ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನದ ಗತ ವೈಭವ ಮರುಸ್ಥಾಪನೆ

ಸೌಂದರ್ಯ ಇಮ್ಮಡಿಗೊಳಿಸಿದ ಪಟ್ಟಾಭಿಷೇಕ ಉದ್ಯಾನ; ಜಾಗ ನೀಡಿದ ದಾನಿ ಕನಸು ನನಸು
Last Updated 9 ಏಪ್ರಿಲ್ 2018, 10:10 IST
ಅಕ್ಷರ ಗಾತ್ರ

ಬಂಗಾರಪೇಟೆ: ಪಟ್ಟಣದಲ್ಲಿ 50 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡಿರುವ ಪಟ್ಟಾಭಿಷೇಕ ಉದ್ಯಾನ ಪಟ್ಟಣದ ಸೌಂದರ್ಯ ಇಮ್ಮಡಿಗೊಳಿಸಿದೆ.ಹಲ ವರ್ಷದಿಂದ ನಿರ್ವಹಣೆ ಇಲ್ಲದೆ ಕಳಾಹೀನವಾಗಿದ್ದ ಉದ್ಯಾನದ ಗತ ವೈಭವ ಮರುಸ್ಥಾಪಿಸಿದ್ದು, ಉದ್ಯಾನಕ್ಕೆ ಜಾಗ ನೀಡಿದ ದಾನಿ ಹಾಜೀ ಇಸ್ಮಾಯಿಲ್ ಸೇಠ್ ಅವರ ಕನಸು ನನಸಾಗಿದೆ.

ಉದ್ಯಾನದಲ್ಲಿ ಮಕ್ಕಳಿಗೆ ಆಟಿಕೆಗಳು, ಯುವಕರಿಗೆ ತೆರೆದ ಜಿಮ್ ಅಲ್ಲದೆ ವಾಯುವಿಹಾರಕ್ಕೆ ವಾಕಿಂಗ್ ಟ್ರ್ಯಾಕ್, ವಿಶ್ರಮಿಸಲು ಅಲ್ಲಲ್ಲಿ ಆಸನ ಅಳವಡಿಸಲಾಗಿದ್ದು, ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ಮಕ್ಕಳ ಕಲರವ ಮತ್ತು ಹಿರಿಯರ ಸಮಾಗಮ ನಡೆಯುತ್ತಿದೆ.

ಉದ್ಯಾನದಲ್ಲಿ ಬೆಳೆದು ನಿಂತಿರುವ ಹೊಂಗೆ, ಸಿಲ್ವರ್, ಆಶೋಕ ಮರಗಳು ಸೇರಿದಂತೆ ವಿವಿಧ ತಳಿಯ ಅಲಂಕಾರಿಕ ಗಿಡ ಮರಗಳು ಉದ್ಯಾನಕ್ಕೆ ಮೆರಗು ನೀಡಿವೆ. ಉದ್ಯಾನದ ಅಲ್ಲಲ್ಲಿ ನಿರ್ಮಿಸಿರುವ ತೆರೆದ ವಿಶ್ರಾಂತಿತಾಣಗಳು ಹಿರಿಯ ನಾಗರಿಕರಿಗೆ ಕೊಂಚ ನೆಮ್ಮದಿ ನೀಡಿವೆ. ವರ್ಷದ ಹಿಂದೆ ಬಿಕೋ ಎನ್ನುತ್ತಿದ್ದ ಉದ್ಯಾನ ಈಗ ಮಕ್ಕಳು, ಯುವಕರು ಮತ್ತು ವೃದ್ಧರಿಂದ ನಿತ್ಯ ಗಿಜಿಗುಡುತ್ತಿದೆ.

1902ರಲ್ಲಿ ಹಾಜೀ ಇಸ್ಮಾಯಿಲ್ ಸೇಠ್ ಎಂಬುವರು ತಮ್ಮ 5ಎಕರೆ ವಿಸ್ತೀರ್ಣದ ಜಾಗವನ್ನು ಉದ್ಯಾನಕ್ಕೆ ಎಂದು ಪುರಸಭೆಗೆ ದಾನ ನೀಡಿದ್ದರು. ಆ ಜಾಗದಲ್ಲಿಯೇ ಪಟ್ಟಣದ ನಾಗರಿಕರ ಸಮುದಾಯ ಚಟುವಟಿಕೆಗಾಗಿ ಭವನ ನಿರ್ಮಿಸಿಕೊಟ್ಟಿದ್ದರು.

ಅವರ ಉದ್ದೇಶದಂತೆ ಆರಂಭದಲ್ಲಿ ಉದ್ಯಾನ ನಿರ್ಮಿಸಿದ್ದ ಪುರಸಭೆ ತದನಂತರ ನಿರ್ವಹಣೆ ಮಾಡಲಿಲ್ಲ. 2004ರಲ್ಲಿ ಆ ಭವನ ನವೀಕರಣ ಮಾಡಲಾಯಿತಾದರೂ ಉದ್ಯಾನದತ್ತ ಹೆಚ್ಚು ಆಸಕ್ತಿ ತೋರಿಲ್ಲ. ಇದನ್ನು ಮನಗೊಂಡ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಪಟ್ಟಣದಲ್ಲಿ ಉದ್ಯಾನಗಳ ಅಭಿವೃದ್ಧಿಗೆ ಅದ್ಯತೆ ನೀಡಿದ್ದಾರೆ ಎನ್ನುವುದು ಜನರ ಅಭಿಪ್ರಾಯ.

ಹಿಂದೆ ಉದ್ಯಾನದಲ್ಲಿ ಬಣ್ಣ ಬಣ್ಣದ ನೀರಿನ ಕಾರಂಜಿ, ಸಂಗೀತ ಹಾಗೂ ರೇಡಿಯೊ ಪ್ರಸಾರ ವ್ಯವಸ್ಥೆಯಿತ್ತು. ಶಾಸಕರು ಅ ವ್ಯವಸ್ಥೆ ಮರು ಸ್ಥಾಪಿಸಲಿದ್ದಾರೆ ಎನ್ನುವ ನಿರೀಕ್ಷೆಯಿದೆ ಎನ್ನುತ್ತಾರೆ ಹಿರಿಯ ನಾಗರಿಕ ಶ್ರೀನಿವಾಸ್.

ಕುಗ್ಗಿದ ವಿಸ್ತೀರ್ಣ: ಉದ್ಯಾನದ ಬಹುತೇಕ ಜಾಗ ಒತ್ತುವರಿಯಾಗಿದೆ. ಬಾಲಕಿಯರ ಕಾಲೇಜು ಕಟ್ಟಡ, ಮತ್ತೊಂದು ಭಾಗದಲ್ಲಿ ವಾಲಿಬಾಲ್ ಕೋರ್ಟ್, ಲಯನ್ಸ್ ಕ್ಲಬ್, ಅಂಬೇಡ್ಕರ್ ಭವನ, ಇಂದಿರಾ ಕ್ಯಾಂಟೀನ್ ಹೀಗೆ ಹಲ ಕಟ್ಟಗಳು ಉದ್ಯಾನದ ಜಾಗ ಆಕ್ರಮಿಸಿವೆ. ಆ ಕಟ್ಟಡ ತೆರವುಗೊಳಿಸಿ ಉದ್ಯಾನ ವಿಸ್ತರಿಸಬೇಕು ಎನ್ನುವುದು ನಾಗರಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT