ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರದೆ ಹಿಂದಿನ ಸೂತ್ರಧಾರರು!

Last Updated 11 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಮತದಾನದ ದಿನ ಕೆಲಸಕ್ಕೆ ರಜೆ ಹಾಕಿ ಪಿಕ್‌ನಿಕ್‌ಗೆ ಹೋಗುತ್ತಾರೆ’ ಎಂಬುದು ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ಬಗ್ಗೆ ಕೆಲವೇ ವರ್ಷಗಳ ಹಿಂದೆ ಕೇಳಿ ಬರುತ್ತಿದ್ದ ಕುಹಕದ ಮಾತು. ಆದರೆ, ಈಗ ಚಿತ್ರಣ ಸಂಪೂರ್ಣ ಬದಲಾಗಿದೆ. ರಾಜ್ಯದ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣಾ ತಂತ್ರಗಾರಿಕೆಯಲ್ಲಿ ಟೆಕಿಗಳ ಬುದ್ಧಿಮತ್ತೆಯನ್ನು ಬಹುವಾಗಿ ಬಳಸಿಕೊಳ್ಳುತ್ತಿವೆ.

ನೂರಾರು ಸಂಖ್ಯೆಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಕಂಪನಿ ಕೆಲಸದಿಂದ ಮೂರು– ನಾಲ್ಕು ತಿಂಗಳು ರಜೆ ಹಾಕಿ ತಮ್ಮ ಇಷ್ಟದ ಪಕ್ಷದ ಹಾಗೂ ನೆಚ್ಚಿನ ನಾಯಕರ ಗೆಲುವಿಗಾಗಿ ಉದಾರ ಸೇವೆ ಸಲ್ಲಿಸುತ್ತಿದ್ದಾರೆ. ಚುನಾವಣಾ ರಂಗವನ್ನೂ ಡಿಜಿಟಲ್‌ ತಂತ್ರಜ್ಞಾನ ಆಕ್ರಮಿಸಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಆಗುತ್ತಿರುವ ಈ ಬದಲಾವಣೆ, ಭವಿಷ್ಯದಲ್ಲಿ ರಾಜಕೀಯ ಮೇಲಾಟಗಳು ಯಾವ ದಿಕ್ಕಿನಲ್ಲಿ ಸಾಗಲಿವೆ ಎಂಬುದಕ್ಕೆ ಮುನ್ಸೂಚನೆಯೂ ಆಗಿದೆ.

2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ರಾಜ್ಯದ ಬಹುಪಾಲು ಜನರ ಕೈಯಲ್ಲಿ ಸೆಲ್‌ಫೋನ್‌ಗಳು ಬಂದಿದ್ದವು. ಆದರೆ, ಮತದಾರರು ಈಗಿನಂತೆ ಹತ್ತಿಪ್ಪತ್ತು ವಾಟ್ಸ್‌ ಆ್ಯಪ್‌ ಗ್ರೂಪ್‌ಗಳ ಸದಸ್ಯರಾಗಿರಲಿಲ್ಲ. ರಾಜಕೀಯ ಒಲವುಗಳನ್ನು ಆಧರಿಸಿದ ಪೋಸ್ಟ್‌ಗಳು, ಫೇಸ್‌ಬುಕ್‌ ಪುಟದಲ್ಲಿ ಶೇರ್‌ ಆಗುತ್ತಿರಲಿಲ್ಲ. ಪಕ್ಷ ನಿಷ್ಠೆ, ನೆಚ್ಚಿನ ನಾಯಕರ ಕುರಿತ ಅತಿಯಾದ ನಂಬಿಕೆಗಳು ಈಗಿನಂತೆ ಬಹಿರಂಗವಾಗಿ ಹಂಚಿಕೊಳ್ಳುವ ವಿಚಾರಗಳಾಗಿರಲಿಲ್ಲ. ಈಗ ಈ ಕಾರಣಗಳಿಗಾಗಿಯೇ ಆಪ್ತಗೆಳೆಯರ ನಡುವೆಯೂ ವೈಮನಸ್ಸು ಕಾಣಿಸಿಕೊಳ್ಳುವ ವಾತಾವರಣ ಆಗ ಇರಲಿಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳು, ಸಂಬಂಧಗಳನ್ನು ದೂರ ಮಾಡುವಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣಗಳು ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿವೆ.

ಇವೆಲ್ಲವೂ ದಿಢೀರ್‌ ಆಗಿ ಸಂಭವಿಸಿದ ಬೆಳವಣಿಗೆಗಳಲ್ಲ. ಇವುಗಳ ಹಿಂದೆ ಕರಾರುವಾಕ್‌ ಯೋಜನೆ ಅಡಗಿದೆ. ನಮಗರಿವಿಲ್ಲದಂತೆಯೇ ನಮ್ಮ ನಿಲುವುಗಳನ್ನು ನಿರೂಪಿಸುವ ನಿರ್ದೇಶಕರ ಕೈವಾಡ ಇದರಲ್ಲಿ ಅಡಗಿದೆ. ಅವರು ಯಾವುದೋ ಎ.ಸಿ. ರೂಮಿನಲ್ಲಿ ಕುಳಿತು ನಮ್ಮ ಒಲವುಗಳನ್ನು ಇಣುಕಿ ನೋಡುತ್ತಾ, ಅದನ್ನು ಯಾವ ದಾರಿಯಲ್ಲಿ ತಿರುಗಿಸಬೇಕು ಎಂಬ ಲೆಕ್ಕಾಚಾರ ಹಾಕುತ್ತಿರುತ್ತಾರೆ. ಮನಸುಗಳ ವಶೀಕರಣ ನಡೆಸುವ ಛಾಯಾ ಸಮರದ ಸೇನಾನಿಗಳು ಟೆಕಿಗಳೇ ಆಗಿರುತ್ತಾರೆ. ಹಾಗಾಗಿ ಟೆಕಿಗಳಿಗೆ ಎಲ್ಲ ರಾಜಕೀಯ ಪಕ್ಷಗಳೂ ಮಣೆ ಹಾಕುತ್ತಿವೆ. ತಮ್ಮ ಕಚೇರಿಗಳಲ್ಲೇ ಇದಕ್ಕಾಗಿಯೇ ಪ್ರತ್ಯೇಕ ವಿಭಾಗಗಳನ್ನೂ ಆರಂಭಿಸಿವೆ.

ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ರಾಜಕೀಯ ಪಕ್ಷಗಳು ಪ್ರಧಾನ ಅಸ್ತ್ರವಾಗಿ ಬಳಸುತ್ತಿದ್ದು, ಸಾಂಪ್ರದಾಯಿಕ ‘ಮೈದಾನ ರಾಜಕಾರಣ’ದ ಜೊತೆಗೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಲು ಮಾಹಿತಿ ತಂತ್ರಜ್ಞಾನ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿರುವ ಪ್ರತಿಭಾವಂತರನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿವೆ.

ಈ ಸಮರದಲ್ಲಿ ಪ್ರಧಾನವಾಗಿ ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ ಆ್ಯಪ್‌, ಯೂಟ್ಯೂಬ್‌ ಮತ್ತು ಇನ್‌ಸ್ಟಾಗ್ರಾಮ್ ಅಸ್ತ್ರಗಳಾಗಿವೆ. ಟ್ವಿಟರ್‌ ಮೂಲಕ ಯಾವುದೋ ಒಂದು ವಿಷಯವನ್ನು ‘ಟ್ರೆಂಡ್‌ ಸೆಟ್‌’ ಮಾಡಿ, ಅದರ ಮೇಲೆ ಚರ್ಚೆಯನ್ನು ಮುನ್ನಡೆಸುವ ತಂತ್ರವನ್ನು ಅನುಸರಿಸಲಾಗುತ್ತಿದೆ. ಬಿಜೆಪಿ ಬಹುತೇಕ ಎಲ್ಲ ಮತಗಟ್ಟೆಯಲ್ಲೂ ವಾಟ್ಸ್‌ ಆ್ಯಪ್‌ ಗುಂಪನ್ನು ಹೊಂದಿದೆ. ಎರಡನೇ ಸ್ಥಾನ ಕಾಂಗ್ರೆಸ್‌ಗಿದೆ. ಜೆಡಿಎಸ್‌ ಸಹ ಇವೆರಡೂ ಪಕ್ಷಗಳಿಗೆ ಪೈಪೋಟಿ ನೀಡುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಪಕ್ಷಗಳನ್ನು ಮುನ್ನಡೆಸುವ ಗುಂಪುಗಳು ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಪಕ್ಷಗಳ ಬೆರಳೆಣಿಕೆಯ ನಾಯಕರಿಗೆ ಬಿಟ್ಟರೆ ಉಳಿದವರಿಗೆ ಸುಳಿವೂ ಇರುವುದಿಲ್ಲ. ಇದನ್ನು ಕಾರ್ಯಗತಗೊಳಿಸಲು ಮೂರು ಹಂತದ ತಂಡಗಳಿರುತ್ತವೆ. ಮೊದಲ ಹಂತದ ತಂಡ ಪ್ರತಿದಿನ ಹೊಸ ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕುತ್ತದೆ. ಎರಡನೇ ಹಂತ ತಂಡ ಆ ಪರಿಕಲ್ಪನೆಗೆ ಜೀವ ತುಂಬುತ್ತದೆ. ಮೂರನೇ ತಂಡ ವಿವಿಧ ತಾಣಗಳಿಗೆ ಅಪ್‌ಲೋಡ್‌ ಮಾಡಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತದೆ.

ರಾಜ್ಯಮಟ್ಟದಿಂದ ಗ್ರಾಮ ಮಟ್ಟದವರೆಗೆ ಮಾಹಿತಿಯನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಣ್ಣ– ಸಣ್ಣ ತಂಡಗಳನ್ನು ರಚಿಸಲಾಗಿದೆ. ಈ ಗುಂಪುಗಳು ಸ್ಥಳೀಯ ವಿಷಯಗಳನ್ನು ಮುಂದಿಟ್ಟುಕೊಂಡು ತಂತ್ರ ಹೆಣೆಯುತ್ತವೆ. ಇವು ಅತ್ಯಂತ ರಹಸ್ಯವಾಗಿಯೂ ಕಾರ್ಯ ನಿರ್ವಹಿಸುತ್ತವೆ.

‘ರಾಜ್ಯದ ಮತದಾರರು 4.9 ಕೋಟಿ. ಅದರಲ್ಲಿ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ ಅಂದಾಜು 3 ಕೋಟಿ. 3.5 ಕೋಟಿ ಜನ ಸ್ಮಾರ್ಟ್‌ಫೋನ್‌ ಹೊಂದಿದ್ದಾರೆ. 2.5 ಕೋಟಿ ಮಂದಿ ಫೇಸ್‌ಬುಕ್‌ ಖಾತೆಗಳನ್ನು ಹೊಂದಿದ್ದಾರೆ. 2.4 ಕೋಟಿ ಮಂದಿ ಯೂಟ್ಯೂಬ್‌ ವೀಕ್ಷಿಸುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕವೇ ಬಹುತೇಕ ಮತದಾರರನ್ನು ತಲುಪಲು ಸಾಧ್ಯವಿದೆ. ಹೀಗಾಗಿ ಆನ್‌ಲೈನ್‌ ಮೂಲಕಕ್ಕೆ ಮತ ಬೇಟೆಗೆ ಹೆಚ್ಚು ಒತ್ತು ನೀಡಿದ್ದೇವೆ’ ಎಂದು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಬಾಲಾಜಿ ಶ್ರೀನಿವಾಸ್‌ ಹೇಳುತ್ತಾರೆ.

‘ನಾನು ಮೊದಲಿನಿಂದಲೂ ಎಬಿವಿಪಿ ಕಾರ್ಯಕರ್ತ. ಐಟಿ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಇದೆ. ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ದುಡಿಯುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಹಾಗೂ ಬಿಜೆಪಿ ಸಿದ್ಧಾಂತ ಮೆಚ್ಚಿ ಪಕ್ಷಕ್ಕಾಗಿ ಪೂರ್ಣಕಾಲಿಕವಾಗಿ ದುಡಿಯುತ್ತಿದ್ದೇನೆ. ಕೆಲಸಕ್ಕೆ ನಾಲ್ಕು ತಿಂಗಳು ರಜೆ ಹಾಕಿದ್ದೇನೆ’ ಎಂದು ಅವರು ತಿಳಿಸುತ್ತಾರೆ.

‘ನಮ್ಮ ಐಟಿ ಸೆಲ್‌ನಲ್ಲಿ 40 ಸದಸ್ಯರಿದ್ದಾರೆ. ಅದರಲ್ಲಿ ಹೆಚ್ಚಿನವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪರಿಣತರು. 2010ರಲ್ಲೇ ಪಕ್ಷದ ಐಟಿ ವಿಭಾಗ ತೆರೆಯಲಾಗಿತ್ತು. ಈ ಚುನಾವಣೆಗೆ ಎಂಟು ತಿಂಗಳ ಮೊದಲೇ ಪ್ರಚಾರ ಹಾಗೂ ಹೋರಾಟದ ಸ್ವರೂಪ ಸಿದ್ಧಪಡಿಸಿದ್ದೇವೆ. ವಿಧಾನಸಭಾ ಕ್ಷೇತ್ರಗಳ ಸಾಮಾಜಿಕ ಜಾಲತಾಣ ಗುಂಪುಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ನಮಗೆ 3.50 ಲಕ್ಷ ಫೇಸ್‌ಬುಕ್‌ ಅನುಯಾಯಿಗಳಿದ್ದಾರೆ. 23 ಸಾವಿರ ವ್ಯಾಟ್ಸ್‌ ಆ್ಯಪ್‌ ಗ್ರೂಪ್‌ಗಳಿವೆ. 4,500 ಸ್ವಯಂಸೇವಕರು ಇವುಗಳ ನಿರ್ವಹಣೆ ಮಾಡುತ್ತಿದ್ದಾರೆ’ ಎನ್ನುತ್ತಾರೆ ಅವರು.

‘ಸಾಮಾಜಿಕ ಜಾಲತಾಣದ ಸ್ವಯಂಸೇವಕರಾಗಲು ಕರೆ ನೀಡಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 52,000 ಜನ ಹೆಸರು ನೋಂದಾಯಿಸಿದ್ದರು. ಈ ಕಾರ್ಯಕ್ಕೆ ಸಾಕಷ್ಟು ಯುವಕರು, ಐಟಿ ಕ್ಷೇತ್ರದ ವೃತ್ತಿಪರರು ಮತ್ತು ಗೃಹಿಣಿಯರೂ ಮುಂದಾಗಿದ್ದಾರೆ’ ಎಂದು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಸದಸ್ಯ ನಟರಾಜ್ ಗೌಡ ಹೇಳುತ್ತಾರೆ.


–ಚಿತ್ರ: ಪ್ರಕಾಶ್‌ ಶೆಟ್ಟಿ

ಚುನಾವಣೆಗಾಗಿ ಜೆಡಿಎಸ್‌ ವಾರ್‌ ರೂಮ್‌ ಆರಂಭಿಸಿದೆ. 2,800 ವಾಟ್ಸ್‌ ಆ್ಯಪ್‌ ಗುಂಪುಗಳನ್ನು ತೆರೆಯುವ ಗುರಿ ಹಾಕಿಕೊಂಡಿದೆ. ‘ನಮ್ಮ ಎಚ್‌ಡಿಕೆ’, ‘ಕುಮಾರಸ್ವಾಮಿ ಫ್ಯಾನ್ಸ್‌ ಕ್ಲಬ್‌’, ‘ಸತ್ಯದ ಕಣಜ’ ಹೆಸರಿನಲ್ಲಿ ಫೇಸ್‌ಬುಕ್‌ ಅಕೌಂಟ್‌ಗಳಿವೆ.

ಇಲ್ಲಿ ಸ್ವಯಂಸೇವಕರು ‘ಉಚಿತ’: ನಮ್ಮ ಮನೆಯಲ್ಲಿ ಕಸ ಬಿದ್ದಿದೆ ಎಂದಿಟ್ಟುಕೊಳ್ಳಿ. ಆ ಗಲೀಜನ್ನು ನಾವೇ ಕ್ಲೀನ್‌ ಮಾಡಬೇಕು. ಬೇರೆಯವರು ಬಂದು ಸ್ವಚ್ಛಗೊಳಿಸುತ್ತಾರೆ ಎಂದು ಕಾಯುವುದು ಮೂರ್ಖತನ. ರಾಜಕೀಯ ಕ್ಷೇತ್ರವೂ ನಮ್ಮ ಮನೆ ಇದ್ದಂತೆ. ಈ ವ್ಯವಸ್ಥೆ ಕೊಳಕಾಗಿದೆ. ಅಲ್ಲಿನ ಕೊಳೆ ತೊಳೆಯಬೇಕಿದೆ. ಅದಕ್ಕಾಗಿ ಎಲ್ಲ ಕೆಲಸ ಬದಿಗೊತ್ತಿ ಇಲ್ಲಿಗೆ ಬಂದಿದ್ದೇವೆ. ನಿಧಾನಕ್ಕೆ ಪರಿವರ್ತನೆಯಾಗುವ ವಿಶ್ವಾಸ ಇದೆ ಎನ್ನುತ್ತಾರೆ ಟೆಕಿ ದರ್ಶನ್‌ ಜೈನ್‌.

ದರ್ಶನ್‌ ಅವರು ‘ಸ್ಲೆಂಡರ್‌ ಎಲೆಕ್ಟ್ರಿಕ್ಸ್’ ಎಂಬ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ. 12 ವರ್ಷಗಳಿಂದ ಈ ಕಂಪನಿಯಲ್ಲಿ ದುಡಿಯುತ್ತಿರುವ ಇವರು, ಈಗ ನಾಲ್ಕು ತಿಂಗಳು ರಜೆಯ ಮೇಲಿದ್ದಾರೆ. ರಜೆ ಹಾಕಿರುವುದು ಮನೆಯ ಕೆಲಸಕ್ಕಲ್ಲ, ರಾಜ್ಯ ಚುನಾವಣೆಗಾಗಿ. ಅವರೀಗ ಆಮ್‌ ಆದ್ಮಿ ಪಕ್ಷ ರಾಜ್ಯ ಮಾಧ್ಯಮ ಸಂಯೋಜಕರಾಗಿದ್ದಾರೆ.

ದರ್ಶನ್‌ ಹುಟ್ಟಿ ಬೆಳೆದಿದ್ದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ. ಪದವಿ ವ್ಯಾಸಂಗ ಮುಗಿಸಿದ್ದು ಎಸ್‌ಡಿಎಂ ಕಾಲೇಜಿನಲ್ಲಿ. ‘ನನಗೆ ಮೊದಲು ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಇರಲಿಲ್ಲ. ಇತ್ತೀಚಿನ ರಾಜಕೀಯ ಚಟುವಟಿಕೆಗಳು ರೇಜಿಗೆ ಹುಟ್ಟಿಸಿದ್ದವು. ಐದು ವರ್ಷಗಳ ಹಿಂದೆ ಹುಟ್ಟಿಕೊಂಡ ಎಎಪಿ ಭರವಸೆ ಮೂಡಿಸಿತ್ತು. ಆರಂಭಿಕ ದಿನಗಳಲ್ಲಿ ಆ ಪಕ್ಷದ ಮೌನ ಬೆಂಬಲಿಗ ಆಗಿದ್ದೆ. ದೆಹಲಿಯಲ್ಲಿ ಎಎಪಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ನೋಡಿದ ಬಳಿಕ ನಂಬಿಕೆ ಮೂಡಿತು. ಮೂರು ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯನಾಗಿದ್ದೇನೆ’ ಎಂದು ವಿವರಿಸುತ್ತಾರೆ.

‘ನನ್ನ ಹಾಗೆಯೇ ಹಲವು ಮಂದಿ ಪಕ್ಷಕ್ಕಾಗಿ ಎಲ್ಲ ಕೆಲಸ ಬಿಟ್ಟು ಬಂದಿದ್ದಾರೆ. ಕೆಲವರು ಹಳ್ಳಿ ಹಳ್ಳಿಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಉಳಿದವರು ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಸಕ್ರಿಯರಾಗಿದ್ದಾರೆ. ಬೇರೆ ಪಕ್ಷಗಳ ಜಾಲತಾಣಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಸಕ್ರಿಯವಾಗಿರುತ್ತವೆ. ನಮ್ಮದು ಹಾಗಲ್ಲ. ಅದು 24X7 ಕೆಲಸ ನಿರ್ವಹಿಸುತ್ತಿದೆ. ಕೆಲವರು ಸ್ವಿಟ್ಜರ್ಲೆಂಡ್‌, ಅಮೆರಿಕದಲ್ಲಿ ಇದ್ದುಕೊಂಡು ಕೊಡುಗೆ ಕೊಡುತ್ತಿದ್ದಾರೆ. ವಿದೇಶದಲ್ಲಿದ್ದುಕೊಂಡೇ ಬಿಡುವಿನ ವೇಳೆಯಲ್ಲಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ.

ಸ್ವಿಟ್ಜರ್ಲೆಂಡ್‌ನಿಂದ ಶಾಂತಿನಗರಕ್ಕೆ: ಐಟಿ ಕ್ಷೇತ್ರದ ಉದ್ಯೋಗಿ ಮಮತಾ ಬಸಪ್ಪ ಇರುವುದು ಸ್ವಿಟ್ಜರ್ಲೆಂಡ್‌ನಲ್ಲಿ. ಅರವಿಂದ ಕೇಜ್ರಿವಾಲ್‌ ಅವರ ಧೋರಣೆಯನ್ನು ಮೆಚ್ಚಿಕೊಂಡು ಪಕ್ಷದ ಬೆಂಬಲಿಗರಾದವರು. ಪಕ್ಷ ಸಂಘಟನೆಗೆ ದೊಡ್ಡ ಮೊತ್ತದ ದೇಣಿಗೆ ನೀಡಿದವರು. ಈ ಸಲ 15 ದಿನ ರಜೆ ಹಾಕಿ ಬಂದು, ಎಎಪಿ ಅಭ್ಯರ್ಥಿ ಪರವಾಗಿ ಒಂದು ಸುತ್ತಿನ ಪ್ರಚಾರ ನಡೆಸಿದ್ದಾರೆ.

ಶಾಸಕ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಗೂಂಡಾಗಿರಿ ಜನವರಿಯಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದರ ವಿರುದ್ಧ ಎಎಪಿ ದೊಡ್ಡ ಹೋರಾಟ ಸಂಘಟಿಸಿತ್ತು. ಶಾಂತಿನಗರದ ಅಭ್ಯರ್ಥಿಯನ್ನಾಗಿ ನಿವೃತ್ತ ಐಎಎಸ್‌ ಅಧಿಕಾರಿ ರೇಣುಕಾ ವಿಶ್ವನಾಥನ್‌ ಅವರ ಹೆಸರನ್ನು ಘೋಷಿಸಿತ್ತು. ರೇಣುಕಾ ಪರವಾಗಿ ಮಮತಾ ಅವರು ಸೈಕಲ್‌ ರ‍್ಯಾಲಿ ಮೂಲಕ ಮನೆ ಮನೆ ಪ್ರಚಾರ ನಡೆಸಿದ್ದಾರೆ.

‘ರಾಜ್ಯದ ಸರ್ಕಾರಿ ಶಾಲೆಗಳ ಸ್ಥಿತಿ ದಯನೀಯವಾಗಿದೆ. ಅವುಗಳ ಸುಧಾರಣೆಯಾದರೆ ಮಾತ್ರ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ದೆಹಲಿಯ ಎಎಪಿ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಶೇ 21ರಷ್ಟು ಅನುದಾನ ಮೀಸಲಿಟ್ಟಿದೆ. ಇದರಿಂದಾಗಿ ಶಾಲೆಗಳು ಹೊಸ ರೂಪ ಪಡೆಯಲಾರಂಭಿಸಿವೆ.

ನಮ್ಮ ರಾಜ್ಯದಲ್ಲೂ ಅಂತಹ ಬದಲಾವಣೆ ಆಗಬೇಕು. ನೀತಿ ನಿರೂಪಕರು ಶಾಸನ ಸಭೆಯಲ್ಲಿ ಇದ್ದರೆ ಪರಿವರ್ತನೆ ನಿರೀಕ್ಷಿಸ ಬಹುದು’ ಎಂಬುದು ಮಮತಾ ಅವರ ನುಡಿ.

ಚುನಾವಣಾ ನಿರ್ವಹಣೆಗಾಗಿ ಹುಟ್ಟಿಕೊಂಡ ಸಂಸ್ಥೆಗಳು
ಚುನಾವಣಾ ನಿರ್ವಹಣಾ ಸಂಸ್ಥೆಗಳು ರಾಜಕೀಯ ಪಕ್ಷಗಳ ಚುನಾವಣಾ ಚಟುವಟಿಕೆಗಳ ನಿರ್ವಹಣೆಗಾಗಿ ಯುವ ಟೆಕಿಗಳು ಕೆಲವು ಸಂಸ್ಥೆಗಳನ್ನೂ ಹುಟ್ಟುಹಾಕಿದ್ದಾರೆ. ಕ್ಷೇತ್ರದ ಜನರ ಒಲವು–ನಿಲುವುಗಳ ಅಧ್ಯಯನ ಮತ್ತು ವಿಶ್ಲೇಷಣೆ ಮಾಡಿಕೊಡುವುದು, ದತ್ತಾಂಶ ಸಂಗ್ರಹಿಸಿಕೊಡುವುದು, ಆನ್‌ಲೈನ್‌ ಮತ್ತು ಆನ್‌ಫೀಲ್ಡ್‌ ಪ್ರಚಾರದ ಉಸ್ತುವಾರಿ ನೋಡಿಕೊಳ್ಳುವುದು, ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮಾಡುವುದು, ಮತದಾರರ ವಿಳಾಸದ ಪ್ರಕಾರ ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧಾರಿತ ನಕ್ಷೆಯನ್ನು ರೂಪಿಸುವುದು... ಇಂತಹ ಹಲವು ಸೇವೆಗಳನ್ನು ಈ ಸಂಸ್ಥೆಗಳು ನೀಡುತ್ತವೆ.

ಟೆಕಿಗಳು, ಪತ್ರಕರ್ತರು, ಚುನಾವಣಾ ನಿರ್ವಹಣಾ ತಜ್ಞರು, ಸರ್ವೇ ತಜ್ಞರು, ಸೃಜನಶೀಲ ನಿರ್ದೇಶಕರು, ಕಾರ್ಟೂನಿಸ್ಟ್‌ಗಳು, ಗ್ರಾಮೀಣ ಸಂಪರ್ಕ ನಿಪುಣರು ಈ ತಂಡದಲ್ಲಿರುತ್ತಾರೆ. ಐಐಟಿ, ಐಐಎಂನಲ್ಲಿ ಓದಿದ ಪ್ರತಿಭಾಂತರು ಸಹ ಈ ತಂಡದ ಭಾಗವಾಗಿರುತ್ತಾರೆ. ಇಂಡಿಯನ್‌ ಪೊಲಿಟಿಕಲ್‌ ಆ್ಯಕ್ಷನ್‌ ಕಮಿಟಿ (ಐಪ್ಯಾಕ್‌), ಜನಾಧಾರದಂತಹ ಸಂಸ್ಥೆಗಳು ಚುನಾವಣಾ ನಿರ್ವಹಣೆ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿವೆ. ಪ್ರಶಾಂತ್‌ ಕಿಶೋರ್‌ ಅವರಂತೂ ಚುನಾವಣಾ ತಂತ್ರಗಳ ತಜ್ಞ ಎಂದೇ ಖ್ಯಾತರಾಗಿದ್ದಾರೆ.


–ಪಕ್ಷವೊಂದರ ಐಟಿ ಸೆಲ್‌ನಲ್ಲಿ ಚುನಾವಣಾ ಕೆಲಸ ನಿರ್ವಹಿಸುತ್ತಿರುವ ಟೆಕಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT