ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳಗೆ ಟಿಕೆಟ್‌ ಕೊಡುವ ಅಗತ್ಯ ಏನಿತ್ತು

ಬಿಜೆಪಿ ಮುಖಂಡರಿಗೆ ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್‌. ನ್ಯಾಮಗೌಡ ಪ್ರಶ್ನೆ
Last Updated 13 ಏಪ್ರಿಲ್ 2018, 8:48 IST
ಅಕ್ಷರ ಗಾತ್ರ

ಜಮಖಂಡಿ: ವಿಜಯಪುರ ವಿಧಾನ ಸಭಾ ಮತಕ್ಷೇತ್ರಕ್ಕೆ ಬಸನಗೌಡ ಪಾಟೀಲ (ಯತ್ನಾಳ) ಬಿಜೆಪಿ ಅಭ್ಯರ್ಥಿಯಾದರೆ ಜಮಖಂಡಿ ವಿಧಾನಸಭಾ ಮತಕ್ಷೇತ್ಕ್ಕೆ ಜಿ.ಎಸ್‌.ನ್ಯಾಮಗೌಡ ಏಕೆ ಅಭ್ಯರ್ಥಿ ಆಗಬಾರದು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್‌. ನ್ಯಾಮಗೌಡ ಸುದ್ದಿಗೋಷ್ಠಿಯಲ್ಲಿ ಖಾರವಾಗಿ ಪ್ರಶ್ನಿಸಿದರು.

ಬಸನಗೌಡ ಪಾಟೀಲ (ಯತ್ನಾಳ) ಅವರು ಎರಡು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಹಾಗೂ ಕೇಂದ್ರ ಸಚಿವರಾಗಿ ಸೇವೆಸಲ್ಲಿಸಿದ್ದರೂ ಕೂಡ ಅವರ ನಾಲಿಗೆಯ ಮೇಲೆ ಹಿಡಿತವಿಲ್ಲ. ಎಲ್ಲರನ್ನೂ ಏಕವಚನದಲ್ಲಿ ಸಂಬೋಧಿಸುತ್ತಾರೆ. ಅವರ ಬಾಯಿ ಹರಕುತನದ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ಸಹ ಅಸಮಾಧಾನವಿದೆ. ಅಂತವರು ಬಿಜೆಪಿಗೆ ಹೇಗೆ ಬೇಕಾದರು ಎಂದು ಪ್ರಶ್ನಿಸಿದರು.

ಈಗಾಗಲೇ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಬಸನಗೌಡ ಪಾಟೀಲ (ಯತ್ನಾಳ) ಅವರಿಗೆ ಟಿಕೆಟ್‌ ಕೊಡುವ ಅಗತ್ಯವಾದರೂ ಏನಿತ್ತು. ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳಿಂದ ಸ್ಪರ್ಧಿಸಿ ಸೋತಿರುವ ಯತ್ನಾಳರಿಗೆ ಈಗ ಬಿಜೆಪಿ ಟಿಕೆಟ್‌ ನೀಡುವ ಮೂಲಕ ಪಕ್ಷಕ್ಕಿಂತ ವ್ಯಕ್ತಿ ಯನ್ನು ದೊಡ್ಡವರನ್ನಾಗಿಸಲಾಗಿದೆ ಎಂದು ದೂರಿದರು.

ಯತ್ನಾಳರು ಬಿಜೆಪಿಯಲ್ಲಿ ಇರು ವುದು ಅಷ್ಟೊಂದು ಅಗತ್ಯವೇ ಎಂದು ಪ್ರಶ್ನಿಸಿದರು. ಜಮಖಂಡಿ ವಿಧಾನ ಸಭಾ ಮತಕ್ಷೇತ್ರಕ್ಕೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರಿಗೆ ಟಿಕೆಟ್‌ ನೀಡುವುದಕ್ಕೆ ವಿರೋಧವಿಲ್ಲ. ಅವರಿಗೆ ಟಿಕೆಟ್‌ ತಪ್ಪಿಸಿ ಹೊರಗಿನವರಿಗೆ ಟಿಕೆಟ್‌ ನೀಡುವ ಕುರಿತು ವ್ಯಾಪಕವಾದ ಮಾತುಗಳು ಕೇಳಿ ಬರುತ್ತಿವೆ ಎಂದು ಪರೋಕ್ಷವಾಗಿ ನಿರಾಣಿ ಅವರ ಚುನಾವಣೆ ಪ್ರಚಾರ ಕುರಿತು ಕುಟುಕಿದರು.

ಒಂದು ವೇಳೆ ತಮಗೆ ಜಮಖಂಡಿ ವಿಧಾನಸಭಾ ಮತಕ್ಷೇತ್ರದ ಟಿಕೆಟ್‌ ನೀಡಿದಲ್ಲಿ ಬೀಳಗಿ ಹಾಗೂ ತೇರದಾಳ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವ ಇಂಗಿತ ವ್ಯಕ್ತಪಡಿ ಸಿದರು. ಆದಾಗ್ಯೂ, ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಅವರು ಮತದಾರರ ಭಯ ಹಾಗೂ ಸ್ವಾಭಿಮಾನಕ್ಕಾಗಿ ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳಿಗೂ ಕೂಡ ತಮ್ಮ ಪಕ್ಷ ನಿಷ್ಠೆಯ ಬಗ್ಗೆ ವಿಶ್ವಾಸ ಮತ್ತು ನಂಬಿಕೆ ಇರಬೇಕು ಎಂದರು.

ಬಿಜೆಪಿಗೆ ಯುವಜನಾಂಗವೇ ಬೆನ್ನೆಲುಬು. ಹಾಗಾಗಿ ಯುವ ಜನಾಂಗ ವನ್ನು ತಪ್ಪು ದಾರಿಗೆ ಎಳೆಯಬಾರದು. ಯತ್ನಾಳ ಅವರಂತಹ ರಾಜಕಾರಣಿಗಳಿಂದ ಬಿಜೆಪಿಗೆ ಉಪಯೋಗವಿಲ್ಲ. ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಗಳಲ್ಲಿ ಜಮಖಂಡಿ ಅತ್ಯಂತ ಪ್ರಜ್ಞಾವಂತ ಮತದಾರರ ಮತಕ್ಷೇತ್ರವಾಗಿದೆ. ಇಲ್ಲಿನ ಜನ ವಲಸಿಗರನ್ನು ಸಹಿಸುವುದಿಲ್ಲ. ಅಲ್ಲದೆ ಪಕ್ಷೇತರ ಅಭ್ಯರ್ಥಿಗಳನ್ನು ಗೆಲ್ಲಿಸಿದ ಉದಾಹರಣೆ ಮತಕ್ಷೇತ್ರದಲ್ಲಿ ಇಲ್ಲ ಎಂದರು.

ಸ್ಥಳೀಯ ಶಾಸಕರ ವಿರುದ್ಧ ಅನೈತಿಕತೆ ಬಗ್ಗೆ ಕೇಳಿ ಬಂದ ಆರೋಪದಲ್ಲಿ ಬಿಜೆಪಿ ಪಾತ್ರವಿಲ್ಲ. ಅಂತಹ ಆರೋಪವನ್ನು ಕಾಂಗ್ರೆಸ್ಸಿನವರೇ ಮಾಡಿರುವ ಸಾಧ್ಯತೆ ಇರಬಹುದು ಎಂದು ಸ್ಪಷ್ಟನೆ ನೀಡಿದರು.

ನಂದೆಪ್ಪ ದಡ್ಡಿಮನಿ, ಬಸವರಾಜ ಮರನೂರ, ಗುರುಪಾದ ಮೆಂಡಿಗೇರಿ, ಎಂ.ಬಿ. ನ್ಯಾಮಗೌಡ, ನಿಂಗಪ್ಪ ಹೆಗಡೆ, ಸಂಗಣ್ಣ ದಳವಾಯಿ, ಪ್ರಕಾಶ ನ್ಯಾಮಗೌಡ, ಶೈಲೇಶ ಆಪ್ಟೆ, ಸುರೇಶಗೌಡ ಪಾಟೀಲ, ಹನಮಂತ ರಾಯ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT