ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ ಸೂಪರ್‌ಕಿಂಗ್ಸ್‌ಗೆ ಜಯ

ಕೆಕೆಆರ್ ಪರ ಆ್ಯಂಡ್ರೆ ರಸೆಲ್‌ ಸ್ಫೋಟಕ ಬ್ಯಾಟಿಂಗ್‌: 36 ಎಸೆತಗಳಲ್ಲಿ 88 ರನ್‌; 11 ಸಿಕ್ಸರ್‌
Last Updated 10 ಏಪ್ರಿಲ್ 2018, 19:55 IST
ಅಕ್ಷರ ಗಾತ್ರ

ಚೆನ್ನೈ: ತವರಿನ ಪ್ರೇಕ್ಷಕರ ಮುಂದೆ ಮಿಂಚಿದ ಚೆನ್ನೈ ಸೂಪರ್‌ ಕಿಂಗ್ಸ್‌ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಗೆದ್ದಿತು.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ರೋಚಕ ಹಣಾಹಣಿಯಲ್ಲಿ 203 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ತಂಡ ಒಂದು ಎಸೆತ ಬಾಕಿ ಇರುವಾಗ ಗೆಲುವಿನ ರನ್ ಗಳಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶೇನ್‌ ವ್ಯಾಟ್ಸನ್‌ (42; 19 ಎ, 3 ಸಿ, 3 ಬೌಂ) ಮತ್ತು ಅಂಬಟಿ ರಾಯುಡು ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.

ಮೊದಲ ವಿಕೆಟ್‌ಗೆ ಇವರಿಬ್ಬರು 75 ರನ್‌ ಸೇರಿಸಿದರು. ಸುರೇಶ್ ರೈನಾ ಮತ್ತು ಮಹೇಂದ್ರ ಸಿಂಗ್ ದೋನಿ ಔಟಾದ ನಂತರ ಕ್ರೀಸ್‌ಗೆ ಬಂದ ಸ್ಯಾಮ್‌ ಬಿಲಿಂಗ್ಸ್‌ (56; 23 ಎ, 5 ಸಿ, 2 ಬೌಂ) ಸ್ಫೋಟಕ ಅರ್ಧ ಶತಕ ಗಳಿಸಿ ತಂಡವನ್ನು ಜಯದ ಸನಿಹ ಕೊಂಡೊಯ್ದರು.

ಅಂತಿಮ ಓವರ್‌ಗಳಲ್ಲಿ ಒತ್ತಡ ಹೇರಲು ಎದುರಾಳಿ ಬೌಲರ್‌ಗಳು ಶ್ರಮಿಸಿದರು. ಆದರೆ ರವೀಂದ್ರ ಜಡೇಜ ಮತ್ತು ಡ್ವೇನ್ ಬ್ರಾವೊ ದಿಟ್ಟ ಉತ್ತರ ನೀಡಿದರು.

ಆ್ಯಂಡ್ರೆ ರಸೆಲ್‌ ಸ್ಫೋಟಕ ಅರ್ಧಶತಕ: ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೆಕೆಆರ್‌ ತಂಡಕ್ಕೆ ಸೂಪರ್‌ ಕಿಂಗ್ಸ್‌ ಬೌಲರ್‌ಗಳು ನಿರಂತರ ಆಘಾತ ನೀಡಿದರು. ಹೀಗಾಗಿ ಒಂದು ಹಂತದಲ್ಲಿ ತಂಡ 150 ರನ್‌ಗಳ ಗಡಿ ದಾಟುವುದು ಕಷ್ಟ ಎಂಬಂತಾಗಿತ್ತು. ಆದರೆ ಏಳನೇ ಕ್ರಮಾಂಕದ ಆ್ಯಂಡ್ರೆ ರಸೆಲ್ ಭರ್ಜರಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಬಲ ತುಂಬಿದರು.

36 ಎಸೆತಗಳಲ್ಲಿ 11 ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ ಅವರು 88 ರನ್ ಗಳಿಸಿ ಅಜೇಯರಾಗಿ ಉಳಿದರು. ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್ ಲಿನ್, ಮೂರನೇ ಕ್ರಮಾಂಕದ ರಾಬಿನ್ ಉತ್ತಪ್ಪ ಮತ್ತು ದಿನೇಶ್ ಕಾರ್ತಿಕ್‌ ಉಪಯುಕ್ತ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರ್‌

ಕೆಕೆಆರ್‌: 20 ಓವರ್‌ಗಳಲ್ಲಿ 6ಕ್ಕೆ 202 (ಕ್ರಿಸ್‌ ಲಿನ್‌ 22, ರಾಬಿನ್ ಉತ್ತಪ್ಪ 29, ದಿನೇಶ್ ಕಾರ್ತಿಕ್‌ 26, ಆ್ಯಂಡ್ರೆ ರಸೆಲ್ ಅಜೇಯ 88; ಹರಭಜನ್ ಸಿಂಗ್‌ 11ಕ್ಕೆ1, ಶೇನ್‌ ವ್ಯಾಟ್ಸನ್‌ 39ಕ್ಕೆ2);

ಚೆನ್ನೈ ಸೂಪರ್ ಕಿಂಗ್ಸ್‌: 19.5 ಓವರ್‌ಗಳಲ್ಲಿ 5ಕ್ಕೆ 205 (ಶೇನ್‌ ವ್ಯಾಟ್ಸನ್‌ 42, ಅಂಬಟಿ ರಾಯುಡು 39, ಮಹೇಂದ್ರ ಸಿಂಗ್‌ ದೋನಿ 25, ಸ್ಯಾಮ್‌ ಬಿಲಿಂಗ್ಸ್‌ 56; ಕುರನ್‌ 39ಕ್ಕೆ2). ಫಲಿತಾಂಶ: ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ 5 ವಿಕೆಟ್‌ಗಳ ಜಯ;

ಪಂದ್ಯಶ್ರೇಷ್ಠ: ಸ್ಯಾಮ್‌ ಬಿಲಿಂಗ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT