ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ರಾಜಕೀಯ

Last Updated 11 ಏಪ್ರಿಲ್ 2018, 20:12 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ನೇಮಕವಾಗುವ ತಜ್ಞರ ಸಮಿತಿ– ಆಯೋಗಗಳು ವರದಿ ನೀಡಲು ಒಂದೂವರೆ ವರ್ಷ ಸಮಯ ತೆಗೆದುಕೊಂಡಿರುವ ನಿದರ್ಶನಗಳಿವೆ. ನ್ಯಾಯಮೂರ್ತಿ ಸದಾಶಿವ ಆಯೋಗವು ವರದಿ ನೀಡಲು 6 ವರ್ಷಗಳಿಗೂ ಹೆಚ್ಚು ಸಮಯ ತೆಗೆದುಕೊಂಡಿತು. ಆದರೆ ಸುಮಾರು 900 ವರ್ಷಗಳ ದೀರ್ಘ ಇತಿಹಾಸವಿರುವ, ಹಲವಾರು ವಿವಾದಗಳಿಂದ ಕೂಡಿದ ಲಿಂಗಾಯತ– ವೀರಶೈವ ಪ್ರತ್ಯೇಕ ಧರ್ಮದ ಬಗ್ಗೆ ವರದಿ ನೀಡಲು ಸರ್ಕಾರ ‘ತಜ್ಞರ (?) ಸಮಿತಿ’ಗೆ ಕೇವಲ ಒಂದೆರಡು ತಿಂಗಳ ಸಮಯ ನೀಡುವಂಥ ಅನಿವಾರ್ಯ ಏನಿತ್ತು?

ಇದಕ್ಕಿಂತ ವಿಚಿತ್ರ ಎಂದರೆ ಸಮಿತಿಯ ತಜ್ಞರು ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ಕೇವಲ ಎರಡು ತಿಂಗಳಲ್ಲಿ ನೀಡಿರುವ ವರದಿ ಎಂತಹುದು ಇದ್ದಿರಬಹುದು ಎಂಬುದನ್ನು ಸಾಮಾನ್ಯರೂ ಊಹಿಸಬಹುದಲ್ಲವೇ? ರಾಜ್ಯ ಸರ್ಕಾರವೇ ನೇಮಿಸಿದ್ದ ಹಲವಾರು ಆಯೋಗಗಳ ವರದಿಗಳು ರಾಜ್ಯ ಸರ್ಕಾರಕ್ಕೆ ತಲುಪಿ ಬಹಳಷ್ಟು ಸಮಯವಾದರೂ ಅವುಗಳೆಲ್ಲ ನನೆಗುದಿಗೆ ಬಿದ್ದಿವೆ. ಧರ್ಮ ವಿಚಾರದ ಸೂಕ್ಷ್ಮತೆ ಇರುವ ಈ ವರದಿಯನ್ನು ಸಮಯ ತೆಗೆದುಕೊಂಡು ಪರಿಶೀಲಿಸುವ ಗೋಜಿಗೇ ಹೋಗದೆ ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಿದ್ದರ ಹಿಂದೆ ರಾಜಕೀಯ ಲಾಭದ ಉದ್ದೇಶ ಇಲ್ಲವೇ?

ಸಮಿತಿಯಲ್ಲಿದ್ದ ಕೆಲವು ಸದಸ್ಯರು ಹಿಂದೂ ಮತ್ತು ವೀರಶೈವ ವಿರೋಧಿಗಳು. ಅವರು ನೀಡುವ ವರದಿ ಯಾರ ಪರವಾಗಿರುತ್ತದೆ ಎಂಬುದನ್ನು ಬಹುತೇಕರು ಮೊದಲೇ ಊಹಿಸಿದ್ದರು. ಈ ಬಗ್ಗೆ ಅನೇಕ ಮಠಾಧೀಶರು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ಜನಸಾಮಾನ್ಯರು ಹೇಳಿದ್ದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈಗ ಮಾತೆ ಮಹಾದೇವಿಯವರು ‘ಎಲ್ಲಾ ಲಿಂಗಾಯತರು ಕಾಂಗ್ರೆಸ್‌ಗೆ ಮತ ಹಾಕಿ’ ಎಂದು ಕರೆ ಕೊಟ್ಟಿದ್ದಾರೆ. ಈ ಸಮಿತಿಯ ವರದಿ ಹಾಗೂ ಪ್ರತ್ಯೇಕ ಧರ್ಮದ ನಿರ್ಧಾರ ನೇರವಾಗಿ ರಾಜಕೀಯ ಲಾಭ ಮತ್ತು ಹಿಂದೂಗಳನ್ನು ಒಡೆದಾಳುವ ಸ್ಪಷ್ಟ ಉದ್ದೇಶ ಹೊಂದಿದೆ ಎಂಬ ಅಭಿಪ್ರಾಯಗಳಿಗೆ ಉತ್ತರ ನೀಡಬೇಕಾದವರು ಯಾರು?

-ಡಾ. ಆರ್. ವಿಜಯಸಾರಥಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT