ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ಮನ್ನಣೆ ನೀಡಿದ ಮುದ್ದೇಬಿಹಾಳ

1978ರಿಂದಲೂ ಎರಡೇ ಮನೆತನಕ್ಕೆ ಮಣೆ ಹಾಕಿದ ಮತದಾರ; ಬದಲಾದ ಕ್ಷೇತ್ರ ಕಣ
Last Updated 7 ಏಪ್ರಿಲ್ 2018, 12:09 IST
ಅಕ್ಷರ ಗಾತ್ರ

ವಿಜಯಪುರ: ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ ತಂಗಡಗಿ. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು ರಕ್ಕಸತಂಗಡಗಿಯಲ್ಲೇ. ಇಲ್ಲಿನ ಮಿಣಜಗಿಯ ಪರ್ಸಿ ಎಲ್ಲೆಡೆ ಪ್ರಸಿದ್ಧಿ.ಮಹಿಳಾ ರಾಜಕಾರಣಿಗೆ ಮನ್ನಣೆ ನೀಡಿದ ಜಿಲ್ಲೆಯ ಏಕೈಕ ವಿಧಾನಸಭಾ ಕ್ಷೇತ್ರ ಮುದ್ದೇಬಿಹಾಳ. ನಾಲ್ಕು ದಶಕಗಳಿಂದ ಎರಡು ಮನೆತನಕ್ಕಷ್ಟೇ ಮನ್ನಣೆ ನೀಡಿರುವುದು ಇಲ್ಲಿನ ವೈಶಿಷ್ಟ್ಯ.

1994ರಲ್ಲಿ ನಡೆದ ಚುನಾವಣೆಯಲ್ಲಿ ಸಚಿವರಾಗಿದ್ದ ಸಿ.ಎಸ್‌.ನಾಡಗೌಡರನ್ನು ಸೋಲಿಸಿ, ವಿಜಯ ಪತಾಕೆ ಹಾರಿಸಿದ ವಿಮಲಾಬಾಯಿ ದೇಶಮುಖ ಜಿಲ್ಲೆಯ ಏಕೈಕ ಮಹಿಳಾ ಶಾಸಕಿ. ಜನತಾದಳ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.

1978ರಿಂದ ಸತತ ನಾಲ್ಕು ದಶಕ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಮತದಾರ ನಾಡಗೌಡ, ದೇಶಮುಖ ಮನೆತನಕ್ಕೆ ಆಶೀರ್ವದಿಸಿದ್ದಾರೆ. ಉಳು
ವವನೇ ಭೂ ಒಡೆಯ ಕಾಯ್ದೆಯನ್ವಯ ತಮ್ಮ ಒಡೆತನದ ಜಮೀನನ್ನು ಗೇಣಿದಾರ ರೈತರಿಗೆ ಬಿಟ್ಟುಕೊಟ್ಟ ಎರಡೂ ಕುಟುಂಬಕ್ಕೆ ಕ್ಷೇತ್ರದ ಮತದಾರರು ನಿಷ್ಠೆ ತೋರಿದ್ದಾರೆ.

ದೇಶಮುಖ ಮನೆತನದ ಜಗದೇವರಾವ ಸಂಗನಬಸಪ್ಪ ದೇಶಮುಖ ಜನತಾ ಪಕ್ಷದಿಂದ ಹ್ಯಾಟ್ರಿಕ್‌ ವಿಜಯಭೇರಿ ಬಾರಿಸಿದವರು. ಇವರ ನಿಧನದ ಬಳಿಕ ಆಗ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ, ಯುವಕ ಸಿ.ಎಸ್‌.ನಾಡಗೌಡ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಕ್ಷೇತ್ರ ‘ಕೈ’ ವಶ ಪಡಿಸಿಕೊಂಡರು. ಮರು ಚುನಾವಣೆಯಲ್ಲೇ ಅನುಕಂಪದ ಅಲೆಗೆ ಮಣಿದರು. ನಂತರ ನಡೆದ ನಾಲ್ಕು ಚುನಾವಣೆಗಳಲ್ಲಿ ವಿಜಯ ಪತಾಕೆ ಹಾರಿಸಿ, ಕಾಂಗ್ರೆಸ್‌ನ ಭದ್ರ ಕೋಟೆ ರೂಪಿಸಿಕೊಂಡಿದ್ದಾರೆ.

‘ಕೈ’ ಭದ್ರ ಕೋಟೆ: ಕ್ಷೇತ್ರದ ರಾಜಕೀಯ ಇತಿಹಾಸ ಅವಲೋಕಿಸಿದರೆ ಕಾಂಗ್ರೆಸ್‌ ಭದ್ರಕೋಟೆ ಎಂಬುದರಲ್ಲಿ ಎರಡು ಮಾತಿಲ್ಲ. ಒಂಬತ್ತು ಬಾರಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ. ಇದರಲ್ಲಿ ನಾಡಗೌಡರೇ ಐದು ಬಾರಿ ಕಾಂಗ್ರೆಸ್‌ನಿಂದ ಚುನಾಯಿತರಾಗಿದ್ದಾರೆ.

ಕಾಂಗ್ರೆಸ್‌ ಹೊರತುಪಡಿಸಿದರೆ ಕ್ಷೇತ್ರ ಒಲಿದಿರುವುದು ಜನತಾ ಪರಿವಾರಕ್ಕೆ. ಅದೂ ದೇಶಮುಖ ಮನೆತನಕ್ಕೆ. ಪತಿ–ಪತ್ನಿ ಇಬ್ಬರೂ ಸಚಿವರಾಗಿದ್ದರು ಎಂಬುದು ಇಲ್ಲಿನ ಐತಿಹ್ಯ. 2018ರ ವಿಧಾನಸಭಾ ಚುನಾವಣೆಯಿಂದ ದೇಶಮುಖ ಮನೆತನ ಸಂಪೂರ್ಣ ವಿಮುಖವಾಗಿದ್ದು, ಹೊಸ ನಾಯಕತ್ವದ ನಿರೀಕ್ಷೆ ಕ್ಷೇತ್ರದಲ್ಲಿದೆ. ಖಾತೆ ತೆರೆಯುವ ಉಮೇದಿನಲ್ಲಿದ್ದ ಬಿಜೆಪಿಗೆ ಬಂಡಾಯದ ಬಿಸಿ ಬಿರುಸಿನಿಂದಲೇ ತಟ್ಟಿದೆ.

ಕ್ಷೇತ್ರ ಚಿತ್ರಣ:1957ರಲ್ಲಿ ಸಿದ್ಧಾಂತಿ ಪ್ರಾಣೇಶ ಗುರುಭಟ್ಟ (ಬ್ರಾಹ್ಮಣ), 1972ರಲ್ಲಿ ಎಂ.ಎಂ.ಸಜ್ಜನ (ಗಾಣಿಗ) ಶಾಸಕರಾಗಿ ಆಯ್ಕೆಯಾಗಿದ್ದು ಹೊರತುಪಡಿಸಿದರೆ, ಉಳಿದ ಅವಧಿಗೆ ಆಯ್ಕೆಯಾದವರು ಪಂಚಮಸಾಲಿ, ರಡ್ಡಿ ಸಮುದಾಯದವರು.

1978ರಿಂದ 2013ರವರೆಗೆ ನಾಲ್ಕು ದಶಕದ ಅವಧಿ ಕ್ಷೇತ್ರದಲ್ಲಿ ಪಂಚಮಸಾಲಿ, ರಡ್ಡಿ ಸಮುದಾಯದ ಶಾಸಕರೇ ಆಯ್ಕೆಯಾಗಿದ್ದಾರೆ. ಸತತ ಮೂರು ಬಾರಿ ಜೆ.ಎಸ್‌.ದೇಶಮುಖ (ಪಂಚಮಸಾಲಿ), 1994ರಲ್ಲಿ ವಿಮಲಾಬಾಯಿ ದೇಶಮುಖ ಆಯ್ಕೆಯಾದರೆ, ಉಳಿದ 25 ವರ್ಷದ ಅವಧಿ ಸಿ,ಎಸ್‌.ನಾಡಗೌಡ (ರಡ್ಡಿ) ಶಾಸಕರು.

ಕ್ಷೇತ್ರ ವ್ಯಾಪ್ತಿ: ಮುದ್ದೇಬಿಹಾಳ, ನಾಲತವಾಡ, ಢವಳಗಿ ವೃತ್ತ, ಅಗಸಬಾಳ, ತಾಳಿಕೋಟೆ, ಚೋಕಾವಿ, ತಮದಡ್ಡಿ, ಬಳಗಾನೂರ, ಮಿಣಜಗಿ, ಹರನಾಳ, ಹಡಗಿನಾಳ, ಮೂಕಿಹಾಳ, ಶಿವಪುರ, ಕಲ್ಲದೇವನಹಳ್ಳಿ, ಮಸಕಿನಾಳ, ಮೈಲೇಶ್ವರ, ನಾಗೂರ ಇನ್ನಿತರ ಗ್ರಾಮಗಳು ಮುದ್ದೇಬಿಹಾಳ ಕ್ಷೇತ್ರ ವ್ಯಾಪ್ತಿಗೆ ಬರಲಿವೆ.

ಕಣ ಚಿತ್ರಣ: ಚುನಾವಣಾ ಅಖಾಡ ಇದೀಗ ಸಂಪೂರ್ಣ ಬದಲಾಗಿದೆ. ಜೆಡಿಎಸ್‌ ಅಭ್ಯರ್ಥಿಯಾಗಿ ಘೋಷಿತರಾಗಿದ್ದ ಎ.ಎಸ್‌.ಪಾಟೀಲ ನಡಹಳ್ಳಿ ಬಿಜೆಪಿಯ ಸಂಭವನೀಯ ಅಭ್ಯರ್ಥಿ. ಸಿ.ಎಸ್‌.ನಾಡಗೌಡರಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದಾರೆ.

ಬಿಜೆಪಿ ಆಕಾಂಕ್ಷಿತರು ಒಟ್ಟಾಗಿದ್ದಾರೆ. ಪಕ್ಷಾಂತರಿಗೆ ಯಾವುದೇ ಕಾರಣಕ್ಕೂ ಟಿಕೆಟ್‌ ನೀಡಬಾರದು ಎಂದು ಗುಡುಗಿದ್ದಾರೆ. ಬಂಡಾಯದ ಎಲ್ಲ ಮುನ್ಸೂಚನೆಗಳು ದಟ್ಟೈಸಿವೆ. ಕೈಕೊಟ್ಟ ನಡಹಳ್ಳಿಗೆ ತಕ್ಕ ಪಾಠ ಕಲಿಸಬೇಕು ಎಂದು ನಿರ್ಧರಿಸಿರುವ ಜೆಡಿಎಸ್‌, ಪಂಚಮಸಾಲಿ ಸಮುದಾಯದ ಅಭ್ಯರ್ಥಿ ಅಥವಾ ಬಿಜೆಪಿ ಅಸಮಾಧಾನಿತರನ್ನೇ ಕಣಕ್ಕಿಳಿಸುವ ಯತ್ನ ನಡೆಸಿದೆ.

‘ನಮ್ಮ ಕಾಂಗ್ರೆಸ್‌’ನ ವರ್ತೂರು ಪ್ರಕಾಶ್‌ ಅಬ್ಬರ ಮೊದಲಿನಂತಿಲ್ಲ. ವಿ.ಪಿ.ರಕ್ಷಿತ್‌ ಕಣಕ್ಕಿಳಿಯುವ ಮೂಲಕ ಕುರುಬ ಸಮಾಜದ ಮತಬುಟ್ಟಿಗೆ ‘ಕೈ’ ಹಾಕಲಿದ್ದಾರೆ. ಜನ ಸಾಮಾನ್ಯರ ಪಾರ್ಟಿಯ ಡಾ.ಅಯ್ಯಪ್ಪ ದೊರೆ ಪತ್ರ ಬರೆಯುವ ಮೂಲಕ ಮತದಾರರ ಮನ ತಟ್ಟಲು ಮುಂದಾಗಿದ್ದಾರೆ.

ತಾಳಿಕೋಟೆ; ಅವಿರೋಧ ಆಯ್ಕೆಯ ಐತಿಹ್ಯ

1966ರಲ್ಲಿ ತಾಳಿಕೋಟೆ ವಿಧಾನಸಭಾ ಕ್ಷೇತ್ರ ಮುದ್ದೇಬಿಹಾಳ ಕ್ಷೇತ್ರದಲ್ಲಿ ವಿಲೀನವಾಯಿತು. ಇದಕ್ಕೂ ಮುನ್ನ ನಡೆದ ಎರಡು ಚುನಾವಣೆಗಳಲ್ಲಿ ಕುಮಾರಗೌಡ ಅಡಿವೆಪ್ಪಗೌಡ ಪಾಟೀಲ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿ 1957ರಲ್ಲಿ ಇತಿಹಾಸ ಸೃಷ್ಟಿಸಿದರೆ, 1962ರಲ್ಲಿ ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ ಕಾಂಗ್ರೆಸ್‌ನಿಂದ ಅವಿರೋಧ ಆಯ್ಕೆಯಾಗಿದ್ದು ಕ್ಷೇತ್ರದ ಐತಿಹ್ಯ.

ಮತದಾರರು: ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಮಾರ್ಚ್ ಅಂತ್ಯದವರೆಗೂ 2,01,058 ಮತದಾರರಿದ್ದಾರೆ. 239 ಮತಗಟ್ಟೆಗಳಿವೆ. ರಡ್ಡಿ ಮತದಾರರು 38,155 ಇದ್ದರೆ, ಮುಸ್ಲಿಂ 12059, ಕುರುಬ 29,135, ಪರಿಶಿಷ್ಟ ಜಾತಿ 24,442, ಗಂಗಾ ಮತಸ್ಥ 2,813, ಲಂಬಾಣಿ 10,439, ಗಾಣಿಗ 5,184, ಜಂಗಮ 4,831, ಬಣಜಿಗ 3,929, ಕಮ್ಮಾರ 2,401, ಸವಿತಾ ಸಮಾಜ 2,392, ಮಾಳಿ 751, ನೇಕಾರ 3,893, ಮಡಿವಾಳ 3,377, ಪರಿಶಿಷ್ಟ ಪಂಗಡ 9,353, ಬ್ರಾಹ್ಮಣ 2,019, ಉಪ್ಪಾರ 2,454, ಕುಂಬಾರ 1,999, ವಿಶ್ವಕರ್ಮ 3,140, ಕುಡು ಒಕ್ಕಲಿಗ 2,307, ರಜಪೂತ 1,587, ಮರಾಠ 2,081, ಜೈನ ಅಂದಾಜು 977 ಮತದಾರರು ಸೇರಿದಂತೆ ಇನ್ನಿತರೆ ಜಾತಿಯ ಮತದಾರರಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಮರೀಚಿಕೆಯಾದ ಉದ್ಯಮ

ಕ್ಷೇತ್ರ ವ್ಯಾಪ್ತಿಯಲ್ಲಿ ನಿರುದ್ಯೋಗಿ ಯುವ ಸಮೂಹಕ್ಕೆ ಉದ್ಯೋಗ ಒದಗಿಸುವ ಯಾವುದೇ ವಲಯದ ಕಾರ್ಖಾನೆಗಳು ಆರಂಭಗೊಂಡಿಲ್ಲ. ಖಾಸಗಿ ಸಕ್ಕರೆ ಕಾರ್ಖಾನೆಯಷ್ಟೇ ಕಾರ್ಯಾರಂಭಿಸಿದೆ.ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಸಿಗ್ತಿಲ್ಲ. ತಂಗಡಗಿ, ನಾಗರಬೆಟ್ಟ, ಬಸರಕೋಡ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿವೆ. ರಸ್ತೆ ಕಾಮಗಾರಿ ಕಳಪೆಯಾಗಿದೆ. ಮುದ್ದೇಬಿಹಾಳ ತಾಲ್ಲೂಕು ಸರ್ಕಾರಿ ಆಸ್ಪತ್ರೆ, ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ. ಕ್ಷೇತ್ರದ ಒಟ್ಟಾರೆ ಪ್ರಗತಿ ಸಾಧನೆ ತೃಪ್ತಿಕರವಿಲ್ಲ ಎನ್ನುತ್ತಾರೆ ಬಳವಾಟದ ಬಸವರಾಜ ಬಿ.ಬಿರಾದಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT