ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷೇತರ ‘ಹ್ಯಾಟ್ರಿಕ್‌’ ಗೆಲುವು ಸಾಧಿಸಿದ ಕ್ಷೇತ್ರ..!

ಮೂವರಿಗೆ ತಲಾ ಮೂರು ಬಾರಿ ಶಾಸಕರಾಗುವ ಅವಕಾಶ ನೀಡಿದ ಇಂಡಿ ವಿಧಾನಸಭಾ ಕ್ಷೇತ್ರದ ಮತದಾರ
Last Updated 9 ಏಪ್ರಿಲ್ 2018, 12:32 IST
ಅಕ್ಷರ ಗಾತ್ರ

ವಿಜಯಪುರ: ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಬಂಥನಾಳದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. ಲಚ್ಯಾಣದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು.

ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ ಸಾಲೋಟಗಿಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ.

ಭೀಮಾ ನದಿ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚು ಹರಿಯುವುದೇ ಇಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ. ಅಪರಾಧಿಕ ಚಟುವಟಿಕೆಗಳಿಂದಲೂ ಇಂಡಿ ರಾಜ್ಯದಲ್ಲೇ ಕುಖ್ಯಾತ. ಭೀಮಾ ತೀರ ಎಂದರೇ ಇಂದಿಗೂ ಬೆಚ್ಚಿ ಬೀಳುವವರು ಇದ್ದಾರೆ.

ಶಾಂತೇಶ್ವರ ದೇಗುಲದ ಸುತ್ತಲೂ ಹೂವಿನ ದಂಡೆಗಳನ್ನು ಮಾರಾಟ ಮಾಡುತ್ತಿದ್ದರಿಂದಲೇ ‘ಇಂಡಿ’ ಎಂಬ ಹೆಸರು ಬಂದಿದೆ ಎನ್ನುತ್ತಾರೆ ಸ್ಥಳೀಯರು. ಹಲವು ವೈಶಿಷ್ಟ್ಯಗಳ ಆಗರವನ್ನೇ ಇಂಡಿ ವಿಧಾನಸಭಾ ಕ್ಷೇತ್ರ ತನ್ನೊಡಲಲ್ಲಿ ಹುದುಗಿಸಿಟ್ಟುಕೊಂಡಿದೆ.

ಪಕ್ಷೇತರರಿಗೆ ಮನ್ನಣೆ

ಇಂಡಿ ವಿಧಾನಸಭಾ ಕ್ಷೇತ್ರದ ಮತದಾರರು ಮೂವರಿಗೆ ತಲಾ ಮೂರು ಬಾರಿ ಶಾಸಕರಾಗುವ ಅವಕಾಶ ನೀಡಿದ್ದಾರೆ. ಅದರಲ್ಲೂ ರವಿಕಾಂತ ಪಾಟೀಲ ಪಕ್ಷೇತರರಾಗಿ ಹ್ಯಾಟ್ರಿಕ್‌ ವಿಜಯಭೇರಿ ಬಾರಿಸಿದ ಕ್ಷೇತ್ರವಿದು.

1957, 1967, 1972ರಲ್ಲಿ ಎಸ್‌.ಎಂ.ಕರಬಸಪ್ಪ ಶಾಸಕರಾಗಿ ಆಯ್ಕೆಯಾದರೆ, 1978, 1983, 1989ರಲ್ಲಿ ಆರ್‌.ಆರ್‌.ಕಲ್ಲೂರ ಶಾಸಕರು. ಆಗಿನ ಮುಖ್ಯಮಂತ್ರಿ ಗುಂಡೂರಾವ್‌ಗೆ 9 ಕೆ.ಜಿ.ತೂಕದ ಬೆಳ್ಳಿ ಪಂಪ್‌ಸೆಟ್‌ ನೀಡಿದ ಹೆಗ್ಗಳಿಕೆ ಇವರದ್ದು.

1994, 1999, 2004ರಲ್ಲಿ ಪಕ್ಷೇತರರಾಗಿ ಮೊದಲ ಬಾರಿಗೆ ಹ್ಯಾಟ್ರಿಕ್‌ ವಿಜಯಭೇರಿ ದಾಖಲಿಸಿದ ಕೀರ್ತಿ ರವಿಕಾಂತ ಪಾಟೀಲರದ್ದು. 2008ರಲ್ಲಿ ಪಕ್ಷೇತರರಾಗಿ ಗೆಲುವು ಸಾಧಿಸುವಲ್ಲಿ ವಿಫಲರಾದ ರವಿಕಾಂತ, 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದರೂ ಗೆಲುವು ದಾಖಲಿಸಲಿಲ್ಲ. ಇದೀಗ ಬಿಜೆಪಿ ಅವಕಾಶ ನಿರಾಕರಿಸಿದರೆ ಮತ್ತೊಮ್ಮೆ ಪಕ್ಷೇತರರಾಗಿ ಕಣಕ್ಕಿಳಿಯುವ ತಯಾರಿ ನಡೆಸಿದ್ದಾರೆ. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ರವಿಕಾಂತ ಪಾಟೀಲ ಶಕ್ತಿ ಕ್ಷೀಣಿಸಿದೆ ಎಂಬ ರಾಜಕೀಯ ವಿಶ್ಲೇಷಣೆ ಕ್ಷೇತ್ರದಲ್ಲಿದೆ.

ಕಾಂಗ್ರೆಸ್‌, ಪಕ್ಷೇತರರಿಗೆ ತಲಾ ಐದು ಬಾರಿ, ಜನತಾ ಪಕ್ಷಕ್ಕೆ ಎರಡು ಬಾರಿ, ಬಿಜೆಪಿಗೆ ಒಂದು ಬಾರಿ ಕ್ಷೇತ್ರದ ಮತದಾರರು ಅವಕಾಶ ನೀಡಿದ್ದಾರೆ.

ಕ್ಷೇತ್ರ ವ್ಯಾಪ್ತಿ

ಇಂಡಿ, ಬಳ್ಳೊಳ್ಳಿ ವೃತ್ತ, ಶಿರಗೂರ ಇನಾಂ(ಹಳೆಯ), ಅಗರಖೇಡ, ಗುಬ್ಬೇವಾಡ, ಮಣ್ಣೂರ, ಹಿರೇಬೇವನೂರ, ಆಳೂರ, ಮಾವಿನಳ್ಳಿ, ಚಿಕ್ಕಬೇವನೂರ, ಇಂಗಳಗಿ, ನೆಹರು ನಗರ, ಭುಯ್ಯಾರ, ಖೇಡಗಿ, ಲಾಳಸಂಗಿ, ಸಾತಲಗಾಂವ, ಸಾಲೋಟಗಿ, ರೂಗಿ, ತೆನ್ನಿಹಳ್ಳಿ, ಗೊರನಾಳ, ಮಸಳಿ, ರಾಮನಗರ, ನಾಡ ಬಿಕೆ, ನಾದ ಕೆಡಿ, ಗೊಳಸಾರ, ಶಿವಪುರ, ರೋಡಗಿ, ಮಿರಗಿ, ಹಂಚಿನಾಳ, ಅರ್ಜುಣಗಿ ಕೆ.ಎಚ್, ಅರ್ಜುಣಗಿ ಬಿ.ಕೆ, ಮಾರ್ಸನಳ್ಳಿ, ತೆಗ್ಗೆಳ್ಳಿ, ಶಿರಶ್ಯಾಡ, ಸಂಗೋಗಿ, ಮಸಳಿ ಬಿ.ಕೆ. ಇತ್ಯಾದಿ.

ಕಣ ಚಿತ್ರಣ

ಕಾಂಗ್ರೆಸ್‌ನಿಂದ ಯಶವಂತರಾಯಗೌಡ ಪಾಟೀಲ, ಜೆಡಿಎಸ್‌ನಿಂದ ಬಿ.ಡಿ.ಪಾಟೀಲ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವುದು ನಿಶ್ಚಿತ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಇಬ್ಬರೂ ಮಾಜಿ ಶಾಸಕರಿಗೆ ಪಕ್ಷದಿಂದ ಟಿಕೆಟ್‌ ನೀಡುವುದಿಲ್ಲ ಎಂದು ಘೋಷಿಸಿದ್ದು, ಇದೀಗ ಪಕ್ಷದ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ತಮ್ಮೊಳಗೆ ಹುರಿಯಾಳಾಗಲು ಸಜ್ಜಾಗುತ್ತಿದ್ದಾರೆ.ಕೇಂದ್ರ ಸಚಿವ ರಮೇಶ ಜಿಗಜಿಣಗಿ ಸ್ವಕ್ಷೇತ್ರದ ಟಿಕೆಟ್‌ ರಾಜಕಾರಣಕ್ಕೆ ಸಂಬಂಧಿಸಿದಂತೆ ಮೌನ ವಹಿಸಿದ್ದು, ನಡೆ ನಿಗೂಢವಾಗಿದೆ. ಬಿಜೆಪಿ ಟಿಕೆಟ್‌ ಪಂಚಮಸಾಲಿ ಸಮಾಜಕ್ಕೆ ದೊರಕುತ್ತದೆಯೋ, ಗಾಣಿಗ ಸಮಾಜಕ್ಕೆ ಸಿಗುತ್ತದೆಯೋ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

228742 ಮತದಾರರು

ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ಮಾರ್ಚ್ ಅಂತ್ಯದವರೆಗೂ ಒಟ್ಟು 228742 ಮತದಾರರಿದ್ದಾರೆ. 273 ಮತಗಟ್ಟೆಗಳಿವೆ. ಪಂಚಮಸಾಲಿ ಮತದಾರರು 37613 ಇದ್ದರೆ, ಜಂಗಮ 4093, ಗಾಣಿಗ 19605, ರಡ್ಡಿ 1400, ಬಣಜಿಗ 10543, ಕಮ್ಮಾರ 2900, ಸವಿತಾ ಸಮಾಜ 3465, ಮಾಳಿ 2535, ನೇಕಾರ 4965, ಮಡಿವಾಳ 4046, ಪರಿಶಿಷ್ಟ ಜಾತಿ 17057, ಪರಿಶಿಷ್ಟ ಪಂಗಡ 3005, ಲಂಬಾಣಿ 26226, ಕುರುಬ 25624, ಮುಸ್ಲಿಂ 17831, ಬ್ರಾಹ್ಮಣ 3627, ಗಂಗಾ ಮತಸ್ಥ 12323, ಉಪ್ಪಾರ 3254, ಕುಂಬಾರ 2861, ವಿಶ್ವಕರ್ಮ 3033, ಜೈನ 1832, ರಜಪೂತ 2539, ಮರಾಠ 4573, ಕುಡು ಒಕ್ಕಲಿಗ ಅಂದಾಜು 36 ಮತದಾರರು ಸೇರಿದಂತೆ ಇನ್ನಿತರೆ ಜಾತಿಯ ಮತದಾರರಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಬಾಯಾರಿದೆ ಭೀಮೆ ತಟ

ಭೀಮೆ ಹರಿದರೂ ಪ್ರತಿ ಬೇಸಿಗೆಯಲ್ಲೂ ನದಿ ದಡದ ಹಳ್ಳಿಗಳು ನೀರಿಗಾಗಿ ಹಾಹಾಕಾರ ಪಡುವುದು ತಪ್ಪಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ 30% ನೀರಾವರಿಯಾಗಿದ್ದರೂ ಕಾಲುವೆ ಜಾಲ ಸಮರ್ಪಕವಾಗಿಲ್ಲ. ಕೊನೆವರೆಗೂ ನೀರು ಹರಿದ ಇತಿಹಾಸವಿಲ್ಲ ಎನ್ನುತ್ತಾರೆ ನಾದ ಕೆ.ಡಿ. ಗ್ರಾಮದ ಪ್ರಗತಿಪರ ರೈತ ಎಸ್‌.ಟಿ.ಪಾಟೀಲ.‌ಈಚೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿದ್ದರೂ, ಶೈಕ್ಷಣಿಕ ಪ್ರಗತಿ ಇನ್ನೂ ಬೇಕಿದೆ. ಸೂಕ್ತ ಮಾರುಕಟ್ಟೆಯಿಲ್ಲದಿರುವುದು ನಿಂಬೆಯ ಕಣಜವಾದ ತಾಲ್ಲೂಕಿನ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT