ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಖೆಗಳಲ್ಲಿ ಮೂಡಿದ ಮತದಾನದ ಚಿಂತನೆ

ಜಿಲ್ಲಾ ಚುನಾವಣಾ ಕಚೇರಿಯಲ್ಲಿ ಮತದಾನ ಜಾಗೃತಿ ಮೂಡಿಸುವ ಕಲಾಕೃತಿಗಳ ಅನಾವರಣ
Last Updated 11 ಏಪ್ರಿಲ್ 2018, 13:41 IST
ಅಕ್ಷರ ಗಾತ್ರ

ಯಾದಗಿರಿ:ಮುಖಭಾವದಲ್ಲಿ ದುಃಖ ಮಡುಗಟ್ಟಿದೆ. ಮತಕ್ಷೇತ್ರ ಅಭಿವೃದ್ಧಿ ಆಗಲಿಲ್ಲ ಎಂಬ ಕೊರಗೂ ಇದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಯಾದಗಿರಿ ಜಿಲ್ಲೆಗೆ ತಪ್ಪಲಿಲ್ಲ ಕಟ್ಟಕಡೆಯ ಸ್ಥಾನ ಎಂಬ ಬೇಸರವೂ ಅಡಗಿದೆ. ಹಾಗಾಗಿ, ಈ ಬಾರಿ ಎಲ್ಲರೂ ಮತದಾನ ಮಾಡ್ರಪ್ಪೋ ಎಂಬ ಘೋಷಣೆಯೂ ಅಲ್ಲಿ ಕಾಣುತ್ತಿದೆ...

ಸುರಪುರದ ರೇಖಾ ಕುಂಚ ಕಲಾವಿದ ಬಸವರಾಜ ಎಸ್‌. ಕಲೆಗಾರ ಈ ಬಾರಿ ಚುನಾವಣೆಯಲ್ಲಿ ಮತಜಾಗೃತಿಗಾಗಿ ರಚಿಸಿರುವ ರೇಖಾ ಚಿತ್ರಕಲೆಗಳ ನೋಡುತ್ತಾ ಹೋದಂತೆ ಇಷ್ಟೆಲ್ಲ ಭಾವಗಳು ಮೂಡುತ್ತವೆ.

ವರ್ಣ ಕಲಾಕೃತಿಗಳಿಗಿಂತ ಬಸವರಾಜ ಅವರು ರಚಿಸಿರುವ ಕಲಾಕೃತಿಗಳು ಕೊಂಚ ಭಿನ್ನ. ಕಲಾಕೃತಿಗಳಿಗೆ ಬಣ್ಣಕ್ಕಿಂತ ರೇಖೆಗಳಿಗೆ ಅವರು ಹೆಚ್ಚು ಮಹತ್ವ ನೀಡಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ಹಲವು ಶೀರ್ಷಿಕೆಯಡಿ ಕಲಾಕೃತಿಗಳನ್ನು ರಚಿಸಿರುವ ಅವರು, ಕೆಲವೊಂದು ಕಲಾಕೃತಿಗಳು ಶೀರ್ಷಿಕೆ ಹೊರತಾಗಿ ರಚಿಸಿದ್ದಾರೆ. ಅಂತಹ ಬಹುತೇಕ ಕೃತಿಗಳು ಮತದಾನ ಕುರಿತು ಜನರನ್ನು ಚಿಂತನೆಗೆ ಹಚ್ಚುವಂತಿವೆ.

ಕೆಲವೊಂದು ರೇಖಾಚಿತ್ರ ಕಲಾಕೃತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರತಿಬಿಂಬವಾಗಿವೆ. ಹಲವು ಪ್ರಜಾಪ್ರಭುತ್ವದ ವ್ಯವಸ್ಥೆ ವಾಸ್ತವ ತೆರೆದಿಟ್ಟಿವೆ. ಮತ್ತಷ್ಟೂ ಆಳಕ್ಕೆ ಇಳಿದು ಈ ಕಲಾಕೃತಿಗಳನ್ನು ಅಭ್ಯಸಿಸಿದರೆ ಇಡೀ ಒಕ್ಕೂಟ ವ್ಯವಸ್ಥೆ ಸ್ಥಿತಿಗತಿಯನ್ನು ಹೇಳುತ್ತಿದೆ ಅನ್ನಿಸುತ್ತದೆ. ಬಹುತೇಕ ಮತದಾನ ಜಾಗೃತಿ ಬಗ್ಗೆಯೇ ಹೆಚ್ಚು ಅರಿವು ಮೂಡಿಸುವಲ್ಲಿ ರೇಖಾಕಲಾಕೃತಿಗಳು ಯಶಸ್ವಿಯಾಗಿವೆ ಎನ್ನಬಹುದು.

‘ದೃಶ್ಯಕಲಾಕೃತಿಗಳು ಸೌಂದರ್ಯದ ಪ್ರತೀಕವಾಗಿರುತ್ತವೆ. ಸೌಂದರ್ಯವನ್ನೇ ಪ್ರಧಾನ ವಿಷಯವನ್ನಾಗಿಸಿ ಆಕರ್ಷವಾಗಿ ರಚಿಸಲಾಗುತ್ತದೆ. ಇದಕ್ಕೆ ರವಿವರ್ಮ ಉತ್ತಮ ಉದಾ ಹರಣೆ. ಆದರೆ, ರೇಖಾ ಚಿತ್ರಗಳು ಹೆಚ್ಚು ಆಕರ್ಷಣೆಗಿಂತ ಚಿಂತನೆಗೆ ಹಚ್ಚುತ್ತವೆ. ಕಲಾಕೃತಿಯನ್ನು ಯಾವ ದೃಷ್ಟಿಕೋನದಲ್ಲಿ ಅಧ್ಯಯನ ಮಾಡಿ ದರೂ ಅದಕ್ಕೊಂದು ಅರ್ಥವನ್ನು ಕಲಾಕೃತಿ ಕಲ್ಪಿಸುತ್ತದೆ. ಅದೇ ರೀತಿಯಲ್ಲಿ ಮತದಾರರನ್ನು ಚಿಂತನೆಗೆ ಹಚ್ಚುವ ಉದ್ದೇಶದಿಂದ ಕಲಾಕೃತಿಗಳನ್ನು ರಚಿಸಿದ್ದೇನೆ. ಬಹುತೇಕ ಕೃತಿಗಳನ್ನು ಜಿಲ್ಲಾಧಿಕಾರಿಗೆ ನೀಡಿದ್ದೇನೆ. ಜಿಲ್ಲಾ ಚುನಾವಣಾ ಆಯೋಗ ಸಿಬ್ಬಂದಿಗೆ ಅವು ನೆರವಾಗಿವೆ. ಮತದಾರರನ್ನು ಚಿಂತನೆಗೆ ಹಚ್ಚುವಲ್ಲಿ ಕಲಾಕೃತಿಗಳು ಯಶಸ್ವಿಯಾದರೆ ನನ್ನ ಶ್ರಮ ಸಾರ್ಥವಾಗುತ್ತದೆ’ ಎಂದು ಕಲಾವಿದ ಬಸವರಾಜ ಕಲೆಗಾರ ಹೇಳುತ್ತಾರೆ.

‘ಬಸವರಾಜ ಕಲೆಗಾರ ಅವರ ರೇಖಾ ಕಲಾಕೃತಿಗಳನ್ನು ಗಮನಿಸಿದ್ದೇನೆ. ಅವರೊಂದಿಗೆ ಇತರೆ ಕಲಾವಿದರನ್ನೂ ಕರೆಯಿಸಿ ಚುನಾವಣೆಗೆ ಸಂಬಂಧಿಸಿದ ಜಾಗೃತಿ ಮೂಡಿಸುವ ಚಿತ್ರಗಳನ್ನು ರಚಿಸಿಕೊಡುವಂತೆ ವಿನಂತಿಸಿದೆ. ಕಲಾವಿದರು ಓಗೊಟ್ಟು ಕೆಲವೊಂದು ಕಲಾಕೃತಿಗಳನ್ನು ರಚಿಸಿಕೊಟ್ಟಿದ್ದಾರೆ. ಅವುಗಳಲ್ಲಿ ಬಸವರಾಜ ಅವರ ರೇಖಾಚಿತ್ರ ಕಲಾಕೃತಿಗಳು ನೋಡುಗರನ್ನು ಚಿಂತನೆಗೆ ಹಚ್ಚುವಂತಿವೆ. ರೇಖೆಗಳ ಮೂಲಕ ಕಲೆಯನ್ನು ಮೈಗೂಡಿಸಿಕೊಂಡಿರುವ ಇಂಥ ಕಲಾವಿದರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಕಲಾ ಗ್ಯಾಲರಿ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಜೆ.ಮಂಜುನಾಥ್ ಹೇಳುತ್ತಾರೆ.

**

ಕಲೆ ಮತ್ತು ಚಿತ್ರ ಕಲಾಕೃತಿ ಕೇವಲ ಮನರಂಜನೆ, ಆಕರ್ಷಣೆಗೆ ಸೀಮಿತವಲ್ಲ. ಸಜೃನಶೀಲ ಕಲಾಕೃತಿಗಳು ಮನಸ್ಸನ್ನು ಪರಿವರ್ತಿಸುವ ಶಕ್ತಿ ಹೊಂದಿರುತ್ತವೆ. ಅಂತಹ ಸಣ್ಣ ಪ್ರಯತ್ನ ನಡೆಸಿದ್ದೇನೆ – ಬಸವರಾಜ ಎಸ್.ಕಲೆಗಾರ, ಕಲಾವಿದ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT