ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಕೋನ ಸ್ಪರ್ಧೆ; ಜೆಡಿಎಸ್‌ಗೆ ಬಿಎಸ್‌ಪಿ ಸಾಥ್‌

ಮೂಡಿಗೆರೆ ವಿಧಾನಸಭಾ ಕ್ಷೇತ್ರ: ಕಗ್ಗಂಟಾದ ಅಭ್ಯರ್ಥಿಗಳ ಆಯ್ಕೆ
Last Updated 12 ಏಪ್ರಿಲ್ 2018, 7:04 IST
ಅಕ್ಷರ ಗಾತ್ರ

ಮೂಡಿಗೆರೆ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂಡಿಗೆರೆ ಮೀಸಲು ಕ್ಷೇತ್ರವಾಗಿದೆ. ಜೆಡಿಎಸ್‌ ಹಾಲಿ ಶಾಸಕ ಬಿ.ಬಿ.ನಿಂಗಯ್ಯ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆಯಾಗಬೇಕಿದೆ. ಕ್ಷೇತ್ರದಲ್ಲಿ ಈ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಇದೆ.

ವಿಧಾನಸಭಾ ಕ್ಷೇತ್ರವು ಒಂಬತ್ತು ಹೋಬಳಿ ಒಳಗೊಂಡ ಕ್ಷೇತ್ರ. ಮೂಡಿಗೆರೆ ತಾಲ್ಲೂಕಿನ ಕಸಬಾ, ಗೋಣಿಬೀಡು, ಬಣಕಲ್‌, ಬಾಳೂರು, ಕಳಸ ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ, ಮಲ್ಲಂದೂರು, ಆವತಿ, ಆಲ್ದೂರು ಹೋಬಳಿಗಳು ಈ ಕ್ಷೇತ್ರ ವ್ಯಾಪ್ತಿಯಲ್ಲಿವೆ. 230 ಮತಗಟ್ಟೆಗಳು ಇವೆ. ಡಿ.ಬಿ.ಚಂದ್ರೇಗೌಡ, ಡಿ.ಕೆ.ತಾರಾದೇವಿಸಿದ್ಧಾರ್ಥ, ಮೋಟಮ್ಮ ಅವರಂಥ ಘಟಾನುಘಟಿಗಳ ತವರು ಇದು.

ಕ್ಷೇತ್ರದಲ್ಲಿ ಒಟ್ಟು 1,66,888 ಮತದಾರರು ಇದ್ದಾರೆ. ಈ ಪೈಕಿ 82,615 ಪುರುಷ, 84,262 ಮಹಿಳೆ ಹಾಗೂ 11 ಇತರ ಮತದಾರರು ಇದ್ದಾರೆ. ದಲಿತರು, ಒಕ್ಕಲಿಗರು, ಬಿಲ್ಲವರು, ಮುಸ್ಲಿಮರು, ವಿಶ್ವಕರ್ಮರು, ಲಿಂಗಾಯತರು, ಕ್ರಿಶ್ಚಿಯನ್ನರು, ಇತರ ಸಮುದಾಯದವರು ಇದ್ದಾರೆ.

ಜೆಡಿಎಸ್‌ನ ಬಿ.ಬಿ.ನಿಂಗಯ್ಯ ಹಾಲಿ ಶಾಸಕರಾಗಿದ್ದು, ಅವರನ್ನೇ ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದೆ. ನಿಂಗಯ್ಯ ಅವರು ತಯಾರಿಯಲ್ಲಿ ತೊಡಗಿದ್ದಾರೆ.

ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಅವರು ಕಾಂಗ್ರೆಸ್‌ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹೂವಪ್ಪ, ನಾಗರತ್ನ, ನಯನಾಜ್ಯೋತಿ ಜಾವರ್‌ (ಮೋಟಮ್ಮ ಪುತ್ರಿ) ಕೂಡ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಮೋಟಮ್ಮ ಅವರಿಗೆ ಟಿಕೆಟ್‌ ನೀಡದಿದ್ದರೆ ತಮ್ಮನ್ನು ಪರಿಗಣಿಸಲಿ ಎಂಬ ಕಾರಣಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ ಎಂಬುದು ಬಹುತೇಕ ಆಕಾಂಕ್ಷಿಗಳ ಅಭಿಪ್ರಾಯವಾಗಿದೆ.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಬಿಜೆಪಿ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ದೀಪಕ್‌ದೊಡ್ಡಯ್ಯ, ಶೃಂಗೇರಿ ಶಿವಣ್ಣ, ಬಣಕಲ್‌ ಶಾಮಣ್ಣ, ಬಿ.ಎಸ್‌.ಚೈತ್ರಶ್ರೀ, ಡಿ.ಧರ್ಮಯ್ಯ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಚಿಕ್ಕಮಗಳೂರು ಮತ್ತು ಶೃಂಗೇರಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಈ ಪಟ್ಟಿಯಲ್ಲಿ ಮೂಡಿಗೆರೆ ಅಭ್ಯರ್ಥಿ ಪ್ರಕಟಿಸಿಲ್ಲ. ಪಕ್ಷದ ಈ ನಡೆ ಆಕಾಂಕ್ಷಿಗಳಿಗೆ ಕಗ್ಗಂಟಾಗಿ ಪರಿಣಮಿಸಿದೆ.

ಈ ಕ್ಷೇತ್ರದಲ್ಲಿ ಪಕ್ಷದ ಏಕತೆಯು ಚುನಾವಣೆಯು ಗೆಲುವಿನ ಸೂತ್ರ. ಕಳೆದ ಚುನಾವಣೆಯಲ್ಲಿ ಬಿ.ಬಿ.ನಿಂಗಯ್ಯ ಅವರು 635 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರು ಹೆಚ್ಚಾಗಿದ್ದಾರೆ. ಒಪ್ಪಂದದಂತೆ ಬಿಎಸ್‌ಪಿಯು ಜೆಡಿಎಸ್‌ ಬೆಂಬಲಕ್ಕೆ ನಿಂತಿದೆ.

ನಗರೋತ್ಥಾನ ಯೋಜನೆಯಡಿ ಪಟ್ಟಣದ ಬಹುತೇಕ ರಸ್ತೆಗಳು ಕಾಂಕ್ರೀಟ್‌ ರಸ್ತೆಗಳಾಗಿವೆ. ಬಸ್‌ನಿಲ್ದಾಣ ಕಾಮಗಾರಿ ಮುಗಿದಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಗಳು ನಡೆದಿವೆ.

ಕಳಸ ತಾಲ್ಲೂಕು ಕೇಂದ್ರವಾಗಿಸುವ ಬೇಡಿಕೆ ಈಡೇರದಿರುವುದು ಆ ಭಾಗದ ಜನರಲ್ಲಿ ಆಕ್ರೋಶ ಮೂಡಿಸಿದೆ. ಹ್ಯಾಂಡ್‌ಪೋಸ್ಟ್‌ನಲ್ಲಿರುವ ತೋಟಗಾರಿಕೆ ವಿದ್ಯಾಲಯವನ್ನು ವಿಶ್ವವಿದ್ಯಾಲಯವನ್ನಾಗಿ ಮಾರ್ಪಡಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಒತ್ತುವರಿ ಜಮೀನು ಗುತ್ತಿಗೆ ಸಂಬಂಧಿಸಿದಂತೆ ರೈತರ ಆತಂಕ ನಿವಾರಣೆಯಾಗಿಲ್ಲ. ಕಳೆದ ಚುನಾವಣೆಯಲ್ಲಿ ಕಾವು ಪಡೆದುಕೊಂಡಿದ್ದ ಕೆ.ಎಂ.ರಸ್ತೆ ವಿಸ್ತರಣೆ ನನೆಗುದ್ದಿಗೆ ಬಿದ್ದಿದೆ.

‘ಗಿರಿಜನರ ಹಾಡಿಗಳು ಕಾಂಕ್ರಿಟ್‌ ರಸ್ತೆಗಳಾಗಿವೆ. ಆದರೆ, ತತ್ಕೊಳ ಮೀಸಲು ಅರಣ್ಯದಿಂದ ಸ್ಥಳಾಂತರಗೊಂಡ ಪ್ಯಾಟೆಹಿತ್ಲುವಿನಂಥ ಗ್ರಾಮಗಳಲ್ಲಿ ಮೂಲಸೌಕರ್ಯ ಸಮಸ್ಯೆಗಳು ಇವೆ. ಸರ್ಕಾರಿ ಐಟಿಐ ಕಾಲೇಜು ಮಂಜೂರಾಗಿದೆ. ಪಾಲಿಟೆಕ್ನಿಕ್‌, ಸ್ನಾತಕೋತ್ತರ ಕೇಂದ್ರ ಆರಂಭ ಬೇಡಿಕೆ ಈಡೇರಿಲ್ಲ’ ಎಂದು ಆದಿವಾಸಿಗಳ ಹೋರಾಟಗಾರ ವಿಜೇಂದ್ರ ಹೇಳುತ್ತಾರೆ.

**

ಕ್ಷೇತ್ರವು ಕಾಫಿ, ಕಾಳುಮೆಣಸು, ಏಲಕ್ಕಿ ಬೆಳೆ ತಾಣ. ಈ ಬೆಳೆಗಳಿಗೆ ಸಮಪರ್ಕ ಬೆಲೆ ಇಲ್ಲ. ಯುವಕರಿಗೆ ಪೂರಕವಾದ ಯೋಜನೆ ರೂಪಿಸಿಲ್ಲ – 
ಹಳೇಕೋಟೆ ರಮೇಶ್‌, ಸಾಹಿತಿ.

**

ವಿರೋಧ ಪಕ್ಷದಲ್ಲಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಬಹಳಷ್ಟು ಅನುದಾನ ತಂದಿದ್ದೇನೆ. ಕುಡಿಯು ನೀರಿನ ಯೋಜನೆ ಸಂಪೂರ್ಣಗೊಳಿಸಿದ ತೃಪ್ತಿ ಇದೆ – ಬಿ.ಬಿ.ನಿಂಗಯ್ಯ, ಶಾಸಕ.

**

–ಕೆ.ವಾಸುದೇವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT