ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಬಿಸಿಲು, ಕುಸಿದ ಫಸಲು

ಸಂತೇಬೆನ್ನೂರು: ಮಳೆ ಕೊರತೆಯಿಂದಾಗಿ ಮಸುಕಾದ ಮಾವು ಬೆಳೆ
Last Updated 9 ಏಪ್ರಿಲ್ 2018, 7:46 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಜಿಲ್ಲೆಯ ಮಾವು ಬೆಳೆ ಕಾಶಿ ಎಂದೇ ಪ್ರಸಿದ್ಧಿ ಪಡೆದ ಸಂತೇಬೆನ್ನೂರು ಹೋಬಳಿಯಲ್ಲಿ ಅಂತರ್ಜಲ ಕುಸಿತ, ತಾಪಮಾನದ ಹೆಚ್ಚಳದಿಂದ ಮಾವು ಬೆಳೆ ತೀವ್ರ ಕುಸಿತ ಕಂಡಿದೆ.

ಸಮೃದ್ಧ ಮಾವು ಫಸಲು ಕಾಣುವ ಋತುಮಾನ ಇದು. ಎಲ್ಲೆಲ್ಲೂ ಮಾವಿನ ಕಾಯಿಗಳ ಗೊಂಚಲು ಗೋಚರಿಸುವ ಸಂತಸದ ಕಾಲ. ಆದರೆ, ಹೋಬಳಿಯಾದ್ಯಂತ ಮಾವಿನಮರಗಳು ಬೋಳಾಗಿ ತೋಟಗಳೆಲ್ಲಾ ಭಣಗುಡುತ್ತಿವೆ. ಸುಗ್ಗಿಯ ವಾತಾವರಣ ಇಲ್ಲೆಲ್ಲೂ ಇಲ್ಲದಾಗಿದೆ.

ಈ ಬಾರಿ ಮಾವಿನ ಮರಗಳು ಸಮೃದ್ಧವಾಗಿ ಕಾಯಿಕಟ್ಟಿಲ್ಲ. ಹೀಗಾಗಿ, ರೈತರ ಆದಾಯದ ಮೂಲವೇ ಬತ್ತಿ ಹೋಗಿದೆ. ಚನ್ನಗಿರಿ ತಾಲ್ಲೂಕಿನ 4 ಸಾವಿರ ಹೆಕ್ಟೇರ್‌ಗಿಂತ ಅಧಿಕ ಪ್ರದೇಶದಲ್ಲಿ ಮಾವು ಬೆಳೆಯಿದೆ. ಈ ಭಾಗದಲ್ಲೇ ಜಿಲ್ಲೆಯ ಶೇ 75ರಷ್ಟು ಮಾವು ಬೆಳೆ ವ್ಯಾಪಿಸಿದೆ. ಆದರೆ, ಮಳೆ ಕೊರತೆಯಿಂದಾಗಿ ಮಾವು ಮಸುಕಾಗಿದೆ.

‘ಮಾವು ಚಿಗುರಲು, ಹೂವು ಕಾಯಿಗಟ್ಟಲು ಸಮತೋಲನ ತಾಪಮಾನ ಬೇಕು. ಆದರೆ, ಸತತ ಬರ ಪರಿಸ್ಥಿತಿ, ಉಷ್ಣಾಂಶದ ಹೆಚ್ಚಳದಿಂದ ಬೆಳೆ ನಲುಗಿದೆ. ತೋಟದ ಮಣ್ಣು ಬಿರಿದು, ಬೇರಿಗೆ ನೀರಿಲ್ಲದಂತಾಗಿದೆ. ಹೀಗಾಗಿ, ಹೂವು ಉದುರಿತು, ಎಳೆಯ ಕಾಯಿಗಳೂ ಸೀದುಹೋಗುತ್ತಿವೆ. ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿಯುವ ಭೀತಿ ಎದುರಾಗಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ರೈತ ತಿಮ್ಮೇಶಪ್ಪ.

ಹೋಬಳಿಯ ಬಯಲು ಪ್ರದೇಶದ ದೊಡ್ಡಬ್ಬಿಗೆರೆ, ಕುಳೇನೂರು, ದೊಡ್ಡೇರಿಕಟ್ಟೆ, ಅರಳಿಕಟ್ಟೆ, ಸಿದ್ಧನಮಠ ಗ್ರಾಮಗಳ ವ್ಯಾಪ್ತಿಯಲ್ಲಿ ಮಾವಿನ ಫಸಲು ತೀರಾ ಕುಸಿದಿದೆ. ದೀರ್ಘಕಾಲದಿಂದ ಸಾಂಪ್ರದಾಯಿಕವಾಗಿ ಮಾವು ಕೃಷಿ ನಡೆಸಿಕೊಂಡು ಬಂದ ಗ್ರಾಮಗಳು ಇವು. ಉತ್ಕೃಷ್ಟ ತಳಿಯ ಅಲ್ಫಾನ್ಸೊ, ಸಿಂಧೂರ ತಳಿಗಳು ಇಲ್ಲಿನ ರೈತರಿಗೆ ಉತ್ತಮ ಲಾಭ ತಂದುಕೊಡುತ್ತಿದ್ದವು. ಈ ಪ್ರದೇಶದಲ್ಲಿ ಶೇ 90ರಷ್ಟು ಮಾವು ಬೆಳೆ ನಾಶವಾಗಿದೆ.

‘‘ಮಾವು ಬೆಳೆಗಾರರ ಆದಾಯದ ಮೂಲಕ್ಕೆ ಕತ್ತರಿ ಬಿದ್ದಿದೆ. ಇಂತಹ ಡೋಲಾಯಮಾನ ಸ್ಥಿತಿ ಬೆಳೆಗಾರರನ್ನು ಮಾವಿನಿಂದದ ವಿಮುಖವಾಗುವಂತೆ ಮಾಡುತ್ತಿದೆ. ‘ಮಾವು ಬೆಳೆಯ ಸಮೃದ್ಧ ನಾಡು’ ಎಂಬ ಖ್ಯಾತಿ ಅಳಿಯುವತ್ತ ಸಾಗಿದೆ’’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ದೊಡ್ಡೇರಿಕಟ್ಟೆ ರೈತ ಪ್ರಸಾದ್ ಕುಮಾರ್.

‘ತೋಟಗಾರಿಕಾ ಇಲಾಖೆ ಜಿಲ್ಲೆಯಲ್ಲಿ ಮಾವು ಬೆಳೆ ನಾಶದ ಬಗ್ಗೆ ಪರಿಶೀಲನೆ ನಡೆಸಿಲ್ಲ. ರೈತರಿಗೆ ಸಲಹೆ, ಮಾರ್ಗದರ್ಶನ ನೀಡಲು ಮುಂದಾಗಿಲ್ಲ. ಸರ್ಕಾರ ಕೈಗಾರಿಕೋದ್ಯಮಿಗಳ, ಶ್ರೀಮಂತರ ಪರ ನಿಂತಿದೆ. ಅವರ ಸಾಲ ಮನ್ನಾ ಮಾಡಿದೆ. ರೈತರ ಸಂಕಟಕ್ಕೆ ತಲೆ ಕೆಡಿಸಿಕೊಂಡಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಇತ್ತ ಗಮನ ಹರಿಸಬೇಕು’ ಎಂಬುದು ಈ ಭಾಗದ ರೈತರ ಒತ್ತಾಯ.

500 ಹೆಕ್ಟೇರ್‌ ಬೆಳೆ ನಾಶ

‘ದೊಡ್ಡೆಬ್ಬಿಗೆರೆಯಲ್ಲೇ 1,500 ಹೆಕ್ಟೇರ್ ಮಾವು ಇದೆ. ಆದರೆ, ಇದರಲ್ಲಿ ಈಗಾಗಲೇ 500 ಹೆಕ್ಟೇರ್‌ನಷ್ಟು ಪ್ರದೇಶದ ಮಾವಿನ ಮರಗಳನ್ನು ಕಡಿದು ಹಾಕಲಾಗಿದೆ. ಉಳಿದ 1,000 ಹೆಕ್ಟೇರ್‌ನ ಶೇ 90 ಭಾಗದಲ್ಲಿ ಮಾವಿನ ಹೂವು ಉದುರಿದೆ. ನಮ್ಮ ಮೂರು ಎಕರೆ ತೋಟದ ಮಾವಿನ ಮರಗಳನ್ನು ಕಡಿಯಲಾಗಿದೆ ಎಂದು ಪರಿಸ್ಥಿಯನ್ನು ಬಿಚ್ಚಿಡುತ್ತಾರೆ’ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಪ್ರಸನ್ನ ದೊಡ್ಡಬ್ಬಿಗೆರೆ.

ಬೆಳೆಗಾರರಿಗೆ ಸಿಗದ ಪರಿಹಾರ

ಮಾವು ಬೆಳೆ ನಾಶಕ್ಕೆ ಪರಿಹಾರ ನೀಡಲು ಸರ್ಕಾರ ಯಾವುದೇ ಮಾರ್ಗಸೂಚಿ ರಚಿಸಿಲ್ಲ. ಫಸಲ್ ಬಿಮಾ ಯೋಜನೆಯಡಿ ಎರಡು ವರ್ಷ ವಿಮೆ ಕಂತನ್ನು ಪಾವತಿಸಿದ್ದೆವು. ಸತತವಾಗಿ ಬೆಳೆ ನಾಶವಾದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ದೊಡ್ಡಬ್ಬಿಗೆರೆಯ ಪ್ರಗತಿಪರ ರೈತ ಡಿ.ಎಸ್.ಮಂಜುನಾಥ್.

–ಕೆ.ಎಸ್.ವೀರೇಶ್ ಪ್ರಸಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT