ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೈಯಿಂಗ್‌ ಸ್ಕ್ವಾಡ್‌ಗೆ ಜಿಪಿಎಸ್ ಕಣ್ಗಾವಲು

24 ಅಧಿಕಾರಿಗಳ ಕಾರ್ಯವೈಖರಿ ಮೇಲೆ ನಿಗಾ ವಹಿಸಲು ಜಿಲ್ಲಾಡಳಿತದ ಕ್ರಮ
Last Updated 13 ಏಪ್ರಿಲ್ 2018, 10:30 IST
ಅಕ್ಷರ ಗಾತ್ರ

ದಾವಣಗೆರೆ: ಪಾರದರ್ಶಕ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಸುವ ಉದ್ದೇಶದಿಂದ ಜಿಲ್ಲಾಡಳಿತ ಜಾಗೃತ ದಳ  (ಫ್ಲೈಯಿಂಗ್‌ ಸ್ಕ್ವಾಡ್‌) ಅಧಿಕಾರಿಗಳ ವಾಹನಗಳಿಗೆ ಜಿಪಿಎಸ್ ಕಣ್ಗಾವಲು ಇಟ್ಟಿದೆ.

ಜಿಲ್ಲೆಯ ಪ್ರತಿ ಪೊಲೀಸ್‌ ಠಾಣೆಗೆ ಒಂದರಂತೆ 24 ಜಾಗೃತ ದಳ ಅಧಿಕಾರಿಗಳನ್ನು ನೇಮಿಸಿದ್ದು, ಅವರ ವಾಹನಗಳಿಗೆ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ (ಜಿಪಿಎಸ್) ಯಂತ್ರವನ್ನು ಈಗಾಗಲೇ ಅಳವಡಿಸಲಾಗಿದೆ. ಈ ವ್ಯವಸ್ಥೆ ಮೂಲಕ ಅಧಿಕಾರಿಗಳ ಕಾರ್ಯವೈಖರಿ ಮೇಲೆ ಹೆಚ್ಚಿನ ನಿಗಾವಹಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿದೆ.

ಜಿಪಿಎಸ್‌ನಿಂದ ಅಧಿಕಾರಿಗಳ ವಾಹನ ಸಂಚಾರಕ್ಕೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿ ಲಭ್ಯವಾಗುತ್ತಿದೆ. ವಾಹನ ಎಲ್ಲಿದೆ ಎಂಬ ಮಾಹಿತಿ ಅದರ ಟ್ರ್ಯಾಕಿಂಗ್ ಮೇಲೆ ನಿಗಾವಹಿಸಿರುವ ದೂರು ನಿರ್ವಹಣಾ ಕೋಶದಲ್ಲಿ ಬಿತ್ತರವಾಗಲಿದೆ. ಈ ಕೋಶವನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ವಾಹನ ಅರ್ಧ ಗಂಟೆ ಒಂದೇ ಕಡೆ ನಿಂತರೂ ಅನುಮಾನ ಬಂದು ಕೋಶದ ಸಿಬ್ಬಂದಿ ಪ್ರಶ್ನಿಸುತ್ತಾರೆ ಎಂದು ಚುನಾವಣಾ ತಹಶೀಲ್ದಾರ್‌ ಸಂತೋಷ್‌ಕುಮಾರ್‌ ತಿಳಿಸಿದರು.

ದಳದಲ್ಲಿ ಯಾರು?

ಜಾಗೃತ ದಳ (ಫ್ಲೈಯಿಂಗ್‌ ಸ್ಕ್ವಾಡ್‌) ದಲ್ಲಿ ಐವರು ಇರುತ್ತಾರೆ. ಒಬ್ಬರು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ, ಒಬ್ಬರು ಪೊಲೀಸ್ ಉಪ ನಿರೀಕ್ಷಕರು, ಮೂವರು ಪೊಲೀಸ್‌ ಕಾನ್‌ಸ್ಟೆಬಲ್‌ಗಳಿರುತ್ತಾರೆ.

ಈ ಜಾಗೃತ ದಳದ ಅಧಿಕಾರಿಗಳು ಕ್ಷೇತ್ರಗಳಲ್ಲಿ ನಿರಂತರ ತಿರುಗಾಡುತ್ತಿರಬೇಕು. ಚುನಾವಣೆ ಪ್ರಚಾರ ಮತ್ತು ಮತದಾನದ ಸಂದರ್ಭದಲ್ಲಿ ಅಕ್ರಮಗಳು ನಡೆದಾಗ, ಅಲ್ಲಿಯೇ ಇರುವ ಅಧಿಕಾರಿಗಳಿಗೆ ಮಾಹಿತಿ ನೀಡಿ, ಘಟನೆಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲು ಅನುಕೂಲವಾಗಲಿದೆ. ಚುನಾವಣೆ ಕೆಲಸವನ್ನು ಪ್ರತಿಯೊಬ್ಬ ಅಧಿಕಾರಿ ಅಚ್ಚುಕಟ್ಟಾಗಿ ಮಾಡಲು ಸಹಕಾರಿಯಾಗಲಿದೆ. ಚುನಾವಣೆಯಲ್ಲಿ ಜನರಿಗೆ ಆಮಿಷ ಒಡ್ಡುವ ಮತ್ತು ಅಕ್ರಮ ಎಸಗುವವರ ಮೇಲೆ ನಿಗಾವಹಿಸಲು ಇದರಿಂದ ಸಾಧ್ಯವಾಗಲಿದೆ ಎನ್ನುತ್ತಾರೆ ಅವರು.

ಪ್ರತಿ ಚುನಾವಣೆ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಚುನಾವಣೆಯ ಕರ್ತವ್ಯದಲ್ಲಿದ್ದೇವೆ ಎಂದು ಹೇಳಿಕೊಂಡು ಅನ್ಯ ಕೆಲಸ–ಕಾರ್ಯದಲ್ಲಿ ಮುಳುಗುವುದು ಸಾಮಾನ್ಯ. ಜಿಲ್ಲಾ ಚುನಾವಣಾಧಿಕಾರಿಗಳಿಗೆ ಈ ಎಲ್ಲರ ಕರ್ತವ್ಯ ನಿರ್ವಹಣೆ ಮೇಲೆ ನಿಗಾವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಜಿಪಿಎಸ್ ಯಂತ್ರದ
ಮೊರೆಹೋಗಿದ್ದಾರೆ. ಜಿಲ್ಲಾಡಳಿತ ಇಂತಹ ವಿನೂತನ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಚುನಾವಣಾ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗೆ ಆಮಿಷ ತೋರಿಸುವುದು ಶಿಕ್ಷಾರ್ಹ ಅಪರಾಧ.

ಈ ಆಮಿಷವು ನಗದು ರೂಪದಲ್ಲಿ ಆಗಿರಬಹುದು ಅಥವಾ ಇನ್ಯಾವುದೇ ರೂಪದಲ್ಲಿ ಆಗಿದ್ದರೂ ಅದು ಶಿಕ್ಷಾರ್ಹ ಅಪರಾಧ.

ಸಾರ್ವಜನಿಕರಿಗೆ ತೊಂದರೆ ಕೊಡುವುದು, ಬೆದರಿಕೆ ಒಡ್ಡುವುದು ಮತ್ತು ಪ್ರತಿಫಲ ನೀಡುವುದು ಅಥವಾ ತೆಗೆದುಕೊಳ್ಳಲು ಪ್ರೇರೇಪಿಸುವುದು ಸಹ ಶಿಕ್ಷಾರ್ಹ ಅಪರಾಧ.

ಸಾರ್ವಜನಿಕರು ಯಾವುದೇ ಪ್ರತಿಫಲ, ಆಮಿಷಗಳಿಗೆ ಶರಣಾಗುವುದು. ಯಾವುದೇ ರೀತಿಯ ಲಂಚ ಕೊಡುವುದು ಅಥವಾ ತೆಗೆದುಕೊಳ್ಳುವುದು ಸಹ ಅಪರಾಧ.

ಚುನಾವಣಾ ಅಪರಾಧಗಳಿಗೆ ಒಂದು ವರ್ಷ ಜೈಲು ಅಥವಾ ದಂಡ ಅಥವಾ ಎರಡೂ ರೀತಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವ, ದೂರು ದಾಖಲಿಸಿಕೊಳ್ಳುವ ಅಧಿಕಾರ ಜಾಗೃತ ದಳಕ್ಕಿದೆ.

ಚುನಾವಣಾ ಅಕ್ರಮಗಳು ಸಾರ್ವಜನಿಕರಿಗೆ ಕಂಡುಬಂದಲ್ಲಿ ಟೋಲ್‌ಫ್ರೀ ಸಂಖ್ಯೆ 1077 ಅಥವಾ 08192–234034 (24X7)ಗೆ ದೂರು ನೀಡಬಹುದು. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ನಿರ್ವಹಣಾ ಕೋಶದಲ್ಲೂ ಯಾವುದೇ ಸಮಯದಲ್ಲಿ ದೂರು ದಾಖಲಿಸಬಹುದು.

ಜಾಗೃತ ದಳ (ಫ್ಲೈಯಿಂಗ್‌ ಸ್ಕ್ವಾಡ್‌)ದ ಅಧಿಕಾರಿಗಳನ್ನಾಗಿ ಸ್ಥಳೀಯವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನೇ ನೇಮಕ ಮಾಡಿದ ಜಿಲ್ಲಾಡಳಿತದ ಕ್ರಮಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಹುತೇಕ ಅಧಿಕಾರಿಗಳು ತಾವು ಕೆಲಸ ಮಾಡುವ ಮತಗಟ್ಟೆ ವ್ಯಾಪ್ತಿಯ ಜಾಗೃತ ದಳದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಇವರಿಂದ ಚುನಾವಣಾ ಅಕ್ರಮಗಳಿಗೆ ಸಂಬಂಧಪಟ್ಟ ವಿಚಾರಣೆಯಲ್ಲಿ ನಿಷ್ಪಕ್ಷಪಾತ ಕ್ರಮಗಳನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

**

ವಾಹನಗಳಿಗೆ ಜಿಪಿಎಸ್‌ ಅಳವಡಿಸಿದ್ದರಿಂದ ಅಧಿಕಾರಿಗಳು ಕರ್ತವ್ಯದಲ್ಲಿರುವುದಾಗಿ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ – ಸಂತೋಷ್‌ಕುಮಾರ್,ಚುನಾವಣಾ ತಹಶೀಲ್ದಾರ್.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT