ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡನಾಡಿಗಳಿಗಾಗಿ ಹುಡುಕಾಟ

Last Updated 7 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಈ ವಿಶ್ವದಲ್ಲಿ ನಮ್ಮಂತಹ ಜೀವಿಗಳು ಇರಬಹುದೇ? ಈ ಪ್ರಶ್ನೆಗೆ ಉತ್ತರ ಇನ್ನೊಂದು ಪ್ರಶ್ನೆ- ಏಕೆ ಇರಬಾರದು?

ಹಾಗೆ ಇರಬಹುದಾದ ನಮ್ಮ ಒಡನಾಡಿಗಳ ಕುರಿತು ಹುಡುಕಾಟ ಬಹಳ ಹಿಂದಿನಿಂದಲೂ ನಡೆದೇ ಇದೆ.

150 ವರ್ಷಗಳ ಹಿಂದೆ ಮಂಗಳ ಗ್ರಹವನ್ನು ದೂರದರ್ಶಕದಿಂದ ನೋಡಿದ ವಿಲಿಯಂ ವ್ಹೆಫೆಲ್, ಗುಸ್ತಾಫ್ಸನ್, ಪರ್ಸಿವೆಲ್ ಲೊವೆಲ್ ಮುಂತಾದ ಅನೇಕ ವೀಕ್ಷಕರಿಗೆ ಅಲ್ಲಿ ಗೀಚಿದಂತೆ ಕಂಡ ಗೆರೆಗಳು ಮಾನವ ನಿರ್ಮಿತ ಕಾಲುವೆಗಳಂತೆ ಕಂಡವು. ಅಲ್ಲಿ ನಮ್ಮ ಒಡನಾಡಿಗಳು ಇರಲೇಬೇಕು ಎಂದು ಅವರು ನಂಬಿದ್ದರು. ಅದಕ್ಕೂ ಹಿಂದೆ ಚಂದ್ರನ ಮೇಲೂ ಮಾನವರಿರಬೇಕು ಎಂಬ ಕಲ್ಪನೆ ಇದ್ದಿತು. ಈಗ ಸೌರ ಮಂಡಲದ ಕಾಯಗಳೆಲ್ಲಾ ಒಂದೊಂದಾಗಿ ಜೀವಿಗಳಿರಬಹುದಾದ ಸಾಧ್ಯತೆಯ ಪಟ್ಟಿಯಿಂದ ಹೊರಬಿದ್ದ ಮೇಲೆ ಇತರ ನಕ್ಷತ್ರಗಳ ಕಡೆ ಗಮನ ಹರಿದಿದ್ದು ಸಹಜವೇ.

ಇತರ ನಕ್ಷತ್ರಗಳಲ್ಲಿ ಗ್ರಹಗಳು ಇರಬಹುದೇ ಎಂದು ಸುಳಿವು ನೀಡುವ ಹಲವಾರು ಅಂಶಗಳನ್ನು ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ. ಕಾಲ್ಚೆಂಡಿನ ಗಾತ್ರದ ಸೂರ್ಯನಿಗೆ ಮೆಣಸಿನ ಕಾಳಿನ ಗಾತ್ರದ ಗ್ರಹಗಳಿವೆ. ಚುಕ್ಕೆಯಂತೆ ಕಾಣುವ ದೂರದ ನಕ್ಷತ್ರಗಳ ಮೆಣಸಿನಕಾಳುಗಳನ್ನು ಹುಡುಕುವುದಾದರೂ ಹೇಗೆ? ಈ ಗ್ರಹಗಳಿಗೆ ಸ್ವಪ್ರಕಾಶ ಇರುವುದಿಲ್ಲ. ನಕ್ಷತ್ರದ ಚೈತನ್ಯವನ್ನು ಯಥಾಶಕ್ತಿ ಹೀರಿಕೊಂಡು ಅವು ಅವಕೆಂಪು ಕಿರಣಗಳನ್ನು ಹೊರಸೂಸುತ್ತವೆ ಎಂಬ ಅಂಶವನ್ನು ಬಳಸಬಹುದು. ಇಲ್ಲೊಂದು ದೊಡ್ಡ ತೊಡಕಿದೆ. ಈ ಕಿರಣಗಳು ಭೂಮಿಯನ್ನು ತಲುಪುವಾಗ ಬಹಳ ಕ್ಷೀಣವಾಗಿರುತ್ತವೆ. ಜೊತೆಗೆ ಭೂಮಿಯ ವಾತಾವರಣ ಇವನ್ನು ತಡೆಹಿಡಿಯುತ್ತದೆ. ಆದ್ದರಿಂದ ಅವಕೆಂಪು ಕಿರಣಗಳ ಸಹಾಯದಿಂದ ಹೊಸ ಭೂಮಿಗಳನ್ನು ಕಂಡುಹಿಡಿಯುವುದು ಸಾಧ್ಯವೇ ಇಲ್ಲ ಎಂಬಂತಾಗಿತ್ತು. ಆದರೆ 1983ರಲ್ಲಿ ಹಾರಿದ ‘ಐರಸ್’ ಎಂಬ ಗಗನನೌಕೆ ಈ ಆಲೋಚನೆಯ ದಿಕ್ಕನ್ನು ಬದಲಿಸಿತು. ಕೆಲವೊಂದು ನಕ್ಷತ್ರಗಳ ಸುತ್ತ ಹರಡಿಕೊಂಡಿದ್ದ ದೂಳು ಅವಕೆಂಪು ಕಿರಣಗಳನ್ನು ಉತ್ಸರ್ಜಿಸುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿತು. ಈ ದೂಳು ನಕ್ಷತ್ರದ ಸುತ್ತ ಮೋಡದ ಹಾಗೆ ಆವರಿಸಿರಲಿಲ್ಲ. ಬದಲಿಗೆ ತಟ್ಟೆಯ ಹಾಗೆ ಹರಡಿತ್ತು. ಹೀಗೆ ಪತ್ತೆಯಾದ ದೂಳಿನ ತಟ್ಟೆಯ ನಕ್ಷತ್ರ ಅಭಿಜಿತ್ (ವೇಗಾ). ಇದು ನೀಲಿ ನಕ್ಷತ್ರ ಎಂಬುದು ಗಮನಿಸಬೇಕಾದ ಸಂಗತಿ. ಮುಂದೆ ಅನೇಕ ನಕ್ಷತ್ರಗಳಲ್ಲಿ ಇಂತಹ ದೂಳಿನ ಉಂಗುರಗಳು ಪತ್ತೆಯಾದವು. ಗ್ರಹಗಳ ಚಲನೆಯನ್ನು ಸೂಚಿಸುವ ಸಣ್ಣ ಸಣ್ಣ ವ್ಯತ್ಯಾಸಗಳನ್ನೂ ತಿಳಿಯುವುದು ಸಾಧ್ಯವಾಯಿತು.

(ಟ್ರಾಪಿಸ್ಟ್ ತೋರಿಸಿಕೊಟ್ಟ ಏಳು ಭೂಮಿಗಳ ನಕ್ಷತ್ರ)

ಈ ನಡುವೆ ಗ್ರಹಗಳ ರೋಹಿತವನ್ನು ಅಳತೆ ಮಾಡಿ ಅದರಲ್ಲಿ ಗ್ರಹಗಳ ಗುರುತನ್ನು ಹುಡುಕುವ ಕೆಲಸ ಆರಂಭವಾಯಿತು. ಉದಾಹರಣೆಗೆ ನಮ್ಮ ಸೌರ ಮಂಡಲವನ್ನು ದೂರದಿಂದ (ಹತ್ತಿಪ್ಪತ್ತು ಜ್ಯೋತಿರ್ವರ್ಷಗಳು) ನೋಡಿದಲ್ಲಿ ಭೂಮಿ ಅಂತಿರಲಿ, ಗುರು ಗ್ರಹವನ್ನು ಕೂಡ ನೋಡುವುದು ಸಾಧ್ಯವಾಗುವುದಿಲ್ಲ. ಆದರೆ ರೋಹಿತವನ್ನು ಗಮನಿಸಿದಾಗ ಗುರುಗ್ರಹದ ಮಿಥೇನ್ ಮತ್ತು ಅಮೋನಿಯಗಳಂತಹ ಅನಿಲಗಳನ್ನು ಗುರುತಿಸಬಹುದು. ಅಂದರೆ ಇವುಗಳ ಮೂಲವಾಗಿ ಗ್ರಹಗಳನ್ನೇ ಪತ್ತೆ ಮಾಡಿದಂತಾಯಿತು. ಹೀಗೆ ಒಂದು ಗ್ರಹವನ್ನು ಪತ್ತೆ ಮಾಡಿದರಷ್ಟೇ ಸಾಲದು. ಅದು ಎಷ್ಟು ದೂರದಲ್ಲಿದೆ? ಪರಿಭ್ರಮಣಾವಧಿ ಎಷ್ಟು ಎಂದೂ ಲೆಕ್ಕ ಹಾಕುವ ಉಪಾಯವನ್ನು ಡಾಪ್ಲರ್ ಪರಿಣಾಮ ಒದಗಿಸಿತು.

ಒಂದು ಅವಧಿಯನ್ನು ಗುರುತಿಸಿದ ಮೇಲೆ ಅದನ್ನು ಖಚಿತಪಡಿಸಿಕೊಳ್ಳಲು ಇನ್ನೊಂದು ಅವಧಿಗಾಗಿ ಕಾಯಲೇಬೇಕಾಯಿತು. ಗುರುಗ್ರಹದಂತೆ ಅದರ ಅವಧಿ 12 ವರ್ಷಗಳಾಗಿದ್ದರೆ ಖಚಿತ ಫಲಿತಾಂಶ ದೊರಕುವುದು 24 ವರ್ಷಗಳಾದ ಮೇಲೆ. ಹೀಗಾಗಿ 90ರ ದಶಕದಲ್ಲಿ ಆರಂಭವಾದ ಈ ಯೋಜನೆಯ ಫಲಿತಾಂಶಗಳು 2004–05ರ ನಂತರ ಒಂದೊಂದಾಗಿ ಹೊರಬೀಳತೊಡಗಿದವು. ಮೊತ್ತ ಮೊದಲ ನಕ್ಷತ್ರ ಪೆಗಸಸ್ (ನಕುಲ) ಪುಂಜದ್ದು 51ನೆಯ ಸಂಖ್ಯೆಯದು. ಆದರೆ ಈ ವಿಧಾನದ ಮುಖ್ಯ ಕೊರತೆಯೊಂದಿತ್ತು. ಇದರಲ್ಲಿ ನಿಖರತೆ ಸಾಧಿಸಲಾಗಿರಲಿಲ್ಲ. ಅಲ್ಲದೆ ಗುರುಗ್ರಹದಂತಹ ದೊಡ್ಡ ದೊಡ್ಡ ಗ್ರಹಗಳನ್ನು ಮಾತ್ರ ಇದು ಗುರುತಿಸಿಕೊಟ್ಟಿತು.

ಡಾಪ್ಲರ್ ಪರಿಣಾಮವನ್ನು ಬಳಸಿಕೊಳ್ಳುವ ಇನ್ನೊಂದು ವಿಧಾನವೂ ಇದೆ. ಸೂರ್ಯ- ಗ್ರಹ ಇಂತಹ ವ್ಯವಸ್ಥೆಯಲ್ಲಿ ಎರಡೂ ಕಾಯಗಳು ದ್ರವ್ಯರಾಶಿ ಕೇಂದ್ರದ ಸುತ್ತ ಪರಿಭ್ರಮಿಸುತ್ತವೆ. ಇದು ಭೂಮಿಗೂ ಅನ್ವಯವಾಗುತ್ತದೆ. ಇಲ್ಲಿ ದ್ರವ್ಯರಾಶಿ ಕೇಂದ್ರ ಸೂರ್ಯಗೋಳದ ಒಳಗೇ ಇರುವುದರಿಂದ ಸೂರ್ಯನ ಪರಿಭ್ರಮಣೆ ನಗಣ್ಯವಾಗುತ್ತದೆ. ಭೂಮಿ ಸೂರ್ಯನನ್ನು ಪರಿಭ್ರಮಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಗ್ರಹದ ದ್ರವ್ಯರಾಶಿ ಹೆಚ್ಚಿದ್ದರೆ ದ್ರವ್ಯರಾಶಿ ಕೇಂದ್ರ ಸೂರ್ಯಗೋಳದ ಆಚೆ ಇರುತ್ತದೆ. ಸೂರ್ಯಗೋಳದ ಪರಿಭ್ರಮಣೆ ಗಮನಾರ್ಹವಾಗುತ್ತದೆ. ಡಾಪ್ಲರ್ ಪರಿಣಾಮ ಈ ಸೂಕ್ಷ್ಮ ವ್ಯತ್ಯಾಸವನ್ನು ತೋರಿಸಿಕೊಡಬಲ್ಲುದು. ಸೂರ್ಯ ಬುಗುರಿಯಂತೆ ಓಲಾಡುತ್ತದೆ. ಅದರ ಅವಧಿ 12 ವರ್ಷ ಎಂಬುದು ಗುರುಗ್ರಹದ ಅಸ್ತಿತ್ವದ ಸುಳಿವನ್ನು ನೀಡುತ್ತದೆ.

(ಅನ್ಯಗ್ರಹಗಳ ಮತ್ತು ಜೀವಿಗಳ ಶೋಧಕ್ಕೆ ಸಜ್ಜಾಗಿರುವ ‘ಟೆಸ್’)

2004 ಮತ್ತು 2012 ರಲ್ಲಿ ಶುಕ್ರಗ್ರಹ ಸೂರ್ಯನ ಮುಂದೆ ಹಾದು ಹೋದ ಸಂಕ್ರಮ ಎಂಬ ಘಟನೆ 120 ವರ್ಷಗಳಿಗೊಮ್ಮೆ ನಡೆಯುವುದೆಂಬ ಕಾರಣಕ್ಕೆ ಬಹಳ ಪ್ರಸಿದ್ದಿ ಪಡೆಯಿತು. ಸೂರ್ಯನ ಮೇಲೊಂದು ಕಪ್ಪು ಬೊಟ್ಟನ್ನು ಅನೇಕರು ಕಂಡು ಸಂಭ್ರಮಿಸಿದರು. ಇದೇ ರೀತಿ ಗ್ರಹವೊಂದು ಯಾವುದೇ ನಕ್ಷತ್ರದ ಮುಂದೆ ಹಾದು ಹೋಗುವಾಗ ಬೆಳಕನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವ ಸಾಧ್ಯತೆಗಳಿವೆ. ಈ ಉಪಾಯವನ್ನು ಬಳಸಿ ನಕ್ಷತ್ರಗಳ ಬೆಳಕು ನಿಯತಕಾಲಿಕವಾಗಿ ಕಡಿಮೆಯಾಗಿ ಮತ್ತೆ ಮೊದಲಿನ ಸ್ಥಿತಿಗೆ ಹಿಂದಿರುಗುವ ಸಂದರ್ಭಗಳನ್ನು ಆಕಾಶದಲ್ಲಿ ಹುಡುಕುವುದು. ಇದು ಹೇಳಿಕೆಯಷ್ಟು ಸುಲಭವಲ್ಲ. ಲಕ್ಷಗಟ್ಟಲೆ ಚುಕ್ಕೆಗಳಿಂದ ತುಂಬಿರುವ ಈ ಆಕಾಶದಲ್ಲಿ ಯಾವುದೋ ಒಂದರ ಬೆಳಕು ಸ್ವಲ್ಪ ಕುಂದುವುದನ್ನು ಕಂಡುಹಿಡಿಯುವುದು ಹೇಗೆ?

ಇದಕ್ಕಾಗಿ ಕೆಪ್ಲರ್ ಎಂಬ ಬಾಹ್ಯಾಕಾಶ ನೌಕೆ ಹಾರಿತು. ಒಂದು ನಿರ್ದಿಷ್ಟ ಕೋನದೊಳಗಿನ ನಕ್ಷತ್ರಗಳನ್ನು ಹಗಲಿರುಳೂ ವೀಕ್ಷಿಸಿ ಸಣ್ಣ ಸಣ್ಣ ನಿಯತಕಾಲಿಕ ವ್ಯತ್ಯಾಸಗಳನ್ನು ವರದಿ ಮಾಡಿತು. ಕೇವಲ ಮೂರು ವರ್ಷಗಳಲ್ಲಿ 1000ಕ್ಕೂ ಹೆಚ್ಚಿನ ನಕ್ಷತ್ರಗಳ ಗ್ರಹಗಳನ್ನು ಪತ್ತೆ ಮಾಡಿತು. ಮೂರು ವರ್ಷಗಳ ಯೋಜನೆ ಇನ್ನೂ ಮುಂದಕ್ಕೆ ವಿಸ್ತರಿಸಿತು. ಆದರೆ ಅಷ್ಟರಲ್ಲಿ ತಾಂತ್ರಿಕ ದೋಷವೊಂದು ಕಾಣಿಸಿಕೊಂಡಿತು. ಈ ನ್ಯೂನತೆಯಿದ್ದರೂ ನಿರ್ವಹಿಸಬಹುದಾದ ವೀಕ್ಷಣೆಗಳನ್ನು ನಾಸಾ ವಿಜ್ಞಾನಿಗಳಿಂದ ಆಹ್ವಾನಿಸಿತು. ಕಳೆದ ವರ್ಷ ಸೀಮಿತ ಯೋಜನೆಯೊಂದು ಕಾರ್ಯಾರಂಭ ಮಾಡಿದೆ. ಗ್ರಹಗಳ ಹುಡುಕಾಟ ಮುಂದುವರಿದಿದೆ.

ಟ್ರಾಪಿಸ್ಟ್ ಎಂಬುದು ಇಂತಹ ಇನ್ನೊಂದು ಯೋಜನೆ. ಟ್ರಾನ್ಸಿಟಿಂಗ್ ಪ್ಲಾನೆಟ್ಸ್ ಅಂಡ್ ಪ್ಲಾನೆಟಿಸಿಮಲ್ಸ್ ಸ್ಮಾಲ್ ಟೆಲಿಸ್ಕೋಪ್ ಎಂಬುದರ ಸಂಕ್ಷಿಪ್ತ ರೂಪವೇ ಟ್ರಾಪಿಸ್ಟ್. ಚಿಲಿ ದೇಶದ ಅಟಕಾಮಾ ಮರುಭೂಮಿಯಲ್ಲಿರುವ ಒಂದು ಬೆಟ್ಟದ ಮೇಲೆ 60 ಸೆಂ.ಮೀ. ವ್ಯಾಸದ ಕನ್ನಡಿಯ ದೂರದರ್ಶಕ ನಕ್ಷತ್ರಗಳ ಬೆಳಕನ್ನು ಬಹಳ ವಿಚಕ್ಷಣೆಯಿಂದ ಗಮನಿಸಿ ದಾಖಲು ಮಾಡುತ್ತದೆ. ಅದನ್ನು ಸ್ವಯಂಚಾಲಿತ ವ್ಯವಸ್ಥೆಯೊಂದು ನಿರ್ವಹಿಸುತ್ತದೆ. ಇದು ಕಂಡು ಹಿಡಿದ ನಕ್ಷತ್ರಗಳ ಗ್ರಹಗಳಲ್ಲಿ ಹಲವಾರು ಸುದ್ದಿ ಮಾಡಿದವು. ಭೂಮಿಯಂತಹುದೆ ಗ್ರಹಗಳುಳ್ಳ ನಕ್ಷತ್ರವೊಂದನ್ನು ಇದು ಪತ್ತೆ ಮಾಡಿತು. ಈಗ ಈ ವ್ಯವಸ್ಥೆ ಹೊಸ ಹೊಸ ಫಲಿತಾಂಶಗಳನ್ನು ಅಂದರೆ ಹೊಸ ಗ್ರಹಗಳನ್ನು ಅನ್ವೇಷಿಸಿ ವರದಿ ಮಾಡುತ್ತಿದೆ.

(ಗಯ ಎಂಬ ಗಗನ ವೀಕ್ಷಣಾಲಯ)

ಸೂರ್ಯ ಸಾಧಾರಣ ಗಾತ್ರದ ನಕ್ಷತ್ರ. ಅದಕ್ಕಿಂತ ದೊಡ್ಡ ಮತ್ತು ಚಿಕ್ಕ ನಕ್ಷತ್ರಗಳಿವೆ. ಅಂದರೆ ಎಲ್ಲ ನಕ್ಷತ್ರಗಳ ಸುತ್ತ ಗ್ರಹಗಳು ಇರಬಹುದೇ? ನೀಲಿ ನಕ್ಷತ್ರವೊಂದರ ದ್ರವ್ಯರಾಶಿ, ಉಷ್ಣತೆ ಮತ್ತು ದೀಪ್ತಿ ಎಲ್ಲವೂ ಹೆಚ್ಚು. ಆದರೆ ಇದರ ಆಯಸ್ಸು ಕಡಿಮೆ. ನೂರಿನ್ನೂರು ಮಿಲಿಯನ್ ವರ್ಷಗಳು ಮಾತ್ರ! ಭೂಮಿಯಂತಹ ಗ್ರಹದ ರಚನೆಗೆ 3 ರಿಂದ 4 ಬಿಲಿಯನ್ ವರ್ಷಗಳು ಬೇಕು. ಆದ್ದರಿಂದ ನೀಲಿ ನಕ್ಷತ್ರದ ಸುತ್ತ ಇರಬಹುದಾದ ವಸ್ತುವಿನಲ್ಲಿ ಗ್ರಹ ರಚನೆ ಆಗುವುದರೊಳಗಾಗಿ ನಕ್ಷತ್ರದ ಆಯಸ್ಸು ಮುಗಿದು, ಅದು ಸೂಪರ್‌ನೋವಾ ಆಗಿ ಸ್ಫೋಟಿಸಿಬಿಡುತ್ತದೆ. ಆದರೆ ಸೂರ್ಯನಂತಹ ನಕ್ಷತ್ರಗಳು 10 ಬಿಲಿಯನ್ ವರ್ಷಗಳ ಕಾಲ ಬೆಳಗುತ್ತವೆ. ಆದ್ದರಿಂದ ಗ್ರಹಗಳು ಇರುವುದು ಸಾಧ್ಯ. ಸೂರ್ಯನಿಗಿಂತ ಕಡಿಮೆ ದ್ರವ್ಯರಾಶಿಯ ನಕ್ಷತ್ರಗಳು ಇನ್ನೂ ಹೆಚ್ಚು ಕಾಲ ಅಂದರೆ 13-15 ಬಿಲಿಯನ್ ವರ್ಷಗಳಷ್ಟು ಸುದೀರ್ಘ ಅವಧಿಯವರೆಗೂ ಚೈತನ್ಯವನ್ನು ಉತ್ಸರ್ಜಿಸುವವು.

ಆದ್ದರಿಂದ ಅವುಗಳ ಸುತ್ತಲೂ ಗ್ರಹಗಳಿರುವ ಸಾಧ್ಯತೆ ಇನ್ನೂ ಹೆಚ್ಚು. ಈ ಕಾರಣದಿಂದ ಟ್ರಾಪಿಸ್ಟ್ ದೂರದರ್ಶಕ ವ್ಯವಸ್ಥೆ ಇಂತಹ ಚಿಕ್ಕ ನಕ್ಷತ್ರಗಳನ್ನೇ ಆರಿಸಿಕೊಂಡು ವೀಕ್ಷಣೆ ನಡೆಸುತ್ತಿದೆ.

ಈ ನಕ್ಷತ್ರಗಳ ಬೆಳಕನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದಾಗ ಮಧ್ಯೆ ಮಧ್ಯೆ ಅದು ಮಂಕಾಗುತ್ತಿದ್ದುದು ಕಂಡಿತು. ಸೂರ್ಯ- ಗುರು ಉದಾಹರಣೆಯನ್ನೇ ತೆಗೆದುಕೊಳ್ಳೋಣ. ನಾವು ಬೇರೊಂದು ನಕ್ಷತ್ರದ ಗ್ರಹದ ಮೇಲೆ ಕುಳಿತು ಸೂರ್ಯನ ಬೆಳಕನ್ನು ಗಮನಿಸುತ್ತಿದ್ದರೆ, ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಅದರ ಬೆಳಕು ಸ್ವಲ್ಪ ಕುಂದಿದಂತಾಗುವುದನ್ನು ಕಾಣಬಹುದು. ಇದರಿಂದ 25 ವರ್ಷಗಳ ನಂತರ ಹನ್ನೆರಡು ವರ್ಷಗಳಿಗೊಮ್ಮೆ ಸುತ್ತಿ ಬರುವ ಗ್ರಹವೊಂದಿದೆ ಎಂದು ಖಚಿತವಾಗಿ ಹೇಳಬಹುದು. ಅಂದರೆ ಈ ಬಗೆಯ ವೀಕ್ಷಣೆಗಳಿಗೆ ತಾಳ್ಮೆ ಬೇಕೇ ಬೇಕು ಎನ್ನಬಹುದು.

ಹೀಗೆ ಗ್ರಹಗಳನ್ನು ಗುರುತಿಸಿದ ಮೇಲೆ ಅವುಗಳ ಕಕ್ಷೆಯ ವಿವರಗಳನ್ನು ಪರಿಶೀಲಿಸಬೇಕು. ಪ್ರತಿಯೊಂದು ನಕ್ಷತ್ರಕ್ಕೂ ಗ್ರಹವಿರಬಹುದು. ಆದರೆ ಅವುಗಳಲ್ಲಿ ಜೀವದ ಉಗಮ ಸಾಧ್ಯವೇ? ಇದನ್ನು ತಿಳಿಯಲು ನಕ್ಷತ್ರದ ತ್ರಿಜ್ಯ, ದ್ರವ್ಯರಾಶಿ, ಉಷ್ಣತೆ, ರಾಸಾಯನಿಕ ಸಂಯೋಜನೆ- ಈ ಎಲ್ಲಾ ವಿವರಗಳೂ ಬೇಕು. ನಕ್ಷತ್ರದಿಂದ ಒಂದು ನಿರ್ದಿಷ್ಟ ದೂರದಲ್ಲಿ ಮಾತ್ರ ಜೀವದ ಉಗಮ ಸಾಧ್ಯ. ಈ ವಲಯಕ್ಕೆ ಹ್ಯಾಬಿಟಬಲ್ ಝೋನ್ ಅಂದರೆ ಜೀವ ಸ್ನೇಹಿ ವಲಯ ಎಂಬ ಹೆಸರಿದೆ. ಈ ವಲಯದಲ್ಲಿ ಗ್ರಹವಿದ್ದರೆ ಮಾತ್ರ ಜೀವದ ಅಸ್ತಿತ್ವವನ್ನು ಹುಡುಕಲು ಮುಂದುವರಿಯಬಹುದು. ಪ್ರತಿಯೊಂದು ನಕ್ಷತ್ರಕ್ಕೂ ಜೀವ ಸ್ನೇಹಿ ವಲಯವನ್ನು ಗುರುತಿಸಿಕೊಳ್ಳಬೇಕು. ಉದಾಹರಣೆಗೆ ಸೌರ ಮಂಡಲದಲ್ಲಿ ಒಂದು ಖಗೋಳ ಮಾನದ ದೂರ (1,50,000,000 ಕಿ.ಮೀ.) ಜೀವ ಸ್ನೇಹಿ. ಹಾಗಾಗಿ ಭೂಮಿ- ಸೂರ್ಯ ವ್ಯವಸ್ಥೆ ಜೀವದ ಉಗಮಕ್ಕೆ ಕಾರಣವಾಗಿದೆ. ಬೇರೆ ಬೇರೆ ನಕ್ಷತ್ರಗಳಿಗೆ ಈ ದೂರ ಬೇರೆ ಬೇರೆ; ಏಕೆಂದರೆ ಅವುಗಳು ಉತ್ಪಾದಿಸುವ ಚೈತನ್ಯ ಬೇರೆ ಬೇರೆ. ನೀಲಿ ನಕ್ಷತ್ರದಲ್ಲಿ 10 ಖಗೋಳ ಮಾನವಾಗಿದ್ದರೆ ಕೆಂಪು ನಕ್ಷತ್ರದಲ್ಲಿ ಅರ್ಧ ಖಗೋಳ ಮಾನವಾಗಿರಬಹುದು. ಗ್ರಹಗಳ ಕಕ್ಷೆ ಈ ಜೀವ ಸ್ನೇಹಿ ವಲಯದಲ್ಲಿದೆಯೇ ಎಂದು ಕಂಡುಹಿಡಿದ ಮೇಲೆ ಅಲ್ಲಿ ಜೀವಿಗಳಿರುವ ಸಾಧ್ಯತೆಯನ್ನು ಪರಿಶೀಲಿಸಬಹುದು.

ಗ್ರಹಗಳ ಗಾತ್ರ, ರಾಸಾಯನಿಕ ಸಂಯೋಜನೆ, ಉಷ್ಣತೆ- ಇವುಗಳನ್ನು ತಿಳಿಯಲು ರೋಹಿತಗಳ ವೀಕ್ಷಣೆಗಳನ್ನು ನಡೆಸಬೇಕು. ಇದಕ್ಕೆ ವಿಶೇಷ ದೂರದರ್ಶಕಗಳು ಮತ್ತು ಅವಕೆಂಪು ಕಿರಣಗಳನ್ನು ಗುರುತಿಸುವ ಸಾಮರ್ಥ್ಯ ಅವಶ್ಯಕ. ಜೀವದ ಕುರುಹನ್ನು ಸೂಚಿಸುವ ನೀರು, ಮೀಥೇನ್ ಮುಂತಾದ ಅನಿಲಗಳು ಎಲ್ಲವೂ ಅವಕೆಂಪು ತರಂಗಗಳಲ್ಲಿ ಮಾತ್ರ ತಮ್ಮ ಇರುವಿಕೆಯ ಗುಟ್ಟನ್ನು ಹಂಚಿಕೊಳ್ಳುವುವು.

ಕೆಲವು ವರ್ಷಗಳ ಹಿಂದೆ ಯುರೋಪಿಯನ್ ಸ್ಪೇಸ್ ಏಜೆನ್ಸಿ ಗಯ (GAIA) ಎಂಬ ಗಗನನೌಕೆಯನ್ನು ಹಾರಿಬಿಟ್ಟಿತು. ಇದು ಇನ್ನೊಂದು ವಿಧಾನದಿಂದ ನಕ್ಷತ್ರಗಳನ್ನು ವೀಕ್ಷಿಸಿ ಗ್ರಹಗಳ ಇರುವಿಕೆಯ ಸಾಧ್ಯತೆಯನ್ನು ವರದಿ ಮಾಡಿತು. ಇದಕ್ಕೆ ಅಸ್ಟ್ರೋಮೀಟ್ರಿ ಎಂದು ಹೆಸರು. ಆರು ತಿಂಗಳ ಅಂತರದಲ್ಲಿ ನಕ್ಷತ್ರವೊಂದರ ಸ್ಥಾನವನ್ನು ನಿಖರವಾಗಿ ಅಳತೆ ಮಾಡುವುದು ಉದ್ದೇಶ. ಒಂದೇ ಕಣ್ಣಿನಿಂದ ಸೂಜಿಗೆ ದಾರವನ್ನು ಪೋಣಿಸಲು ಪ್ರಯತ್ನಿಸಿ. ಇದು ದುಃಸಾಧ್ಯ. ಏಕೆಂದರೆ ನಮ್ಮ ಎರಡು ಕಣ್ಣುಗಳಿಂದ ನಾವು ದೂರದ ಅಂದಾಜು ಮಾಡುತ್ತೇವೆ. ನಮ್ಮ ಎಲ್ಲ ಚಟುವಟಿಕೆಗಳಿಗೆ ಇದು ಅವಶ್ಯಕ. ಆದರೆ ದೂರ ಹೆಚ್ಚಿದಂತೆ ಕಣ್ಣುಗಳ ನಡುವಿನ ಅಂತರ ಅಂದಾಜು ದೂರ ತಿಳಿಸಿಕೊಡದೇ ಸೋಲುತ್ತದೆ. ಎತ್ತರದಲ್ಲಿ ಹಾರುತ್ತಿರುವ ಎರಡು ಹದ್ದುಗಳಲ್ಲಿ ಯಾವುದು ಕೆಳಗಿದೆ ಯಾವುದು ಮೇಲಿದೆ ಎಂದು ನಾವು ನಿಖರವಾಗಿ ಹೇಳಲಾರೆವು. ಇದೇ ಕಾರಣದಿಂದ ನಕ್ಷತ್ರಗಳೆಲ್ಲವೂ ಒಂದೇ ದೂರದಲ್ಲಿವೆ ಎಂದು ನಮಗೆ ಭಾಸವಾಗುತ್ತದೆ. ಗಯ ವೀಕ್ಷಣೆ ನಡೆಸಿದ ಆರು ತಿಂಗಳ ಅಂತರದ ಚಿತ್ರಗಳಿಂದ ನಮಗೆ ದೊರಕುವ ಅಂತರ ಭೂ ಕಕ್ಷೆಯೇ. ಆದ್ದರಿಂದ ನಿಖರತೆ ಸಾಧ್ಯ. ಇದರಲ್ಲಿ ದೊರಕುವ ಸೂಕ್ಷ್ಮ ವ್ಯತ್ಯಾಸ ಗ್ರಹದ ಇರುವಿಕೆಯನ್ನು ತೋರಿಸಿಕೊಟ್ಟಿದೆ. ಇದೀಗ ಗಯದ ವೀಕ್ಷಣಾವಧಿಯೂ ಮುಗಿಯುತ್ತಾ ಬಂದಿದೆ.

ಕೆಪ್ಲರ್, ಗಯ, ಟ್ರಾಪಿಸ್ಟ್ ಹೀಗೆ ಅನೇಕ ಉಪಾಯಗಳಿಂದ 4000ಕ್ಕೂ ಹೆಚ್ಚು ಗ್ರಹಗಳು ಪತ್ತೆಯಾಗಿವೆ. ಇವುಗಳಲ್ಲಿ ಸುಮಾರು 1000 ನಕ್ಷತ್ರಗಳಿಗೆ ಒಂದಕ್ಕಿಂತ ಹೆಚ್ಚು ಗ್ರಹಗಳಿವೆ. ಆದರೂ ವೀಕ್ಷಣೆ ನಡೆಸಿರುವ ಭಾಗ ಬಹಳ ಸಣ್ಣದು. ಸೂರ್ಯನಿಂದ ಕೇವಲ 3000 ಜ್ಯೋತಿರ್ವರ್ಷದವರೆಗೆ- ಅದೂ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಮಾತ್ರ. ಅಂದರೆ ಇನ್ನೂ ಎಷ್ಟೊಂದು ಭಾಗವನ್ನು ನಾವು ಹುಡುಕಿಯೇ ಇಲ್ಲ. ಕೆಪ್ಲರ್ ಹುಡುಕಿಕೊಟ್ಟ ಭೂಮಿಯಂತಹ ಗ್ರಹಗಳು ಮತ್ತು ಸ್ವಲ್ಪ ದೊಡ್ಡ ಸೂಪರ್ ಅರ್ಥ್‌ಗಳ ಸಂಖ್ಯೆ 900ಕ್ಕೂ ಹೆಚ್ಚು.

ಈಗ ಅನ್ಯ ಗ್ರಹಗಳ ಮತ್ತು ಜೀವಿಗಳ ಶೋಧಕ್ಕೆ ಇನ್ನೊಂದು ನೌಕೆ ಸಜ್ಜಾಗಿದೆ. ಟೆಸ್ (TESS) ಎಂದದರ ಹೆಸರು. ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಸಾಟಲೈಟ್ ಎಂಬುದರ ಸಂಕ್ಷಿಪ್ತ ರೂಪ. ಇದು ಸುಮಾರು ಎರಡು ವರ್ಷಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ನಕ್ಷತ್ರಗಳನ್ನು ವೀಕ್ಷಿಸಿ ಗ್ರಹಗಳ ಅಸ್ತಿತ್ವವನ್ನು ಪರಿಶೀಲಿಸಲಿದೆ. ಗ್ರಹ ನಕ್ಷತ್ರದ ಮುಂದೆ ಹಾದುಹೋಗುವಾಗ ಉಂಟಾಗುವ ಬೆಳಕಿನ ವ್ಯತ್ಯಾಸವನ್ನೇ ಇದು ಗಮನಿಸಿ ವರದಿ ಮಾಡಲಿದೆ. ಇದು ಕೆಪ್ಲರ್ ಮತ್ತು ಗಯ ಗಮನಿಸಲಾಗದ ದಿಕ್ಕಿನಲ್ಲಿ ವೀಕ್ಷಣೆ ನಡೆಸುವುದರಿಂದ ಮತ್ತು ಪ್ರಕಾಶಮಾನವಾದ ನಕ್ಷತ್ರಗಳನ್ನೇ ಆಯ್ದುಕೊಳ್ಳುವುದರಿಂದ ಹೊಸ ಹೊಸ ಫಲಿತಾಂಶಗಳು ಬೇಗ ಸಿಗಲಿವೆ ಎಂಬ ನಿರೀಕ್ಷೆ ಇದೆ.

ಅನ್ಯಗ್ರಹಗಳ ಹುಡುಕಾಟ ಆರಂಭವಾಗಿದ್ದರ ಮೂಲ ಉದ್ದೇಶವೇನು? ಮುಂದೆ ಎಂದೋ ಒಂದು ದಿನ ನಾವಲ್ಲಿಗೆ ವಲಸೆ ಹೋಗಬಹುದು ಎಂಬುದು. ಅದಕ್ಕಾಗಿ ಕಾಯೋಣ.

(ನಕ್ಷತ್ರದ ಮುಂದೆ ಗ್ರಹಗಳು ಹಾದು ಹೋದಾಗ ಅದರ ಪ್ರಕಾಶ ಕುಂದುತ್ತದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT