ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17ರಿಂದ ನಾಮಪತ್ರ ಸಲ್ಲಿಕೆ ಆರಂಭ

ವಿಧಾನಸಭೆ ಚುನಾವಣೆ: ತಾಲ್ಲೂಕು ಕಚೇರಿಯಲ್ಲಿ ಸ್ವೀಕಾರ
Last Updated 13 ಏಪ್ರಿಲ್ 2018, 9:41 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಾಜ್ಯ ವಿಧಾನಸಭೆ ಚುನಾವಣೆಗೆ ಏ.17ರಿಂದ 24ರವರೆಗೆ ರಜಾ ದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದು’ ಎಂದು ಚುನಾವಣಾಧಿಕಾರಿ ಅಶೋಕ್‌ ಭೀಮಣ್ಣ ಕಲಘಟಗಿ ಹೇಳಿದರು.

‘ನಾಮಪತ್ರಗಳನ್ನು ನಗರದ ಮಿನಿ ವಿಧಾನಸೌಧದ ತಾಲ್ಲೂಕು ಕಚೇರಿಯ ನೆಲ ಮಹಡಿಯಲ್ಲಿರುವ ಸಭಾಂಗಣದ ಕೊಠಡಿ ಸಂಖ್ಯೆ 1ರಲ್ಲಿ ಸ್ವೀಕರಿಸಲಾಗುವುದು. ಅಭ್ಯರ್ಥಿಗಳು ಚುನಾವಣಾ ಆಯೋಗ ತಿಳಿಸಿರುವ ಎಲ್ಲ ಸೂಚನೆಗಳ ಅನ್ವಯ ಅಗತ್ಯ ದಾಖಲಾತಿಗಳೊಂದಿಗೆ ನಾಮಪತ್ರ ಸಲ್ಲಿಸಬೇಕು’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಚುನಾವಣೆಯಲ್ಲಿ ಉಪಯೋಗಿಸಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಶೇ 99.60ರಷ್ಟು ಭಾವಚಿತ್ರವಿರುವ ಮತದಾರರು ಇದ್ದು, ಶೇ 98.61ರಷ್ಟು ಮತದಾರರಿಗೆ ಗುರತಿನ ಚೀಟಿ ವಿತರಿಸಲಾಗಿದೆ. ಏಪ್ರಿಲ್‌ 14ರವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಏಪ್ರಿಲ್‌ 20ಕ್ಕೆ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ 89 (ಗಾಳೀಪುರ) ಅತಿ ಹೆಚ್ಚು 1,628 ಮತದಾರರನ್ನು ಹೊಂದಿದೆ. ಮತಗಟ್ಟೆ ಸಂಖ್ಯೆ 163 (ಚಿಕ್ಕಹೊಳೆ ಚೆಕ್‌ಪೋಸ್ಟ್‌) ಅತಿ ಕಡಿಮೆ 153 ಮತದಾರರನ್ನು ಹೊಂದಿದೆ. ಕ್ಷೇತ್ರಕ್ಕೆ ಸಂಬಂಧಿಸಿದಂತೆ 14 ಜನ ಮಾಸ್ಟರ್‌ ಟ್ರೈನರ್‍ಗಳನ್ನು ನೇಮಕ ಮಾಡಲಾಗಿದ್ದು, ವಿದ್ಯುನ್ಮಾನ ಮತಯಂತ್ರಗಳ ತರಬೇತಿ ಕಾರ್ಯವನ್ನು ಸೆಕ್ಟರ್‌ ಅಧಿಕಾರಿಳಿಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗಿದೆ ಎಂದರು.

‘ಸಾಮಾನ್ಯ ಅಭ್ಯರ್ಥಿಗಳಿಗೆ ₹ 10,000 ಠೇವಣಿ, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ₹ 5,000ಗಳನ್ನು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಕಡ್ಡಾಯವಾಗಿ ಮೂಲ ಜಾತಿ ಪ್ರಮಾಣಪತ್ರ ನೀಡಬೇಕು’ ಎಂದು ತಿಳಿಸಿದರು.

ಮಾದರಿ ನೀತಿ ಸಂಹಿತೆ: ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಪಾಲನೆಗೆ 2 ವಿಡಿಯೊ ಸರ್ವೆಲೈನ್ಸ್ ತಂಡ, 1 ವಿಡಿಯೊ ವೀವಿಂಗ್ ತಂಡ, 6 ಫ್ಲೈಯಿಂಗ್ ಸ್ಕ್ವಾಡ್ ತಂಡ, 6 ಸ್ಟ್ಯಾಟಿಕ್ ಸರ್ವೆಲೈನ್ಸ್ ತಂಡಗಳನ್ನು ರಚಿಸಲಾಗಿದೆ ಎಂದರು.

ಈ ತಂಡಗಳು ಅಭ್ಯರ್ಥಿಯು ಪ್ರಚಾರದ ವೇಳೆಯಲ್ಲಿ ಬಳಸಿದ ವಾಹನ, ಚೇರ್‌, ಪೆಂಡಲ್‌, ಧ್ವನಿವರ್ಧಕ ಬಾಡಿಗೆ ವೆಚ್ಚ ಹಾಗೂ ಸಾರ್ವಜನಿಕರಿಗೆ ಉಪಹಾರ ವ್ಯವಸ್ಥೆ ಮಾಡಿದರೆ ಅದರ ವೆಚ್ಚವನ್ನು ದಾಖಲೆ ಸಮೇತ ಸಂಗ್ರಹಿಸಿ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸುತ್ತಾರೆ ಎಂದು ತಿಳಿಸಿದರು.

ಅಂತರ ರಾಜ್ಯ ಗಡಿಯಂಚಿನ ಪುಣಜನೂರು, ಚಿಕ್ಕಹೊಳೆ, ಬಿಸಲವಾಡಿ, ಬಂದಿಗೌಡನಹಳ್ಳಿ ಮತ್ತು ಮೂಡಲಹೊಸಹಳ್ಳಿ ಗ್ರಾಮಗಳಲ್ಲಿ ಹಾಗೂ ಅಂತರ ಜಿಲ್ಲೆಯ ಗಡಿಯಂಚಿನ ಪಣ್ಯದಹುಂಡಿ ಗ್ರಾಮದಲ್ಲಿ ಚೆಕ್‍ಪೋಸ್ಟ್ ತೆರೆಯಲಾಗಿದೆ. ಇವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತಹಶೀಲ್ದಾರ್‌ ಟಿ.ರಮೇಶ್‌ಬಾಬು, ಅಧಿಕಾರಿಗಳಾದ ಗೀತಾ ಹುಡೆಯದ್, ದೇವನಾಯಕ್‌ ಹಾಜರಿದ್ದರು.

ಯಾವ ದಿನ ಏನು?

ಏ. 17ರಂದು ನಾಮಪತ್ರ ಸಲ್ಲಿಕೆ ಆರಂಭ

ಏ. 24ರಂದು ನಾಮಪತ್ರ ಸಲ್ಲಿಕೆಗೆ ಕೊನೆದಿನ

ಏ. 25 ನಾಮಪತ್ರ ಪರಿಶೀಲನೆ

ಏ. 27 ನಾಮಪತ್ರ ವಾಪಸ್‌ಗೆ ಕೊನೆ ದಿನ

ಮೇ 12 ಮತದಾನ

ಮೇ 15 ಮತ ಏಣಿಕೆ

ಮೇ 18 ಚುನಾವಣಾ ಪ್ರಕ್ರಿಯೆ ಪೂರ್ಣ

ಅಭ್ಯರ್ಥಿಗಳು ಏನೇನು ಮಾಡಬೇಕು?

ನಾಮಪತ್ರ ಸಲ್ಲಿಸುವ ಒಂದು ದಿನ ಮುಂಚಿತವಾಗಿ ಕಡ್ಡಾಯವಾಗಿ ಬ್ಯಾಂಕ್‌ ಖಾತೆ ತೆರೆಯಬೇಕು.

ಅಫಿಡವಿಟ್‌ನ (ಪ್ರಮಾಣ ಪತ್ರ) ಮೂಲ ಪ್ರತಿ ಎರಡು ಹಾಗೂ ಜೆರಾಕ್ಸ್‌ ಪ್ರತಿ ಎರಡು ಸಲ್ಲಿಸಬೇಕು.

ಅಭ್ಯರ್ಥಿಯು ಬೇರೆ ಕ್ಷೇತ್ರದ ಮತದಾರರಾಗಿದ್ದರೆ ಆ ಕ್ಷೇತ್ರದ ದೃಢೀಕೃತ ಮತದಾರರ ಪಟ್ಟಿಯನ್ನು ನಾಮಪತ್ರದ ಜೊತೆ ಸಲ್ಲಿಸಬೇಕು.

ಪ್ರಮಾಣ ಪತ್ರದಲ್ಲಿ ಎಲ್ಲ ಕಾಲಂಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು.

ಅಭ್ಯರ್ಥಿಗಳು ಕಡ್ಡಾಯವಾಗಿ ಬೇಬಾಕಿ ದೃಢೀಕರಣ ಪತ್ರ ಸಲ್ಲಿಸಬೇಕು.

ಮೊಬೈಲ್‌ ಆ್ಯಪ್‌ ಬಿಡುಗಡೆ

ಚುನಾವಣೆಯನ್ನು ಕ್ರಮಬದ್ಧ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಚುನಾವಣಾ ಆಯೋಗವು ಸುವಿಧ, ಸುಗಮ ಹಾಗೂ ಸಮಾಧಾನ್‌ ಎಂಬ ಆ್ಯಪ್‌ ಬಿಡುಗಡೆ ಮಾಡಿದೆ ಎಂದು ಚುನಾವಣಾಧಿಕಾರಿ ಅಶೋಕ್‌ ಭೀಮಣ್ಣ ಕಲಘಟಗಿ ಹೇಳಿದರು.ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ, ರ‍್ಯಾಲಿ, ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆಯಲು ‘ಸುವಿಧ’ ಆ್ಯಪ್‌, ಚುನಾವಣೆಗಾಗಿ ಬಳಸುವ ವಾಹನಗಳಿಗೆ ಜಿಪಿಆರ್‌ಎಸ್‌ ಅಳವಡಿಸಿ ಅವುಗಳ ಸಂಚಾರದ ಬಗ್ಗೆ ನಿಗಾ ವಹಿಸಲು ‘ಸುಗಮ’ ಆ್ಯಪ್‌ ಹಾಗೂ ಸಾರ್ವಜನಿಕರ ದೂರು ಸಲ್ಲಿಸಲು ‘ಸಮಾಧಾನ್‌’ ಆ್ಯಪ್‌ ಅನ್ನು ಬಿಡುಗಡೆ ಮಾಡಲಾಗಿದೆ ಎಂದರು. ceo.karnataka.kar.nic.in ತಂತ್ರಾಂಶದ ಮೂಲಕ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಆ್ಯಪ್‌ ಆಯ್ಕೆ ಮಾಡಿ ಅರ್ಜಿ ಸಲ್ಲಿಸಬೇಕು. ಅರ್ಜಿಯ ಹಿರಿಯತೆ ಆಧಾರದ ಮೇಲೆ ಅನುಮತಿ ನೀಡಲಾಗುವುದು ಎಂದು ತಿಳಿಸಿದರು. ಸಾರ್ವಜನಿಕರು ಚುನಾವಣಾ ಅಕ್ರಮದ ಬಗ್ಗೆ ‘ಸಮಾಧಾನ್‌’ ಆ್ಯಪ್‌ ಮೂಲಕ ಅಥವಾ ದೂರವಾಣಿ ಸಂಖ್ಯೆ 08226–223220, ವಾಟ್ಸಪ್‌ ನಂ. 82778 55831ಗೆ ಮಾಹಿತಿ ನೀಡಬಹುದು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT