ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 10 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

– ನಿಂಗಪ್ಪ.ಎಚ್., ಬೆಂಗಳೂರು
ನಾನು ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಹಳ್ಳಿಯಲ್ಲಿ ಸ್ವಂತ ಮನೆ ಕಟ್ಟಿಕೊಳ್ಳಬೇಕು. ನನ್ನ ತಂದೆ ಕಡೆ ₹ 1.50 ಲಕ್ಷ ಹಣ ಇದೆ. ಇನ್ನೂ ₹ 3 ರಿಂದ ₹ 4 ಲಕ್ಷ ಹಣ ಬೇಕಾಗಿದೆ. ನಮಗೆ ಎರಡು ಎಕರೆ ಜಮೀನು ಹಾಗೂ 100 ಕುರಿಗಳಿವೆ. ನನಗೆ ಮನೆ ಕಟ್ಟಲು ಸಾಲ ಎಲ್ಲಿ ಸಿಗಬಹುದು?

ಉತ್ತರ: ನಿಮ್ಮ ಸಂಬಳ ಹಾಗೂ ಸಂಬಳದಲ್ಲಿ ಕಡಿತ ಇವೆಲ್ಲವನ್ನೂ ಪ್ರಶ್ನೆಯಲ್ಲಿ ತಿಳಿಸಿಲ್ಲ. ನಿಮಗೆ ಬೇಕಾಗುವ ₹ 3ರಿಂದ ₹ 4 ಲಕ್ಷ, ಬ್ಯಾಂಕಿನಲ್ಲಿ ಅಂದರೆ ನೀವು ಸಂಬಳ ಪಡೆಯುವ ಬ್ಯಾಂಕಿನಲ್ಲಿ ಸಾಲ ಸಿಗುತ್ತದೆ. ಗೃಹಸಾಲದ ಅವಧಿ 30 ವರ್ಷಗಳ ತನಕವೂ ದೊರೆಯುತ್ತದೆ. ಆದರೆ ನಿಮಗೆ ಸೇವಾವಧಿ ಇರಬೇಕು. ₹ 1 ಲಕ್ಷ ಗೃಹಸಾಲ, 20 ವರ್ಷಗಳ ಮಾಸಿಕ ಕಂತಿನಲ್ಲಿ ತೀರಿಸಲು ₹ 1000 ಮಾಸಿಕ ಕಂತು (EMI) ದೊರೆಯುತ್ತದೆ. ನೀವು ₹ 4000 ತಿಂಗಳಿಗೆ ಇ.ಎಂ.ಐ. ಭರಿಸಲು ಸಾಮರ್ಥ್ಯ ಹೊಂದಿದಲ್ಲಿ ₹ 4 ಲಕ್ಷ ಗೃಹ ಸಾಲ ದೊರೆಯುತ್ತದೆ. ಮನೆಕಟ್ಟಲು ಕುರಿಗಳನ್ನಾಗಲಿ, ಜಮೀನನ್ನಾಗಲಿ ಎಂದಿಗೂ ಮಾರಾಟ ಮಾಡಬೇಡಿ

– ರವಿ ಬಸಾ ನಾಯಕ್, ರಾಯಭಾಗ್
ನಾನು ಅತಿಥಿ ಉಪನ್ಯಾಸಕ. ಸೇವಾ ಭದ್ರತೆ ಇಲ್ಲ. ವರ್ಷಕ್ಕೆ ₹ 1 ಲಕ್ಷ ಸಂಬಳ ಬರುತ್ತದೆ. ಮದುವೆ ಆಗಿದೆ. ತಿಂಗಳಿಗೆ ₹ 1300 ಆರ್.ಡಿ. ವಾರ್ಷಿಕ ₹ 10,000 ಎಲ್.ಐ.ಸಿ. ಕಂತು ಕಟ್ಟುತ್ತೇನೆ. ಮನೆ ಖರ್ಚು ₹ 60,000 (ವಾರ್ಷಿಕ) ಇನ್ನು ಗರಿಷ್ಠ ವಾರ್ಷಿಕ ₹ 20,000 ಉಳಿಸಬಹುದೆ?

ಉತ್ತರ: ನಿಮ್ಮ ಉದ್ಯೋಗದಲ್ಲಿ ಭದ್ರತೆ ಇಲ್ಲದಿರುವುದನ್ನು ಕೇಳಿ ತುಂಬಾ ಬೇಸರವಾಯಿತು.  ಆದರೆ ಧೈರ್ಯಗೆಡಬೇಡಿ. ಕತ್ತಲೆ ಕಳೆದು ಬೆಳಕು ಬರುವಂತೆ ನೀವು ಮುಂದೆ ಉತ್ತಮ ಉದ್ಯೋಗಕ್ಕೆ ಸೇರಲು ಅವಕಾಶವಿದೆ. ಈ ವಿಚಾರದಲ್ಲಿ ಸಾಕಷ್ಟು ಪ್ರಯತ್ನ ಮಾಡಿ. ಇದೇ ವೇಳೆ ಎಲ್.ಐ.ಸಿ. ಯವರ ಏಜೆನ್ಸಿ ಪಡೆದು, ಬಂಧು ಮಿತ್ರರಿಂದ ಪಾಲಿಸಿ ಮಾಡಲು ಪ್ರಾರಂಭಿಸಿ. ಪ್ರಾರಂಭದಲ್ಲಿ ಸ್ವಲ್ಪ ಕಷ್ಟವಾದರೂ, ಪ್ರಯತ್ನಕ್ಕೆ ಭಗವಂತ ಪ್ರತಿಫಲ ಕೊಟ್ಟೇ ಕೊಡುತ್ತಾನೆ.

ಹೀಗೆ ಏಜೆನ್ಸಿ ಪಡೆಯಲು Insurance Institution of India Mumbai   ನಡೆಸುವ ಪರೀಕ್ಷೆ ಪಾಸು ಮಾಡಬೇಕು. Onlineನಲ್ಲಿ ವಾರ್ಷಿಕವಾಗಿ ಎರಡು ಬಾರಿ, ಬಹಳಷ್ಟು ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆ ಬಹಳ ಸುಲಭ ಕೂಡಾ. ಹೆಚ್ಚಿನ ಮಾಹಿತಿಗೆ ನಿಮ್ಮ ಊರಿನ ಎಲ್.ಐ.ಸಿ. ಶಾಖೆಯಲ್ಲಿ ವಿಚಾರಿಸಿರಿ. ವಾರ್ಷಿಕವಾಗಿ ₹ 20,000 ಉಳಿಸುವುದಕ್ಕಿಂತ ತಿಂಗಳ ₹ 1500 ಆರ್.ಡಿ. ಮಾಡಿರಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

– ಊರು ಬೇಡ, ಹೆಸರು ಬೇಡ
ವಯಸ್ಸು 32. 2010 ರಿಂದ ಸರ್ಕಾರಿ ಫ್ರೌಢ ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ವೇತನ ₹ 25,600. ಕಡಿತ ಕೆ.ಜಿ.ಐ.ಡಿ. ₹ 1220, ಎಲ್.ಐ.ಸಿ. 1200, ಪಿ.ಎಲ್.ಐ. ₹ 1800, ಎನ್.ಪಿ.ಎಸ್. ₹ 3000. ಒಬ್ಬಳು ಮಗಳು, ತಂದೆ ವ್ಯವಸಾಯ ಮಾಡುತ್ತಾರೆ. 10 ಎಕರೆ ಪಿತ್ರಾಜಿತ ಜಮೀನಿದೆ. ಇದರಿಂದ ವಾರ್ಷಿಕ ₹ 1 ಲಕ್ಷ ಆದಾಯವಿದೆ. ಹಳ್ಳಿಯಲ್ಲಿ ಸ್ವಂತ ಮನೆ ಇದೆ. ನನ್ನ ಮುಂದಿನ ಭವಿಷ್ಯಕ್ಕಾಗಿ ಹಣಕಾಸಿನ ಕುರಿತು ಮಾರ್ಗದರ್ಶನ ಮಾಡಿ.

ಉತ್ತರ: ನಿಮ್ಮ ಉಳಿತಾಯ ವಿಮೆಗೆ ಮಾತ್ರ ಸೀಮಿತವಾಗಿದ್ದಂತೆ ಕಾಣುತ್ತಿದೆ. ಇರುವ ವಿಮೆ ಮುಂದುವರೆಸಿರಿ. ನಿಮ್ಮ ಮಗಳ ಸಲುವಾಗಿ ಕನಿಷ್ಠ ₹ 2,000 ತಿಂಗಳಿಗೆ ಆರ್.ಡಿ. ತುಂಬುತ್ತಾ ಬನ್ನಿ. ಇದು ಮಗಳ ವಿದ್ಯಾಭ್ಯಾಸ ಹಾಗೂ ಮದುವೆಗೆ ನೆರವಾಗುತ್ತದೆ. ಜೊತೆಗೆ ಪ್ರತೀ ವರ್ಷ ಕನಿಷ್ಠ 10 ಗ್ರಾಂ ಬಂಗಾರದ ನಾಣ್ಯ ಕೂಡಾ ಕೊಳ್ಳಿರಿ. ಈ ಪ್ರಕ್ರಿಯೆ ಮಗಳ ಮದುವೆ ತನಕವೂ ಮುಂದುವರೆಸಿರಿ.

ಸದ್ಯದ ಪರಿಸ್ಥಿತಿಯಲ್ಲಿ ನಿಮಗೆ ಬಹಳ ಉಳಿತಾಯವಿಲ್ಲವಾದರೂ, ಎಷ್ಟಾದರಷ್ಟು ದೀರ್ಘಾವಧಿ  ಆರ್.ಡಿ. ಮಾಡಿರಿ. ಮುಂದೆ ಸ್ವಲ್ಪ ಸಾಲ ಪಡೆದು ನಿವೇಶನಕೊಳ್ಳಬಹುದು. ಊರಿನಲ್ಲಿ 10 ಎಕರೆ ಜಮೀನು ಇರುವುದನ್ನು ಹಾಗೆಯೇ ಕಾಪಾಡಿಕೊಂಡು ಬನ್ನಿ. ಎಷ್ಟೇ ಬೆಲೆ ಬಂದರೂ ಮಾರಾಟ ಮಾಡಬೇಡಿ. ಕೃಷಿ ಆದಾಯ ಎಷ್ಟು ಬಂದರೂ, ಸೆಕ್ಷನ್ 10 (1) ಆಧಾರದ ಮೇಲೆ, ಅಂತಹ ಆದಾಯಕ್ಕೆ ತೆರಿಗೆ ಇರುವುದಿಲ್ಲ.

– ವಿರೂಪಾಕ್ಷಿ, ವಿಜಯಪುರ
ನಾನು ಸರ್ಕಾರಿ ನೌಕರ. 2042ಕ್ಕೆ ನಿವೃತ್ತಿ. ತಿಂಗಳ ಸಂಬಳ ₹ 38,000. ತಿಂಗಳ ಖರ್ಚು ₹ 15,000. ನನಗೆ ಇಬ್ಬರು ಹೆಣ್ಣು ಮಕ್ಕಳು. (5–2) ವರ್ಷ ಸ್ವಂತ ಮನೆ ಇದೆ. ಭವಿಷ್ಯದ ಉಳಿತಾಯಕ್ಕೆ ದಯವಿಟ್ಟು ತಿಳಿಸಿ.

ಉತ್ತರ: ನಿಮಗೆ ಸುದೀರ್ಘ ಸೇವಾವಧಿ ಇದೆ. ಈಗಿನಿಂದಲೇ ಸರಿಯಾದ ಉಳಿತಾಯದ ಪ್ಲ್ಯಾನ್ ಮಾಡಿ ಅದರಂತೆ ನಡೆದುಕೊಂಡರೆ, ಉತ್ತಮ ಭವಿಷ್ಯ ನಿರೀಕ್ಷಿಸಬಹುದು. ನಿಮ್ಮ ಹೆಣ್ಣು ಮಕ್ಕಳ ಸಲುವಾಗಿ ತಲಾ ₹ 3,000 ಪ್ರತೀ ತಿಂಗಳೂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೊಡಗಿಸಿರಿ. ನೀವು ಜೀವವಿಮೆ ಮಾಡಿಸಿದಂತಿಲ್ಲ. ಎಲ್.ಐ.ಸಿ. ಯವರ ಜೀವನ ಆನಂದ ಪಾಲಿಸಿ 25 ವರ್ಷಗಳ ಅವಧಿಗೆ ಮಾಡಿ, ತಿಂಗಳಿಗೆ ಕನಿಷ್ಠ ₹ 5000 ತುಂಬಿರಿ. ಸ್ವಂತ ಮನೆ ಇದ್ದರೂ ಸ್ವಲ್ಪ ಸಾಲವಾದರೂ ಮಾಡಿ ನಿಮ್ಮ ಊರಿಗೆ ಸಮೀಪದ ಸ್ವಲ್ಪ ದೊಡ್ಡ ಊರಿನಲ್ಲಿ ಕನಿಷ್ಠ 30X40 ಅಳತೆಯ ನಿವೇಶನ ಕೊಳ್ಳಿರಿ.

– ಶಶಿಕುಮಾರ್, ಊರು ಬೇಡ
ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ. ಪೊಲೀಸ್ ವಸತಿ ಗೃಹದಲ್ಲಿ ವಾಸಿಸುತ್ತಿದ್ದು, ₹ 5,000 ಬಾಡಿಗೆಯನ್ನು ಸಂಬಳದಿಂದ ಮುರಿಯುತ್ತಾರೆ. ನನಗೆ 5 ವರ್ಷದ ಒಬ್ಬ ಮಗನಿದ್ದಾನೆ. ನನ್ನ ಇಷ್ಟರವರೆಗಿನ ಉಳಿತಾಯ ₹ 5 ಲಕ್ಷ. ನಾಗಸಂದ್ರದ ಹತ್ತಿರ ನನ್ನ ಸ್ವಂತ ಊರು. ಅಲ್ಲಿ ಉಳಿಯಲು ಮನೆ ಇದೆ. ಸಾಲ ಮಾಡಿಯಾದರೂ ಒಂದು ನಿವೇಶನ ಮಾಡಬೇಕು ಎನ್ನುವುದು ನನ್ನ ಹೆಂಡತಿಯ ಆಸೆ. ಅಥವಾ ₹ 5 ಲಕ್ಷ ಬ್ಯಾಂಕ್ ಠೇವಣಿ ಇರಿಸುವುದು ಲೇಸೇ ತಿಳಿಸಿರಿ. ನಾನು ಕೆಲವು ತಿಂಗಳ ಹಿಂದೆ ಆಪತ್ಕಾಲಕ್ಕಾಗಿ 34 ಗ್ರಾಂ ಬಂಗಾರ ಕೊಂಡಿದ್ದೆ. ಈ ಚಿನ್ನ ಮಾರಾಟ ಮಾಡಿ ಹಣ ಪಡೆಯುವ ಮನಸ್ಸೂ ಇದೆ. ನಾನು ಎಂ.ಎ. ಪದವೀಧರ. ಎಲ್ಲವನ್ನೂ ಪರಿಗಣಿಸಿ ಮಾರ್ಗದರ್ಶನ ಮಾಡಿ.

ಉತ್ತರ: ನೀವು ₹ 5000 ಬಾಡಿಗೆ ಕೊಡುವುದಕ್ಕಿಂತ, ₹ 5 ಲಕ್ಷಕ್ಕೆ ಆಫೀಸ್‌ ಸಮೀಪ ಒಂದು ಮನೆ ಭೋಗ್ಯಕ್ಕೆ ಕೊಳ್ಳಿರಿ. ₹ 5 ಲಕ್ಷ ಠೇವಣಿ ಇರಿಸುವುದಕ್ಕಿಂತ ಇದು ಲಾಭದಾಯಕ. ಇದೇ ವೇಳೆ ನೀವು ಹೀಗೆ ಮಾಡುವುದರಿಂದ ಉಳಿಸುವ ಮನೆ ಬಾಡಿಗೆ ₹ 5000. ಸಂಬಳ ಪಡೆಯುವ ಬ್ಯಾಂಕಿನಲ್ಲಿ 5 ವರ್ಷಗಳ ಆರ್.ಡಿ. ಮಾಡಿರಿ. ನಿವೇಶನ ಕೊಳ್ಳುವುದು ನಿಜವಾಗಿ ಉತ್ತಮ ಮಾರ್ಗವಾದರೂ ಸದ್ಯದ ಪರಿಸ್ಥಿತಿಯಲ್ಲಿ ಇದು ನಿಮಗೆ ಸಾಧ್ಯವಾಗಲಾರದು.

ಮಗನ ಭವಿಷ್ಯಕ್ಕಾಗಿ ನೀವು ಆರು ತಿಂಗಳಿಗೊಮ್ಮೆ ಪಡೆಯುವ ಹೆಚ್ಚಿನ ತುಟ್ಟಿಭತ್ಯೆಯ ಶೇ 50 ರಷ್ಟು ಮಗನ ಹೆಸರಿನಲ್ಲಿ 10 ವರ್ಷಗಳ ಆರ್.ಡಿ. ಮಾಡುತ್ತಾ ಬನ್ನಿ. ವಾರ್ಷಿಕವಾಗಿ ಎರಡು ಬಾರಿ ಹೀಗೆ ಮಾಡಿ ಹಾಗೂ ಮಗನ ವಿದ್ಯಾಭ್ಯಾಸದ ತನಕವೂ ಈ ಪ್ರಕ್ರಿಯೆ ನಿರಂತರವಾಗಿರಲಿ. ಖರೀದಿಸಿರುವ ಬಂಗಾರ ಎಂದಿಗೂ ಮಾರಾಟ ಮಾಡಬೇಡಿ. ಈ ಹೂಡಿಕೆ ತುಂಬಾ ಚೆನ್ನಾಗಿದೆ. ಬಂಗಾರ ಲಕ್ಷ್ಮಿ ಇದ್ದಂತೆ. ನೀವು ಎಂ.ಎ. ಪದವೀಧರರಾಗಿದ್ದು ಸರ್ಕಾರ ನಡೆಸುವ  Sub Inspector ಹುದ್ದೆಯ ಪರೀಕ್ಷೆಗೆ ಕುಳಿತು, ಬಡ್ತಿ ಹೊಂದಿರಿ. ಮನುಷ್ಯನಿಗೆ ಅಸಾಧ್ಯವೆನ್ನುವುದಿಲ್ಲ. ನಿಮ್ಮ ಇಲಾಖೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಸೇವೆಗೆ ಸೇರಿ ಆನಂತರ ಐ.ಪಿ.ಎಸ್. ಹುದ್ದೆಗೆ ಏರಿ ನಿವೃತ್ತರಾದ ಅನೇಕರ ಉದಾಹರಣೆಗಳುಂಟು. ನೀವು ಕೂಡಾ ಅಂತಹ  ಅಧಿಕಾರಿಗಳ ಸಾಲಿಗೆ ಸೇರಬೇಕು ಎನ್ನುವುದು ನನ್ನ ಆಶಯ.

– ರಾಮು, ಟಿ. ದಾಸರಹಳ್ಳಿ, ಬೆಂಗಳೂರು
ನಾನು ₹ 2 ಲಕ್ಷ ಚೀಟಿ ವ್ಯವಹಾರ ಮಾಡಲು ಬಯಸಿದ್ದು ಎಂ.ಎಸ್.ಐ.ಎಲ್. ಕಂಪನಿಯಲ್ಲಿ ಹಾಕಿದರೆ ನನ್ನ ಹಣಕ್ಕೆ ಯಾವುದಾದರೂ ತೊಂದರೆ ಇದೆಯೇ?

ಉತ್ತರ: ಎಂ.ಎಸ್.ಐ.ಎಲ್. ಒಂದು ಕರ್ನಾಟಕ ಸರ್ಕಾರದ ಉತ್ತಮ ಅಂಗ ಸಂಸ್ಥೆ. ನನಗೆ ತಿಳಿದಂತೆ ಇಲ್ಲಿ ಹಣ ಹೂಡಲು ಜನರು ಭಯ ಪಡುವ ಅವಶ್ಯವಿಲ್ಲ. ‘ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬಾರದು’ ಎನ್ನು ಗಾದೆ ಮಾತು ಇಲ್ಲಿ ಸ್ಮರಿಸಬಹುದು. ಈ ಕಂಪನಿಯಲ್ಲಿ ಚಿಟ್ ವ್ಯವಹಾರಕ್ಕೆ ಒಂದು ಒಳ್ಳೆ ಮೊತ್ತ ತೆಗೆದಿಟ್ಟು ಉಳಿದ ಹಣ ಬ್ಯಾಂಕ್, ಅಂಚೆ ಕಚೇರಿ ಠೇವಣಿಯಲ್ಲಿ ಕೂಡಾ ಇರಿಸಿ.

– ಹೆಸರು, ಊರು ಬೇಡ
ನನ್ನ ವಯಸ್ಸು 21, ಬಿ.ಇ. ಏಳನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ನನ್ನ ತಾಯಿ ಅನಕ್ಷರಸ್ಥೆ. ತಂದೆ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಅವರ ನಿಧನದಿಂದ ಎಲ್.ಐ.ಸಿ. ₹ 5 ಲಕ್ಷ ಬಂದಿದೆ. ಇನ್ನೂ ಸರ್ಕಾರದಿಂದ ₹ 5 ಲಕ್ಷ ಬರಲಿದೆ. ಈ ಹಣ ಎಫ್.ಡಿ. ಮ್ಯೂಚುವಲ್ ಫಂಡ್ ಎಲ್ಲಿ ಹೂಡಿದರೆ ಉತ್ತಮ. ಅಲ್ಪಾವಧಿ ಹಾಗೂ ದೀರ್ಘಾವಧಿ ಹೂಡಿಕೆ ವಿಚಾರದಲ್ಲಿ ಕೂಡಾ ತಿಳಿಸಿರಿ. ನನ್ನ ತಾಯಿಗೆ ತಂದೆಯವರು ನಿಧನದಿಂದಾಗಿ ₹ 17,000 ಪಿಂಚಣಿ ಬರುತ್ತದೆ. ಇದರಲ್ಲಿ ₹ 10,000 ಖರ್ಚಿಗೆ ತೆಗೆದು ₹ 7 ಸಾವಿರ ಉಳಿಸಬಹುದು. ಉತ್ತಮ ಹೂಡಿಕೆ, ತೆರಿಗೆ ವಿನಾಯಿತಿ ವಿಚಾರಗಳಲ್ಲಿ ಸವಿಸ್ತಾರವಾಗಿ ತಿಳಿಸಬೇಕಾಗಿ ವಿನಂತಿಸುತ್ತೇನೆ.

ಉತ್ತರ: ನಿಮ್ಮ ತಂದೆಯವರ ನಿಧನದಿಂದಾಗಿ ಬಂದಿರುವ ಹಣ ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿರಿ. ಪ್ರಾಯಶಃ ಈ ಹಣ ಸದ್ಯಕ್ಕೆ ನಿಮಗೆ ಬೇಕಾಗಿಲ್ಲ. ಈ ಕಾರಣದಿಂದಾಗಿ 5 ವರ್ಷಗಳ ಠೇವಣಿಯಲ್ಲಿ ಇರಿಸಿರಿ. ಜೊತೆಗೆ ಮನೆ ಖರ್ಚು ಕಳೆದು ಉಳಿಯುವ ಹಣ ಕೂಡಾ ಅಂದರೆ ₹ 7000 ಬ್ಯಾಂಕಿನಲ್ಲಿ 5 ವರ್ಷಗಳ ಆರ್.ಡಿ. ಮಾಡಿರಿ. ನಿಮ್ಮ ತಾಯಿಗೆ ವಾರ್ಷಿಕ ಬರುವ ಪಿಂಚಣಿ ಹಾಗೂ ಠೇವಣಿ ಮೇಲಿನ ಬಡ್ಡಿ ₹ 2.50 ಲಕ್ಷ ದಾಟುವ ತನಕ ಆದಾಯ ತೆರಿಗೆ ಬರುವುದಿಲ್ಲ ಹಾಗೂ ರಿಟರ್ನ್ ತುಂಬುವ ಅವಶ್ಯವಿಲ್ಲ. ಯಾರ ಒತ್ತಡಕ್ಕಾದರೂ ಮಣಿದು ಹೆಚ್ಚಿನ ಬಡ್ಡಿ, ಉಡುಗೊರೆ, ಕಮೀಷನ್ ಆಮಿಷಗಳಿಗೆ ಬಲಿಯಾಗಿ ಅಭದ್ರವಾದ ಹೂಡಿಕೆ ಮಾಡಬೇಡಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

– ರಾಜೇಶ್, ಬಿರೂರು
ನಾನು ಖಾಸಗಿ ಸರ್ಕಾರಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತೇನೆ. ವಯಸ್ಸು 48. ನನ್ನ ತಿಂಗಳ ಸಂಬಳ ₹ 40,000. ನನ್ನ ತಂದೆಯು ನಿವೃತ್ತ ಶಿಕ್ಷಕರು. ತಾಯಿ ತೀರಿಕೊಂಡಿರುತ್ತಾರೆ. ನನ್ನ ತಂದೆಯ ಪಿಂಚಣಿ ಹಣ ಚೆಕ್ ಮುಖಾಂತರ ₹ 20,000 ನನ್ನ ಖಾತೆಗೆ ಕಳಿಸುತ್ತಾರೆ. ಇದರಿಂದ ನನಗೆ ಹೆಚ್ಚಿನ ಆದಾಯ ತೆರಿಗೆ ಬರುತ್ತದೆಯೇ, ದಯಮಾಡಿ ಪರಿಹಾರ ತಿಳಿಸಿರಿ.

ಉತ್ತರ: ಸರ್ಕಾರಿ ನೌಕರರ ಪಿಂಚಣಿ ಅಂತಹ ವ್ಯಕ್ತಿಗಳ ಜೀವಿತ ಕಾಲದಲ್ಲಿ ನಿವೃತ್ತಿಯ ನಂತರ ಬ್ಯಾಂಕುಗಳ ಮುಖಾಂತರ, ಅವರ ವೈಯಕ್ತಿಕ ಹೆಸರಿನಲ್ಲಿ ಇರುವ ಖಾತೆಗೆ ನೇರವಾಗಿ ಜಮಾ ಮಾಡುತ್ತಾರೆ. ನಿಮ್ಮ ಪ್ರಶ್ನೆಯಲ್ಲಿ ನಿಮ್ಮ ತಂದೆಯ ಪಿಂಚಣಿ ಹಣ ಚೆಕ್ ಮುಖಾಂತರ ನಿಮಗೆ ಬಂದು ನಿಮ್ಮ ಖಾತೆಗೆ ಜಮಾ ಆಗುವುದಾಗಿ ತಿಳಿಸಿದ್ದೀರಿ. ಇದು ನನ್ನ ಪ್ರಕಾರ ಎಂದಿಗೂ ಸಾಧ್ಯವಿಲ್ಲ. ಸರ್ಕಾರ ಪಿಂಚಣಿದಾರರು ಜೀವಿತವಾಗಿರುವ ತನಕ ಬೇರೆಯವರಿಗೆ ಅವರ ಪಿಂಚಣಿ ಕೊಡುವ ಕ್ರಮ ಇಲ್ಲ. ಒಂದು ವೇಳೆ ಬಂದಲ್ಲಿ ನಿಮ್ಮ ಆದಾಯಕ್ಕೆ ಸೇರಿಸಿ ನೀವು ತೆರಿಗೆ ಸಲ್ಲಿಸಬೇಕಾಗುತ್ತದೆ.

– ಶಿವಾನಂದ, ಕಲಬುರ್ಗಿ
ನಾನು ರಾಜ್ಯ ಸರ್ಕಾರದ ನೌಕರ. ಅವಿವಾಹಿತ. ತಿಂಗಳ ಸಂಬಳ ₹ 20,000. ಕಡಿತ ಕೆ.ಜಿ.ಐ.ಡಿ. ₹ 1500, ಎನ್.ಪಿ.ಎಸ್. ₹ 1,791, ಎ.ಪಿ.ವೈ. 376, ಆರ್.ಪಿ.ಎಲ್.ಐ.ಸಿ. ₹ 253, ಎಲ್.ಐ.ಸಿ. 2,500, ಖರ್ಚು 7000. ಉಳಿತಾಯ ₹ 6,500. ನನ್ನ ತಂದೆ ಕೃಷಿಕರು. 8 ಎಕರೆ ಜಮೀನಿದೆ. ಕೃಷಿ ಆದಾಯ ವಾರ್ಷಿಕ ₹ 3 ಲಕ್ಷ. ತಾಲ್ಲೂಕು ಕೇಂದ್ರದಲ್ಲಿ ನಿವೇಶನ ಇದೆ. ಮನೆ ಹೊಂದಲು ಹಾಗೂ ಹಣ ಉಳಿಸಲು ಮಾರ್ಗದರ್ಶನ ಮಾಡಿರಿ.

ಉತ್ತರ: ನಿಮ್ಮ ಸಂಬಳ ಹಾಗೂ ಕಡಿತ– ಖರ್ಚು ಕಳೆದು ಉಳಿಯುವ ಹಣ ₹ 7000 ಆಗಿರುವುದರಿಂದ ಗೃಹ ಸಾಲ ಪಡೆದು ಮನೆ ಕಟ್ಟಿಸಲು ನಿಮಗೆ ಸಾಧ್ಯವಾಗಲಾರದು. ನೀವು ಉಳಿಸುವ ₹ 7000, 3 ವರ್ಷಗಳ ಬ್ಯಾಂಕ್ ಆರ್.ಡಿ. ಮಾಡಿರಿ. ಹಾಗೂ ಮೂರು ವರ್ಷಗಳ ನಂತರ, ಕುಟುಂಬದ ಕೃಷಿ ಆದಾಯ ಹಾಗೂ ಸ್ವಲ್ಪ ಗೃಹಸಾಲ ಪಡೆದು ಮನೆ ಕಟ್ಟಿಸಿಕೊಳ್ಳಿ. ಯಾವುದೇ ಕಾರಣಕ್ಕೆ ಅಥವಾ ಮನೆ ಕಟ್ಟುವ ನೆಪದಲ್ಲಿ ಕೃಷಿ ಜಮೀನು ಮಾರಾಟ ಮಾಡಬೇಡಿರಿ. ಮುಂದೆ ಕೊಳ್ಳಲು ಸಾಧ್ಯವಾಗಲಾರದು. ಜೊತೆಗೆ ಕೃಷಿ ಆದಾಯಕ್ಕೆ ಸೆಕ್ಷನ್ 10 (1) ಆಧಾರದ ಮೇಲೆ ಸಂಪೂರ್ಣ ತೆರಿಗೆ ವಿನಾಯ್ತಿ ಇದೆ.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ.ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001.

ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT