ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಗಾಸೆಯಲ್ಲಿ ಭಕ್ತಿಯ ಅಭಿವ್ಯಕ್ತಿ ಮುಖ್ಯ

ಕಾಶೀಮಹಾಲಿಂಗ ಸ್ವಾಮೀಜಿಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
Last Updated 13 ಏಪ್ರಿಲ್ 2018, 10:20 IST
ಅಕ್ಷರ ಗಾತ್ರ

ಸಿರಿಗೆರೆ: ಮನುಷ್ಯನ ಅಂತರಂಗದಲ್ಲಿನ ಭಕ್ತಿಯನ್ನು ಅಭಿವ್ಯಕ್ತಿಸುವ ಮಾಧ್ಯಮವೇ ವೀರಗಾಸೆ. ಹಿಂದಿನ ತಲೆಮಾರಿನವರು ಉಳಿಸಿಕೊಂಡಿರುವ ಬಹಳ ಅಪರೂಪದ ಕಲೆ ಇದು ಎಂದು ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬೃಹನ್ಮಠದ ಆವರಣದಲ್ಲಿ ಅಣ್ಣನ ಬಳಗದವರು ಕಾಶೀಮಹಾಲಿಂಗ ಸ್ವಾಮೀಜಿಯ 47ನೆಯ ವಾರ್ಷಿಕ ಶ್ರದ್ಧಾಂಜಲಿ ಅಂಗವಾಗಿ ಅಣ್ಣನ ಬಳಗದವರು ಏರ್ಪಡಿಸಿದ್ದ
ವೀರಗಾಸೆ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

ನಾಗರಿಕತೆ ಬೆಳೆದ ಹಾಗೆ ಪ್ರಾಚೀನ ಕಲೆಗಳು ಕಣ್ಮರೆಯಾಗುತ್ತಿವೆ. ಇಲ್ಲಿ ಕಲಾವಿದರು ಮೈನವಿರೇಳಿಸುವಂತೆ ಅಭಿನಯಿಸಿದ ಜನಪದ ಕಲೆ ಶಿಷ್ಟ ಕಲೆಗಿಂತ ವಿಭಿನ್ನ. ಶಿಷ್ಟಕಲೆ ಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು ರೂಪಿತವಾದ ಕಲೆ. ಎರಡೂ ಕಲೆಗಳಲ್ಲಿ ಸಮಾನವಾದ ಅಂಶವೆಂದರೆ ಭಕ್ತಿಯ ಪ್ರೇರಣೆ ಇದೆ. ಹಿಂದೆ ದೇವಸ್ಥಾನಗಳಲ್ಲಿ ನವರಂಗ ಮಂಟಪದಲ್ಲಿ ದೇವರಿಗೆ ಭಕ್ತಿ ಸಮರ್ಪಿಸುವುದಕ್ಕೆ ಭರತನಾಟ್ಯ ಇರುತ್ತಿತ್ತು. ಆದರೆ ಅದು ಸಾಂಸ್ಕೃತಿಕ ಕಾರ್ಯಕ್ರಮ ಎನ್ನುವುದಕ್ಕಿಂತ ಭಕ್ತಿ ಸಮರ್ಪಣೆ ತೋರುವ ಕಾರ್ಯಕ್ರಮವಾಗಿತ್ತು. ದೇವಸ್ಥಾನಗಳಲ್ಲಿ ನೃತ್ಯಸೇವೆ, ನಾಟ್ಯ ಸೇವೆ ನಡೆದರೆ ಹಳ್ಳಿಯ ಹಬ್ಬದ ದಿನಗಳಲ್ಲಿ, ಜಾತ್ರೆಗಳಲ್ಲಿ ವೀರಗಾಸೆ ಕಾರ್ಯಕ್ರಮವು ಅವಿಭಾಜ್ಯ ಅಂಗವಾಗಿತ್ತು ಎಂದು ಹೇಳಿದರು.

ಮೂಲ ಸ್ವರೂಪವನ್ನು ತಿಳಿದು ಕಲೆಯನ್ನು ಬೆಳೆಸಬೇಕು. ಸಾಹಿತ್ಯ, ಸಂಗೀತ, ತಾಳಬದ್ಧವಾಗಿ ಅಭಿನಯವಿರಬೇಕು. ಅಭಿನಯದಲ್ಲಿ ಕಥಾನಿರೂಪಣೆಗೆ ಹೆಚ್ಚು ಒತ್ತು ನೀಡಬೇಕು. ಆರಂಭದಲ್ಲಿ ವಚನಗಳನ್ನು ವೀರಗಾಸೆಯಲ್ಲಿ ಬಳಸಿಕೊಂಡಿಲ್ಲ. ಆದರೆ ಒಂದು ಕಥಾನಿರೂಪಣೆಗೆ ಒತ್ತುಕೊಟ್ಟು ಅವುಗಳನ್ನು ಆಚರಣೆಗೆ ತಂದಿ
ದ್ದಾರೆ. ಪಾರಂಪರಿಕವಾಗಿ ಬಂದಿರುವ ಕಲೆಯನ್ನು ಉಳಿಸಿ ಬೆಳೆಸಲು ಹೆಚ್ಚು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಇಂತಹ ಜನಪದ ಕಲೆಗಳಿಗೆ ಪ್ರೋತ್ಸಾಹ ನೀಡಲು ಕಾಶೀಮಹಾಲಿಂಗ ಸ್ವಾಮೀಜಿಯ 47ನೆಯ ವಾರ್ಷಿಕ ಶ್ರದ್ಧಾಂಜಲಿ ಪ್ರಯುಕ್ತ ವೀರಗಾಸೆ ಕಲೆ ಆಚರಣೆಗೆ ತಂದಿದ್ದೇವೆ ಎಂದರು.

ವಿಶ್ರಾಂತ ಕನ್ನಡ ಉಪನ್ಯಾಸಕಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಕಾರ್ಯದರ್ಶಿ ಎಸ್.ಎಂ.ಮಲ್ಲಮ್ಮ ಮಾತನಾಡಿ, ‘ನಮ್ಮ ನಾಡಿನ ಇತಿಹಾಸ, ಸಂಸ್ಕತಿ, ಸಂಪೂರ್ಣ ಕಲೆಯನ್ನು ಹೇಳಬಲ್ಲಂತಹ ಅಪರೂಪದ ಕಲೆ ವೀರಗಾಸೆ.  ಜನಪದ ಸಂಸ್ಕೃತಿ ನಾಶವಾಗದಂತೆ ನಾವು ಕಾಪಾಡಿಕೊಳ್ಳಬೇಕು ಎಂದರು.

ಕಲೆಗಳು ವಿವಿಧ ಸ್ಥರಗಳ ಜನರನ್ನು ಸೇರಿಸಿ ಬದುಕಿಗೆ ಹೊಸ ಹುರುಪನ್ನು ನೀಡುತ್ತಿವೆ. ಹಿಂದಿನ ಪರಂಪರೆಯ ಹಿರಿಯ ಜೀವಗಳ ಸಾಂಸ್ಕೃತಿಕ ಬದುಕನ್ನು ತಿಳಿದು
ಇಂದಿನ ಯುವ ಜನಾಂಗ ಜನಪದ ಕಲೆಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಜನಪದ ಸಿರಿಸಂಭ್ರಮದ ಬಾಲಕಿಯರ ಮತ್ತು ಬಾಲಕರ ವೀರಗಾಸೆ, ಹಾಲುಹೊಕ್ಕಳಿ ತಂಡ ಕಡೂರು ತಾಲ್ಲೂಕು, ಮಹದೇಶ್ವರ ಕಲಾತಂಡ, ಬಸವೇಶ್ವರ ಕಲಾತಂಡ, ಮುತ್ತುಗ ದೂರು, ಬಮ್ಮಾಪುರ, ಗೊಪ್ಪೇನಹಳ್ಳಿ, ಚಿಕ್ಕಮಗಳೂರು ತಂಡಗಳು ಭಾಗವಹಿಸಿ, ಬಹುಮಾನ ಪಡೆದವು.

ಜಿ.ಎಸ್‌. ಶಿವಕುಮಾರ್‌ ಸ್ವಾಗತಿಸಿದರು. ಬಿ.ಎಸ್‌.ಮರುಳಸಿದ್ದಯ್ಯ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸೋಮಶೇಖರ ಕಾರ್ಯಕ್ರಮ ನಿರೂಪಿಸಿದರು. ಅಕ್ಕನ ಬಳಗದ ಸದಸ್ಯರು ವಚನ ಗಾಯನ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT