ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಸೈನರ್‌’ ವ್ಯಂಗ್ಯ ಚಿತ್ರಕಾರ ರಾವ್‌ ಬೈಲ್‌

Last Updated 7 ಏಪ್ರಿಲ್ 2018, 19:37 IST
ಅಕ್ಷರ ಗಾತ್ರ

ಪತ್ರಿಕಾಲಯಕ್ಕೆ ‘ರಾವ್‌ ಬೈಲ್‌’ ಅವರ ಅಂಚೆ ಬಂತೆಂದರೆ ಎಲ್ಲರಿಗೂ ಗೊತ್ತಾಗಿಬಿಡುತ್ತಿತ್ತು. ಅಂತಹ ವಿಶಿಷ್ಟ ಅಂಚೆ ಕವರ್‌ ಕಲಾ ಕುಸುರಿಯ ರಾವ್‌ ಬೈಲ್‌ ಇನ್ನಿಲ್ಲ.

‘ನಾನು ಅತ್ಯಂತ ಇಷ್ಟಪಡುವ ಅಂತರರಾಷ್ಟ್ರೀಯ ಮಟ್ಟದ ಕಲಾವಿದ ರಾವ್‌ ಬೈಲ್‌. ನನಗೆ ಬರುವ ಕಾಗದಕ್ಕಾಗಿ ನಾನು ಕಾಯುತ್ತೇನೆ. ಅವುಗಳನ್ನು ಕಾದಿಡುತ್ತೇನೆ. ಕೆಲವೇ ಅಕ್ಷರ, ಕೆಲವು ಪ್ರತಿಮೆ, ಅಲ್ಪಸ್ವಲ್ಪ ಚಿತ್ತಾರಗಳಿಂದ ರಾವ್‌ ಬೈಲ್‌ ನನ್ನೊಡನೆ ಹಂಚಿಕೊಳ್ಳುವ ಅನುಭೂತಿ ಅಮೂಲ್ಯವಾದದ್ದು’ ಎಂದು ಸ್ಮರಿಸಿದ್ದಾರೆ ಹಿರಿಯ ಪತ್ರಕರ್ತ ಪ್ರೀತಿಶ್‌ನಂದಿ, ಬೈಲಂಗಡಿ ಪ್ರಭಾಕರ್‌ ರಾವ್‌ ಪೂರ್ಣ ಹೆಸರು ಕೊನೆಯ ಹಾಗೂ ಪ್ರಾರಂಭದ ಶಬ್ದದಿಂದ ತನ್ನನ್ನು ಗುರುತಿಸಬಯಸಿದ್ದರು ಈ ರಾವ್‌ ಬೈಲ್‌.

ಮುಂಬೈಯ ಜೆ.ಜೆ. ಸ್ಕೂಲ್‌ನಲ್ಲಿ ಕಲಾ ಶಿಕ್ಷಣ ಪಡೆದಿರುವ ಈ ರಾವ್‌ ಬೈಲ್‌ ಅವರಿಗೆ ಬರೀ ವ್ಯಂಗ್ಯ ಚಿತ್ರಕಾರ ಎಂಬ ಮಾತು ಸಣ್ಣದಾಗುತ್ತದೆ. ದೊಡ್ಡ ವ್ಯಂಗ್ಯ ಚಿತ್ರಕಾರ ಎಂಬ ಮಾತೂ ದೊಡ್ಡದಾಗುತ್ತದೆ. ಕಾರಣ ಅವರ ಕಲೆಯ ವಿಸ್ತಾರ. ಇವರೊಬ್ಬ ವಿಶಿಷ್ಟ ಡಿಸೈನರ್‌, ವಿನ್ಯಾಸಗಾರ, ಪೇಂಟರ್‌, ಮಿಮಿಕ್ರಿ ಪಟು. ರಾಜಕೀಯ ವ್ಯಂಗ್ಯ ಚಿತ್ರದಿಂದ ಮಾತ್ರ ದೂರವಿದ್ದ ರಾವ್‌ ಬೈಲ್‌ ಅವರ ಪ್ರಕಾರ, ಅವರ ಕಲೆಗೆ ಅವರ ತಾಯಿಯೇ ಪ್ರೇರಣೆ.

ಹುಟ್ಟಿದ್ದು ಕಾಸರಗೋಡಿನಲ್ಲಿ. ಓದಿದ್ದು ಕುಂದಾಪುರ, ಉಡುಪಿ ಹಾಗೂ ಬೆಂಗಳೂರಿನಲ್ಲಿ. ಉದ್ಯೋಗ ಮುಂಬೈಯಲ್ಲಿ. ಹೆಂಡತಿಯ ಊರು ಧಾರವಾಡ. ನಿವೃತ್ತಿ ಬದುಕು ಬೆಂಗಳೂರಿನಲ್ಲಿ. ಹೀಗೆ ಹಲವು ಊರಿನ ನೀರು ಕುಡಿದಿರುವ ರಾವ್‌ ಬೈಲ್‌ ಅವರ ಶೈಲಿಯೇ ವಿಶಿಷ್ಟವಾದದ್ದು. ಮುಂಬೈಯ ಬಹುತೇಕ ಪ್ರತಿಷ್ಠಿತ ಆಂಗ್ಲ ಪತ್ರಿಕೆಗಳಲ್ಲಿ ಇವರ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. ಕನ್ನಡದಲ್ಲಿ ಬರೆಯಲಾರಂಭಿಸಿದಾಗ ತಮ್ಮ ಸಹಿಯನ್ನು ಕನ್ನಡದಲ್ಲೂ ನಿಧಾನವಾಗಿ ಹಾಕಲು ಪ್ರಾರಂಭಿಸಿದರು ರಾವ್‌ ಬೈಲ್‌.

ಇವರ ಚಿತ್ರವು ಅಬು ಅಬ್ರಹಾಂ ಸಂಗ್ರಹಿಸಿದ ‘ದಿ ಪೆಂಗ್ವಿನ್‌ ಬುಕ್‌ ಆಫ್‌ ಇಂಡಿಯನ್‌ ಕಾರ್ಟೂನ್ಸ್‌’ನಲ್ಲಿ ಸ್ಥಾನ ಗಳಿಸಿಕೊಂಡಿತ್ತು. ಇವರ ಏಕ ವ್ಯಕ್ತಿ ಪ್ರದರ್ಶನ ಗ್ರೀಸ್‌, ಸ್ವಿಟ್ಜರ್ಲೆಂಡ್‌ ಹಾಗೂ ಕೆನಡಾದಲ್ಲಿ ಜರುಗಿತ್ತು. ಜಯಂತ್‌ ಕಾಯ್ಕಿಣಿ ಅವರು ಹೇಳುವ ಪ್ರಕಾರ ಪಂಚ್‌ ಹಾಗೂ ನ್ಯೂಯಾರ್ಕ್‌ ಪತ್ರಿಕೆಯ ಸಂಪಾದಕರೂ ಅವರ ರೇಖಾ ವೈಶಿಷ್ಟ್ಯವನ್ನು ಮೆಚ್ಚಿಕೊಂಡವರು.

ಅವರದ್ದು ಮಕ್ಕಳ ಹೃದಯ, ದೈವಿಕ ನಗು, ಕಲಾ ಕೊಡುಗೆ ಅನನ್ಯ ಎನ್ನುವ ಜಯಂತ್‌ ಕಾಯ್ಕಿಣಿ ತಮ್ಮ ‘ಶಬ್ದ ತೀರ’ ಹೊತ್ತಿಕೆಯಲ್ಲಿ ‘ವಿಶಿಷ್ಟ ರೇಖಾ ನಿರೂಪಕ’ ಎಂದು ಮೆಲುಕು ಹಾಕಿದ್ದಾರೆ. ಇವರ ಜೆ.ಜೆ. ಸ್ಕೂಲ್‌ನ ಸಹಪಾಠಿ ಅಮೋಲ್‌ ಪಾಲೆಕರ್‌, ಗೋವಿಂದ ನಿಹಲಾನಿಯೂ ಆತ್ಮೀಯ ಗೆಳೆಯರು.

ಮುಂಬೈಯಲ್ಲಿ ಮತ್ತೊಬ್ಬ ಕರ್ನಾಟಕದಿಂದ ವ್ಯಂಗ್ಯ ಚಿತ್ರಕಲೆಯಲ್ಲಿ ಮೇಲೇರಿದ್ದ ಆರ್‌.ಕೆ. ಲಕ್ಷ್ಮಣ್‌ರಿಗೂ ಇವರಿಗೂ ಒಂದು ಸಾಮ್ಯತೆ; ಒಂದು ಭಿನ್ನತೆ ಇದೆ. ಇಬ್ಬರ ಪತ್ನಿಯರೂ ನೃತ್ಯಗಾರ್ತಿಯಾಗಿದ್ದರು. ಆರ್‌.ಕೆ. ಲಕ್ಷ್ಮಣ್‌ ಅವರು ಜೆ.ಜೆ. ಕಲಾಶಿಕ್ಷಣ ‘ಕಲಾ ಪ್ರತಿಭೆ’ಯ ಕೊರತೆಯಿಂದ ಪ್ರವೇಶ ವಂಚಿತರಾಗಿದ್ದರು. ಇವರು ಅಲ್ಲಿ ಅಭ್ಯಸಿಸಿ ಎಲ್‌ಐಸಿಯ ಕಲಾ ವಿಭಾಗದಲ್ಲಿ ವೃತ್ತಿ ಮುಂದುವರಿಸಿದ್ದರು.

ಬಹುತೇಕ ವ್ಯಂಗ್ಯ ಚಿತ್ರಕಾರರಿಗೆ ಇರುವಂತೆ– ಇವರಿಗೂ ಪ್ರಚಾರದ ತುಡಿತ ಇತ್ತು. ಹಾಗೆಯೇ ತಮ್ಮ ಅಗಾಧ ಅಭ್ಯಾಸದ ಕಲಾ ಪುಸ್ತಕಗಳು, ಅಂತರರಾಷ್ಟ್ರೀಯ ವ್ಯಂಗ್ಯಚಿತ್ರ ನಿಯತಕಾಲಿಕಗಳು ವ್ಯರ್ಥವಾಗಬಾರದೆಂಬ ಕಾಳಜಿಯೂ ಇತ್ತು. ಅವುಗಳೆಲ್ಲವನ್ನೂ ಬೆಂಗಳೂರಿನ ಕಾರ್ಟೂನ್‌ ಗ್ಯಾಲರಿಗೆ ದಾನವಾಗಿ ನೀಡಿದ್ದಾರೆ. ಈಗ ಅಭ್ಯಸಿಸುವ ಸರದಿ ಇನ್ನಿತರ ವ್ಯಂಗ್ಯಚಿತ್ರಕಾರರದ್ದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT