ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಹಣಕಾಸು ಸಂಸ್ಥೆಗಳ ಬ್ಯಾಂಕಿಂಗ್‌ ಸೇವೆ

Last Updated 10 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

– ಇತ್ತಿರಾ ಡೇವಿಸ್‌

ದೇಶದ ಜನಸಂಖ್ಯೆಯಲ್ಲಿನ ಶೇ 19ರಷ್ಟು ಜನರು ಎಲ್ಲ ರೀತಿಯ ಹಣಕಾಸು ಸೇವೆಗಳಿಂದ ಹೊರಗುಳಿದಿದ್ದಾರೆ ಅಥವಾ ಅವರಿಗೆ ಅಂತಹ ಸೇವೆಗಳು ಲಭಿಸುತ್ತಿಲ್ಲ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಹಾಗೂ ಅರ್ನೆಸ್ಟ್‌ ಆ್ಯಂಡ್‌ ಯಂಗ್‌ (ಇವೈ) ಸಂಸ್ಥೆಗಳು ಕಳೆದ ವರ್ಷ ಜಂಟಿಯಾಗಿ ನಡೆಸಿದ್ದ ಅಧ್ಯಯನದಿಂದ ತಿಳಿದುಬಂದಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದ್ದರೂ, ದೇಶದ ಜನಸಂಖ್ಯೆಯ ದೊಡ್ಡ ಭಾಗ ಈಗಲೂ ಬ್ಯಾಂಕಿಂಗ್‌ ಸೌಲಭ್ಯಗಳಿಂದ ವಂಚಿತವಾಗಿದೆ. ವಿಶ್ವಬ್ಯಾಂಕ್‌ನ ಜಾಗತಿಕ ಹಣಕಾಸು ಸೂಚ್ಯಂಕದ ಪ್ರಕಾರ ಭಾರತದ ಜನಸಂಖ್ಯೆಯ ಶೇ 53ರಷ್ಟು ಜನರು ಬ್ಯಾಂಕ್‌ ಖಾತೆ ಹೊಂದಿದ್ದಾರೆ. ಆದರೆ ಅವರಲ್ಲಿ ಶೇ 14.4ರಷ್ಟು ಜನರು ಮಾತ್ರ ಖಾತೆಗಳಲ್ಲಿ ಉಳಿತಾಯದ ಹಣ ಇಟ್ಟಿದ್ದಾರೆ.

ಜನರು ಬ್ಯಾಂಕ್‌ ಖಾತೆ ಹೊಂದಿದ್ದರೂ, ತಮ್ಮ ದೈನಂದಿನ ವಹಿವಾಟಿಗಾಗಿ ಹೆಚ್ಚಿನವರು ಅದನ್ನು ಬಳಸದಿರುವುದಕ್ಕೆ ಕಾರಣವೇನು? ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ನಮಗಿರುವ ಹಲವು ವರ್ಷಗಳ ನೇರ ಅನುಭವದ ಆಧಾರದಲ್ಲಿ ಹೇಳುವುದಾದರೆ, ಇದಕ್ಕೆ ಮೂರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಯಾವುದು ಎಂದರೆ, ಬ್ಯಾಂಕ್‌ನಲ್ಲಿ ಹಿಂದೆ ಕೆಟ್ಟ ಅನುಭವ ಆಗಿರುವುದು. ಇಂಥವರಿಗೆ ತಮ್ಮ ಉಳಿತಾಯದ ಹಣವನ್ನು ಸುರಕ್ಷಿತವಾಗಿ ಇಡಬೇಕು ಎಂಬ ಭಾವನೆ ಇದ್ದರೂ, ಕೆಲ ಬ್ಯಾಂಕ್‌ಗಳ ಇಂದಿನ ಹಣಕಾಸು ಸ್ಥಿತಿಯನ್ನು ನೋಡಿದರೆ ಅವುಗಳ ಬಗ್ಗೆ ಒಂದು ಬಗೆಯ ಭಯವಿದೆ. ಬ್ಯಾಂಕ್‌ಗಳು ಸಹ ಇಂತಹ ಗ್ರಾಹಕರನ್ನು ಪ್ರೀತಿಯಿಂದ ಸ್ವಾಗತಿಸುವುದಿಲ್ಲ. ಇವರ ವಹಿವಾಟು ಸಣ್ಣ ಪ್ರಮಾಣದ್ದಾಗಿರುತ್ತದೆ. ಬ್ಯಾಂಕ್‌ಗಳಿಗೆ ಇಂಥವರಿಂದ ಹೆಚ್ಚಿನ ಲಾಭ ಇರುವುದಿಲ್ಲ ಎಂಬುದು ಅದಕ್ಕೆ ಕಾರಣ.

ಎರಡನೇ ಕಾರಣವೆಂದರೆ, ‘ಜಾಗೃತಿಯ ಕೊರತೆ’. ಇಂತಹ ಗ್ರಾಹಕರಲ್ಲಿ ಹೆಚ್ಚಿನವರಿಗೆ ಬ್ಯಾಂಕಿಂಗ್‌ ವ್ಯವಸ್ಥೆ ಬಗ್ಗೆ ತಿಳಿವಳಿಕೆ ಅಥವಾ ಜಾಗೃತಿ ಇರುವುದಿಲ್ಲ. ಇವರಲ್ಲಿ ಅನೇಕರು ಅನಕ್ಷರಸ್ಥರೂ ಆಗಿರುತ್ತಾರೆ. ಅವರಲ್ಲಿ ಬ್ಯಾಂಕಿಂಗ್‌ ಬಗ್ಗೆ ಜಾಗೃತಿ ಮೂಡಿಸಿ, ಅವರಲ್ಲಿರುವ ಭಯ, ತಪ್ಪು ಕಲ್ಪನೆಗಳನ್ನು ದೂರ ಮಾಡುವುದು ಅಗತ್ಯವಾಗಿರುತ್ತದೆ. ಜನರು ಬ್ಯಾಂಕಿಂಗ್‌ ಸೌಲಭ್ಯಗಳನ್ನು ಬಳಸದೇ ಇರಲು ಮೂರನೆಯ ಕಾರಣವೆಂದರೆ, ಅವರ ಮನೆ ಸಮೀಪದಲ್ಲಿ ಬ್ಯಾಂಕ್ ಶಾಖೆ ಇಲ್ಲದಿರುವುದು.

ಕಳೆದ ಒಂದು ದಶಕದಲ್ಲಿ ಕಿರು ಹಣಕಾಸು ಸಂಸ್ಥೆಗಳು (ಎಂಎಫ್ಐ) ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಚುರುಕುಗೊಂಡಿರುವುದರಿಂದ ಸಾಲ ಪಡೆಯುವ ಪ್ರಕ್ರಿಯೆ ಸರಳಗೊಂಡಿದೆ. ಬ್ಯಾಂಕಿಂಗ್‌ ವ್ಯವಸ್ಥೆಯಿಂದ ಹೊರಗೆ ಉಳಿದಿರುವವರಿಗೆ ಈ ಸಂಸ್ಥೆಗಳು ಸೇವೆ ಒದಗಿಸುತ್ತಿವೆ. ಆದರೆ, ಈ ಸಂಸ್ಥೆಗಳ ಮೇಲೆ ಅನೇಕ ನಿಯಂತ್ರಣ ಕ್ರಮಗಳು ಇರುವುದರಿಂದ ಜನರಿಗೆ ಉಳಿತಾಯದ ಯೋಜನೆಗಳನ್ನು ನೀಡಲು ಇವುಗಳಿಂದ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ಜನರು ಚಿಟ್‌ಫಂಡ್‌, ಚಿನ್ನಾಭರಣ ಸಂಸ್ಥೆಗಳು ಘೋಷಿಸುವ ಚಿನ್ನ ಅಡಮಾನ ಯೋಜನೆ, ಚಿನ್ನ ಖರೀದಿ, ಇನ್ನೂ ಕಲವು ಸಂದರ್ಭಗಳಲ್ಲಿ ನಗದನ್ನೇ ಮನೆಯಲ್ಲಿ ಇಟ್ಟುಕೊಳ್ಳುವಂತಹ ಉಳಿತಾಯದ ಅಸುರಕ್ಷಿತ ಮಾರ್ಗಗಳನ್ನು ಅನುಸರಿಸುವುದು ಅನಿವಾರ್ಯವಾಗುತ್ತಿದೆ.

ಹಣಕಾಸು ಸೇವೆಗಳಿಂದ ವಂಚಿತರಾದ ಅಥವಾ ಇಂಥ ಸೇವೆಗಳಿಂದ ಹೊರಗೆ ಉಳಿದವರನ್ನು ಈ ಸೇವೆಗಳ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಕೆಲವು ಯೋಜನೆಗಳನ್ನು ರೂಪಿಸಿದೆ. ಅಧಿಕೃತ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲೇ ಈ ಎಲ್ಲ ವರ್ಗದವರಿಗೆ ಸಾಲ ಮತ್ತು ಉಳಿತಾಯ ಯೋಜನೆಗಳನ್ನು ನೀಡುವ ಮೂಲಕ ಎಲ್ಲರನ್ನೂ ‘ಒಳಗೊಳ್ಳುವ’ ಪ್ರಯತ್ನ ನಡೆದಿದೆ.

ಆದರೆ, ಕೊನೆಯ ಹಂತದ ಗ್ರಾಹಕರವರೆಗೆ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ತಲುಪಿಸಲು ಸಾಧ್ಯವಾಗದೆ, ಅನೇಕರು ಈಗಲೂ ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ. ದೇಶದ ಕಡು ಬಡವನಿಗೂ ಬ್ಯಾಂಕಿಂಗ್‌ ಸೇವೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಆರ್‌ಬಿಐ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. 10 ಸಣ್ಣ ಹಣಕಾಸು ಬ್ಯಾಂಕ್‌ (ಎಸ್‌ಎಫ್‌ಬಿ) ಗಳಿಗೆ ಪರವಾನಗಿ ನೀಡಿದ್ದು ಇಂತಹ ಪ್ರಮುಖ ಹೆಜ್ಜೆಗಳಲ್ಲಿ ಒಂದಾಗಿದೆ.

ಈ ಬ್ಯಾಂಕ್‌ಗಳು ತಮ್ಮ ಒಟ್ಟಾರೆ ಶಾಖೆಗಳ ಶೇ 25ರಷ್ಟನ್ನು ಈವರೆಗೆ ಬ್ಯಾಂಕಿಂಗ್‌ ಸೇವೆಗಳಿಂದ ವಂಚಿತವಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಹೊಂದಿರುವುದು ಕಡ್ಡಾಯ. ಹೀಗೆ ಪರವಾನಗಿ ಪಡೆದ ಹತ್ತು ಸಂಸ್ಥೆಗಳಲ್ಲಿ ಎಂಟು ಸಂಸ್ಥೆಗಳು ‘ಎಂಎಫ್‌ಐ’ಗಳು. ಈ ಸಂಸ್ಥೆಗಳಿಗೆ ಗ್ರಾಮೀಣ ಪ್ರದೇಶದ ಜನರೊಂದಿಗೆ ವ್ಯವಹರಿಸಿದ ಅನುಭವ ಇದೆ. ಅಷ್ಟೇ ಅಲ್ಲದೆ, ಅವರ ಅಗತ್ಯಗಳೇನು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯೂ ಇದೆ. ಇಂಥ ಸಂಸ್ಥೆಗಳಲ್ಲಿ ಒಂದಾಗಿರುವ ‘ಉಜ್ಜೀವನ್‌’, 37ಲಕ್ಷ ಗ್ರಾಹಕರನ್ನು ಹೊಂದಿದ್ದು ವಾಣಿಜ್ಯ ಬ್ಯಾಂಕ್‌ಗಳು ನೀಡುವ ಎಲ್ಲ ಸೇವೆಗಳನ್ನೂ ಗ್ರಾಹಕರಿಗೆ ಒದಗಿಸುತ್ತಿದೆ.

ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುವ ಉದ್ದೇಶದಿಂದ ಉಜ್ಜೀವನ್‌, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗಾಗಿ ಹಣ ಹೂಡಿಕೆ ಮಾಡಿದೆ. ಗ್ರಾಹಕರ ಮನೆಗೇ ಬಂದು, ವೈರ್‌ಲೆಸ್‌ ಉಪಕರಣದ ಸಹಾಯದಿಂದ ಹತ್ತು ನಿಮಿಷದೊಳಗೆ ಖಾತೆ ತೆರೆಯುವುದು, ಬಯೊಮೆಟ್ರಿಕ್‌ ಎಟಿಎಂಗಳು, ಇಂಟರ್‌ನೆಟ್‌ ಬ್ಯಾಂಕಿಂಗ್‌, ಫೋನ್‌ ಬ್ಯಾಂಕಿಂಗ್‌... ಇನ್ನೂ ಅನೇಕ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಿದೆ.

ಬ್ಯಾಂಕಿಂಗ್‌ ಸೇವೆಯಿಂದ ವಂಚಿತರಾದವರು ಅಥವಾ ಹೊರಗುಳಿದವರನ್ನೇ ಗುರಿಯಾಗಿಟ್ಟುಕೊಂಡು ಸಣ್ಣ ಹಣಕಾಸು ಸಂಸ್ಥೆಗಳು ಹಲವು ಯೋಜನೆಗಳನ್ನು ರೂಪಿಸಿವೆ.

ತಮ್ಮ ಹಣವನ್ನು ಉಳಿತಾಯ ಖಾತೆಯಲ್ಲೇ ಬಿಡುವುದರ ಬದಲಿಗೆ, ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವುದು, ಗ್ರಾಹಕರ ಆದಾಯಕ್ಕೆ ಅನುಗುಣವಾಗಿ ಚಿಟ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡುವುದೇ ಮುಂತಾದ ಕೆಲಸಗಳನ್ನು ಈ ಸಂಸ್ಥೆಗಳು ಮಾಡುತ್ತಿವೆ. ‘ಉಜ್ಜೀವನ್‌’ ಸಂಸ್ಥೆ ನಿಶ್ಚಿತ ಠೇವಣಿ ಹಾಗೂ ಆರ್‌.ಡಿಗಳಂಥ ಸೇವೆಯನ್ನೂ ನೀಡುತ್ತಿದ್ದು, ಇಲ್ಲಿ ಕನಿಷ್ಠ ಠೇವಣಿ ಮೊತ್ತ ಕ್ರಮವಾಗಿ ₹ 1,000 ಮತ್ತು ₹ 100 ಇದೆ.

ಉಳಿತಾಯ ಖಾತೆ ತೆರೆಯುವ ಗ್ರಾಮೀಣ ಭಾಗದ ಜನರ ಮುಂದಿನ ಗುರಿ, ನಿಶ್ಚಿತ ಠೇವಣಿ ಹಾಗೂ ಆರ್‌.ಡಿ ಆಗಿರುತ್ತದೆ. ಇವು ಖಾಸಗಿಯವರ ಚಿಟ್‌ ಫಂಡ್‌ಗಿಂತಲೂ ಸುರಕ್ಷಿತವಾದ ಹೂಡಿಕೆ ವಿಧಾನಗಳಾಗಿವೆ.

ಖಾಸಗಿ ಚಿಟ್‌ ಫಂಡ್‌ಗಳಿಗೆ ಬ್ಯಾಂಕ್‌ಗಳಿಗೆ ಇರುವಂತೆ ನಿಯಂತ್ರಣ ವ್ಯವಸ್ಥೆ ಇರುವುದಿಲ್ಲ. ಇವು ಗ್ರಾಹಕರಿಗೆ ವಂಚನೆ ಮಾಡಿರುವ ಹೇರಳ ಉದಾಹರಣೆಗಳು ಇವೆ. ಇವುಗಳಿಂದ ಗ್ರಾಹಕರಿಗೆ ಹೆಚ್ಚಿನ ಲಾಭ ಬರುವ ಸಾಧ್ಯತೆ ಇರಬಹುದು. ಆದರೆ, ನಷ್ಟದ ಅಪಾಯವೂ ಇದೆ. ಈ ಎಲ್ಲ ಕಾರಣಗಳಿಂದ ಆರ್‌ಬಿಐ ಹಾಗೂ ಸರ್ಕಾರ, ಗ್ರಾಮೀಣ ಭಾಗದ ಮತ್ತು ಕಡಿಮೆ ಆದಾಯದ ಜನರನ್ನು ಅಧಿಕೃತ ಹಣಕಾಸು ಸೇವೆಗಳ ವ್ಯಾಪ್ತಿಯೊಳಗೆ ತರಲು ಪ್ರಯತ್ನಿಸುತ್ತಿದೆ. ಇದರಿಂದಾಗಿ ಈ ಜನರಿಗೂ ಸುರಕ್ಷಿತ ಬ್ಯಾಂಕಿಂಗ್‌ ಸೇವೆಗಳು ಲಭ್ಯವಾಗಲಿವೆ.

ಬ್ಯಾಂಕಿಂಗ್‌ ಸೇವೆಗಳನ್ನು ಗ್ರಾಹಕರ ಮನೆಬಾಗಿಲಿಗೆ ಅಥವಾ ಬೆರಳ ತುದಿಗೆ ತಂದುಕೊಡುವಲ್ಲಿ ತಂತ್ರಜ್ಞಾನ ದೊಡ್ಡ ಪಾತ್ರ ವಹಿಸಲಿದೆ. ಮುಂದಿನ ಐದು ವರ್ಷಗಳಲ್ಲಿ ದೇಶಿ ಬ್ಯಾಂಕ್‌ಗಳು ಇನ್ನೂ ಹಲವು ಲಕ್ಷ ಜನರಿಗೆ ಸೇವೆಯನ್ನು ಒದಗಿಸಲಿವೆ. ಆ ಮೂಲಕ ಅರ್ಥ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಲು ಕಾರಣವಾಗಲಿವೆ.

(ಸಿಒಒ, ಉಜ್ಜೀವನ್‌ ಬ್ಯಾಂಕ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT