ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ನಿಲ್ದಾಣದಲ್ಲಿ ದುರ್ವಾಸನೆ

ಮೀನಿನ ತ್ಯಾಜ್ಯದಿಂದ ತೊಂದರೆ; ಮೂಗು ಮುಚ್ಚಿಕೊಳ್ಳುವ ಪ್ರಯಾಣಿಕರು
Last Updated 13 ಏಪ್ರಿಲ್ 2018, 12:30 IST
ಅಕ್ಷರ ಗಾತ್ರ

ಬಂಗಾರಪೇಟೆ: ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದೊಳಗೆ ಸ್ವಚ್ಛತಾ ಕಾರ್ಯದ ನಿರ್ವಹಣೆ ಸರಿಯಾಗಿ ನಡೆಯುತ್ತಿದ್ದರೂ  ಪಕ್ಕದ ಮೀನಿನ ಅಂಗಡಿಗಳಿಂದ ಬೀರುವ ದುರ್ವಾಸನೆ ಹಾಗೂ ಶೇಖರಣೆಯಾಗಿರುವ ಕೊಳಚೆ ನೀರಿನಿಂದಾಗಿ ನಿಲ್ದಾಣದಲ್ಲಿನ ಪ್ರಯಾಣಿಕರು ನಿತ್ಯ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಒದಗಿದೆ.

ನಿಲ್ದಾಣದ ಪೂರ್ವಕ್ಕೆ ಇರುವ ರಾಜಕಾಲುವೆಯಲ್ಲಿ ಪಟ್ಟಣದ ಮೋರಿ ನೀರು ಹರಿಯುತ್ತಿದೆ. ಆ ಕಾಲುವೆಯಲ್ಲಿ ಅಕ್ಕಪಕ್ಕದ ಮಾಂಸ ಮತ್ತು ಮೀನಿನ ಅಂಗಡಿಗಳ ತ್ಯಾಜ್ಯ ಸುರಿಯಲಾಗುತ್ತಿದ್ದು, ನಿಲ್ದಾಣ ಹಿಂದುಗಡೆಯಲ್ಲಿನ ಕೊಳಚೆ ನೀರಿನಿಂದಾಗಿ ವಾತಾವರಣ ಕಲುಷಿತಗೊಂಡಿದೆ ಎನ್ನವುದು ಸಾರ್ವಜನಿಕರ ದೂರು.

ಪಟ್ಟಣದ ಬಸ್ ನಿಲ್ದಾಣಕ್ಕೆ ಸುಸಜ್ಜಿತ ಕಟ್ಟಡವಿದೆ. ಉತ್ತಮ ಆಸನ ವ್ಯವಸ್ಥೆಯೂ ಇದೆ. ಆದರೆ ಕುಳಿತು ವಿಶ್ರಮಿಸುವ ಉತ್ತಮ ವಾತಾವರಣವಿಲ್ಲ. ಈ ಬಗ್ಗೆ ಯಾರನ್ನು ಪ್ರಶ್ನಿಸಬೇಕು ಎನ್ನುವುದು ತಿಳಿಯುತ್ತಿಲ್ಲ ಎನ್ನುತ್ತಾರೆ ಪ್ರಯಾಣಿಕ ಬಾಬು.

ಮೀನಿನ ಅಂಗಡಿಗಳನ್ನು ತೆರವುಗೊಳಿಸಿ, ಸ್ವಚ್ಛತೆ ನಿರ್ವಹಣೆ ಮಾಡುವಂತೆ ಪುರಸಭೆಗೆ ಮನವಿ ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಮೀನಿನ ಅಂಗಡಿಗಳು ಮುಂಚೆ ರೈಲ್ವೆ ವಸತಿ ಗೃಹಗಳ ಸಮೀಪದ ಕೋಲಾರ ಮುಖ್ಯ ರಸ್ತೆ ಅಂಚಿನಲ್ಲಿ ಇದ್ದವು. ರಸ್ತೆ ವಿಸ್ತರಣೆ ಸಂದರ್ಭ ಅವನ್ನು ಬಸ್ ನಿಲ್ದಾಣದ ಪಕ್ಕಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ ದುರ್ನಾತದ ವಾಸನೆಯಲ್ಲಿಯೇ ಕಾಲ ಕಳೆಯುವ ಅನಿವಾರ್ಯ ಸ್ಥಿತಿ ಒದಗಿದೆ ಎನ್ನುವುದು ಇಲ್ಲಿನ ಬಹುಪಾಲು ಬಸ್ ಚಾಲಕರು ಮತ್ತು ನಿರ್ವಾಹಕರ ದೂರುತ್ತಾರೆ.

'ಕೆಎಸ್ಆರ್‌ಟಿಸಿ ಅಧಿಕಾರಿಗಳು ಮೌಖಿಕ ದೂರು ನೀಡಿದ ಸಂದರ್ಭ ಆರೋಗ್ಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ, ಸ್ವಚ್ಛತೆ ನಿರ್ವಹಣೆ ಮಾಡುವಂತೆ ಮೀನು ಅಂಗಡಿ ಮಾಲೀಕರಿಗೆ ಸೂಚಿಸಲಾಗಿತ್ತು. ಲಿಖಿತ ದೂರು ಕಚೇರಿಗೆ ಸಲ್ಲಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪುರಸಭೆ ಮುಖ್ಯಧಿಕಾರಿ ಶ್ರೀಧರ್ ತಿಳಿಸಿದ್ದಾರೆ.

ಅಂಗಡಿಗಳನ್ನು ಸ್ವಚ್ಛವಾಗಿಟ್ಟಿದ್ದೇವೆ. ಆದರೂ ನಮ್ಮ ಮೇಲೆ ಪುರಸಭೆಗೆ ದೂರು ನೀಡಲಾಗಿದೆ. ಈ ಮುನ್ನ ರಸ್ತೆ ಅಂಚಿನಲ್ಲಿ ಮಾರಾಟ ಮಾಡುತ್ತಿದ್ದೆವು. ಅಲ್ಲಿಂದ ಇಲ್ಲಿಗೆ ಸ್ಥಳಾಂತರಿಸಲಾಯಿತು. ಮತ್ತೆ ತಕರಾರು ಮಾಡಿದರೆ ನಾವು ಎಲ್ಲಿಗೆ ಹೋಗಬೇಕು ಎನ್ನುವುದು ಮೀನಿನ ಅಂಗಡಿ ಮಾಲೀಕರ ಪ್ರಶ್ನೆಯಾಗಿದೆ.

**

ಮೀನು ಮಾರಾಟಕ್ಕೆ ಸೂಕ್ತ ಸ್ಥಳ ನೀಡುವಂತೆ ವರ್ಷದ ಹಿಂದೆಯೇ ಪುರಸಭೆಗೆ ಮನವಿ ಸಲ್ಲಿಸಲಾಗಿದೆ. ಇದುವರೆಗೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ -ಅಪ್ಸರ್,ಮೀನಿನ ಅಂಗಡಿ ಮಾಲೀಕ.

**

ಮೀನಿನ ಅಂಗಡಿಗಳ ತ್ಯಾಜ್ಯದಿಂದ ಉಂಟಾಗಿರುವ ಸಮಸ್ಯೆ ಕುರಿತು ಕೆಎಸ್ಆರ್‌ಟಿಸಿ ಅಧಿಕಾರಿಗಳು ದೂರು ನೀಡಿದಲ್ಲಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು – ಶ್ರೀಧರ್,ಪುರಸಭೆ ಮುಖ್ಯ ಅಧಿಕಾರಿ.

**

–ಕಾಂತರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT