ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರುಗುಪ್ಪ: ದಾಖಲೆ ಇಲ್ಲದ ₹7 ಲಕ್ಷ ವಶ

ಹೊಸಪೇಟೆ, ಮರಿಯಮ್ಮನಹಳ್ಳಿ, ಹೂವಿನ ಹಡಗಲಿಯಲ್ಲಿ ಮದ್ಯ ವಶ
Last Updated 9 ಏಪ್ರಿಲ್ 2018, 6:31 IST
ಅಕ್ಷರ ಗಾತ್ರ

ಸಿರುಗುಪ್ಪ: ಸೂಕ್ತ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ₹ 7 ಲಕ್ಷ ನಗದನ್ನು ತಾಲ್ಲೂಕಿನ ಇಬ್ರಾಂಪುರ ಗ್ರಾಮದ ಬಳಿಯ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಭಾನುವಾರ ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ಗಡಿಭಾಗದ ಸೀಮಾಂಧ್ರ ಪ್ರದೇಶದ ಆಧೋನಿ ತಾಲ್ಲೂಕಿನ ನದಿಚಾಗಿ ಗ್ರಾಮದ ಬಾಲಣ್ಣ ಎಂಬುವರು ಯಾವುದೇ ದಾಖಲೆಗಳಿಲ್ಲದೆ ಹಣವನ್ನು ಕಾರಿನಲ್ಲಿ ಕೊಂಡೊಯ್ಯುತ್ತಿದ್ದರು.ಬಾಲಣ್ಣ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ನದಿಚಾಗಿ ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಲು ಬಳ್ಳಾರಿ ತಾಲ್ಲೂಕಿನ ದಮ್ಮೂರು ಗ್ರಾಮದಲ್ಲಿ ಚಂದಾ ಹಣವನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿದು ಬಂದಿದೆ. ‘ವಶಕ್ಕೆ ಪಡೆದ ಹಣಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಬಾಲಣ್ಣ ಅವರಿಗೆ ಸೂಚಿಸಲಾಗಿದೆ’ ಎಂದು ತಹಶೀಲ್ದಾರ್ ಎಸ್.ಪದ್ಮಕುಮಾರಿ ತಿಳಿಸಿದ್ದಾರೆ.

₹5 ಸಾವಿರ ಮೌಲ್ಯದ ಮದ್ಯ ವಶ

ಹೊಸಪೇಟೆ: ಕೆ.ಎಸ್.ಆರ್‌.ಟಿ.ಸಿ. ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹5 ಸಾವಿರ ಮೌಲ್ಯದ 17.28 ಲೀಟರ್‌ ಮದ್ಯವನ್ನು ಅಬಕಾರಿ ಪೊಲೀಸರು ಭಾನುವಾರ ಹಂಪಿ ರಸ್ತೆಯಲ್ಲಿ ವಶಪಡಿಸಿಕೊಂಡಿದ್ದಾರೆ.

‘ಬಸ್ಸು ಹೊಸಪೇಟೆಯಿಂದ ಹಂಪಿ ಕಡೆಗೆ ಹೋಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಬಸ್ಸನ್ನು ತಡೆದು ಪರಿಶೀಲಿಸಿದಾಗ ಮದ್ಯ ಪತ್ತೆಯಾಗಿದೆ. ಯಾರು ಮದ್ಯ ಸಾಗಿಸುತ್ತಿದ್ದರು ಎನ್ನುವುದು ಗೊತ್ತಾಗಿಲ್ಲ. ಈ ಕುರಿತು ಬಸ್‌ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರನ್ನು ಪ್ರಶ್ನಿಸಿದಾಗ, ಯಾರು ಬಸ್ಸಿನಲ್ಲಿ ತಂದಿಟ್ಟಿದ್ದಾರೆ ಎನ್ನುವುದು ಗೊತ್ತಿಲ್ಲ’ ಎಂದಿದ್ದಾರೆ ಎಂದು ಅಬಕಾರಿ ಡಿ.ಸಿ. ನಾಗರಾಜಪ್ಪ ತಿಳಿಸಿದರು.

ಆರೋಪಿ ಪರಾರಿ

ಮರಿಯಮ್ಮನಹಳ್ಳಿ: ಮರಿಯಮ್ಮನಹಳ್ಳಿ ತಾಂಡಾದ ಲಕ್ಷ್ಮಣನಾಯ್ಕ ಎಂಬುವರ ಮನೆಯ ಮೇಲೆ ಶನಿವಾರ ತಡರಾತ್ರಿ ಪಿಎಸ್‌ಐ ಡಿ.ಎಸ್‌.ಆಂಜನೇಯ ನೇತೃತ್ವದ ತಂಡ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ಸಂದರ್ಭದಲ್ಲಿ ಒಟ್ಟು ₹3,795 ಮೌಲ್ಯದ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪ ಲಕ್ಷ್ಮಣ ನಾಯ್ಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯದ ಪೌಚ್‌ ವಶಕ್ಕೆ

ಹೂವಿನಹಡಗಲಿ: ತಾಲ್ಲೂಕಿನ ಹಗರನೂರು ಗ್ರಾಮದಲ್ಲಿ ಶನಿವಾರ ರಾತ್ರಿ ಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ. ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಬೋವಿ ಗಿರಿಜಮ್ಮ ಎಂಬುವವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಹಿರೇಹಡಗಲಿ ಪಿಎಸ್‌ಐ ರಾಘವೇಂದ್ರ ಮತ್ತು ಸಿಬ್ಬಂದಿ ದಾಳಿ ನಡೆಸಿ, ₹1,552 ಮೌಲ್ಯದ 65 ಮದ್ಯದ ಪೌಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT