ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷೇತರ ಅಭ್ಯರ್ಥಿಗಳಿಗೆ ಹೊಸ ತಲೆನೋವು

ನಾಮಪತ್ರ ಸಲ್ಲಿಸುವವರೆಗೂ ಚುನಾವಣಾ ಪ್ರಚಾರಕ್ಕೆ ಅನುಮತಿ ನೀಡಲು ಚುನಾವಣಾಧಿಕಾರಿಗಳ ನಕಾರ, ಹೈಕೋರ್ಟ್ ಮೆಟ್ಟಿಲೇರಿದ ಡಾ.ಎಂ.ಸಿ.ಸುಧಾಕರ್
Last Updated 11 ಏಪ್ರಿಲ್ 2018, 9:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಪಕ್ಷೇತರರಿಗೆ ನಾಮಪತ್ರ ಸಲ್ಲಿಸುವವರೆಗೂ ಪ್ರಚಾರಕ್ಕೆ ಅನುಮತಿ ನೀಡದಂತೆ ಚುನಾವಣಾ ಆಯೋಗ ಹೊಸ ಆದೇಶವೊಂದನ್ನು ಹೊರಡಿಸಿದೆ. ಇದು ಪ್ರಚಾರಕ್ಕೆ ಶುರುವಿಟ್ಟುಕೊಂಡಿದ್ದ ಸ್ವತಂತ್ರ ಅಭ್ಯರ್ಥಿಗಳಿಗೆ ಹೊಸ ತಲೆನೋವು ತಂದಿದೆ.

ಸದ್ಯ ಈ ಹೊಸ ಆದೇಶದ ಬಿಸಿ ಜಿಲ್ಲೆಯಲ್ಲಿ ಶಿಡ್ಲಘಟ್ಟದಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವ ಮೇಲೂರು ರವಿಕುಮಾರ್ ಮತ್ತು ಚಿಂತಾಮಣಿಯಲ್ಲಿ ಕಾಂಗ್ರೆಸ್ ವರಿಷ್ಠರಿಗೆ ಸೆಡ್ಡು ಹೊಡೆದು ಈ ಬಾರಿ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ಡಾ.ಎಂ.ಸಿ.ಸುಧಾಕರ್ ಅವರಿಗೆ ತಟ್ಟಿದೆ.

ಮುಖಂಡರೊಬ್ಬರ ಮೂಲಕ ಸುಧಾಕರ್ ಅವರು ಏ.11 ರಿಂದ ಏ.15ರ ವರೆಗೆ ಅಂಬಾಜಿದುರ್ಗ ಹೋಬಳಿಯಾದ್ಯಂತ ಪ್ರಚಾರ ನಡೆಸಲು ಕೋರಿ ಸಲ್ಲಿಸಿದ್ದ ಅರ್ಜಿಗೆ ಅನುಮತಿ ನೀಡಲು ಅವಕಾಶ ಇಲ್ಲ ಎಂದು ಸ್ಥಳೀಯ ಚುನಾವಣಾಧಿಕಾರಿ ಹಿಂಬರಹ ನೀಡಿದ್ದಾರೆ.

ಇನ್ನು ಶಿಡ್ಲಘಟ್ಟದಲ್ಲಿ ನೂರಾರು ಬೆಂಬಲಿಗರೊಂದಿಗೆ ದೇವಾಲಯ, ದರ್ಗಾಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತ ಪ್ರಚಾರಕ್ಕೆ ಇಳಿದಿದ್ದ ಮೇಲೂರು ರವಿಕುಮಾರ್ ಅವರಿಗೆ ಚುನಾವಣಾಧಿಕಾರಿ ನಾಮಪತ್ರ ಸಲ್ಲಿಸುವವರೆಗೂ ಬೆಂಬಲಿಗರೊಂದಿಗೆ ಸಾರ್ವಜನಿಕವಾಗಿ ಪ್ರಚಾರ ಕಾರ್ಯ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ಜತೆಗೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ರವಿ ಅವರ ನೂರಾರು ಬೆಂಬಲಿಗರ ಮೇಲೆ ಪ್ರಕರಣ ಕೂಡ ದಾಖಲಿಸಿದ್ದಾರೆ.

ಏನಿದು ಹೊಸ ವರಸೆ?

ಈ ಕುರಿತು ಜಿಲ್ಲಾ ಚುನಾವಣಾಧಿಕಾರಿ ದೀಪ್ತಿ ಕಾನಡೆ ಅವರನ್ನು ವಿಚಾರಿಸಿದರೆ, ‘ಪಕ್ಷದ ಹೆಸರಿನಲ್ಲಿ ಪ್ರಚಾರ ಮಾಡುವವರು ನಾಮಪತ್ರ ಸಲ್ಲಿಸುವವರೆಗೆ ಮಾಡಿದ ಖರ್ಚು ಪಕ್ಷದ ಲೆಕ್ಕಕ್ಕೆ ಸೇರುತ್ತದೆ. ಪಕ್ಷೇತರರಿಗೆ ಅಂತಹ ಅವಕಾಶವಿಲ್ಲ. ಹೀಗಾಗಿ ಸ್ವತಂತ್ರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ನಂತರವಷ್ಟೇ ಪ್ರಚಾರ ಕಾರ್ಯ ಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಪಕ್ಷೇತರರಾಗಿ ಸ್ಪರ್ಧಿಸುವವರು ಒಬ್ಬೊಬ್ಬರಾಗಿ ತಿರುಗಾಡಲು ನಮ್ಮ ಆಕ್ಷೇಪವಿಲ್ಲ. ಆದರೆ ಅವರಿಗೆ ರ್‌್ಯಾಲಿ, ಪ್ರಚಾರಕ್ಕೆ ವಾಹನಗಳ ಬಳಕೆಗೆ ಅನುಮತಿ ನೀಡಲು ಅವಕಾಶವಿಲ್ಲ. ಪಕ್ಷೇತರರಿಗೆ ನಾಮಪತ್ರ ಸಲ್ಲಿಸಿದ ನಂತರ ಪ್ರಚಾರಕ್ಕೆ 15 ದಿನಗಳು ಮಾತ್ರ ಕಾಲಾವಕಾಶವಿರುತ್ತದೆ. ಇದರಲ್ಲಿ ನಮ್ಮ ಪಾತ್ರವಿಲ್ಲ. ಚುನಾವಣಾ ಆಯೋಗದ ನಿರ್ದೇಶನದಂತೆ ನಾವು ಕ್ರಮಕೈಗೊಳ್ಳುತ್ತಿದ್ದೇವೆ’ ಎಂದು ಹೇಳಿದರು.

ಕೋರ್ಟ್ ಮೆಟ್ಟಿಲೇರಿದ ಸುಧಾಕರ್

ಚುನಾವಣಾ ಆಯೋಗದ ಹೊಸ ಆದೇಶದಿಂದ ಅಸಮಾಧಾನಗೊಂಡಿರುವ ಡಾ.ಎಂ.ಸಿ.ಸುಧಾಕರ್ ಅವರು ಸದ್ಯ ಹೈಕೋರ್ಟ್‌ನಲ್ಲಿ ಈ ಹೊಸ ನಿಯಮ ಪ್ರಶ್ನಿಸಿ ದಾವೆ ಹೂಡಿದ್ದಾರೆ. ಆ ಅರ್ಜಿಯ ವಿಚಾರಣೆ ಬುಧವಾರ ನಡೆಯುವ ಸಾಧ್ಯತೆ ಇದೆ.

‘ಒಂದು ಪಕ್ಷಕ್ಕೆ ಸೇರಿದವರು ಪ್ರಚಾರ ಮಾಡಬಹುದು.ಆದರೆ ಪಕ್ಷೇತರರು ಪ್ರಚಾರ ಮಾಡಬಾರದು ಎಂದರೆ ಏನರ್ಥ? ಅಧಿಕಾರಿಗಳೇ ಹೇಳುವಂತೆ ಪಕ್ಷದ ಪರವಾಗಿದ್ದವರು ಮಾಡುವ ಖರ್ಚು ಪಕ್ಷದ ಲೆಕ್ಕಕ್ಕೆ ಸೇರುತ್ತದೆ. ಅದೇ ರೀತಿ ನಾವು ಮಾಡುವ ಖರ್ಚು ನಮ್ಮ ಲೆಕ್ಕಕ್ಕೆ ಸೇರಿಸಲಿ ಬಿಡಿ. ಒಟ್ಟಿನಲ್ಲಿ ನಮಗೆ ಪ್ರಚಾರಕ್ಕೆ ಅನುಮತಿ ನೀಡಿ ಎನ್ನುವುದು ನಮ್ಮ ಒತ್ತಾಯ’ ಎನ್ನುತ್ತಾರೆ ಸುಧಾಕರ್.

‘ಕಳೆದ ಬಾರಿ ಕೂಡ ನಾನು ಪಕ್ಷೇತರರನಾಗಿ ಸ್ಪರ್ಧಿಸಿದ್ದೆ. ಆಗ ಚುನಾವಣಾಧಿಕಾರಿ ಪ್ರಚಾರಕ್ಕೆ ನೀಡಿದ್ದ ಅನುಮತಿ ಪತ್ರಗಳನ್ನೂ ಅರ್ಜಿಯೊಂದಿಗೆ ಲಗತ್ತಿಸಿ ಕೊಟ್ಟರೂ ಅನುಮತಿ ನಿರಾಕರಿಸಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸುವವರಿಗೆ ಇದು ಅನ್ಯಾಯವಲ್ಲವೆ? ನಿಗದಿತ ಖರ್ಚಿಗೆ ಒಳಪಟ್ಟು ಪ್ರಚಾರ ಮಾಡುವುದಕ್ಕೆ ಏಕೆ ಅಡ್ಡಿಪಡಿಸುತ್ತಿದ್ದಾರೋ ತಿಳಿಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾಮಪತ್ರ ಸಲ್ಲಿಸಲು ಏ.17ರಿಂದ 24 ರ ವರೆಗೆ ಅವಕಾಶವಿದೆ. ನಾವು ಯಾವತ್ತೂ ನಾಮಪತ್ರ ಸಲ್ಲಿಸಬೇಕು ಎಂದು ಇನ್ನೂ ದಿನಾಂಕ ನಿಶ್ಚಯವಾಗಿಲ್ಲ. ಸದ್ಯ ನಮಗೆ ಸಮಯದ ಕೊರತೆ ಇದೆ. ಹೀಗಾಗಿ ಪರ್ಯಾಯ ಮಾರ್ಗಗಳ ಮೂಲಕ ಅನುಮತಿ ಪಡೆಯುವ ಪ್ರಯತ್ನ ಮಾಡುತ್ತಿದ್ದೇವೆ. ಬಹಳಷ್ಟು ನೋಂದಾಯಿತ ಪ್ರಾದೇಶಿಕ ಪಕ್ಷಗಳಿವೆ. ಅವರೊಂದಿಗೆ ಮಾತನಾಡಿದ್ದೇವೆ. ಕೆಲವರು ತಮ್ಮ ಪಕ್ಷದ ಪರವಾಗಿ ಅನುಮತಿ ಕೊಡುವುದಾಗಿ ಪತ್ರ ಕೊಟ್ಟಿದ್ದಾರೆ’ ಎಂದರು.

ಹೈಕೋರ್ಟ್ ಈ ವಿಚಾರದಲ್ಲಿ ಯಾವ ರೀತಿಯ ತೀರ್ಪು ನೀಡುತ್ತದೆ ಎಂದು ಅಧಿಕಾರಿಗಳು ಮತ್ತು ಪಕ್ಷೇತರರಾಗಿ ಸ್ಪರ್ಧಿಸಲು ಇಚ್ಛಿಸಿರುವ ಮುಖಂಡರು ಎದುರು ನೋಡುತ್ತಿದ್ದಾರೆ.

**

ಕಳೆದ ಬಾರಿ ಪ್ರಚಾರಕ್ಕೆ ಅನುಮತಿ ಕೊಟ್ಟಿದ್ದಾರೆ. ಆಗ ಕೊಟ್ಟವರಿಗೆ ಈಗ ಏಕೆ ಬರುವುದಿಲ್ಲ ಎಂದು ಪ್ರಶ್ನಿಸಿದರೆ ಅಧಿಕಾರಿಗಳು ಉತ್ತರವನ್ನೇ ನೀಡುತ್ತಿಲ್ಲ – ಡಾ.ಎಂ.ಸಿ.ಸುಧಾಕರ್,ಕಾಂಗ್ರೆಸ್ ಮುಖಂಡ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT