ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿಕೆಯಾಗದ ಮಹಿಳಾ ದೌರ್ಜನ್ಯ: ಭೂತೆ

Last Updated 13 ಏಪ್ರಿಲ್ 2018, 11:19 IST
ಅಕ್ಷರ ಗಾತ್ರ

ಹಾವೇರಿ: ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಮುಂಚೂಣಿಗೆ ಬರುತ್ತಿದ್ದರೂ, ಅವಳ ಮೇಲಿನ ದೌರ್ಜನ್ಯಗಳು ಕಡಿಮೆ ಆಗದಿರುವುದು ಬೇಸರದ ವಿಚಾರ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಈಶಪ್ಪ ಕೆ.ಭೂತೆ ಹೇಳಿದರು.

ನಗರದಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ‘ಬಾಲ ಸ್ನೇಹಿ ಕಾನೂನು ಸೇವೆಗಳು ಮತ್ತು ಅವುಗಳ ಸಂರಕ್ಷಣೆಯ ರಾಷ್ಟ್ರೀಯ ಯೋಜನೆ -2015, ಫೋಕ್ಸೊ ಕಾಯ್ದೆ -2012 ಮತ್ತು ಬಾಲ ನ್ಯಾಯ ಕಾಯ್ದೆ- 2015ರ ಕುರಿತ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರ ಮತ್ತು ಮಕ್ಕಳ ಮೇಲಿನ ಕಾನೂನು ವಿರೋಧಿ ಕೃತ್ಯಗಳನ್ನು ಕೇವಲ ಪೊಲೀಸರು ತಡೆಗಟ್ಟುವುದು ಕಷ್ಟಸಾಧ್ಯ. ಸಾಮಾಜಿಕ ಮತ್ತ ಧಾರ್ಮಿಕ ಮುಖಂಡರು, ಜನಸಾಮಾನ್ಯರಿಗೆ ತಿಳಿವಳಿಕೆ ನೀಡಿದಲ್ಲಿ ಮಾತ್ರ ತಡೆಗಟ್ಟಬಹುದು ಎಂದರು.

ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪರಿಹಾರ ನೀಡುವ ಕಾರ್ಯವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಾಡುತ್ತಿದೆ. ಕಾನೂನುಗಳ ಸಂಖ್ಯೆ ಹೆಚ್ಚಿದಷ್ಟು ಅಪರಾಧ ಪ್ರಕರಣಗಳ ಸಂಖ್ಯೆಗಳೂ ಹೆಚ್ಚುತ್ತಿವೆ. ಪೊಲೀಸರು ಇಂತಹ ಪ್ರಕರಣಗಳಲ್ಲಿ ಶ್ರಮವಹಿಸಿ ತನಿಖೆ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಪ್ಪ ನಾಯಕ್ ಮಾತನಾಡಿ, ‘ಕಾನೂನು ವಿರೋಧಿ ಕೃತ್ಯದಲ್ಲಿ ಭಾಗಿಯಾದ 18 ವರ್ಷಕ್ಕಿಂತ ಕಿರಿಯರನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕರೆದೊಯ್ಯಲಾಗುತ್ತದೆ. ಉತ್ತಮ ಪ್ರಜೆಯಾಗಿ ಬೆಳೆಯಲು ಅವರಿಗೆ ಪ್ರೇರೇಪಣೆ ನೀಡಲಾಗುತ್ತದೆ. ಮುಂದೆ ಅಪರಾಧ ಎಸಗದಂತೆ ಮಾನಸಿಕ ಪ್ರಜ್ಞೆ ಮೂಡಿಸಲಾಗುತ್ತದೆ. ಈ ಅವಕಾಶವನ್ನು ‘ಬಾಲ ನ್ಯಾಯ ಕಾಯ್ದೆ -2015’ ಕಲ್ಪಿಸಿದೆ’ ಎಂದರು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ವೈ.ಎಲ್.ಲಾಡಖಾನ್ ಮಾತನಾಡಿ, ಶೋಷಣೆಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳ ರಕ್ಷಣೆಯ ಕಾನೂನುಗಳ ಕುರಿತು ಅರಿವು ಮೂಡಿಸಲು ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವಕೀಲ ಎಂ.ಸಿ.ಭರಮಣ್ಣ, ಸರ್ಕಾರಿ ಅಭಿಯೋಜಕ ಎಸ್.ಎಂ.ಗೆಜ್ಜಿಹಳ್ಳಿ, ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಂ.ಐ.ಗೌಡಪ್ಪಗೌಡ್ರ, ಸಂಪನ್ಮೂಲ ವ್ಯಕ್ತಿ ಎಂ.ಆರ್.ಜಾಲಗಾರ ಉಪನ್ಯಾಸ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ಸಿ.ನೀರಲಗಿ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಸುನಂದಾ ಮಡಿವಾಳರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ.ಎನ್.ಮಾಳಿಗೇರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪಿ.ವೈ.ಶೆಟ್ಟೆಪ್ಪನವರ, ಮಕ್ಕಳ ರಕ್ಷಣಾ ಘಟಕದ ವಿನಯ ಗುಡಗೂರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮಾ ಕೆ.ಎಸ್., ಮುತ್ತುರಾಜ ಮಾದರ ಇದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಅಭಿಯೋಜನೆ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

**

ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ನಾಗರಿಕರಿಗೂ ಅರಿವು ಮೂಡಿಸುವುದು ಅವಶ್ಯವಾಗಿದೆ – ವೈ.ಎಲ್.ಲಾಡಖಾನ್, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT