ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ’ ಅನುಮೋದನೆ; ಹೋರಾಟಕ್ಕೆ ಸಂದ ಜಯ: ಕೆ.ಎಲ್‌.ಅಶೋಕ್‌

ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ವಿವಾದ
Last Updated 12 ಏಪ್ರಿಲ್ 2018, 6:57 IST
ಅಕ್ಷರ ಗಾತ್ರ

ಚಿಕ್ಕಮಗಳೂರು:‘ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ನೇತೃತ್ವದ ಸಮಿತಿಯು ನೀಡಿದ್ದ ವರದಿ ಒಪ್ಪಿಕೊಂಡು ರಾಜ್ಯ ಸರ್ಕಾರವು ಸಲ್ಲಿಸಿದ್ದ ಅಫಿಡವಿಟ್‌ ಅನ್ನು ಸುಪ್ರೀಂಕೋರ್ಟ್‌ ಅನುಮೋದಿಸಿದೆ. ಕೋಮುಸೌಹಾರ್ದ ವೇದಿಕೆಯ ಸುದೀರ್ಘ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ’ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ಅಶೋಕ್‌ ಇಲ್ಲಿ ಬುಧವಾರ ಹೇಳಿದರು.

‘ಈ ವಿಚಾರದಲ್ಲಿ ಬೀದಿಗಿಳಿದು ಹೋರಾಟ ಮಾಡಿದ್ದ ಗೌರಿಲಂಕೇಶ್‌ ಅವರಿಗೆ ಈ ಜಯವನ್ನು ಅರ್ಪಣೆ ಮಾಡುತ್ತೇವೆ. ಗೌರಿ ಅವರು ಬಹಳ ಶ್ರಮಿಸಿದ್ದರು. ಅವರ ಆಶಯಗಳ ಈಡೇರಿಕೆ ನಿಟ್ಟಿನಲ್ಲಿ ಚಳವಳಿಗಾರರು ಒಗ್ಗೂಡಿ ‘ನಾನು ಗೌರಿ’ ಪತ್ರಿಕೆಯನ್ನು ಹೊರತಂದಿದ್ದೇವೆ. ಬಲಪಂಥೀಯ ಶಕ್ತಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತ ಪಿತೂರಿ ಮಾಡಿ ಪತ್ರಿಕೆಗೆ ಆರ್‌ಎನ್‌ಐ ತಪ್ಪಿಸಿವೆ. ಪತ್ರಿಕೆಯನ್ನು ಖಾಸಗಿಯಾಗಿ ಪ್ರಕಟಿಸುತ್ತಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್‌ ಅನ್ನು ಸುಪ್ರೀಂಕೋರ್ಟ್‌ ಅನುಮೋದಿಸಿ ಇತ್ಯರ್ಥಗೊಳಿಸಿದೆ. ನ್ಯಾಯಮೂರ್ತಿ ನಾಗಮೋಹನ್‌ ದಾಸ್‌, ರೆಹಮತ್‌ ತರೀಕೆರೆ, ಷ.ಶೆಟ್ಟರ್‌ ನೇತೃತ್ವದ ಸಮಿತಿಯ ಸುಮಾರು 8 ತಿಂಗಳು ಅಧ್ಯಯನ ನಡೆಸಿ ವರದಿ ನೀಡಿದೆ. ಸಮಿತಿಗೆ ಬಹಳಷ್ಟು ದಾಖಲೆಗಳನ್ನು ಸಲ್ಲಿಸಿ
ದ್ದೆವು. ಪ್ರತಿವಾದಿಗಳು ವಿವರಣೆ, ದಾಖಲೆಗಳನ್ನು ನೀಡಿದ್ದರು. ಬಾಬಾಬುಡನ್‌ಗಿರಿಯಲ್ಲಿ ಜರುಗುತ್ತಿದ್ದ ಚಾರಿತ್ರಿಕ ಆಚರಣೆಗಳು ಮುಂದುವರಿಯಬೇಕು ಎಂಬುದನ್ನು ಸುಪ್ರೀಂಕೋರ್ಟ್‌ ಅನುಮೋದಿಸಿದೆ’ ಎಂದರು.

‘ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾವನ್ನು ದತ್ತಪೀಠ ಎಂದಷ್ಟೇ ಕರೆಯಬಾರದು. ಅದನ್ನು ದತ್ತಪೀಠ ಮಾಡಲು ಶಾಸಕ ಸಿ.ಟಿ.ರವಿ ಮತ್ತು ತಂಡ ಹವಣಿಸುತ್ತಿದೆ. ದರ್ಗಾ ವಿಚಾರದಲ್ಲಿ ಸಿ.ಟಿ.ರವಿ ಅವರ ಸುಳ್ಳುಗಳಿಗೆ ಸೋಲಾಗಿದೆ. ಆ ಮೂಲಕ ಅವರಿಗೆ ಅವಮಾನವಾಗಿದೆ. ಸಿ.ಟಿ.ರವಿ, ಸುನೀಲ್‌ಕುಮಾರ್‌ ಅವರು ಈ ವಿಷಯವನ್ನು ಭಾವಾನಾತ್ಮಕವಾಗಿ ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದರು. ಈಗ ಮತ್ತೆ ಚುನಾವಣೆಯಲ್ಲಿ ಬಳಸಲಿಕ್ಕೆ ಮುಂದಾಗಿದ್ದಾರೆ’ ಎಂದರು.

‘ಯಾವುದೇ ಜಾತಿ, ಮತ, ಪಂಥ, ಧರ್ಮ ಭೇದವಿಲ್ಲದೆ ಎಲ್ಲರೂ ವರ್ಷದ 365 ದಿನವೂ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ
ಕ್ಕೆ ಹೋಗಬಹುದು. ಶಾಖಾದ್ರಿಯು ದರ್ಗಾದ ಧಾರ್ಮಿಕ ಮುಖಂಡರಾಗಿದ್ದಾರೆ. ಮುಜಾವಾರ್‌ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಿದ್ದಾರೆ. ದರ್ಗಾದಲ್ಲಿನ ಗೋರಿಗಳನ್ನು ತೆರವುಗೊಳಿಸಬೇಕು, ಆಗಮಿಕ ಪೂಜಾ ಪದ್ಧತಿ ಇರಬೇಕು, ಹಿಂದೂ ಅರ್ಚಕರ ನೇಮಕ ಆಗಬೇಕು ಎಂಬುದು ಪ್ರತಿವಾದಿಗಳ ಬೇಡಿಕೆಯಾಗಿತ್ತು. ಇದಕ್ಕೆ ತೀವ್ರ ಹಿನ್ನಡೆಯಾಗಿದೆ’ ಎಂದು ಹೇಳಿದರು.

‘ಸಂಘ ಪರಿವಾರದವರು ದಾಖಲೆಗಳಿಲ್ಲದೆ ಪುರಾಣವನ್ನೇ ಚರಿತ್ರೆ ಎಂದು ಭಾವಿಸಿ ಕತೆ ಕಟ್ಟಿ, ಭಾವನಾತ್ಮಕವಾಗಿ ಕೆರಳಿಸುವುದನ್ನು ಬಿಡಬೇಕು. ಬಾಬಾಬುಡನ್‌ಗಿರಿ ಬಗ್ಗೆ ಜನರಿಗೆ ಶ್ರದ್ಧೆ ಇದೆ. ಆದರೆ, ಸಂಘ ಪರಿವಾರದ ಮುಖಂಡರಿಗೆ ಇಲ್ಲ. ವರದಿಯನ್ನು ಸುಪ್ರೀಂ ಕೋರ್ಟ್‌ ಅನುಮೋದಿಸಿರುವುದು ಸಂಘ ಪರಿವಾರದವರಿಗೆ ಒಂದು ಪಾಠ’ ಎಂದರು.

ವೇದಿಕೆ ರಾಜ್ಯ ಕಾರ್ಯದರ್ಶಿ ಗೌಸ್‌ ಮೊಹಿಯುದ್ದೀನ್‌ ಮಾತನಾಡಿ, ‘ಪ್ರವಾಸೋದ್ಯಮ ಇಲಾಖೆಯಿಂದ ವಿವಿಧೆಡೆ ಅಳವಡಿಸಿರುವ ನಾಮಫಲಕಗಳಲ್ಲಿ ದತ್ತ ಪೀಠ ಎಂದು ಬರೆಯಲಾಗಿದೆ. ಅದನ್ನು ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ಎಂದು ಬರೆಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ’ ಎಂದು ಹೇಳಿದರು.

ವೇದಿಕೆಯ ಜಿಲ್ಲಾಧ್ಯಕ್ಷ ಹಸನಬ್ಬ, ಸಂಘಟನಾ ಕಾರ್ಯದರ್ಶಿ ಗೌಸ್‌ ಮುನೀರ್‌, ರಾಜ್ಯ ಕಾರ್ಯದರ್ಶಿ ಪುಟ್ಟಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT