಂದರು.

ಕಾನೂನು ಪದವಿಗೆ ಬೇಡಿಕೆ ಹೆಚ್ಚಾದಂತೆ ಕಾಲೇಜುಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. 80ರ ದಶದಲ್ಲಿ ಇಡೀ ರಾಜ್ಯದಲ್ಲಿ 23 ಕಾಲೇಜುಗಳು ಇದ್ದವು. ಈಗ ಅದರ ಸಂಖ್ಯೆ 103ಕ್ಕೆ ಏರಿಕೆಯಾಗಿದೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳು ಇದರಲ್ಲಿ ಸೇರಿವೆ. ಕಾನೂನು ವ್ಯಾಸಂಗ ಮಾಡಿ ವಿಷಯದಲ್ಲಿ ಪರಿಣತಿ ಇದ್ದರೆ ಅತ್ಯುತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದು ಅವರು ಹೇಳಿದರು.

ಅಣಕು ನ್ಯಾಯಾಲಯ ಸ್ಪರ್ಧೆ ಗಳು ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶ ಕಲ್ಪಿಸುತ್ತವೆ. ನ್ಯಾಯಾಲಯದಲ್ಲಿ ಪ್ರಕರಣ ಗೆಲ್ಲಬೇಕು ಎಂದರೆ ಮೂರು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.

ಸಮರ್ಥನೆ, ಸಾಕ್ಷ್ಯ ಹಾಗೂ ಹಾಗೂ ಪ್ರತಿವಾದ ಬಹಳ ಮುಖ್ಯ. ಒಂದು ಕಟ್ಟಡದ ಅಡಿಪಾಯ ಗಟ್ಟಿಯಾಗಿದ್ದರೆ ಹೇಗೆ ಹಲವು ಮಹಡಿ ಕಟ್ಟಬಹುದೋ ಅದೇ ರೀತಿ ಸಮರ್ಥನೆಗಳು ಸರಿಯಾಗಿ ಇರಬೇಕು. ಅದರ ನಂತರ ಸಾಕ್ಷ್ಯವೂ ಸರಿಯಾಗಿದ್ದರೆ ವಾದ ಮಾಡಿ ಗೆಲ್ಲಬಹುದು ಎಂದರು.

ಸುಪ್ರೀಂ ಕೋರ್ಟ್‌ ನೀಡಿದ ತೀರ್ಪುಗಳ ಸಂಪೂರ್ಣ ಪಾಠ. ಆ ಪ್ರಕರಣದಲ್ಲಿನ ಸಮರ್ಥನೆ, ಸಾಕ್ಷ್ಯ ಎಲ್ಲವನ್ನೂ ಗ್ರಂಥಾಲಯದಲ್ಲಿ ಪುಸ್ತಕ ರೂಪದಲ್ಲಿ ಇಟ್ಟರೆ ವಿದ್ಯಾರ್ಥಿಗಳು ಅಧ್ಯಯನ ಮಾಡಿ ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ಸಲಹೆ ನೀಡಿದರು.

ಟಿ.ಎ. ಪೈ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಮಧುವೀರರಾಘವನ್, ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಆನಂದ ಮಡಿವಾಳ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸಿಸಿಲಿಯಾ ಡಿಸೋಜ, ಸ್ಪರ್ಧೆಯ ಸಂಚಾಲಕಿ ನಿರ್ಮಲಾ ಕುಮಾರಿ, ಪ್ರಾಂಶುಪಾಲ ಪ್ರೊ. ಪ್ರಕಾಶ್ ಕಣಿವೆ, ಜಯಂತಿ ಶೆಟ್ಟಿ ಇದ್ದರು.

**

ಕಾನೂನು ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ಎಲ್ಲ ಸೌಲಭ್ಯ ಹಾಗೂ ಸವಲತ್ತುಗಳು ಈಗ ಲಭ್ಯವಿದ್ದು, ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು –ಎಚ್‌.ಕೆ. ಜಗದೀಶ್, ಕಾನೂನು ಇಲಾಖೆ ವಿಶೇಷ ಕಾರ್ಯದರ್ಶಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT