ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು ಭ್ರೂಣ ಹತ್ಯೆ: ಅಂತ್ಯ ಹೇಗೆ?

Last Updated 12 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹೆಣ್ಣು ಮಗು ಹುಟ್ಟಿದ ಕ್ಷಣದಿಂದಲೇ ಅದು ಒಂದು ಹೊರೆ, ಹೊಣೆ ಎಂಬ ಚಿಂತೆ ಹೆತ್ತವರಲ್ಲಿ ಮೂಡುವ ಕಾಲವೊಂದಿತ್ತು. ಆ ನಂತರದ ಕಾಲದಲ್ಲಿ ಹೆಣ್ಣು ಭ್ರೂಣ ಇಟ್ಟುಕೊಳ್ಳಬೇಕಾದ್ದಲ್ಲ ಎಂಬ ಭಾವನೆ ಬಲಿತು, ಅದನ್ನು ಸುಲಭದಲ್ಲಿ ತೆಗೆದುಬಿಡಬಹುದು ಎಂಬ ಭಾವನೆ ಸಮಾಜದಲ್ಲಿ ವ್ಯಾಪಕವಾಗುತ್ತಾ ಹೋಯಿತು. ಕುಟುಂಬಯೋಜನೆ ರೂಢಿಗೆ ಬಂದಾಗ, ಅನಗತ್ಯವೆಂದು ಪರಿಗಣಿಸಲಾದ ಭ್ರೂಣವನ್ನು ತೆಗೆದು ಹಾಕುವುದು ರೂಢಿಯಾಗಿ, ಆ ರೂಢಿ ವ್ಯಾಪಕವಾದಾಗ ಹೆಣ್ಣು ಭ್ರೂಣವನ್ನು ತೆಗೆಸಿಬಿಡುವ ಅಗತ್ಯ ಹೆಚ್ಚು ಹೆಚ್ಚು ಮನಸ್ಸುಗಳಿಗೆ ಕಾಣಿಸಿತು. ಆಧುನಿಕ ಬದುಕಿನಲ್ಲಿ ಹೆಚ್ಚು ಆರಾಮವಾಗಿ ಬದುಕಲು ಮಕ್ಕಳ ಸಂಖ್ಯೆ ಎರಡಕ್ಕಿಂತ ಹೆಚ್ಚಿರಬಾರದು ಎಂಬ ಭಾವನೆ ಬಲವಾದಾಗ ಹೆಣ್ಣು ಭ್ರೂಣಹತ್ಯೆ ಹೆಚ್ಚು ಹೊಣೆಯ ಭಾರ ಇಲ್ಲದ ಆರಾಮದ ಬದುಕಿಗೆ ಸಹಾಯಕ ಎಂದನಿಸಿದ್ದು ಸ್ವಾಭಾವಿಕ.

ನಮ್ಮ ದೇಶದಲ್ಲಿ ಪ್ರಜ್ಞಾವಂತ ನಾಗರಿಕರು, ವೈದ್ಯರು ಮತ್ತು ಸರ್ಕಾರವು ಹೆಣ್ಣು ಭ್ರೂಣಹತ್ಯೆಯನ್ನು ಖಂಡಿಸುತ್ತಿರುವುದು ಬಹಳ ಕಾಲದಿಂದ ನಡೆದಿದೆ. ಆದರೆ ಈಗಲೂ ಹೆಣ್ಣು ಭ್ರೂಣಹತ್ಯೆ ನಡೆಯುತ್ತಲೇ ಇದೆ. ದುರ್ಬಲ ಮನಸ್ಸಿನ ತಾಯಿ–ತಂದೆ ಮತ್ತು ದ್ರವ್ಯದಾಹಿ ವೈದ್ಯರು ಕಾನೂನಿನ ಕಣ್ಣಿಗೆ ಬೀಳದಂತೆ ತಮ್ಮ ದುಷ್ಟ ಕೆಲಸವನ್ನು ನಡೆಸುತ್ತಲೇ ಇದ್ದಾರೆ. ಯಾವ ರೀತಿಯ ಖಂಡನೆ, ಪ್ರತಿಭಟನೆ ನಡೆದರೂ, ಹೆಣ್ಣು ಭ್ರೂಣ ಹತ್ಯೆಯನ್ನು ಕೊನೆಗೊಳಿಸಬೇಕೆಂಬ ಕಾಳಜಿ ಮತ್ತು ಜಾಗೃತಿ ಸಾಮಾಜಿಕವಾಗಿ ಎಲ್ಲರಲ್ಲಿಯೂ ಮೂಡಿದ್ದು ಕಾಣಿಸುವುದಿಲ್ಲ. ದೇಶದಲ್ಲಿ ಜನಸಂಖ್ಯೆಯನ್ನು ನಿಯಂತ್ರಣದಲ್ಲಿರಿಸಬೇಕೆಂದು ಕುಟುಂಬ ಯೋಜನೆ ಆರಂಭವಾದಾಗ ಭ್ರೂಣಹತ್ಯೆ ವ್ಯಾಪಕವಾಯಿತು. ಭ್ರೂಣ ತೆಗೆದುಬಿಡುವುದು ಬಹಳ ಸುಲಭ ಮತ್ತು ಅಷ್ಟೇ ನಿರಪಾಯಕಾರಿ ಎಂಬ ಭಾವನೆ ಸಮಾಜದಲ್ಲಿ ಹಬ್ಬಿಕೊಂಡಿರುವಂತೆ ತೋರುತ್ತದೆ. ಈ ದುಷ್ಕ್ರಿಯೆಗೆ ಗಂಡು ಭ್ರೂಣಕ್ಕಿಂತ ಹೆಣ್ಣು ಭ್ರೂಣವೇ ಹೆಚ್ಚು ಸಂಖ್ಯೆಯಲ್ಲಿ ಬಲಿಯಾಯಿತು.

ಗಂಡು ಮತ್ತು ಹೆಣ್ಣು ಸಮಾನವಾಗಿ ಸಬಲರು, ಸಮಾನವಾಗಿ ಬುದ್ಧಿಮತ್ತೆಯುಳ್ಳವರು, ಗಂಡು ಸಾಧಿಸುವುದೆಲ್ಲವನ್ನೂ ಹೆಣ್ಣು ಸಾಧಿಸಬಲ್ಲಳು ಎಂಬುದು ಲೋಕಕ್ಕೇ ವಿದಿತವಾದ ಈ ಕಾಲದಲ್ಲಿ ಕೂಡ ಹೆಣ್ಣು ಭ್ರೂಣವನ್ನು ನಾಶಮಾಡುವುದರಿಂದ ಕೆಟ್ಟದಲ್ಲದೆ ಒಳ್ಳೆಯದಾಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಮನುಕುಲ ಅರ್ಥ ಮಾಡಿಕೊಳ್ಳದಿದ್ದರೆ ಸಮಾಜ ಎಂಬುದು ಕ್ರಮೇಣ ನಾಶವಾಗಬಹುದು.

ಭ್ರೂಣಹತ್ಯೆ ಅಥವಾ ಶಿಶುಹತ್ಯೆ ಕೇವಲ ಅಂಕೆ ಸಂಖ್ಯೆಗಳಲ್ಲಿ ಹೇಳಿ ಸುಮ್ಮನಿರುವಂಥ ವಿಚಾರವಲ್ಲ. ಯಾಕಲ್ಲವೆಂದರೆ, ಕ್ರಮೇಣ, ಪುರುಷರ ಸಂಖ್ಯೆಯೇ ದೊಡ್ಡದಾಗಿ ಸ್ತ್ರೀಯರ ಸಂಖ್ಯೆ ಬಹಳ ಸಣ್ಣದಾದರೆ ಇಡೀ ಸಮಾಜ ಹೇಗೆ ಅಲ್ಲೋಲಕಲ್ಲೋಲವಾಗುತ್ತದೆ, ಸಾಮಾಜಿಕ ಸ್ವಾಸ್ಥ್ಯ ಹೇಗೆ ಕೆಟ್ಟುಹೋಗುತ್ತದೆ ಎಂಬ ಅರಿವುಳ್ಳವರು ಆ ಅರಿವು ಇಲ್ಲದವರಿಗೆ ಸ್ಪಷ್ಟವಾಗಿ ತಿಳಿಸಬೇಕು. ಆಗಲಾದರೂ ಸಮಾಜ ಎಚ್ಚರಗೊಂಡೀತು. ಸೃಷ್ಟಿಗೆ ಹೆಣ್ಣು– ಗಂಡು ಎರಡೂ ಬೇಕು ನಿಜ. ಆದರೆ ಹೆಣ್ಣು, ಗಂಡಿಗಿಂತ ಹೆಚ್ಚು ಮುಖ್ಯ. ಯಾಕೆಂದರೆ, ಮಗುವಿನ ಪಾಲಕಿ ಹೆತ್ತ ತಾಯಿ, ತಂದೆ ಪೋಷಕ ಅಷ್ಟೆ.

ಕಾನೂನುಗಳ ಮೂಲಕ ಈ ದುಷ್ಟ ಕೆಲಸವನ್ನು ಸಂಪೂರ್ಣವಾಗಿ ತಡೆಯಲು ಆಗಿಲ್ಲ. ಈ ದುಷ್ಕೃತ್ಯ ನಡೆಸಿದವರಿಗೆ ಕೆಲವು ವರ್ಷಗಳ ಜೈಲು ಶಿಕ್ಷೆ, ಕೆಲವು ಸಾವಿರ ರೂಪಾಯಿಗಳ ದಂಡನೆ ಇತ್ಯಾದಿಗಳಿಂದ ಹೆಣ್ಣು ಭೂಣಹತ್ಯೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ. ಶತಮಾನಗಳಿಂದ ಸಮಾಜದಲ್ಲಿ ಆಳವಾಗಿ ಬೇರೂರಿರುವ ಈ ಪಿಡುಗನ್ನು ಶಿಕ್ಷೆಗಳ ಮೂಲಕ ಬೇರುಸಹಿತ ಕೀಳಲು ಸಾಧ್ಯವಾಗಲಾರದು.

ಶಿಕ್ಷೆ ಸಾಮಾಜಿಕ ನೆಲೆಯಲ್ಲಿ ನ್ಯಾಯಬದ್ಧವೆಂದೇ ತಿಳಿಯಬಹುದು. ಆದರೆ ಅದಕ್ಕಿಂತ ಮುಖ್ಯವಾಗಿ ನಡೆಯಬೇಕಾದ್ದು ಸರ್ಕಾರ ಮತ್ತು ತಿಳಿವಳಿಕೆಯುಳ್ಳ ಎಲ್ಲರೂ ಸಮಾಜಕ್ಕೆ ಅರಿವು ಮತ್ತು ಶಿಕ್ಷಣವನ್ನು ನೀಡಬೇಕಾದ್ದು. ಹೆಣ್ಣು ಭ್ರೂಣಹತ್ಯೆಯ ಪರಿಣಾಮ ಏನು ಎಂದು ಬರಹದ ಮೂಲಕ, ಮಾತಿನ ಮೂಲಕ, ಶಾಲೆ ಕಾಲೇಜುಗಳ ಶಿಕ್ಷಕರ ಮೂಲಕ, ಪತ್ರಿಕೆಗಳ ಮೂಲಕ, ಟಿ.ವಿ. ಮೂಲಕ ಮತ್ತು ಆಕಾಶವಾಣಿಯ ಮೂಲಕ ಸಾರಿ ಸಾರಿ ಹೇಳಬೇಕು. ಸಮಾಜದಲ್ಲಿ ಪುರುಷರ ಸಂಖ್ಯೆಗಿಂತ ಸ್ತ್ರೀಯರ ಸಂಖ್ಯೆ ಕಡಿಮೆಯಾದರೆ ಏನು ಸಂಭವಿಸುತ್ತದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿಯುವಂತೆ ಮಾಡಬೇಕು.

ಹೆಣ್ಣು ಭ್ರೂಣಹತ್ಯೆಯಿಂದ ಭೂಮಿಯ ಮೇಲೆ ಜನಸಂಖ್ಯೆ ಸ್ವಲ್ಪ ಕಡಿಮೆಯಾದೀತು, ಬೇರೆ ಏನೂ ಆಗುವುದಿಲ್ಲ ಎಂದು ಕೆಲವರು ಭಾವಿಸಬಹುದು. ವಾಸ್ತವದಲ್ಲಿ, ಸ್ತ್ರೀಯರ ಸಂಖ್ಯೆ ಗಮನೀಯವಾಗಿ ಕುಸಿದರೆ, ಸಮಾಜದಲ್ಲಿ ವಯಸ್ಸಾದವರು, ತರುಣಿಯರು, ಹುಡುಗಿಯರು, ಚಿಕ್ಕ ಪ್ರಾಯದ ಹೆಣ್ಣು ಮಕ್ಕಳು ಎಂಬ ಭೇದವಿಲ್ಲದೆ ಎಲ್ಲರಿಗೂ ಆಪತ್ತು ಸಂಭವಿಸುತ್ತದೆ. ಅಂಥ ದಿನ ಬಂದಿಲ್ಲ, ಬರಲಾರದು ಎಂದುಕೊಂಡರೆ ಸಾಲದು, ಬಂದರೇನಾದೀತು ಎಂದು ಯೋಚಿಸಬೇಕು.

ಕಾಮದ ದುಷ್ಟ ಶಕ್ತಿಯ ಬಗ್ಗೆ ಸಮಾಜ ತಿಳಿದುಕೊಳ್ಳಬೇಕಾದ್ದು ಅಗತ್ಯ. ಕಾಮ ಎನ್ನುವುದು ಜೀವಿಯ ಕೇವಲ ನೈಸರ್ಗಿಕ ಗುಣ ಅಲ್ಲ, ಅದು ಮಾನವೀಯತೆಯ ಗಡಿ ದಾಟಿ ಮೃಗೀಯತೆಯಲ್ಲಿ ವಿಜೃಂಭಿಸಲು ಸಾಧ್ಯವಿದೆ ಎನ್ನುವುದಕ್ಕೆ ಇತಿಹಾಸದಲ್ಲಿ ಮತ್ತು ಪುರಾಣದಲ್ಲಿ ಸಾಕಷ್ಟು ವಿವರಗಳು ಸಿಗುತ್ತವೆ. ಇತಿಹಾಸದಲ್ಲಿ ಮಾತ್ರವಲ್ಲ, ಇಪ್ಪತ್ತು –ಇಪ್ಪತ್ತೊಂದನೆಯ ಶತಮಾನದಲ್ಲಿ ಕೂಡ ಕೆಲವು ದೇಶಗಳಲ್ಲಿ ಸ್ತ್ರೀಯರನ್ನು ಬಲವಂತವಾಗಿ ಒಯ್ದು ತಮ್ಮ ಅರಮನೆಯಲ್ಲಿ ಕೂಡಿಟ್ಟುಕೊಂಡ ನಿರಂಕುಶ ಪ್ರಭುಗಳ ಕಾಮ ಮತ್ತು ಕ್ರೌರ್ಯದ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ.

ವರ್ತಮಾನದಲ್ಲಿ ಶಾಂತಿ ಸಮಾಧಾನದಿಂದ ಬದುಕಬೇಕಾದರೆ ಇತಿಹಾಸವನ್ನು ತಿಳಿದುಕೊಳ್ಳಬೇಕಾದ್ದು ಆಗತ್ಯ. ಚುಟುಕಾಗಿ ಹೇಳುವುದಿದ್ದರೆ. ಸ್ತ್ರೀಯರ ಸಂಖ್ಯೆ ಪುರುಷರ ಸಂಖ್ಯೆಯ ಅರ್ಧಕ್ಕಿಳಿದರೆ, ಸಮಾಜದಲ್ಲಿ ಅರೆವಾಸಿ ಪುರುಷರು ಮೃಗಗಳಾಗುತ್ತಾರೆ. ಅಥವಾ ಅರೆಮೃಗಗಳಾಗುತ್ತಾರೆ. ಬಹುಶಃ ಮಾನವೀಯ ಸಮಾಜವೇ ಇಲ್ಲವಾಗಬಹುದು. ಅಂಥ ಘೋರ ಸ್ಥಿತಿ ಉಂಟಾಗಲಾರದು ಎಂಬುದು ಕುರುಡು ಆಶಾವಾದ. ಶುದ್ಧ ನೀರು, ಸ್ವಚ್ಛ ರಸ್ತೆ, ಸುಂದರವಾದ ಮನೆಗಳು, ದೊಡ್ಡ ಸಂಬಳದ ಉದ್ಯೋಗ, ಓಡಾಡಲು ಕಾರು ಇತ್ಯಾದಿಗಳು ಮನುಷ್ಯನನ್ನು ಮನುಷ್ಯನಾಗಿಸಲಾರವು. ಶುದ್ಧವಾದ ಮನಸ್ಸು, ಶುದ್ಧ ಹೃದಯ, ಶುದ್ಧ ಚಿಂತನೆ ಇದ್ದರೆ ಮಾತ್ರ ಮನುಷ್ಯ ಮನುಷ್ಯನಾಗಿ ಬಾಳಬಹುದು. ಪುರುಷ ಮನುಷ್ಯನಂತಿರಬೇಕಾದರೆ, ಹೆಣ್ಣು ಇರಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT