ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗೈಕ್ಯ ಪದಕ್ಕೆ ನಿಜ ಅರ್ಥ ಕೊಟ್ಟ ಶಿವಯೋಗಿ’

ಚಿಂಚೋಳಿ (ಎಚ್‌): ನೂತನ ಮಠ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಇಂದು
Last Updated 12 ಏಪ್ರಿಲ್ 2018, 9:14 IST
ಅಕ್ಷರ ಗಾತ್ರ

ಕಾಳಗಿ: ನಾಡಿನ ಉಜ್ವಲವಾದ ಭವ್ಯ ಪರಂಪರೆಯ ಮಹಾ ಮಠಗಳಲ್ಲಿ ಮುಗಳನಾಗಾವಿಯ ಕಟ್ಟಿಮನಿ ಸಂಸ್ಥಾನ ಹಿರೇಮಠವು ಒಂದು. ಈ ಮಠದ 13ನೇ ಪಟ್ಟಾಧ್ಯಕ್ಷರೆ ಲಿಂಗೈಕ್ಯ ಎನ್ನುವ ಪದಕ್ಕೆ ನಿಜವಾದ ಅರ್ಥವನ್ನು ಕೊಟ್ಟಿರುವ ಪುಣ್ಯ ಪುರುಷರು. ಅವರೇ ನಿಜ ಲಿಂಗೈಕ್ಯ ಶ್ರೀಗುರು ಸಿದ್ಧಲಿಂಗ ಶಿವಯೋಗಿಗಳು.

ಪೂಜ್ಯರು, ಲಿಂಗ ಪೂಜೆ ಮಾಡಿಕೊಳ್ಳುತ್ತಲೇ ತಮ್ಮ ಅಂಗವನ್ನು ಲಿಂಗದಲ್ಲಿ ಬೆರೆಸಿ ಲಿಂಗ ಲೀನರಾದ ಮಹಾತ್ಮರು. ಇವರಿಗೆ ಜನ್ಮಕೊಟ್ಟಿರುವ ಕಾಳಗಿ ತಾಲ್ಲೂಕಿನ ಚಿಂಚೋಳಿ ಎಚ್. ಗ್ರಾಮವು ಇಂದು ಶಿವಯೋಗಿಗಳ ಕೀರ್ತಿ ಪತಾಕಿಗೆ ಸಜ್ಜಾಗಿ ನಿಂತಿದೆ.

ಇಲ್ಲಿನ ಸದ್ಭಕ್ತರು ಒಟ್ಟುಗೂಡಿ ಶಿವಯೋಗಿಗಳ ಹೆಸರಿನಲ್ಲಿ ನೂತನ ಮಠ ನಿರ್ಮಿಸಿ, ಅವರ ಅಮೃತ ಶಿಲೆಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಮುಂದಾಗಿ ಭವ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ನಿಮಿತ್ತ ಏ. 1ರಿಂದ 9ರವರೆಗೆ ಸಿದ್ದಲಿಂಗ ಶಿವಯೋಗಿಗಳ ಪುರಾಣ ಕಾರ್ಯಕ್ರಮ ಗ್ರಾಮದಲ್ಲಿ ಯಶಸ್ವಿಯಾಗಿ ಸಾಗಿಬಂದಿದೆ.

ಮಂಗಳವಾರ ಸಂಜೆ ಶ್ರೀಶೈಲ ಜಗದ್ಗುರು ಡಾ.ಚನ್ನ ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರನ್ನು ಬರಮಾಡಿಕೊಂಡಿರುವ ಭಕ್ತರು, ಸುಮಂಗಲೆಯರ ಕುಂಭ, ಕಳಸದ ವೈಭವದೊಂದಿಗೆ ಭಗವತ್ಪಾದಂಗಳವರ ಅಡ್ಡಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಬಳಿಕ ‘ನವ ಜನಾಂಗ ನಿರ್ಮಾಣದಲ್ಲಿ ನಮ್ಮೆಲ್ಲರ ಪಾತ್ರ’ ಕುರಿತು ಚಿಂತನ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಶೈಲ ಜಗದ್ಗುರು, ‘ಮಕ್ಕಳಿಗೆ ಮತ್ತು ಯುವ ಜನತೆಗೆ ಭಾರತೀಯ ಸಂಸ್ಕಾರ, ಸಂಸ್ಕೃತಿ ಆಧಾರಿತ ಶಿಕ್ಷಣ ಕೊಡಿಸಬೇಕು. ಧರ್ಮವನ್ನು ಒಡೆಯದೆ ಉಳಿಸಿ, ಬೆಳೆಸುವ ಗುಣ ಕಲಿಸಬೇಕು’ ಎಂದು ಜನತೆಗೆ ಕರೆ ನೀಡಿದರು.

ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಡಾ.ಚನ್ನವೀರ ಶಿವಾಚಾರ್ಯರು ಚಿಂತನಗೋಷ್ಠಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶ್ರೀಮಠದ ಪೀಠಾಧಿಪತಿ ಅಭಿನವ ಸಿದ್ಧಲಿಂಗ ಶಿವಾಚಾರ್ಯ, ಚಿಂಚನಸೂರ ಕಲ್ಮಠದ ಸಿದ್ದಮಲ್ಲ ಶಿವಾಚಾರ್ಯ, ಭರತನೂರ ವಿರಕ್ತ ಮಠದ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ, ಬೆಳಗುಂಪಾದ ಗಂಗಾಧರ ದೇವರು ವೇದಿಕೆಯಲ್ಲಿದ್ದರು.

ಮಾಜಿ ಸಚಿವ ಸುನಿಲ ವಲ್ಲ್ಯಾಪುರೆ, ಕೋಡ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ಪ್ರಥಮದರ್ಜೆ ಗುತ್ತಿಗೆದಾರ ಶಿವಕಾಂತ ಮಹಾಜನ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಶಿವಗೋಳ ಅತಿಥಿಯಾಗಿದ್ದರು.

ಹಿರಿಯ ಮುಖಂಡ ರೇವಣಸಿದ್ದಪ್ಪ ಮಾಸ್ತರ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ ನಿರೂಪಿಸಿದರು.

ನೂತನ ಮಠ ಉದ್ಘಾಟನೆ ಇಂದು

ಗುರುವಾರ ಸಂಜೆ 6.30ಕ್ಕೆ ಕಾಶಿ ಜಗದ್ಗುರು ಡಾ.ಚಂದ್ರಶೇಖರ ರಾಜದೇಶಿ ಕೇಂದ್ರ ಶಿವಾ ಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜರುಗಲಿದೆ. ನೂತನ ಮಠದ ಉದ್ಘಾಟನೆ ಹಾಗೂ ಶಿವಯೋಗಿಗಳ ಅಮೃತ ಶಿಲೆಯ ಮೂರ್ತಿ ಪ್ರಾಣ ಪ್ರತಿ ಷ್ಠಾಪನೆ, ಭಾರತೀಯ ಸಂಸ್ಕೃತಿ ಯಲ್ಲಿ ಗುರುವಿನ ಪಾತ್ರ ಕುರಿತು ಚಿಂತನ ಗೋಷ್ಠಿ ನಡೆಯಲಿದೆ.

ಬಬಲಾದ ಮಠದ ಗುರು ಪಾದಲಿಂಗ ಸ್ವಾಮೀಜಿ, ಶಕಾಪುರ ತಪೋವನ ಮಠದ ಸಿದ್ಧರಾಮ ಶಿವಾಚಾರ್ಯ, ಆಲಮೇಲದ ಚಂದ್ರಶೇಖರ ಶಿವಾಚಾರ್ಯ, ಭರತನೂರ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಕಟಕೋಳ ಮಠದ ನಾಗಭೂಷಣ ಸ್ವಾಮೀಜಿ, ತೊಟ್ನಳ್ಳಿಯ ಡಾ.ತ್ರಿಮೂರ್ತಿ ಶಿವಾಚಾರ್ಯ, ಶ್ರೀನಿವಾಸ ಸರಡಗಿಯ ಡಾ.ಅಪ್ಪರಾವ ದೇವಿ ಮುತ್ಯಾ ಸಮ್ಮುಖ ವಹಿಸುವರು. ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಪ್ರಗತಿಪರ ಚಿಂತಕರು, ಮುಖಂಡರು ಅತಿಥಿಗಳಾಗಿ ಆಗಮಿಸುವರು ಎಂದು ಕಾರ್ಯಕ್ರಮ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT