ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯ: ಗೊಂದಲದಲ್ಲಿ ಜೆಡಿಎಸ್ ಕಾರ್ಯಕರ್ತರು

ಶಿಡ್ಲಘಟ್ಟ: ಶಾಸಕ ರಾಜಣ್ಣಗೆ ನುಂಗಲಾರದ ಬಿಸಿತುಪ್ಪವಾದ ಮೇಲೂರು ರವಿಕುಮಾರ್, ಗುಂಪುಗಾರಿಕೆ ಮತ್ತು ‘ಬಣ ರಾಜಕೀಯ’ ಕಂಡು ರೋಸಿ ಹೋದ ಪಕ್ಷ ನಿಷ್ಠರು
Last Updated 9 ಏಪ್ರಿಲ್ 2018, 7:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್‌ ಪಾಳೆಯದಲ್ಲಿ ‘ಬಣ’ ರಾಜಕೀಯ ಶುರುವಿಟ್ಟುಕೊಂಡಿದ್ದು ಪಕ್ಷ ನಿಷ್ಠ ಮುಖಂಡರು, ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ.

ಟಿಕೆಟ್‌ಗಾಗಿ ಶಾಸಕ ಎಂ.ರಾಜಣ್ಣ, ಮುಖಂಡ ಮೇಲೂರು ಬಿ.ಎನ್‌.ರವಿಕುಮಾರ್‌ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ ವರಿಷ್ಠರು ಈ ಬಾರಿಯೂ ರಾಜಣ್ಣ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಅದರ ವಿರುದ್ಧ ರವಿಕುಮಾರ್ ‘ಬಂಡಾಯ’ದ ಬಾವುಟ ಹಿಡಿದು ತಮ್ಮದೇ ಬೆಂಬಲಿಗರ ಪಡೆ ಕಟ್ಟಿಕೊಂಡು ಪ್ರಚಾರ ಕೈಗೊಂಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡ ರವಿಕುಮಾರ್‌ ಅವರು ರಾಜಣ್ಣ ಅವರ ಗೆಲುವಿಗೆ ಎಲ್ಲ ರೀತಿಯ ‘ಬಲ’ ತುಂಬಿದವರ ಪೈಕಿ ಪ್ರಮುಖರು. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ‘ಗಳಸ್ಯ- ಗಂಠಸ್ಯ’ ಸ್ನೇಹಿತರಾಗಿದ್ದರು. ಆದರೆ ಸ್ಪರ್ಧೆಯ ವಿಚಾರದಲ್ಲಿ ಜಿದ್ದಿಗೆ ಬಿದ್ದು ಇಬ್ಬರೂ ಪರಸ್ಪರ ಹಾವು–ಮುಂಗಸಿಯಂತೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತರ ಅನಿಸಿಕೆ.

ರಾಜಣ್ಣ ಟಿಕೆಟ್‌ ಅಭ್ಯರ್ಥಿ ಎಂದು ಅಧಿಕೃತವಾಗಿ ವರಿಷ್ಠರು ಘೋಷಣೆ ಮಾಡಿದರೂ ರವಿಕುಮಾರ್ ಜೆಡಿಎಸ್ ವರಿಷ್ಠರ ಮೇಲೆ ಮುನಿಸು ತೋರಿಸಿಲ್ಲ. ಬದಲು ತಮ್ಮ ಪ್ರಚಾರದ ಕರಪತ್ರದಲ್ಲಿ ದೇವೇಗೌಡರ ಭಾವಚಿತ್ರವನ್ನೇ ಬಳಸಿಕೊಂಡು ಮತದಾರರನ್ನು ‘ಭಾವನಾತ್ಮಕ’ವಾಗಿ ಸೆಳೆಯುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಕುಮಾರಸ್ವಾಮಿ ಸಿಡಿಮಿಡಿ

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಇತ್ತೀಚೆಗೆ ಶಿಡ್ಲಘಟ್ಟಕ್ಕೆ ಭೇಟಿ ನೀಡಿದಾಗ ರವಿಕುಮಾರ್‌ ಅವರ ಬಂಡಾಯದ ವಿರುದ್ಧ ಕಿಡಿಕಾರಿದ್ದರು. ದೇವೇಗೌಡರ ಫೋಟೊ ಹಿಡಿದು ಪ್ರಚಾರ ಕೇಳುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದರು.

ಇಷ್ಟಾದರೂ ಬಂಡಾಯ ಕಾವು ಕಡಿಮೆ ಆಗಿಲ್ಲ. ಸದ್ಯ ರವಿಕುಮಾರ್ ‘ನನ್ನ ನಡೆ ಜನರ ಕಡೆ’ ಅಭಿಯಾನ ಆರಂಭಿಸಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬೆಂಬಲಿಗರೊಂದಿಗೆ ಕ್ಷೇತ್ರದಾದ್ಯಂತ ಮನೆ ಮನೆಗೆ ಸುತ್ತಿ ಮತದಾರರ ಮನಸೆಳೆಯುವ ಕೆಲಸದಲ್ಲಿ ತೊಡಗಿದ್ದಾರೆ. ಒಂದೆಡೆ ಬಂಡಾಯದ ಮಾತು, ಇನ್ನೊಂದೆಡೆ ದೇವೇಗೌಡರ ಭಾವಚಿತ್ರ ಹಿಡಿದು ಸುತ್ತುತ್ತಿರುವುದು ಶಾಸಕ ಮತ್ತು ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಮೇಲೂರು ರವಿಕುಮಾರ್ ಅವರನ್ನು ಕೇಳಿದರೆ, ‘ಜೆಡಿಎಸ್ ವರಿಷ್ಠ ದೇವೇಗೌಡರ ಆಶೀರ್ವಾದದ ಶ್ರೀರಕ್ಷೆ ನನ್ನ ಮೇಲಿದೆ. ಹಲವು ವರ್ಷಗಳಿಂದ ಅವರ ಹೆಸರಿನಲ್ಲಿಯೇ ಜನಸೇವೆ ಮಾಡುತ್ತಿದ್ದೇನೆ. ಜೆಡಿಎಸ್‌ನಿಂದ ಟಿಕೆಟ್ ಸಿಗದಿದ್ದರೂ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಪ್ರತಿಯಾಗಿ ರಾಜಣ್ಣ, ರವಿಕುಮಾರ್ ತಮಗೆ ದೇವೇಗೌಡರು ಟಿಕೆಟ್ ನೀಡುವುದಾಗಿ ಹೇಳಿದ್ದಾರೆ ಎಂದು ಹೇಳಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಈ ವಿಚಾರವನ್ನು ವರಿಷ್ಠರ ಗಮನಕ್ಕೆ ತಂದಿದ್ದೇವೆ. ಒಂದೆರಡು ದಿನಗಳಲ್ಲಿ ಈ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ತಿಳಿಸಿದರು.

ಸಂತಸದಲ್ಲಿ ವಿ.ಮುನಿಯಪ್ಪ

ಜೆಡಿಎಸ್‌ ಪಾಳೆಯ ಒಡೆದ ಮನೆಯಾಗಿರುವುದು ಕಾಂಗ್ರೆಸ್‌ ಪಕ್ಷದವರಲ್ಲಿ ಸಂತಸ ಇಮ್ಮಡಿಗೊಳಿಸಿದೆ. ‘ಆಪ್ತಮಿತ್ರ’ರ ನಡುವಿನ  ವೈಮನಸ್ಸು ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿ ಎನ್ನಲಾದ ವಿ. ಮುನಿಯಪ್ಪ ಅವರಲ್ಲಿ ‘ಖುಷಿ’ ಹೆಚ್ಚಿಸಿದೆ ಎನ್ನಲಾಗಿದೆ.

‘ಕ್ಷೇತ್ರದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿರುವ ಜೆಡಿಎಸ್ ಸದಸ್ಯರು ಸದ್ಯ ರವಿಕುಮಾರ್‌ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಸ್ನೇಹಿತನೇ ರಾಜಣ್ಣ ಅವರಿಗೆ ನುಂಗಲಾರದ ತುತ್ತಾಗಿದ್ದಾನೆ’ ಎನ್ನುತ್ತಾರೆ ಪಕ್ಷದ ಒಳ ರಾಜಕೀಯ ಬಲ್ಲವರು.

ರಾಜಣ್ಣ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುನಿಯಪ್ಪ ಅವರನ್ನು 15,479 ಮತಗಳ ಅಂತರದಿಂದ ಸೋಲಿಸಿದ್ದರು. ಮೂರನೇ ಬಾರಿ ಮುನಿಯಪ್ಪ ಅವರ ವಿರುದ್ಧ ತೊಡೆ ತಟ್ಟಲು ಸಜ್ಜಾಗಿರುವ ರಾಜಣ್ಣ ಅವರಿಗೆ ಬಂಡಾಯ ಮಗ್ಗಲು ಮುಳ್ಳಾಗಿದೆ.

ಸದ್ಯ 9ನೇ ಚುನಾವಣೆ ಎದುರಿಸಲು ಸಜ್ಜಾಗಿರುವ ಮುನಿಯಪ್ಪ ಅವರು ‘ಇಬ್ಬರ ಜಗಳ ಮೂರನೆಯವನಿಗೆ ಲಾಭ’ ಗಾದೆ ಜಪಿಸುತ್ತಿದ್ದಾರೆ. ಜೆಡಿಎಸ್ ವರಿಷ್ಠರು ಬಂಡಾಯದ ಬಿಸಿ ತಣಿಸದಿದ್ದರೆ ಕ್ಷೇತ್ರದಲ್ಲಿ ಈ ಬಾರಿ ಆ ಗಾದೆ ನಿಜವಾದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ಸ್ಥಳೀಯ ರಾಜಕೀಯ ಬಲ್ಲವರು.

ದೇವೇಗೌಡರ ಅಂಗಳದಲ್ಲಿ ಚೆಂಡು

‘ಒಂದೆಡೆ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’ ಎಂದು ಹೇಳಿಕೊಳ್ಳುವ ರವಿಕುಮಾರ್ ಇನ್ನೊಂದೆಡೆ ‘ಪಕ್ಷೇತರನಾಗಿ ಕಣಕ್ಕಿಳಿಯುತ್ತೇನೆ’ ಎಂದೂ ಹೇಳಿಕೊಂಡಿದ್ದಾರೆ.‘ನಾನು ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠ ವ್ಯಕ್ತಿ. ದೇವೇಗೌಡರು ಒಂದೊಮ್ಮೆ ನನ್ನನ್ನು ಕರೆದು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಸೂಚಿಸಿದರೆ ಆ ಕ್ಷಣದಿಂದಲೇ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ’ ಎಂದು ಹೇಳಿದ್ದಾರೆ.ಆದ್ದರಿಂದ ಸದ್ಯ ಶಿಡ್ಲಘಟ್ಟ ಜೆಡಿಎಸ್ ಬಣ ರಾಜಕೀಯದ ಚೆಂಡು ದೇವೇಗೌಡರ ಅಂಗಳದಲ್ಲಿದೆ ಎನ್ನಲಾಗಿದೆ. ‘ದೊಡ್ಡ ಗೌಡರು’ ರವಿ ಅವರನ್ನು ಕರೆಯಿಸಿ ಮನವೊಲಿಸುವ ಕೆಲಸ ಮಾಡುತ್ತಾರಾ ಅಥವಾ ಬೇರೆ ಏನಾದರೂ ರಾಜಕೀಯ ತಂತ್ರಗಾರಿಕೆ ಮಾಡುತ್ತಾರಾ ಎಂದು ಜೆಡಿಎಸ್‌ನವರು ಎದುರು ನೋಡುತ್ತಿದ್ದಾರೆ.

ಅಧ್ಯಕ್ಷರದೇ ಕುಮ್ಮಕ್ಕು!

‘ನಮ್ಮ ತಾಲ್ಲೂಕಿನ ರಾಜಕಾರಣ ಕೆಡಲು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರೇ (ಕೆ.ವಿ. ನಾಗರಾಜ್‌) ಕಾರಣ. ಅವರ ಕುಮ್ಮಕ್ಕಿನಿಂದಲೇ ಈ ರೀತಿ ಆಗಿದೆ. ಅವರು ರವಿಕುಮಾರ್ ಜತೆ ಸೇರಿ ಇವರನ್ನು ಈ ಮಟ್ಟಕ್ಕೆ ತಂದಿದ್ದಾರೆ. ರವಿ ಅನೇಕ ತಿಂಗಳುಗಳಿಂದ ಪಕ್ಷದ ಸಂಘಟನೆ ಬಿಟ್ಟು ಟ್ರಸ್ಟ್ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಅವರಿಗೆ ಪಕ್ಷದ ಯಾವುದೇ ಸ್ಥಾನಮಾನ ನೀಡಿಲ್ಲ’ ಎಂದು ರಾಜಣ್ಣ ತಿಳಿಸಿದರು.

**

ರವಿಕುಮಾರ್‌ ದೇವೇಗೌಡರ ಭಾವಚಿತ್ರ ಇಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಪಕ್ಷದ ವರಿಷ್ಠರಿಗೆ ತಿಳಿಸಿ, ಅವರ ತೀರ್ಮಾನಕ್ಕೆ ಬದ್ಧರಾಗುತ್ತೇವೆ – ಡಾ.ಧನಂಜಯರೆಡ್ಡಿ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT