ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಫಿ ನಾಡಿನಲ್ಲಿ ‘ಧರ್ಮ ರಾಜಕಾರಣ’

ನಾಲ್ಕು ದಶಕದಿಂದ ಕಾಂಗ್ರೆಸ್‌ ಟಿಕೆಟ್‌ ಮುಸ್ಲಿಮರಿಗೆ ಮೀಸಲು; ಹಿಂದುತ್ವ ಪಠಿಸುವ ಬಿಜೆಪಿ
Last Updated 12 ಏಪ್ರಿಲ್ 2018, 11:26 IST
ಅಕ್ಷರ ಗಾತ್ರ

ವಿಜಯಪುರ: ಆದಿಲ್‌ಶಾಹಿ ಅರಸರ ರಾಜಧಾನಿ. ಸೂಫಿ ಸಂತರ ಪ್ರಭಾವದ ನೆಲೆ. ಜಗದ್ವಿಖ್ಯಾತ ಗೋಳಗುಮ್ಮಟ, ಐತಿಹಾಸಿಕ ಇಬ್ರಾಹಿಂ ರೋಜಾ, ಬಾರಾ ಕಮಾನ್‌ ಸೇರಿದಂತೆ ಅತ್ಯದ್ಭುತ ವಾಸ್ತುಶೈಲಿಯ ಸ್ಮಾರಕಗಳನ್ನು ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ತನ್ನೊಡಲಲ್ಲಿ ಹುದುಗಿಸಿಕೊಂಡಿದೆ.

1980ರ ದಶಕದಿಂದ ಕ್ಷೇತ್ರದ ರಾಜಕಾರಣ ಧರ್ಮಾಧಾರಿತವಾಗಿದೆ. 90ರ ದಶಕದಿಂದ ಈಚೆಗೆ ಚುನಾವಣೆ ಹಿಂದೂ–ಮುಸ್ಲಿಂ ನಡುವಿನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.

ವೋಟ್‌ ಬ್ಯಾಂಕ್‌ ಭದ್ರಗೊಳಿಸಿ ಕೊಳ್ಳಲು, ಜಿಲ್ಲೆಗೊಂದು ಅಲ್ಪ ಸಂಖ್ಯಾತರಿಗೆ ಕ್ಷೇತ್ರ ಎಂಬ ತನ್ನ ಆಂತರಿಕ ನೀತಿಯಂತೆ ನಾಲ್ಕು ದಶಕಗಳಿಂದ ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿಗೆ ವಿಜಯಪುರದಿಂದ ಟಿಕೆಟ್‌ ನೀಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಜಪ ಆರಂಭಗೊಂಡ ಬಳಿಕ ಬಿಜೆಪಿ, ಹಿಂದೂತ್ವ ಪ್ರತಿಪಾದಿಸುವ ವ್ಯಕ್ತಿಗಳಿಗೆ ಟಿಕೆಟ್‌ ಘೋಷಿಸಿ, ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಜೆಡಿಎಸ್‌ ಎರಡೂ ಪಕ್ಷಗಳ ಪಾರಮ್ಯ ಮುರಿಯಲು ಯತ್ನಿಸಿದರೂ, ಫಲ ಸಿಕ್ಕಿಲ್ಲ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ, ಅದರಲ್ಲೂ ಈಚೆಗಿನ ವರ್ಷಗಳಲ್ಲಿ ಪಕ್ಷ, ವ್ಯಕ್ತಿಗಿಂತ ಧರ್ಮಕ್ಕೆ ಹೆಚ್ಚಿನ ಆದ್ಯತೆ ದೊರೆತಿದೆ.

ತುರ್ತು ಪರಿಸ್ಥಿತಿ ಬಳಿಕ 1978ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಜನತಾ ಪಕ್ಷ ತನ್ನ ಅಭ್ಯರ್ಥಿಯನ್ನಾಗಿ ಮುಸ್ಲಿಂ ಸಮುದಾಯದ ಬಕ್ಷಿ ಸೈಯ್ಯದ್‌ ಹಬೀಬುದ್ದೀನ್‌ ಶಾಮನಸಾಬ ಅವರನ್ನು ಕಣಕ್ಕಿಳಿಸಿತ್ತು. ಈ ಚುನಾವಣೆಯಲ್ಲಿ ಬಕ್ಷಿ ಕಾಂಗ್ರೆಸ್‌ ಸೋಲಿಸಿದರು. ನಂತರ ನಡೆದ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್‌ ಮುಸ್ಲಿಂ ಸಮಾಜದ ವ್ಯಕ್ತಿಯನ್ನೇ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತಿರುವುದು ಇಲ್ಲಿನ ವಿಶೇಷ.

ಹೆಚ್ಚು ಮತದ ದಾಖಲೆ: ವಿಜಯಪುರ ಜಿಲ್ಲಾ ಚುನಾವಣಾ ಇತಿಹಾಸದಲ್ಲೇ ಅತಿ ಹೆಚ್ಚು ಮತ ಗಳಿಸಿ ಆಯ್ಕೆಯಾದ ಅಭ್ಯರ್ಥಿ ಎಂಬ ಹೆಗ್ಗಳಿಕೆ ಬಿಜೆಪಿಯಿಂದ 2004ರಲ್ಲಿ ವಿಜಯಿಯಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರಿಗೆ ಸಲ್ಲುತ್ತದೆ. ಈ ಚುನಾವಣೆಯಲ್ಲಿ ಅಪ್ಪು 70001 ಮತ ಗಳಿಸಿದ್ದರು.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ನೂತನವಾಗಿ ಅಸ್ತಿತ್ವಕ್ಕೆ ಬಂದಿತು. ಈ ಹಿಂದಿನ ಚುನಾವಣೆಯಲ್ಲಿ ಗಳಿಸಿದ ಮತಕ್ಕಿಂತ ಅರ್ಧದಷ್ಟು ಮತ ಪಡೆದ ಅಪ್ಪು ಮತ್ತೆ ಬಿಜೆಪಿ ಶಾಸಕರಾಗಿ ಆಯ್ಕೆಯಾದರು.

1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಡಾ.ಸರದಾರ ಬಸವರಾಜ ನಾಗೂರ ಪಕ್ಷೇತರರಾಗಿ ಆಯ್ಕೆಯಾಗಿದ್ದನ್ನು ಬಿಟ್ಟರೆ, ಉಳಿದ 12 ಚುನಾವಣೆಗಳಲ್ಲಿ ವಿಜಯಪುರದ ಮತದಾರ ಪಕ್ಷಕ್ಕೆ ಮನ್ನಣೆ ನೀಡಿದ್ದಾರೆ.

1983ರಲ್ಲೇ ವಿಜಯಪುರ ಕ್ಷೇತ್ರದಲ್ಲಿ ಕಮಲ ಅರಳಿದ ಇತಿಹಾಸವಿದೆ. ಇಲ್ಲಿವರೆಗೂ ಕಾಂಗ್ರೆಸ್‌ ಏಳು ಬಾರಿ, ಬಿಜೆಪಿ ನಾಲ್ಕು ಬಾರಿ, ಜನತಾ ಪಕ್ಷದ ಅಭ್ಯರ್ಥಿಗಳು ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಕಣ ಚಿತ್ರಣ: ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಬಸನಗೌಡ ಪಾಟೀಲ ಯತ್ನಾಳರಿಗೆ ಟಿಕೆಟ್‌ ಘೋಷಿಸಿದೆ. ಇದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬಂಡಾಯಕ್ಕೆ ಕಾರಣವಾಗಿದೆ. ಅತೃಪ್ತಿ ಹೆಚ್ಚಿದೆ.

ಕಾಂಗ್ರೆಸ್‌ನಲ್ಲೂ ಬಂಡಾಯದ ಬಾವುಟ ಬಿರುಸಿನಿಂದ ಹಾರಾಡುತ್ತಿದೆ. ಇದರ ಸುಳಿವು ಸಿಕ್ಕಿರುವ ವರಿಷ್ಠರು ಕೊನೆ ಗಳಿಗೆಯಲ್ಲಿ ಟಿಕೆಟ್‌ ಘೋಷಿಸುವ ನಿರೀಕ್ಷೆಯಿದೆ. ಜೆಡಿಎಸ್‌ ಅPFPU ಪಟ್ಟಣಶೆಟ್ಟಿ, ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ನಿಲುವಿನತ್ತ ಕಾದು ನೋಡುತ್ತಿದೆ.

ಮುಸ್ಲಿಂ ಮತದಾರರ ಪ್ರಾಬಲ್ಯ

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾರ್ಚ್ ಅಂತ್ಯದವರೆಗೂ ಒಟ್ಟು 2,41,682 ಮತದಾರರಿದ್ದಾರೆ. 272 ಮತಗಟ್ಟೆಗಳಿವೆ. ಪಂಚಮಸಾಲಿ ಮತದಾರರು 19,478 ಇದ್ದರೆ, ಜಂಗಮ 5,915, ಗಾಣಿಗ 5,781, ರಡ್ಡಿ 1,117, ಬಣಜಿಗ 9,356, ಕಮ್ಮಾರ 4,218, ಸವಿತಾ ಸಮಾಜ 4,230, ಮಾಳಿ 2,136, ನೇಕಾರ 1,760, ಮಡಿವಾಳ 6,851, ಪರಿಶಿಷ್ಟ ಜಾತಿ 34,379, ಪರಿಶಿಷ್ಟ ಪಂಗಡ 1,186, ಲಂಬಾಣಿ 9,588, ಕುರುಬ 8,720, ಮುಸ್ಲಿಂ 68,122, ಕ್ರಿಶ್ಚಿಯನ್‌ 1,109, ಬ್ರಾಹ್ಮಣ 7,802, ಗಂಗಾ ಮತಸ್ಥ 8,264, ಉಪ್ಪಾರ 3,514, ಕುಂಬಾರ 6,045, ವಿಶ್ವಕರ್ಮ 4,689, ಜೈನ 2,976, ರಜಪೂತ 8,232, ಮರಾಠ 9,183, ಕುಡು ಒಕ್ಕಲಿಗ ಅಂದಾಜು 1,930 ಮತದಾರರು ಇದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

‘ಪ್ರವಾಸೋದ್ಯಮ ಅಭಿವೃದ್ಧಿಯಾಗಲಿ’

‘ಸ್ಮಾರಕಗಳ ನಗರಿ ವಿಜಯಪುರ ಪ್ರವಾಸೋದ್ಯಮದ ತಾಣವಾಗಬೇಕು. ಗೋಳಗುಮ್ಮಟ ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಬೇಕು. ಒಣದ್ರಾಕ್ಷಿ ಆನ್‌ಲೈನ್‌ ಟ್ರೇಡಿಂಗ್‌ ಸೆಂಟರ್‌ ಕಾರ್ಯಾರಂಭಿಸಬೇಕು. ಮೊದಲು ದೂಳು ಮುಕ್ತ, ಸ್ವಚ್ಛ ನಗರಿಯನ್ನಾಗಿ ಪರಿವರ್ತಿಸಲು ಒತ್ತು ನೀಡಬೇಕಾದ ಅವಶ್ಯಕತೆಯಿದೆ’ ಎನ್ನುತ್ತಾರೆ ಅಶೋಕ ಚವ್ಹಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT