ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಉತ್ಸುಕತೆ, ಯಶಸ್ಸಿಗೆ ಮುನ್ನಡಿ

Last Updated 11 ಏಪ್ರಿಲ್ 2018, 20:03 IST
ಅಕ್ಷರ ಗಾತ್ರ

ಗ್ರಾಮೀಣ ಶಾಲೆಗಳಲ್ಲಿ ಸಮತೆ ಮತ್ತು ಗುಣಾತ್ಮಕತೆ ಎಂಬುದು ಅಮೂರ್ತ ಆಶಯ. ಹೀಗಿದ್ದೂ ಈ ಆಶಯಗಳನ್ನು ಬಹಳಷ್ಟು ಶಾಲೆಗಳಲ್ಲಿ ಸಾಧಿಸಲಾಗಿದೆ ಎಂಬುದು ನನ್ನ ಪ್ರತ್ಯಕ್ಷ ಅನುಭವ. ಈ ಕುರಿತಂತೆ ನಾನು ನೀಡಬಲ್ಲ ಹಲವು ಉದಾಹರಣೆಗಳಲ್ಲಿ ಬಳ್ಳಾರಿ ಜಿಲ್ಲೆಯ ಅಳ್ಳೂರು ವಡ್ಡರಹಟ್ಟಿಯ ಪ್ರಾಥಮಿಕ ಶಾಲೆಯೂ ಒಂದು. ಅಳ್ಳೂರಿನ ಜನರು ಪರಿಶಿಷ್ಟ ಜಾತಿಗೆ ಸೇರಿದವರು, ಕೃಷಿ ಕೂಲಿಕಾರರು ಮತ್ತು ಬಹುಸಂಖ್ಯೆಯ ವಯಸ್ಕರು ಅನಕ್ಷರಸ್ಥರು.

ಅಲ್ಲಿ ಲಿಂಗಪ್ಪ ಎಂಬ ಮುಖ್ಯಶಿಕ್ಷಕರು ತಮ್ಮ ಸಹೋದ್ಯೋಗಿಗಳನ್ನು ಸೇರಿಸಿಕೊಂಡು ಸಮತೆ ಮತ್ತು ಗುಣಾತ್ಮಕತೆಯ ಅಳತೆಗೋಲನ್ನೇ ಮಾಪನವಾಗಿಟ್ಟುಕೊಂಡು ಮಾಡಿರುವ ಸಾಧನೆ ದೊಡ್ಡದು. ಇಲ್ಲಿ ಶಿಕ್ಷಕ ತಂಡದವರ ಗುರಿ ಏನೆಂದರೆ, ಎಲ್ಲಾ ಮಕ್ಕಳೂ ಪ್ರತಿವರ್ಷ ತಪ್ಪದೆ 5ನೇ ತರಗತಿಯಲ್ಲಿ ಪಾಸಾಗಬೇಕು, ನವೋದಯ ವಸತಿ ಶಾಲೆ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು ಮತ್ತು ತಡೆಯಿಲ್ಲದಂತೆ 12ನೇ ತರಗತಿಯನ್ನೂ ಪೂರ್ಣಗೊಳಿಸುವಂತೆ ಗಮನ ನೀಡಬೇಕು. ಇಷ್ಟೇ ಆದರೆ ಸೀಮಿತ ಅನಿಸಬಹುದು. ಆದರೆ ಅನನುಕೂಲತೆಗಳನ್ನೇ ಪಡೆದು ಬಂದ ಕುಟುಂಬದ ಹಿನ್ನೆಲೆಯುಳ್ಳ ಮಕ್ಕಳಿಗೆ ಇಂತಹ ಶಾಲೆಗಳಿಗೆ ಪ್ರವೇಶವೆಂಬುದು ಒಂದು ದೊಡ್ಡ ಲಂಘನ ಎಂಬುದು ನಮಗೆ ತಿಳಿದಿರಬೇಕು.
2017ರಲ್ಲಿ ಕಾರ್ಯನಿಮಿತ್ತ ನಾನು ದೇಶದಲ್ಲೇ ಅತ್ಯಂತ ಪ್ರತಿಕೂಲ ಪರಿಸ್ಥಿತಿಯಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಹಲವಾರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದೆ. ಸಮತೆ ಮತ್ತು ಒಳಗೊಳ್ಳುವಿಕೆಯ ಮೌಲ್ಯ ಇಲ್ಲಿ ಮಕ್ಕಳ ಮಂತ್ರಿಮಂಡಲದ ಸ್ಥಾಪನೆಯಲ್ಲಿ ಎದ್ದು ಕಾಣಿಸುತ್ತಿತ್ತು. ಹಾಗೆಯೇ ಮುಂಜಾನೆ ಅವಧಿಯ ಶಾಲಾ ಸಮಾವೇಶದ ನಿರ್ವಹಣೆ, ಆಟೋಟ, ಸಂಗೀತಾದಿ ಕಲೆ ಮತ್ತು ತರಗತಿಯಲ್ಲಿ ಪ್ರತೀ ಮಗುವನ್ನು ತೊಡಗಿಸಿಕೊಳ್ಳುವುದರಲ್ಲಿಯೂ ಇದು ದೊಡ್ಡದಾಗಿ ಕಾಣಿಸುತ್ತಿತ್ತು. ಕಲಿಕೆಗೆ ಪ್ರತಿರೋಧ ಒಡ್ಡುವವರ ಮನವೊಲಿಕೆ ಮತ್ತು  ಜಾಣರಿಗೆ ಇನ್ನಷ್ಟು ಪ್ರಯತ್ನಿಸುವಂತೆ ಹೊಸ ಸವಾಲುಗಳನ್ನು ನೀಡುವುದರಲ್ಲಿಯೂ ಇದು ವ್ಯಕ್ತವಾಗುತ್ತಿತ್ತು.
ಇದಕ್ಕಿಂತಲೂ ಪ್ರಬಲ ಸಾಕ್ಷಿಗಳನ್ನು ಇತ್ತೀಚೆಗೆ ನಾನು ಭೇಟಿ ನೀಡಿದ ಸುಮಾರು ಮೂವತ್ತು ಶಾಲೆಗಳಿಂದ ಕೊಡಬಲ್ಲೆ. ವಿಶೇಷವೆಂದರೆ ಇಲ್ಲಿಯ ಶಿಕ್ಷಕರು ಸಮುದಾಯದ ಮತ್ತು ಅವರೊಂದಿಗೆ ಕೆಲಸ ಮಾಡುವವರ ಪ್ರೀತಿ– ಆದರಗಳಿಗೆ ಒಳಗಾದವರು. ಇವರೆಲ್ಲ ತಮ್ಮ ಶಾಲೆಯ ಮಕ್ಕಳು ಪ್ರತಿಷ್ಠಿತ ನವೋದಯ, ಮೊರಾರ್ಜಿ ಮತ್ತು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆಗೆ ಕೂರುವುದಕ್ಕೆ ಶ್ರಮವಹಿಸಿ ತಯಾರಿ ಮಾಡುವವರು. ಆದರೆ ಒಂದು ತಾಲ್ಲೂಕಿನೊಳಗೆ ವರ್ಷಕ್ಕೆ ಸುಮಾರು 200 ಮಕ್ಕಳಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ. ಹಾಗಿರುವಾಗ ತೇರ್ಗಡೆಯಾಗುವವರ ಸಂಖ್ಯೆ ಸ್ವಲ್ಪ ಮಾತ್ರ. ಆದರೆ ಅವರು ಪ್ರವೇಶ ಗಿಟ್ಟಿಸಿದರೇ ಎಂಬುದು ಬೇರೆ ವಿಚಾರ. ಆದರೆ ತಾವು ಪಡೆದ ತರಬೇತಿಯೇ ಕಾರಣವಾಗಿ ಅಂತಹ ಮಕ್ಕಳು ಮುಂದಿನ ತರಗತಿಗಳಲ್ಲಿ ಶಿಕ್ಷಣಾಭಿಮುಖಿಗಳಾಗುವ ಅತ್ಯುತ್ತಮ ಅವಕಾಶವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಶಿಕ್ಷಕರಿಗೆ ತಮ್ಮ ಶ್ರಮ, ಸಂಜೆಯ ಮತ್ತು ಭಾನುವಾರಗಳ ಹೆಚ್ಚುವರಿ ಪಾಠದ ಅವಧಿಗಳು, ಮಕ್ಕಳು ಕೈಗೊಳ್ಳುವ ಅಭ್ಯಾಸ ಮತ್ತು ಮನನಗಳು, ತಾವು ಕೈಯಿಂದ ಮಾಡುವ ಖರ್ಚುಗಳು ಸಾರ್ಥಕ ಅನಿಸುತ್ತಿವೆ.
ಮಕ್ಕಳು ಹಿಂದಿಗಿಂತ ಈಗ ಚೆನ್ನಾಗಿ ಕಲಿಯುತ್ತಿದ್ದಾರೆ ಎಂಬುದಕ್ಕೆ ಇನ್ನೂ ಒಂದು ಸಾಕ್ಷಿ ಏನೆಂದರೆ ಮೇಲೆ ಹೇಳಿದ ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶ ಪಡೆಯುವ ಶಾಲೆಗಳ ಪಟ್ಟಿ ದೊಡ್ಡದಾಗತೊಡಗಿದೆ! ಗುಗ್ಗಲಹಟ್ಟಿ, ಗೆದ್ದಲಮರಿ, ಜುಮಾಲ್‌ಪುರ ದೊಡ್ಡತಾಂಡಾ, ಏವೂರ್‌ ತಾಂಡಾ, ಹೂವಿನಹಳ್ಳಿ, ಪೀರನಾಯಕನ ತಾಂಡಾ, ಹುಣಸಗಿ ಕ್ಯಾಂಪ್, ಮುದನೂರು, ಕರಡಕಲ್‌ ಕ್ಯಾಂಪ್, ಕೂಡಲಗಿ, ಯಾಳಗಿ... ಇನ್ನೂ ತುಂಬಾ ಇವೆ.

ಗುಗ್ಗಲಹಟ್ಟಿ, ಸುಮಾರು 800 ಜನಸಂಖ್ಯೆಯ ಪರಿಶಿಷ್ಟ  ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪುಟ್ಟ ಹಳ್ಳಿ. ಇಲ್ಲಿಯ ಶಾಲೆಯ ನೋಟ ಅನಾಕರ್ಷಕವಾಗಿದೆ. ಆದರೆ ಕುತೂಹಲಿಗಳೂ ಉತ್ಸಾಹಿಗಳೂ ಆದ ಮಕ್ಕಳು ತಕ್ಷಣ ಕಣ್ಣಿಗೆ ಕಾಣುತ್ತಾರೆ. ಬಸಪ್ಪ ಮತ್ತುಗಿರಿಯಪ್ಪ ಎಂಬ ಮಾಸ್ತರರ ಪರಿಶ್ರಮ ಚಿಕ್ಕದಾಗಿ ಹೇಳಿ ಮುಗಿಯದು. ಇಲ್ಲಿಯ ಮಕ್ಕಳೂ ಪ್ರತಿಷ್ಠಿತ ಶಾಲೆಗೆ ದಾಖಲಾಗುತ್ತಿರುವವರೇ. ಆದರೆ ಶಿಕ್ಷಕರ ಗುರಿ ಇದನ್ನೂ ಮೀರಿ ನಿಂತಿದೆ. ಇಬ್ಬರು ಶಿಕ್ಷಕರೂ ಒಂದೇ ಧ್ವನಿಯಲ್ಲಿ ಹೇಳುತ್ತಾರೆ: ‘ನಮ್ಮ ಕಲಿಸುವಿಕೆಯ ಗುಣಾತ್ಮಕತೆಯ ನಿರ್ಣಾಯಕ ಮಾನದಂಡವೆಂಬುದು ನಾವು ಈ ಮಕ್ಕಳನ್ನು 12ನೇ ತರಗತಿವರೆಗಿನ ಮತ್ತು ಮುಂದಿನ ವಿದ್ಯಾಭ್ಯಾಸಕ್ಕೆ ಎಷ್ಟು ಚೆನ್ನಾಗಿ ತಯಾರಿಗೊಳಿಸಿದ್ದೇವೆ ಎಂಬುದು ಅಂತ...’ ಇದು ಬಲು ದೊಡ್ಡ ಮಾತು.
ಕರಡ್‌ಕಲ್‌ ಕ್ಯಾಂಪ್‌ ಎಂಬುದು ಅಧಿಕಾರಿಗಳೂ ಭೇಟಿ ಕೊಡಲಾಗದ ಮೂಲೆಮುಡುಕಿನ ಹಳ್ಳಿ. ಇಲ್ಲಿಯ ಮಾಸ್ತರರು ಶ್ರೀಶೈಲ. 2004ರಿಂದ ಇಲ್ಲೇ ಇದ್ದಾರೆ. ಕಗ್ಗಾಡು ಒದಗಿಸುವ ಸ್ವಾತಂತ್ರ್ಯವನ್ನೇ ತಮಗೆ ಬೇಕಾದಂತೆ ಬಳಸಿಕೊಂಡವರು. ’ಮಕ್ಕಳು ಖಾಲಿ ತಲೆಯವರಲ್ಲ. ಅದರೊಳಗೆ ಮಾಹಿತಿ ತುರುಕುವುದು ನನ್ನ ಕೆಲಸವಲ್ಲ. ನಾನು ಸ್ವಕಲಿಕೆಯ ಅಭ್ಯಾಸದ ಹಾಳೆಗಳನ್ನು ಬಳಸುತ್ತೇನೆ, ಪರಿಕಲ್ಪನೆಗಳನ್ನು ಚರ್ಚಿಸುತ್ತೇನೆ, ಮಕ್ಕಳು ತಮ್ಮ ಅರ್ಥವನ್ನು ತಾವೇ ಕಟ್ಟಿಕೊಳ್ಳುವಂತೆ ಮಾಡುತ್ತೇನೆ. ಅವರು ತಮ್ಮ ವಿಚಾರಗಳನ್ನು ವಿಸ್ತರಿಸಿ ಹೇಳುತ್ತಾರೆ, ಮಕ್ಕಳು ಭಯರಹಿತರಾಗಿ ಕಲಿಯುವುದೆಂದರೆ ಸಂತೋಷದಾಯಕ ಕಲಿಕೆ ಎಂದಷ್ಟೇ ಅಲ್ಲ. ಅದು ಮಕ್ಕಳಿಗೆ ತಮ್ಮ ಸವಾಲುಗಳನ್ನು ತಾವೇ  ಬಗೆಹರಿಸಿಕೊಳ್ಳುವಂತೆ ನೀಡುವ ಸ್ಥಳ ಮತ್ತು ಕಾಲದ ಅವಕಾಶ. ಅದರಲ್ಲಿ ಪ್ರಶ್ನೆಗಳನ್ನು ಕೇಳುವ ಸ್ವಾತಂತ್ರ್ಯವೂ ಸೇರಿದೆ. ನನ್ನ ಮಕ್ಕಳು ಚೆನ್ನಾಗಿ ಕಲಿಯುವುದರ ಹಿಂದೆ ಈ ಕಾರಣಗಳೆಲ್ಲ ಇವೆ’.
ಬಸವರಾಜ್ ದಳವಾಯಿ ಎಂಬ ಪಿ.ಎನ್. ತಾಂಡಾ ಶಾಲೆಯ ಯುವ ಸ್ವಪ್ರೇರಿತ ಶಿಕ್ಷಕರ ಬಗ್ಗೆ ಇಲ್ಲಿ ಹೇಳಲೇಬೇಕು. ಅವರು ಹತ್ತು ವರ್ಷಗಳ ಹಿಂದೆ ಈ ಬುಡಕಟ್ಟು ಹಾಡಿಗೆ ಬಂದರು. ಅಂದು 100 ಮಕ್ಕಳ ಪೈಕಿ ಇಬ್ಬರು ಮಾತ್ರ ಶಾಲೆಗೆ ಬರುತ್ತಿದ್ದರು. ಇಂದು ಒಬ್ಬ ವಿದ್ಯಾರ್ಥಿಯೂ ಗೈರುಹಾಜರಿ ಇಲ್ಲ! ಬಸವರಾಜ್ ಕಳೆದ ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಸಿ.ಎಲ್. ಕೂಡ ಪಡೆದಿಲ್ಲ! ರಾಜ್ಯ ಶಿಕ್ಷಣ ಇಲಾಖೆ ನಡೆಸುವ ಕೆಎಸ್‌ಕ್ಯುಎಒದ ಕಲಿಕಾ ನಿರ್ಧರಣೆಯ ಪರೀಕ್ಷೆಯಲ್ಲಿ ಪಿ.ಎನ್‌. ತಾಂಡಾ ಶಾಲೆ ಸುರಪುರ ತಾಲ್ಲೂಕಿನಲ್ಲೇ ಅಗ್ರಗಣ್ಯ ಸ್ಥಾನ ಪಡೆದಿದೆ.
ಈ ಚಿತ್ರಣಗಳು ಹೇಗೆ ಕೆಲವು ಶಿಕ್ಷಕರು ಸಮತೆ ಮತ್ತು ಗುಣಮಟ್ಟವನ್ನು ತಮ್ಮ ತರಗತಿಗಳಲ್ಲಿ ಸಾಧಿಸುತ್ತಿದ್ದಾರೆ ಎಂಬುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅವು ವ್ಯವಸ್ಥೆಯೊಳಗಿನ ಬದಲಾವಣೆಗಳ ಕುರಿತೂ ಸೂಚನೆ ನೀಡುತ್ತಿವೆ. ಇವು ಮೇಲೆ ಮೇಲೆ ನಡೆಯುವ ಮತ್ತು ಮೇಲಿಂದ ನಿರ್ದೇಶಿತವಾದ ದೊಡ್ಡಮಟ್ಟದ ಬದಲಾವಣೆಗಳಲ್ಲ. ಬದಲಿಗೆ ವ್ಯವಸ್ಥೆಯೊಳಗಿನ ಬದಲಾವಣೆಗೆ ಮುನ್ನುಡಿ ಬರೆಯುವ ತಳಮಟ್ಟದ ನಿಸ್ವಾರ್ಥ ಪ್ರಯತ್ನಗಳು.

-ಎಸ್. ಗಿರಿಧರ್

ಲೇಖಕ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಚೀಫ್ ಆಪರೇಟಿಂಗ್ ಆಫೀಸರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT