ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ವಯಸ್ಸು ಏರಿಕೆಯೇ ಪರಿಹಾರ

Last Updated 8 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ನಿವೃತ್ತಿ ವಯಸ್ಸು ಏರಿಕೆ ಪರಿಹಾರವೇ?’ (ಸಂಗತ, ಏ. 4) ಎಂಬ ಡಾ. ಉದಯ ಕುಮಾರ ಇರ್ವತ್ತೂರು ಅವರ ಲೇಖನಕ್ಕೆ, ನಿವೃತ್ತಿಯ ಅಂಚಿನಲ್ಲಿರುವ ಪ್ರಾಧ್ಯಾಪಕನೊಬ್ಬನ ಪ್ರತಿಕ್ರಿಯೆ ಇದು.

ಲೇಖಕರು, ಹಿರಿಯ ಪ್ರಾಧ್ಯಾಪಕರಲ್ಲಿ ಕೆಲವರು ‘ಪರಮ ಆಲಸಿಗಳು’, ‘ಸಿನಿಕರು’ ಹಾಗೂ ‘ಮೈಗಳ್ಳರು’ ಎಂದೆಲ್ಲ ಬಣ್ಣಿಸಿ, ಅವರನ್ನು ‘ಪ್ರಭೃತಿಗಳು’ ಎಂದು ಕೊಂಕು ನುಡಿದಿದ್ದಾರೆ. ಅದಿರಲಿ, ಹೊಸದಾಗಿ ನೇಮಕಗೊಳ್ಳುವ ಅಧ್ಯಾಪಕರಲ್ಲೂ ‘ಪ್ರಭೃತಿಗಳು’ ಇರುತ್ತಾರೆ. ಉನ್ನತ ಶಿಕ್ಷಣದಲ್ಲಿರುವ ಎಲ್ಲಾ ಶ್ರೇಣಿಗಳಲ್ಲೂ (ಕಿರಿಯ, ಹಿರಿಯ) ಇಂಥವರು ಕಂಡುಬರುತ್ತಾರೆ. ಇಂಥವರ ಜತೆ ಒಂದು ತಂಡವಾಗಿ (ಟೀಮ್ ಸ್ಪಿರಿಟ್‌) ಕೆಲಸ ಮಾಡಲು ಕಷ್ಟವಾಗುತ್ತದೆ. ಕಿರಿಯ ವಯಸ್ಸಿನಲ್ಲೇ ಪ್ರಾಧ್ಯಾಪಕರಾದ ಕೆಲವರು ಕುತಂತ್ರದಿಂದ ಕುಲಪತಿಗಳಾಗಿ, ವಿಶ್ವವಿದ್ಯಾಲಯಗಳನ್ನು ಕೆಡಿಸಿರುವ ನಿದರ್ಶನಗಳೂ ಇವೆ.

ಒಂದು ಕಾಲೇಜಿನ ಅಥವಾ ವಿಶ್ವವಿದ್ಯಾಲಯದ ವಿಭಾಗವೊಂದು ಶೈಕ್ಷಣಿಕ ಶ್ರೇಷ್ಠತೆ ಸಾಧಿಸಬೇಕಾದರೆ ಅದರ ಎಲ್ಲಾ ಅಧ್ಯಾಪಕರು ಒಂದು ತಂಡವಾಗಿ ಕೆಲಸ ಮಾಡುವುದು ಅಗತ್ಯ. ಆದರೆ ಅಂಥ ತಂಡ ಕಟ್ಟುವ ಸಾಮರ್ಥ್ಯ ಎಲ್ಲಾ ಮುಖ್ಯಸ್ಥರಲ್ಲಿ, ಪ್ರಾಂಶುಪಾಲರಲ್ಲಿ ಅಥವಾ ಕುಲಪತಿಗಳಲ್ಲಿ ಇರುವುದಿಲ್ಲ. ಅದಕ್ಕೆ ಪೂರಕ ವಾತಾವರಣವೂ ಇರುವುದಿಲ್ಲ ಎಂಬುದು ಹೆಚ್ಚು ಸತ್ಯ. ಆದ್ದರಿಂದ ನಿವೃತ್ತಿ ವಯಸ್ಸಿಗೂ ಉನ್ನತ ಶಿಕ್ಷಣದ ಈಗಿನ ದುರವಸ್ಥೆಗೂ ಯಾವುದೇ ಸಂಬಂಧವಿಲ್ಲ.

ನಿವೃತ್ತಿ ವಯಸ್ಸನ್ನು 65ಕ್ಕೆ ಏರಿಸಬೇಕು ಎನ್ನುವುದಕ್ಕೆ ಬಲವಾದ ಕಾರಣಗಳಿವೆ. 1986ರಿಂದ ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯು.ಜಿ.ಸಿ.) ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಶಿಕ್ಷಕರ ವೇತನ, ಸೇವಾನಿಯಮಗಳು, ಅರ್ಹತೆಗಳ ಬಗ್ಗೆ ನಿರ್ದೇಶನ ಕೊಡುತ್ತಾ ಬಂದಿದೆ. ಈ ನಿರ್ದೇಶನಗಳನ್ನು ಪಾಲಿಸುವುದು ರಾಜ್ಯ ಸರ್ಕಾರಗಳ ಸಾಂವಿಧಾನಿಕ ಜವಾಬ್ದಾರಿ (ಶಿಕ್ಷಣವು ಸಂವಿಧಾನದ ಸಹವರ್ತಿ ಪಟ್ಟಿಯಲ್ಲಿರುವುದರಿಂದ).

ಯು.ಜಿ.ಸಿ. ನಿರ್ದೇಶನದನ್ವಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ಶಿಕ್ಷಕರಿಗೆ ನೀಡುತ್ತಿರುವ ಸಂಬಳ ತೃಪ್ತಿಕರವಾಗಿದೆ. ಅದು ಬಹಳ ಹೆಚ್ಚು ಅಂದರೂ ತಪ್ಪಾಗಲಾರದು.

ಕಳೆದ 20-30 ವರ್ಷಗಳಿಂದ ಆಗಿರುವ ಆರ್ಥಿಕ ಅಭಿವೃದ್ಧಿ ಮತ್ತು ಆದಾಯ ಏರಿಕೆಯ ಪರಿಣಾಮವಾಗಿ ಭಾರತೀಯರ ಸರಾಸರಿ ಆಯುಷ್ಯಾವಧಿ 73 ವರ್ಷಕ್ಕೇರಿದೆ. ಗುಣಮಟ್ಟದ ವೈದ್ಯಕೀಯ ಸೌಲಭ್ಯ ಹಾಗೂ ಆಧುನಿಕ ತಂತ್ರಜ್ಞಾನದ ಪರಿಣಾಮ ಪ್ರಾಧ್ಯಾಪಕರ ವೃತ್ತಿಪರತೆ ಮತ್ತು ದಕ್ಷತೆ (‘ಪ್ರಭೃತಿ’ಗಳನ್ನು ಹೊರತುಪಡಿಸಿ) ಹೆಚ್ಚಾಗಿದೆ ಎಂಬುದು ತಿಳಿದಿರುವ ಸಂಗತಿ. ಈ ಕಾರಣಕ್ಕಾಗಿ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರ ಸರ್ಕಾರದ ಅನುದಾನ ಪಡೆಯುವ ಇತರ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರಗಳಲ್ಲಿ 2007ರಿಂದ ನಿವೃತ್ತಿ ವಯಸ್ಸನ್ನು 65ಕ್ಕೆ ಏರಿಸಲಾಗಿದೆ. 70 ವರ್ಷದವರೆಗೂ ಮರುನೇಮಕ ಮಾಡಿಕೊಳ್ಳುವ ಅವಕಾಶವೂ ಇದೆ.

ನಿವೃತ್ತಿ ವಯಸ್ಸು ಹೆಚ್ಚಿಸಿದರೆ ‘ಆರ್ಥಿಕ ಹೊರೆ’ಯಾಗುತ್ತದೆ ಎಂಬ ವಿಚಾರವೂ ಲೇಖನದಲ್ಲಿ ಪ್ರಸ್ತಾಪವಾಗಿದೆ. ವಿಶ್ವವಿದ್ಯಾಲಯದ ಒಬ್ಬ ಹಿರಿಯ ಅಥವಾ ನಿವೃತ್ತಿಯ ಅಂಚಿನಲ್ಲಿರುವ ಪ್ರಾಧ್ಯಾಪಕರಿಗೆ ತಿಂಗಳಿಗೆ ₹ 2ಲಕ್ಷ ಸಂಬಳ ಎನ್ನುವುದಾದರೆ, ನಿವೃತ್ತಿಯ ನಂತರ ಅವರಿಗೆ ಸುಮಾರು ₹ 30 ಲಕ್ಷದಿಂದ ₹ 40 ಲಕ್ಷ ನಿವೃತ್ತಿಸೌಲಭ್ಯ ಹಾಗೂ ತಿಂಗಳಿಗೆ ಸುಮಾರು ₹ 75 ಸಾವಿರದಷ್ಟು ಪಿಂಚಣಿ ನೀಡಬೇಕಾಗುತ್ತದೆ. ಇಂಥವರ ಸಂಖ್ಯೆ 700ರಿಂದ 800ರಷ್ಟು ಇರಬಹುದು (ಕಾಲೇಜು ಅಧ್ಯಾಪಕರೂ ಸೇರಿ). ಇವರ ನಿವೃತ್ತಿಯಿಂದ ವಾರ್ಷಿಕ ಸಂಬಳದ ಬಾಬ್ತಿನಿಂದ ₹ 16 ಕೋಟಿ ಪ್ರತಿವರ್ಷ ಉಳಿತಾಯವಾಗುತ್ತದೆ (800 ಮಂದಿಗೆ ತಲಾ ₹ 2 ಲಕ್ಷದಂತೆ). ಇವರು ನಿವೃತ್ತಿ ಹೊಂದಿದರೆ ನಿವೃತ್ತಿ ಸೌಲಭ್ಯಕ್ಕಾಗಿ ₹ 320 ಕೋಟಿ (ತಲಾ ₹ 40 ಲಕ್ಷದಂತೆ) ಮತ್ತು ಪಿಂಚಣಿ ನಿಮಿತ್ತ ಪ್ರತಿ ತಿಂಗಳು ₹ 6 ಕೋಟಿ (ತಿಂಗಳಿಗೆ ₹ 75 ಸಾವಿರದಂತೆ) ಖರ್ಚಾಗುತ್ತದೆ. ಇವರ ನಿವೃತ್ತಿಯಿಂದ ಖಾಲಿಯಾಗುವ 800 ಹುದ್ದೆಗಳನ್ನು ತುಂಬಿದರೆ, ಅವರ ವೇತನಕ್ಕಾಗಿ ವಾರ್ಷಿಕ ₹ 62.4 ಕೋಟಿ (ತಿಂಗಳ ವೇತನ ₹ 65,000ದಂತೆ) ವೆಚ್ಚವಾಗುತ್ತದೆ.

ಆದರೆ ಅನುಭವಿ ಅಧ್ಯಾಪಕರು ನಿವೃತ್ತಿಯ ನಂತರ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡಿ, ಸರ್ಕಾರದ ಖರ್ಚಿನಲ್ಲಿ ಗಳಿಸಿದ ಕೌಶಲ, ತಾಂತ್ರಿಕತೆ, ಜ್ಞಾನ ಹಾಗೂ ಅನುಭವಗಳನ್ನು ಮಾಸಿಕ ಕೇವಲ ₹ 30 ಸಾವಿರದಿಂದ ₹ 50 ಸಾವಿರಕ್ಕೆ ನೀಡುವುದು ಒಂದು ರೀತಿಯ ಪ್ರತಿಭಾ ಪಲಾಯನ. ಇಂಥ ಕ್ಷುಲ್ಲಕ ಹಣಕಾಸು ಲೆಕ್ಕಾಚಾರವನ್ನು ಬದಿಗೊತ್ತಿ, ನಿವೃತ್ತಿ ವಯಸ್ಸನ್ನು 65ಕ್ಕೆ ಹೆಚ್ಚಿಸಿದರೆ ಸರ್ಕಾರಕ್ಕೇ ಹೆಚ್ಚಿನ ಲಾಭವಿದೆ. ಇದರ ಲಾಭ–ನಷ್ಟಗಳ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನಡೆಸುವ ಅಗತ್ಯವಿದೆ.

ಲೇಖಕರು ಎತ್ತಿರುವ ಇನ್ನೊಂದು ಪ್ರಶ್ನೆ ನಿರುದ್ಯೋಗದ್ದು. ಉನ್ನತ ಶಿಕ್ಷಣವು ಬಹುಜನರಿಗೆ ಉದ್ಯೋಗ ಕೊಡುವ ಕ್ಷೇತ್ರವಾಗಲು ಸಾಧ್ಯವಿಲ್ಲ. ಮ್ಯಾಸಿವ್‌ ಓಪನ್‌ ಆನ್‌ಲೈನ್‌ ಕೋರ್ಸ್‌ (MOOC) ತಂತ್ರಜ್ಞಾನ ಉಪಯೋಗಿಸಿದರೆ ‘ಭಾಷಣ ಬಿಗಿಯುವ’, ನೋಟ್ಸ್ ಡಿಕ್ಟೇಟ್ ಮಾಡುವ ಅಧ್ಯಾಪಕರ ಅವಶ್ಯಕತೆಯೇ ಇರುವುದಿಲ್ಲ.

ಈಗಾಗಲೇ ಇದು ಅಮೆರಿಕ ಮತ್ತು ಯುರೋಪ್‍ ರಾಷ್ಟ್ರಗಳಲ್ಲಿ ಸಾಧ್ಯವಾಗಿದೆ. ನಮ್ಮ ಕೆಲವು ವಿಶ್ವವಿದ್ಯಾಲಯಗಳಲ್ಲಿ ಅಂದರೆ ಐಐಎಂ, ಐಐಟಿಗಳಲ್ಲಿ ಈ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮಾಡಿ 3-4 ವರ್ಷ ಸೇವೆ ಸಲ್ಲಿಸಿರುವ ಪ್ರತಿಭಾವಂತರನ್ನು ಕೈಬಿಡದಿರುವಂತಹ ವ್ಯವಸ್ಥೆ ಜಾರಿಗೆ ಬರಬೇಕು.

ವಿದ್ವಾಂಸರು ಹಾಗೂ ಅನುಭವಿ ಅಧ್ಯಾಪಕರ ಸೇವೆಯನ್ನು ನಿವೃತ್ತಿಯ ನಂತರವೂ ಮುಂದುವರಿಸುವ ಸಂಬಂಧ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಸಲಹಾ ಮಂಡಳಿಗಳನ್ನು ರಚಿಸಬೇಕು ಎಂದು ಲೇಖಕರು ಸಲಹೆ ಮಾಡಿದ್ದಾರೆ. ಈ ‘ಅಧಿಕಾರಶಾಹಿ ವ್ಯವಸ್ಥೆ’ ‘ಪರಿಹಾರವು ರೋಗಕ್ಕಿಂತ ಕೆಟ್ಟದ್ದು’ ಎಂಬಂತಾಗುತ್ತದೆ. ಹಿರಿಯ ಪ್ರಾಧ್ಯಾಪಕರನ್ನು ನಿವೃತ್ತ ಕುಲಪತಿಗಳ ಅಧ್ಯಕ್ಷತೆಯಲ್ಲಿ ಪರಾಮರ್ಶಿಸುವುದು ಮೂರ್ಖ ಪದ್ಧತಿ. ಉನ್ನತ ಶಿಕ್ಷಣದಲ್ಲಿನ ಗುಣಮಟ್ಟವನ್ನು ಸಂರಕ್ಷಿಸಿ, ಪ್ರೋತ್ಸಾಹಿಸಿ ಉತ್ಕೃಷ್ಟಗೊಳಿಸಬೇಕಾದರೆ ಈಗಾಗಲೇ ಬೇರುಬಿಟ್ಟಿರುವ ‘ಪ್ರಭೃತಿ’ಗಳನ್ನು ಕ್ರಿಯಾತ್ಮಕವಾಗಿ ನಿರ್ವಹಿಸಬೇಕಾದ ಅವಶ್ಯಕತೆಯಿದೆ. ಉತ್ತಮ ನಾಯಕತ್ವ ಗುಣ ಉಳ್ಳಂಥವರು ಕುಲಪತಿಗಳಾಗಿ, ಪ್ರಾಂಶುಪಾಲರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ನೇಮಕವಾದರೆ ಇದು ಕಷ್ಟವೇನಲ್ಲ.

ನಿವೃತ್ತಿ ವಯಸ್ಸಿನ ವಿಷಯವಾಗಿ ಮೇಲೆ ವಿವರಿಸಿರುವ ಹಣಕಾಸಿನ ಲೆಕ್ಕಾಚಾರ ಸಂಪೂರ್ಣವಲ್ಲ. ಏನೇ ಆದರೂ ವಿಶ್ವವಿದ್ಯಾಲಯಗಳ ಗುಣಮಟ್ಟ ಹೆಚ್ಚಿಸಬೇಕಾದರೆ ನಿವೃತ್ತಿಯ ವಯಸ್ಸನ್ನು 65ಕ್ಕೆ ಏರಿಸುವುದು ಅನಿವಾರ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT