ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಪೂರ್ಣತೆಯೇ ಜೀವನ’

Last Updated 10 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಯಾವುದೇ ಕೆಲಸವನ್ನು ಆರಂಭಿಸಿದ ಮೇಲೆ ಅದರ ಬಗ್ಗೆ ತಿಳಿವಳಿಕೆ ಇಲ್ಲದಿದ್ದಾಗ, ವಿಷಯದ ಬಗ್ಗೆ ಜ್ಞಾನವಿಲ್ಲದಿದ್ದಾಗ, ಅವಸರದಲ್ಲಿ ಮುಗಿಸಲು ಹೊರಟಾಗ ಅಥವಾ ಪರಿಪೂರ್ಣತೆಯಿಂದ ಮಾಡಬೇಕು ಎಂಬ ಹಂಬಲವಿದ್ದಾಗ ಒತ್ತಡ ಕಾಡುತ್ತದೆ. ಇದನ್ನು ಆಂಗ್ಲಭಾಷೆಯಲ್ಲಿ ತುಂಬ ಸುಂದರವಾಗಿ ಹೇಳುತ್ತಾರೆ: ‘The tension is one which is difficult to manage' –ಎಂದರೆ ಯಾವುದನ್ನು ನಿಮ್ಮಿಂದ ನಿಭಾಯಿಸಲು ಸಾಧ್ಯವಾಗುವುದಿಲ್ಲವೋ ಆಗ ಚಿಂತೆ ನಮ್ಮನ್ನು ಆವರಿಸುತ್ತದೆ. ಯಾವುದೇ ಕೆಲಸದ ಬಗ್ಗೆಯಾಗಲೀ ಸಂಪೂರ್ಣವಾದ ಅರಿವು ನಮ್ಮಲ್ಲಿದ್ದರೆ ಒತ್ತಡ ಹಾಗೂ ಚಿಂತೆಯ ಭಾವ ನಮ್ಮತ್ತ ಸುಳಿಯುವುದೂ ಇಲ್ಲ.

ಇನ್ನೂ ಹೇಳಬೇಕು ಎಂದರೆ ಒತ್ತಡಕ್ಕೆ ಮೂಲ ಕಾರಣ ಅತಿಯಾದ ನಿರೀಕ್ಷೆಗಳು. ನಾವು ನಮ್ಮಿಂದ ಹಾಗೂ ನಮ್ಮ ಸುತ್ತಲಿನ ಜನರಿಂದ ಯಾವಾಗಲೂ ಏನನ್ನಾದರೂ ನಿರೀಕ್ಷೆ ಮಾಡುತ್ತಲೇ ಇರುತ್ತೇವೆ. ಕೆಲವೊಮ್ಮೆ ನಮ್ಮ ಶಕ್ತಿಯನ್ನು ಮೀರಿ ಕೆಲಸ ಮಾಡಲು ನೋಡುತ್ತೇವೆ. ಕೆಲವೊಂದು ಕೆಲಸವನ್ನು ಅದು ಆಗುವ ವೇಗಕ್ಕಿಂತ ಎರಡು, ಮೂರು ಪಟ್ಟು ವೇಗದಿಂದ ಮಾಡಲು ಹೋಗುತ್ತೇವೆ. ಇದು ಅವಸರದ ಯಗ. ಎಲ್ಲವೂ ವೇಗದಿಂದ, ಅವಸರದಿಂದಲೇ ಆಗಬೇಕು ಎನ್ನುವ ಮನೋಭಾವ. ನಮ್ಮಿಂದ ಸಾಧ್ಯವಾಗುವ ಸಮಯಕ್ಕಿಂತ ಮೊದಲೇ ಮಾಡಿ ಮುಗಿಸಬೇಕು ಎಂಬ ಧಾವಂತ ನಮ್ಮಲ್ಲಿರುತ್ತದೆ. ಮೊದಲೆಲ್ಲಾ ಕೆಲಸದ ಅವಧಿ 8 ತಾಸು ಎಂದಿತ್ತು. ಆದರೆ ಈಗ ಹಾಗಲ್ಲ. ಕೆಲಸ ಅವಧಿ ಕನಿಷ್ಠ ಎಂದರು 12ರಿಂದ 14 ತಾಸು. ಈಗ ಹೇಗೆಂದರೆ ಒಂದು ವರ್ಷದಲ್ಲಿ ಆಗುವ ಕೆಲಸವನ್ನು ಮೂರು ತಿಂಗಳಲ್ಲೇ ಮುಗಿಸಬೇಕು ಎನ್ನುವ ಅವಸರ. ಇವೆಲ್ಲವೂ ನಮ್ಮನ್ನು ನಮಗೆ ಅರಿಯದಂತೆ ಒತ್ತಡಕ್ಕೆ ಒಳಗಾಗುವಂತೆ ಮಾಡುತ್ತವೆ. ಇದರಿಂದ ಚಿಕ್ಕ ವಯಸ್ಸಿಗೆ ಬಿ.ಪಿ., ಶುಗರ್ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣ ಇಷ್ಟೇ... ಅಸಂಭವವಾದ ಟಾರ್ಗೆಟ್‌!

ನಮ್ಮ ಸಂಸ್ಥೆ ಸುಮಾರು 87 ಶಾಲೆಗಳನ್ನು ನಿರ್ವಹಿಸುತ್ತಿದೆ. ಅದಲ್ಲದೇ ನನಗೆ ಬೇರೆ ಬೇರೆ ಕಡೆ ಪಾಠಗಳನ್ನೂ ಮಾಡಬೇಕಾಗುತ್ತದೆ. ಹೀಗಾಗಿ ದಿನಕ್ಕೊಂದು ಊರು ಸುತ್ತುವುದು ಸಾಮಾನ್ಯ ಎಂಬಂತಾಗಿದೆ. ಇನ್ನೊಂದು ವಿಷಯ ಹೇಳಬೇಕು ಎಂದರೆ ಇಷ್ಟೊಂದು ಸಂಸ್ಥೆಗಳ ಜೊತೆ ಕೆಲಸ ಮಾಡುತ್ತಿರಬೇಕಾದರೆ ಬೇರೆ ಬೇರೆ ಆಡಳಿತ ವರ್ಗಗಳು ಇರುತ್ತವೆ. ಆ ಆಡಳಿತ ವರ್ಗಗಳ ಆಶಯಗಳೂ ಬೇರೆ ಬೇರೆ ಇರುತ್ತವೆ. ಒಂದು ಸಂಸ್ಥೆಯನ್ನು ಕಟ್ಟಬೇಕಾದರೆ ಅವರು ಕೆಲವೊಂದು ಆಶಯ ಹಾಗೂ ಗುರಿಗಳನ್ನು ಇರಿಸಿಕೊಂಡು ಕಟ್ಟಿರುತ್ತಾರೆ. ಅವನ್ನು ತಲುಪಲು ನಮ್ಮ ಮೇಲೆ ಒತ್ತಡವನ್ನು ಹಾಕಲು ಆರಂಭಿಸುತ್ತಾರೆ.

ಶಿಕ್ಷಣದ ವಿಷಯಕ್ಕೆ ಬಂದರೆ ಈ ಕ್ಷೇತ್ರದಲ್ಲಿ ಧಾವಂತ ಮಾಡಲು ಆಗುವುದಿಲ್ಲ. ಶಿಕ್ಷಣ ಎನ್ನುವುದು ಸಿಮೆಂಟ್ ಕ್ಯೂರಿಂಗ್ ಇದ್ದ ಹಾಗೆ. ಇಂತಿಷ್ಟು ದಿನ ನೀರು ಹಾಕಬೇಕು ಎಂದುಕೊಂಡರೆ ಹಾಕಲೇಬೇಕು, ಇಲ್ಲದಿದ್ದರೆ ಅದು ಒಡೆದು ಹೋಗುತ್ತದೆ. ಹಾಗೆಯೇ ಮಕ್ಕಳ ಮನಸ್ಸು ಕೂಡ. ಅವರಲ್ಲಿ ಮೌಲ್ಯವನ್ನು ಹುಟ್ಟು ಹಾಕಬೇಕು ಎಂದರೆ ಹೆಜ್ಜೆ ಹೆಜ್ಜೆಯನ್ನು ಬಳಸಿಕೊಂಡೇ ಹೋಗಬೇಕು. ಇನ್ನು ಶಿಕ್ಷಣ ಸಂಸ್ಥೆಗಳ ವಿಷಯಕ್ಕೆ ಬರುವುದಾದರೆ ಇಲ್ಲಿ ಐದಾರು ರೀತಿಯ ಆಡಳಿತ ವರ್ಗವಿರುತ್ತದೆ. ಕೆಲವರು ತಮ್ಮ ಪ್ರತಿಷ್ಠೆಗಾಗಿ ಸಂಸ್ಥೆ ಕಟ್ಟಿರುತ್ತಾರೆ, ಇನ್ನು ಕೆಲವರು ಇಷ್ಟೊಂದು ದುಡ್ಡಿದೆಯಲ್ಲ ಇದನ್ನು ಇಟ್ಟುಕೊಂಡು ಏನು ಮಾಡುವುದು ಬಳಸಿಕೊಳ್ಳೋಣ ಎಂದುಕೊಂಡು ಶಾಲೆಯನ್ನು ನಿರ್ಮಾಣ ಮಾಡಿರುತ್ತಾರೆ, ಇನ್ನೊಬ್ಬರು ತನ್ನ ಪ್ರತಿಸ್ಪರ್ಧಿ ಮಾಡಿದ್ದಾನೆ ಎಂದು ಮಾಡಿರುತ್ತಾರೆ, ಇನ್ನು ಕೆಲವರು ತಮ್ಮ ರಾಜಕೀಯಕ್ಕೆ ಪ್ರಯೋಜನವಾಗಬಹುದು ಎಂದು ಸಂಸ್ಥೆ ಕಟ್ಟುತ್ತಾರೆ, ಕೆಲವರು ತಮ್ಮ ಪರಿವಾರಕ್ಕೆ, ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಶಾಲೆ ಕಟ್ಟಿರುತ್ತಾರೆ. ಹೀಗೆ ಶಾಲೆಯ ಮೂಲೋದ್ದೇಶ ಬೇರೆಯಾದಂತೆ ಅವರು ನನ್ನಿಂದ ಬೇರೆ ಬೇರೆಯದನ್ನೇ ಅಪೇಕ್ಷೆ ಮಾಡುತ್ತಾರೆ. ‍‍ಪ್ರತಿಯೊಬ್ಬರು ಬೇರೆ ಬೇರೆಯದನ್ನು ಕೇಳುತ್ತ ಹೋಗುತ್ತಾರೆ. ಅವರೆಲ್ಲರನ್ನು ಒಪ್ಪಿಸಿ ‘ಶಿಕ್ಷಣದ ಉದ್ದೇಶ ಇದಲ್ಲ, ಇದರ ಉದ್ದೇಶ ಮನುಷ್ಯನನ್ನು ನಿರ್ಮಾಣ’ ಎಂದು ತಿಳಿ ಹೇಳಿ ಒಪ್ಪಿಸುವುದೇ ಒಮ್ಮೊಮ್ಮೆ ಅತಿಯಾದ ಒತ್ತಡ ಎನ್ನಿಸುತ್ತದೆ.

ಪ್ರಪಂಚದಾದ್ಯಂತ ಶಾಲೆಗಳು ಇರುವುದರಿಂದ ಅವುಗಳನ್ನು ತಲುಪುವುದೇ ನನಗೆ ಸ್ವಲ್ಪ ಪ್ರಯಾಸದ ಕೆಲಸ. ಸಂಸ್ಥೆಯ ಮುಖ್ಯಸ್ಥನಾಗಿರುವ ಕಾರಣಕ್ಕೆ ವರ್ಷಕ್ಕೆ ಎರಡು ಬಾರಿ ಬರಬೇಕು ಎಂದು ಹೇಳುತ್ತಾರೆ. 87 ಶಾಲೆಗಳಿಗೆ ಕನಿಷ್ಠ ಎರಡು ಬಾರಿ ಎಂದರೂ ವರ್ಷದಲ್ಲಿ ಸುಮಾರು 180 ದಿನಗಳು ತಿರುಗಾಟದಲ್ಲಿ ಹೋಗುತ್ತದೆ. ಈ ತಿರುಗಾಟವೂ ಒತ್ತಡದ ಭಾಗವೇ ಆಗಿದೆ.

ಮೊದಲು ಶಿಕ್ಷಣ ಎನ್ನುವುದು ಜ್ಞಾನವನ್ನು ಪಡೆಯುವ ಸಾಧನವಾಗಿತ್ತು. ಆದರೆ ಈಗ ಭವಿಷತ್ತಿನ ಭದ್ರತೆಯ ಉಪಕರಣವಾಗಿದೆ. ‘ಈ ಕೋರ್ಸ್‌ಗೆ ಹೋದರೆ ನನ್ನ ಮಗ ಚೆನ್ನಾಗಿ ಇರ್ತಾನೆ, ಇದು ಅವನ ಭವಿಷ್ಯವನ್ನು ಕಟ್ಟಿಕೊಡುತ್ತದೆ, ಇದರಿಂದ ಅವನು ಮುಂದೆ ಹೆಚ್ಚು ಹಣ ಗಳಿಸುತ್ತಾನೆ’ ಎಂದುಕೊಂಡು ಶಿಕ್ಷಣವನ್ನು ಸಗಟಾಗಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಚೆನ್ನಾಗಿ ಬದುಕಲು ಶಿಕ್ಷಣ ಉಪಕರಣವಾಗಿದೆಯೇ ಹೊರತು ಜ್ಞಾನವನ್ನು ನೀಡುವ ದೀವಿಗೆಯಾಗಲೇ ಇಲ್ಲ. ಹೀಗಾಗಿ ಇಂದು ಶಿಕ್ಷಣದ ಮೂಲಸತ್ವವೇ ಕಳೆದುಹೋಗುತ್ತಿದೆ.

ಇಂದು ನಾಲ್ಕು, ಐದನೇ ಕ್ಲಾಸಿನ ಮಗುವಿನ ತಂದೆ–ತಾಯಿಯ ಒತ್ತಡವನ್ನೂ ನೋಡಲು ಆಗುವುದಿಲ್ಲ! ಮಗು ಶಾಲೆಯಿಂದ ಬಂದ ಕೂಡಲೇ ಟ್ಯೂಷನ್ ಕ್ಲಾಸ್, ಡ್ಯಾನ್ಸ್ ಕ್ಲಾಸ್, ಸಂಗೀತ ಕ್ಲಾಸ್ – ಹೀಗೆ ಪ್ರತಿಯೊಂದಕ್ಕೂ ಮಗುವನ್ನು ಕಳುಹಿಸುತ್ತಾರೆ. ಅದು ಯಾಕೆಂದರೆ ಮಗು ಯಾವುದಾದರೂ ಒಂದರಲ್ಲಾದರೂ ಕ್ಲಿಕ್ ಆಗಲಿ ಎಂಬ ಕಾರಣಕ್ಕೆ. ಆದರೆ ಹೀಗೆ ಮಾಡುವುದರಿಂದ ಮಗು ಒತ್ತಡಕ್ಕೆ ಒಳಗಾಗುತ್ತದೆ. ಅದರ ಬದಲು ಮಗುವಿನಲ್ಲಿರುವ ಒಂದು ಪ್ರತಿಭೆಯನ್ನು ಗುರುತಿಸಿ ಅದನ್ನೇ ಬೆಳೆಸಿಕೊಂಡು ಹೋಗಲು ಸಹಾಯ ಮಾಡಬೇಕು. ತಿಳಿಯದ ನಾಳಿನ ಭವಿಷ್ಯಕ್ಕಾಗಿ ಪೋಷಕರು ಇಂದೇ ತಲೆಕೆಡಿಸಿಕೊಳ್ಳುತ್ತಿದ್ದಾರೆ, ಅದನ್ನು ಮಕ್ಕಳ ಮೇಲೆ ಹೇರುವ ಮೂಲಕ ಅವರಲ್ಲೂ ನೆಮ್ಮದಿ ಇಲ್ಲದಂತೆ ಮಾಡುತ್ತಿದ್ದಾರೆ.

ಶಿಕ್ಷಣ ಇಂದಿನ ಯುವಜನರಲ್ಲಿ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ಹುಟ್ಟುಹಾಕುವ ಬದಲಿಗೆ ಭಯವನ್ನು ಹುಟ್ಟುಹಾಕುತ್ತಿದೆ. ಅದು ಯಾವ ಕಾರಣಕ್ಕೆ ಎಂದರೆ ವಿದ್ಯಾರ್ಥಿಗಳಿಗೆ ವಿಷಯದ ಬಗ್ಗೆ ಸಂಪೂರ್ಣ ಜ್ಞಾನವಿರುವುದಿಲ್ಲ. ಯಾವಾಗ ವಿಷಯದ ಬಗ್ಗೆ ಸಂಪೂರ್ಣ ಜ್ಞಾನ ಹಾಗೂ ಕೌಶಲ ಇರುತ್ತದೋ ಆಗ ಭಯವಿರುವುದಿಲ್ಲ. ಇಂದು ಶಿಕ್ಷಣ ಎನ್ನುವುದು ನೌಕರಿಗಾಗಿ ಮಾತ್ರ ಎನ್ನುವಂತಿದೆಯೇ ಹೊರತು ಕೌಶಲವನ್ನು ಕಲಿಯುವ ಸಲುವಾಗಿ ಎನ್ನುವಂತಿಲ್ಲ. ಯಾವಾಗ ಜ್ಞಾನ ಹಾಗೂ ಕೌಶಲ ಭದ್ರವಾಗುತ್ತದೋ ಆಗ ಮನೋಧರ್ಮ ಗಟ್ಟಿಯಾಗುತ್ತದೆ. ಏನು ಕಲಿಯುತ್ತಿವೋ ಅದರ ಬಗ್ಗೆ ವಿದ್ಯಾರ್ಥಿಗಳಿಗೆ ತಲಸ್ಪರ್ಶಿಯಾದ ಜ್ಞಾನವಿಲ್ಲದಂತಾಗಿದೆ.

ಯಾವಾಗಲೂ ನಾವು ವಿವರಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು, ಅದರ ಬದಲು ನಿಯಮಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು. ಆತಂಕಕ್ಕೆ ಇನ್ನೊಂದು ಮುಖ್ಯ ಕಾರಣ ಎಂದರೆ ಯಾವುದೇ ಕೆಲಸದ ಬಗ್ಗೆಯೂ ತಯಾರಿ ನಡೆಸದೆಯೇ, ‘ಅದು ಆಗಿಲ್ಲ’ ಎಂದು ತಲೆ ಕೆಡಿಸಿಕೊಳ್ಳುವುದು. ಹಿಡಿದ ಕೆಲಸ ಆಗುವವರೆಗೂ ಹಠ ಹಿಡಿದು ಆ ಕೆಲಸವನ್ನು ಮುಗಿಸಬೇಕು. ಅದು ಸಂಪೂರ್ಣವಾಗಿ ಮುಗಿದ ಮೇಲೆ ಬೇರೆ ಕೆಲಸ ಮೇಲೆ ಗಮನ ಹರಿಸಬೇಕು. ಅದು ಬಿಟ್ಟು ನಾಲ್ಕಾರು ಕೆಲಸಗಳ ಮೇಲೆ ಒಟ್ಟಿಗೆ ಗಮನ ಇಟ್ಟರೆ ಯಾವುದನ್ನೂ ಪರಿಪೂರ್ಣತೆಯಿಂದ ಮುಗಿಸಲು ಸಾಧ್ಯವಾಗುವುದಿಲ್ಲ.

ಒತ್ತಡ ನಿವಾರಣೆಗೆ ಧ್ಯಾನ ತುಂಬ ಮುಖ್ಯ. ಧ್ಯಾನ ಎಂದರೆ ನಮ್ಮ ಜೊತೆಗೆ ನಾವು ಅಪಾಯಿಂಟ್‌ಮೆಂಟ್ ತೆಗೆದುಕೊಂಡ ಹಾಗೆ. ‘ನಾನು ಏನು ಮಾಡುತ್ತೇನೆ, ನಾನು ಮಾಡುವ ಕೆಲಸ ನನಗೆ ಸಂತೋಷ ಇದೆಯಾ? ಜಗತ್ತಿಗೆ ಇದರಿಂದ ಏನಾದರೂ ಪ್ರಯೋಜನ ಇದೆಯಾ?’ – ಎಂದು ಯೋಚಿಸಿದರೆ ಒಂದು ಸ್ಪಷ್ಟತೆ ಸಿಗುತ್ತದೆ; ಸ್ಪಷ್ಟತೆ ಇದ್ದರೆ ಯಾವತ್ತೂ ಒತ್ತಡ ಆಗುವುದೇ ಇಲ್ಲ.

ಹಿಂದೆ ಕಾಲ ಇಷ್ಟು ಅವಸರದಲ್ಲಿ ಹೋಗುತ್ತಿರಲಿಲ್ಲ. ಆಗ ಬಿಡುವಿನ ವೇಳೆ ಹೆಚ್ಚಿತ್ತು. ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಇರುವ  ಮುಖ್ಯ ವ್ಯತ್ಯಾಸ ಎಂದರೆ ಮೊದಲು ಆಯ್ಕೆಗಳಿರಲಿಲ್ಲ ಎಂದು ಒದ್ದಾಡುತ್ತಿದ್ದೆವು; ಆದರೆ ಈಗ ಆಯ್ಕೆಗಳು ಹೆಚ್ಚಿವೆ. ಈ ಆಯ್ಕೆಗಳಿಂದಾಗಿ ಒತ್ತಡವೂ ಹೆಚ್ಚಿದೆ. ವಿದ್ಯಾರ್ಥಿಗಳಲ್ಲೂ ಆಯ್ಕೆ ಹೆಚ್ಚಿರುವ ಕಾರಣಕ್ಕೆ ಯಾವುದನ್ನು ಆರಿಸಿಕೊಳ್ಳಬೇಕು ಎಂಬ ಗೊಂದಲ ಕಾಡುತ್ತಿದೆ. ಆಗ ಹಣ ಗಳಿಸುವುದೇ ಉದ್ದೇಶ ಆಗಿರಲಿಲ್ಲ. ಇರುವ ಸ್ಪಲ್ಪ ಹಣದಲ್ಲೇ ಜೀವನ ಸಾಗುತ್ತಿತ್ತು. ಈಗ ಹಾಗಿಲ್ಲ, ಯಾಕೆಂದರೆ ಅಪೇಕ್ಷೆಗಳು ಹೆಚ್ಚಾಗುತ್ತಿವೆ. ಕೊಳ್ಳುಬಾಕ ಸಂಸ್ಕೃತಿಯೂ ಒತ್ತಡವನ್ನು ಉಂಟು ಮಾಡುತ್ತಿದೆ. ಕೊಳ್ಳುಬಾಕ ಸಂಸ್ಕೃತಿಯಿಂದ ಬೇಡಿಕೆಗಳು ಹೆಚ್ಚಾಗಿ ಖರ್ಚು ಹೆಚ್ಚುತ್ತಿದೆ. ಖರ್ಚಿಗಾಗಿ ದುಡಿಯಬೇಕು. ಹೀಗೆ ಇವೆಲ್ಲವೂ ಚಕ್ರದಂತೆ ಸಾಗುತ್ತಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT