ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಒಂದು ಜಾನಪದ ಕ್ರಾಂತಿ

Last Updated 7 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ದಲಿತರ ಪಾಲಿಗೆ ಮಂಟೇಸ್ವಾಮಿ, ಮಾದೇಶ್ವರರು ಸಾಂಸ್ಕೃತಿಕ ನಾಯಕರು. ಹಿಂದುತ್ವವನ್ನು ಉಪಾಯದಲ್ಲಿ ಇವರು ನಿಭಾಯಿಸಿದ್ದಾರೆ. ಹಾಗೆಯೇ ತಮ್ಮದೇ ಆದ ಜಾನಪದವನ್ನು ಪಡೆದಿದ್ದಾರೆ. ದಮನಿತ ಜನಪದಗಳು ಹೀಗೆಯೇ ಮುಗ್ಧತೆಯಲ್ಲೇ ಹಿಂದುತ್ವವನ್ನು ಸಹಿಸಿ ವೈದಿಕ ಅಪಾಯಗಳಿಂದ ಪಾರಾಗಿವೆ. ಬಸವಣ್ಣ ಹಿಂದುತ್ವದ ವಿರುದ್ಧ ದಂಗೆ ಎದ್ದು ಬಸವ ಜಾನಪದ ಕ್ರಾಂತಿಯನ್ನು ಮಾಡಿದ್ದಿದೆ. ಅಂಬೇಡ್ಕರ್ ಜಾನಪದ ಕ್ರಾಂತಿ ಇನ್ನೊಂದು ಬಗೆಯದು. ಅಂಬೇಡ್ಕರ್ ಅವರು ಎಲ್ಲ ದಮನಿತರ ಆಧುನಿಕ ಯುಗದ ಸಾಂಸ್ಕೃತಿಕ ನೇತಾರ. ಮಧ್ಯಕಾಲೀನ ಭಾರತದ ಉದ್ದಕ್ಕೂ ತಳಸಮುದಾಯಗಳು ವೈದಿಕ ಶಾಹಿಯ ಜೊತೆ ಸ್ನೇಹದಲ್ಲಿ ಇದ್ದಂತೆ ಒಂದು ಬಗೆಯಲ್ಲಿ ಭ್ರಾತೃತ್ವವನ್ನು ಆಚರಿಸಿದಂತೆ ಸಾವಿರಾರು ಜನಪದ ಮಹಾಕಾವ್ಯಗಳನ್ನು ಅವೈದಿಕವಾಗಿ ಕಟ್ಟಿವೆ. ಭಕ್ತಿಪಂಥ ಚಳವಳಿಗಿಂತ ಬೇರೆ ಆ ಬಗೆಯ ಜನಪದ ಮಹಾಕಾವ್ಯಗಳ ಚಳವಳಿ.

ಅಂಬೇಡ್ಕರ್ ಇಪ್ಪತ್ತನೇ ಶತಮಾನದ ಎಲ್ಲ ದಮನಿತರ ಪ್ರತಿನಿಧಿ. ವಿಮೋಚಿತ ಜನಪದಗಳ ಜಾತ್ಯತೀತ ತತ್ವ ಅಂಬೇಡ್ಕರ್ ಜಾನಪದದ ಸಾರ. ದಲಿತರು ಅಂಬೇಡ್ಕರ್ ಮೂಲಕ ವಿಮೋಚನೆಯ ಜಾನಪದವನ್ನು ಕಂಡುಕೊಂಡರು. ಮಂಟೇಸ್ವಾಮಿ, ಮೈಲಾರಲಿಂಗ ಮುಂತಾದ ಪಶುಪಾಲಕ ಸಮುದಾಯಗಳ ಸಾಂಸ್ಕೃತಿಕ ವೀರರು ಮಾಡಲಾಗದ್ದನ್ನು ಅಂಬೇಡ್ಕರ್ ಮಾಡಿದರು. ಸ್ವತಃ ಅಂಬೇಡ್ಕರ್ ಅವರೇ ಒಂದು ವಿರಾಟ್ ಜಾನಪದ. ಅವರ ತತ್ವಗಳೇ, ಹೋರಾಟಗಳೇ, ಬರಹಗಳೇ ದಮನಿತರ ನವ ಮೌಖಿಕತೆಯಾದವು. ಪವಾಡಗಳ ಬದಲಿಗೆ ಅಂಬೇಡ್ಕರ್ ಸತ್ಯವನ್ನು ಬಯಲು ಮಾಡಿದರು. ವಿಮೋಚನೆಯ ದಾರಿಗಳನ್ನು ತೋರಿದರು. ಯಾವ ಸಮಾಜದಲ್ಲಿ ಭ್ರಾತೃತ್ವ ಇಲ್ಲವೋ ಆ ಭ್ರಾತೃತ್ವದ ಆರ್ದ್ರತೆಯನ್ನು ಸಾರಿದರು. ಎಲ್ಲಿ ಅಸಮಾನತೆಯಿದೆಯೊ ಅದರ ವಿರುದ್ಧ ನ್ಯಾಯದ ದಂಗೆಯನ್ನು ಎಬ್ಬಿಸಿದರು. ಯಾರ‍್ಯಾರಿಗೆ ಸ್ವಾತಂತ್ರ್ಯ ಹರಣವಾಗಿದೆಯೊ ಅದನ್ನು ಸಂವಿಧಾನದ ಮೂಲಕ ಸಮಾನವಾಗಿ ತಂದುಕೊಟ್ಟರು. ಆ ಮಟ್ಟಿಗೆ ಹೇಳುವುದಾದರೆ ಅಂಬೇಡ್ಕರ್ ರೂಪಿಸಿದ ಸಂವಿಧಾನವೇ ಪ್ರಜಾಪ್ರಭುತ್ವದ ಭಾರತದ ಆಧುನಿಕ ಜಾನಪದ. ಇದು ಜಾತ್ಯತೀತ ಜಾನಪದ.

ಗಾಂಧೀಜಿಯ ಜಾನಪದ ಇನ್ನೊಂದು ವಿರಾಟ್ ಕಥನ. ಚದುರಿಹೋಗಿದ್ದ ದಮನಿತ ಜನಪದಗಳಿಗೆ ನವಮೌಖಿಕತೆಯ ದೊಡ್ಡ ಶಕ್ತಿಯಾದರು ಅಂಬೇಡ್ಕರ್. ಆ ಮೂಲಕ ಚಹರೆ ಇಲ್ಲದೆ ಅನಾಮಿಕವಾಗಿ ಯಾವುದಾವುದೊ ಹಾಡು, ಕಥೆ, ಹೇಳುತ್ತಿದ್ದ ದಲಿತರು ವಿಮೋಚನೆಯ ಜಾನಪದವನ್ನು ಸ್ತುತಿಸಿದರು. ಹೊಸ ಬಗೆಯ ಆಚರಣೆಗಳನ್ನು ಆಚರಿಸಿದರು. ಭಾರತದ ಉದ್ದಕ್ಕೂ ಅಂಬೇಡ್ಕರ್ ಮಾರ್ಗಗಳಿವೆ; ಬಡಾವಣೆಗಳಿವೆ, ಪ್ರತಿಮೆಗಳಿವೆ, ಸಂಘಟನೆಗಳಿವೆ, ಸಂಸ್ಥೆಗಳಿವೆ. ಅಂಬೇಡ್ಕರ್ ವಾದದಿಂದಲೇ ದಂಗೆಯ ಜಾನಪದವೂ ಹುಟ್ಟಿದೆ. ದಲಿತರ ಹೋರಾಟಗಳು ಬಹುರೂಪಿ ದಂಗೆಗಳು. ಹಳೆಯ ಮೌಖಿಕತೆಯಲ್ಲೇ ಹೊಸ ಬಗೆಯ ಹೋರಾಟದ ಹಕ್ಕಿನ ನ್ಯಾಯದ ದಂಗೆಯ ಹಾಡುಗಳು ಮಾಡಿರುವ ಪರಿಣಾಮ ಸಣ್ಣದಲ್ಲ. ಕರ್ನಾಟಕದ ದಲಿತ ಸಂಘರ್ಷ ಸಮಿತಿ ಮತ್ತು ಮಹಾರಾಷ್ಟ್ರದ ದಲಿತ್ ಪ್ಯಾಂಥರ್ಸ್ ಅಂಬೇಡ್ಕರ್ ಜಾನಪದ ಕ್ರಾಂತಿಯ ಎರಡು ನಿರೂಪಣೆಗಳು.

(ಚಿತ್ರ: ಮಹಾಂತೇಶ್‌ ದೊಡ್ಡಮನಿ)

ಅಂಬೇಡ್ಕರ್ ಜಾನಪದ ಕ್ರಾಂತಿ ಸಾವಿರಾರು ವರ್ಷಗಳಿಂದ ದಣಿದಿದ್ದ; ದಾಹದ ತೀವ್ರತೆಯಲ್ಲಿ ನಮಗೂ ಒಂದು ಬೊಗಸೆ ನೀರು ಕೊಡಿ ಎಂದು ಚೌದಾರ್ ಕೆರೆಯ ಮುಂದೆ ನಿಂತದ್ದನ್ನು ಚರಿತ್ರೆ ಮರೆಯಲಾರದು. ಇದು ಗಾಂಧಿ ಬಡವರ ಉಪ್ಪಿಗಾಗಿ ದಂಡಿ ಉಪ್ಪಿನ ಸತ್ಯಾಗ್ರಹ ಮಾಡಿದ್ದಕ್ಕಿಂತಲೂ ದೊಡ್ಡದು. ಗಾಂಧಿಯ ಅಹಿಂಸೆ, ಸರ್ವೋದಯ ಸಂಗತಿಗಳು ಅಂಬೇಡ್ಕರ್ ಜಾನಪದದಲ್ಲಿ ಹೆಚ್ಚು ವಾಸ್ತವವಾದಿಯಾಗಿವೆ. ಭಾರತದ ದಲಿತ ರಾಜಕಾರಣದಲ್ಲಿ ಅಂಬೇಡ್ಕರ್ ಜಾನಪದ ಕ್ರಾಂತಿಯ ಎಳೆಗಳಿವೆ. ಅಂಬೇಡ್ಕರ್ ಜಾನಪದವನ್ನು ಕೇವಲ ಅಸ್ಪೃಶ್ಯರ ವಿಮೋಚನೆಯ ಜಾನಪದ ಎಂದು ಸಂಕುಚಿತಗೊಳಿಸಬಾರದು. ಭ್ರಾತೃತ್ವ, ಸಮಾನತೆ, ಸ್ವಾತಂತ್ರ್ಯ ಯಾರಿಗೆ ಬೇಡ... ಅಂಬೇಡ್ಕರ್ ಮಾಡಿದ ಜಾನಪದ ಕ್ರಾಂತಿಯು ಒಂದು ಬಗೆಯಲ್ಲಿ ಮೌನ ಕ್ರಾಂತಿ; ಅಹಿಂಸೆಯ ಕ್ರಾಂತಿ; ಮಾನವತ್ವದ ಕ್ರಾಂತಿ. ಗಾಂಧಿ, ಅಂಬೇಡ್ಕರ್ ಇಬ್ಬರನ್ನೂ ಒಪ್ಪಿಕೊಂಡ ಜನಪದಗಳು ಅಖಂಡವಾಗಿ ಒಂದು ದೇಶದ ವಿಮೋಚನೆ ಮತ್ತು ಪ್ರಗತಿಯ ದ್ಯೋತಕ. ಇವರಿಬ್ಬರಲ್ಲಿ ಭಿನ್ನಾಭಿಪ್ರಾಯಗಳಿವೆ ನಿಜ; ಆದರೆ ಒಂದು ದೇಶದ ವಿಮೋಚನೆಯ ಮಾನವತ್ವದ ತಳಹದಿಗೆ ಬೇಕಾದ ಮಾನವ ಒಪ್ಪಂದಗಳು ಇವರಿಬ್ಬರ ಜಾನಪದದಲ್ಲೂ ಸಮನಾಗಿ ವ್ಯಾಪಕವಾಗಿವೆ. ಅಂಬೇಡ್ಕರ್ ಜಾನಪದ ಕ್ರಾಂತಿಯ ಬಹುದೊಡ್ಡ ತಾಯಿ ಬೇರು ಯಾವುದು ಎಂದರೆ; ಅದು ಜ್ಞಾನದ ಬೇರು. ಈ ಜ್ಞಾನದ ಆಳದ ಬೇರಾದರೂ ಎಲ್ಲಿಂದ ಬಂದಿದೆ ಎಂದರೆ; ಅದು ಬುದ್ಧನ ಮಾನವೀಯ ಅರಿವಿನಿಂದ ಬಂದಿದೆ.

ಜಾನಪದ ಎಂದರೆ ಹಳೆ ಸರಕು ಎಂಬ ಒಂದು ಉಪೇಕ್ಷಿತ ನಿಲುವು ಹಿಂದಿನಿಂದಲೂ ಬಂದಿದೆ. ಕಾಲಕಾಲದ ಸಾಮಾನ್ಯರ ವಿಮೋಚನೆಯ ಅರಿವಿನ ಸಂಯುಕ್ತ ಮಾನವ ಒಪ್ಪಂದಗಳು ಜಾನಪದವಾಗಿ ಬೆಳೆದು ಬಂದಿವೆ. ಹೀಗಾಗಿಯೇ ಗಾಂಧಿ ಅಂಬೇಡ್ಕರ್ ಹಿಂದೆ ಅಲೆಯಲೆಯಾಗಿ ಸಾಗರವಾಗಿ ಜನತೆ ಇವರಿಬ್ಬರ ಹಿಂದೆ ಬಂದು ನೆರೆದು ಇವರ ವಿಮೋಚನೆಯ ವಿಚಾರ ಕೇಳಿ ಹೊಸ ಬಗೆಯ ಮಾತುಗಳನ್ನು ಆಡಲು ಆರಂಭಿಸಿದ್ದು. ಅಂಬೇಡ್ಕರ್ ಅವರ ಮಾತುಗಳು ದೇಶದ ಉದ್ದಕ್ಕೂ ಮೊಳಗಿದವು. ಅದರಿಂದ ಮೂಕರಿಗೆ ಬಾಯಿ ಬಂತು. ಹಾಗೆಯೇ ತಾವೀಗ ಏನನ್ನು ಕೇಳಬೇಕು; ಹೇಗೆ ಪ್ರಶ್ನಿಸಬೇಕು; ಯೋಚಿಸಬೇಕು ಹಾಗೂ ಏನನ್ನು ಸಮಾಜದ ಮುಂದೆ ನುಡಿಯಬೇಕು ಎಂಬ ಮಾತಿನ ಕ್ರಾಂತಿ ಉಂಟಾಯಿತು. ವಚನ ಕ್ರಾಂತಿಯ ರೀತಿಯಲ್ಲೇ ದಲಿತರು ಮಾತನಾಡಿದರು. ಕಪ್ಪು ಇಲ್ಲಿ ಬೆಳಕಾಗುವ ಪರಿ ಹೇಗೆ ಎಂಬ ಒಂದು ಹೋರಾಟದ ಧ್ಯಾನವೂ ಸಾಧ್ಯವಾಯಿತು. ಅಷ್ಟರ ಮಟ್ಟಿಗೆ ಊರು ಕೇರಿಗಳ ತಳಜಾತಿಗಳ ಭಾಷೆಗಳು ಹರಿತವಾದವು. ಹಾಗೆಯೇ ಹೊಸ ಸಾಹಿತ್ಯವನ್ನು ಸೃಷ್ಟಿಸಿಕೊಂಡವು. ಒಂದು ಮುಖ್ಯ ಸಂಗತಿಯನ್ನಿಲ್ಲಿ ನೆನೆಯಬೇಕು. ಅಂಬೇಡ್ಕರ್ ಜಾನಪದ ಕ್ರಾಂತಿಯು ಒಂದು ರಾಜಕೀಯ ಪ್ರಣಾಳಿಕೆ ಇದ್ದಂತಿದೆ. ದಲಿತರ ಸಾಂಸ್ಕೃತಿಕ ವೀರರು ಹಿಂದುತ್ವದ ಜೊತೆ ಒಪ್ಪಂದ ಮಾಡಿಕೊಂಡು ಸಾಮರಸ್ಯ ಕಾಯ್ದುಕೊಂಡಿದ್ದರು. ಆ ಕಾಲಕ್ಕೆ ಇದ್ದ ಉಪಾಯದ ಪ್ರತಿರೋಧ ಅದು ಒಂದೇ ಆಗಿತ್ತು. ಇವತ್ತು ಸಾಂಸ್ಕೃತಿಕ ರಾಜಕಾರಣವನ್ನು ಮತೀಯವಾಗಿ ಸಲೀಸಾಗಿ ಮಾಡಬಹುದು. ಅಂದಿನ ದಲಿತರ ಸಾಂಸ್ಕೃತಿಕ ರಾಜಕಾರಣ ಅವತ್ತಿನ ವೈದಿಕರಿಗೆ ಸರಿಯಾಗಿ ಗೊತ್ತಿರಲಿಲ್ಲ. ಗೊತ್ತಾಗಿದ್ದಿದ್ದರೆ... ಅಂತಹ ಬೌದ್ಧ ಧರ್ಮವನ್ನೇ ಹೊರಗಟ್ಟಿದ ಅವರಿಗೆ ದಲಿತರನ್ನು ಮುಗಿಸುವುದು ಕಷ್ಟವಾಗುತ್ತಿರಲಿಲ್ಲ. ಈ ಬಗೆಯ ಉಪಾಯಗಳು ದಲಿತರನ್ನೂ; ದೇಶವನ್ನೂ ಬಹುಕಾಲ ಕಾಯಲಾರವು ಎಂಬುದು ಅಂಬೇಡ್ಕರರಿಗೆ ತಿಳಿದಿದ್ದರಿಂದಲೇ ಅವರು ವೈಚಾರಿಕ ಸಂವಿಧಾನವನ್ನು ರೂಪಿಸಿದರು. ಯಾರು ಎಷ್ಟೇ ತಿದ್ದುಪಡಿ ಮಾಡಬಹುದಾದರೂ ಅದರ ಮಾನವತ್ವದ ಮಾಯಾವಿ ಬೇರುಗಳನ್ನು ಯಾರು ಕೂಡ ಬುಡಮೇಲು ಮಾಡಲು ಸಾಧ್ಯವೇ ಇಲ್ಲ.

ಹೀಗಾಗಿ ಅಂಬೇಡ್ಕರ್ ರಚಿತ ಸಂವಿಧಾನವು ಒಂದು ದೇಶದ ಸಾರ್ವಭೌಮತ್ವವನ್ನು ಕಾಯುವ ರಾಷ್ಟ್ರೀಯತೆಯ ಜಾನಪದ. ಇದರಲ್ಲೇ ನಾವು ದೇಶಭಕ್ತಿಯನ್ನು ಅರ್ಥಮಾಡಿಕೊಳ್ಳಬೇಕಾಗಿರುವುದು. ರಷ್ಯಾ ದೇಶದ ಸಂಕೋಲೆಯ ನಡುವೆ ಫಿನ್‌ಲ್ಯಾಂಡ್ ಎಂಬ ಪುಟ್ಟ ದೇಶ ತನ್ನ ದೇಶದ ಜನಪದ ಕಾವ್ಯವಾದ ‘ಕಲೇವಾಲ’ದಿಂದಲೇ ಪ್ರತಿರೋಧ ಒಡ್ಡಿ ಬದುಕುಳಿದಿದೆ. ಆ ಕಾವ್ಯ ಆ ದೇಶದ ರಾಷ್ಟ್ರೀಯ ಕಾವ್ಯ. ಅಂಬೇಡ್ಕರ್ ಜಾನಪದ ಕ್ರಾಂತಿಯ ಮಹಾಕಾವ್ಯ ಎಂದರೆ; ಅದು ಭಾರತೀಯ ಸಂವಿಧಾನ. ಅದು ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳ ನೀತಿ ಸಂಹಿತೆಯ ತಾಯ್ತನ. ಯಾರಾದರೂ ತಾಯಿಯನ್ನು ಬದಲಾಯಿಸಿಕೊಳ್ಳಲು ಬರುತ್ತದೆಯೇ...? ಬದಲಿ ತಾಯಿ ಅಸಲಿ ತಾಯಿಯೇ...? ಸಂವಿಧಾನ ಬೇರೆ ಅಲ್ಲ; ರಾಷ್ಟ್ರೀಯತೆಯ ತಾಯಿ ಭಾರತಿ ಬೇರೆ ಅಲ್ಲ. ಹೆತ್ತ ತಾಯಿಯನ್ನೇ ಮಾರಿಬಿಡಬಹುದೇ... ಸಾಧ್ಯವಿಲ್ಲ; ಕೆಟ್ಟ ರಾಜಕೀಯ ಮಾತಿನ ಬಲೆಗೆ ಸಿಲುಕಿದ ರಾಜಕಾರಣಿಗಳು ತಮಗೇ ತಿಳಿಯದಂತೆ ಮಾತಿನ ಹರಕೆ ಕುರಿಗಳಾಗಿ ಪ್ರಜಾಪ್ರಭುತ್ವದಲ್ಲಿ ಬಲಿಯಾಗುತ್ತಿರುತ್ತಾರೆ. ಅಂಬೇಡ್ಕರ್ ಜಾನಪದ ಕ್ರಾಂತಿಯು ರಕ್ತ ಹರಿಸಲಿಲ್ಲ. ಗಾಂಧಿಯ ಶಾಂತಿ ತತ್ವಕ್ಕಿಂತಲೂ ಮಿಗಿಲಾದುದು ಅಂಬೇಡ್ಕರ್ ಜಾನಪದದ ಶಾಂತಿಯ ನಿವೇದನೆ. ಸಂವಿಧಾನದ ಪ್ರಿಯಾಂಬಲ್ ಮಾತುಗಳು ಜೋರಾಗಿ ಒಂದು ಬೃಹತ್ ಸಭೆಯಲ್ಲಿ ಇಡಿಯಾಗಿ ಘೋಷಿಸಲಿ... ಆ ಪ್ರತಿಧ್ವನಿಯ ಅಲೆಗಳ ದಿವ್ಯ ಆನಂದದ ಮೂಲಕ ಅಂಬೇಡ್ಕರ್ ಜಯಂತಿಯನ್ನು ಆಚರಿಸಬೇಕು. ಆ ಬಗೆಯೇ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬಹುದಾದ ರಾಷ್ಟ್ರೀಯ ಜಾನಪದ.

ಅಂಬೇಡ್ಕರ್ ಹಾಗೂ ಗಾಂಧಿಯ ಜಾನಪದ ಸಂಗಮಿಸುತ್ತವೆಯೋ; ವಿಘಟಿಸುತ್ತವೆಯೊ; ಅದು ಬೇರೆ ವಿಚಾರ... ಆದರೆ; ಶತಮಾನಗಳ ಉದ್ದಕ್ಕೂ ತೆಪ್ಪಗಿದ್ದವರು ಈ ಇಬ್ಬರ ಹಿಂದೆ ಹಾಗೆ ಸಮುದ್ರದ ಅಲೆಗಳಂತೆ ಬಂದು ಒಂದು ಕ್ರಾಂತಿಯನ್ನು ಮಾಡಿ ಮುಗಿಸಿ ಈಗ ಯಾಕೆ ತಮಗೆ ಇದೆಲ್ಲ ಅನಗತ್ಯ ಎಂಬ ದಣಿವಿನಲ್ಲಿ ಸಮಾಜಗಳು ಜಾಗತೀಕರಣದ ಸಮುದ್ರದ ಅಲೆಗಳಲ್ಲಿ ತೆಪ್ಪಗೆ ಮುಂದೆ ಸಾಗಿಬಿಡುವ ಎಂಬಂತೆ ಜಾಣತನದಲ್ಲಿರುವುದು... ಯುರೋಪ್ ಪುನರುಜ್ಜೀವನ ಕಂಡು; ಮಹಾಯುದ್ಧಗಳ ಮುಗಿಸಿ, ಇವತ್ತಿನ ಜಾಗತೀಕರಣದ ಸುರಕ್ಷಿತ ಹಡಗುಗಳಲ್ಲಿ ಕೂತು ಪ್ರಯಾಣಿಸುತ್ತಿರುವಾಗ ಭಾರತ ಮಾತ್ರ ಯಾಕೆ ಈಗ ಈ ಪರಿಯಲ್ಲಿ ಪ್ರಜಾಪ್ರಭುತ್ವವನ್ನೇ ಹಿಂದೂ ಜಾನಪದವಾಗಿಸಲು ಮುಂದಾಗುತ್ತಿದೆ... ಗಾಂಧಿ ಹಾಗೂ ಅಂಬೇಡ್ಕರ್ ಜಾನಪದವು ಅಹಿಂಸೆಯ ಜಾನಪದ; ಪುನರುಜ್ಜೀವನದ ಸರ್ವಜನಾಂಗದ ಶಾಂತಿಯ ಜಾನಪದ. ಹಳೆಯ ವೈದಿಕ ಜಾನಪದವನ್ನು ಜ್ಞಾನದ ನೆಲೆಯಲ್ಲಿ ಅನುಸಂಧಾನ ಮಾಡಲು ಮಾತ್ರ ಅವಕಾಶವಿದೆ; ಆದರೆ ಅದರ ಇಂದಿನ ಸರ್ವಾಧಿಕಾರಿ ಜಾನಪದವನ್ನು ಒಪ್ಪಲಾಗದು. ರಷ್ಯಾದ ಕ್ರಾಂತಿಯ ಜಾನಪದಕ್ಕೂ ಮಿತಿಗಳಿವೆ. ಅಂಬೇಡ್ಕರ್ ಜಾನಪದ ಸಾರ್ವಕಾಲಿಕ ಅನ್ನಲು ನಾನ್ಯಾರು... ಆದರೆ ಸದ್ಯದ ದೇಶದ ಪರಿಸ್ಥಿತಿಯಲ್ಲಿ ನಾವು ಬದುಕಲು, ಮಾನವೀಯ ಸಂಬಂಧಗಳನ್ನು ಕಂಡುಕೊಳ್ಳಲು; ಮನುಷ್ಯರನ್ನು ಮನುಷ್ಯರಂತೆ ಕಾಣಲು ದಾರಿ ತೋರಿದ್ದೇ ಅಂಬೇಡ್ಕರ್ ತತ್ವದ ಜಾನಪದ; ಹಾಗೆಯೇ ಗಾಂಧೀ ತತ್ವದ ಜಾನಪದ.

ನಿಜಾರ್ಥದಲ್ಲಿ ಈಗ ಗಾಂಧಿ, ಅಂಬೇಡ್ಕರ್ ಇಬ್ಬರ ಹಿಂದೆ ನಡೆವ ದಾರಿಗಳೆ ದುರ್ಗಮವಾಗಿವೆ. ಜಗತ್ತಿನ ಜಾಗತೀಕರಣದ ಹಡಗು ಸಮುದ್ರದಲ್ಲಿ ಮುಳುಗಿ ಹೋಗುವುದು ಚರಿತ್ರೆಯ ಪಲ್ಲಟಗಳಲ್ಲಿ ಅಸಹಜವಲ್ಲ; ಹಾಗೆಯೇ ಹಿಂದುತ್ವದ ಧಾರ್ಮಿಕ ಮಾನಸಿಕ ಯುದ್ಧ ಜನಪದರ ಮೇಲೆ ಮುಗಿದಿದೆ ಎಂತಲೂ ಇಲ್ಲ. ಈ ಪ್ರಕ್ರಿಯೆಗಳಲ್ಲಿ ಅಂಬೇಡ್ಕರ್ ಜಯಂತಿಯಲ್ಲಿ ಭಾರತದ ಎಲ್ಲ ದಮನಿತರು ಕೇವಲ ಜಾನಪದ ರಮ್ಯತೆಯಲ್ಲಿ ಭಾಗವಹಿಸಬೇಕಾಗಿಲ್ಲ; ದೇಶದ ಸಂವಿಧಾನಬದ್ಧ ಸ್ವಾತಂತ್ರ್ಯವು ಮತದಾನದ ಹಕ್ಕನ್ನು ನೀಡಿದೆ. ಈ ಮತದಾನವು ವಿಶಾಲವಾದುದು. ಒಂದು ದೇಶ, ಒಂದು ವ್ಯಕ್ತಿ, ಒಂದು ಮತ ಎಂಬ ಈ ತತ್ವ ಅಸಾಧಾರಣವಾದುದು. ಚುನಾವಣೆಗಳಲ್ಲಿ ಜನ ತಮಗೆ ಸೂಕ್ತವಾದ ಜನತಂತ್ರದ ಪ್ರಜಾಪ್ರಭುತ್ವದ ಮತದಾನದ ಆಯ್ಕೆಯ ಪ್ರಕ್ರಿಯೆಯಲ್ಲಿ ನ್ಯಾಯೋಚಿತವಾಗಿ ಭಾಗಿಯಾದರೆ; ಅದು ಕ್ರಾಂತಿಗೆ ಸಮಾನ. ಅಂಬೇಡ್ಕರ್ ರೂಪಿಸಿದ ಹೋರಾಟಗಳ ಜಾನಪದವನ್ನು ನೆನೆಯುತ್ತ ದೇಶವನ್ನು ಕಾಯುವ, ಯಾಕೆಂದರೆ; ಅಂಬೇಡ್ಕರ್ ನಮ್ಮನ್ನು ಕಾಯ್ದರೆ ಸಾಲದು ಎಂದು ದೇಶವನ್ನೇ ಕಾಯುತ್ತಿದ್ದಾರೆ ಸಂವಿಧಾನದ ಮೂಲಕ. ಇದು ಗಾಂಧೀಜಿ ಅವರ ಸ್ವಾತಂತ್ರ್ಯ ಚಳವಳಿಯ ಯಶಸ್ಸಿನಷ್ಟೇ ಸಮನಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT