ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿ ಬದಲಾವಣೆ; ಕಾಂಗ್ರೆಸ್‌ನಲ್ಲಿ ಶೀತಲ ಸಮರ

ಟಿಕೆಟ್‌ ‘ಕೈ’ ತಪ್ಪುವ ಆತಂಕ; ನವದೆಹಲಿಗೆ ತೆರಳಿದ ಶಾಸಕ ಡಾ.ಮಕ್ಬೂಲ್‌ ಎಸ್‌. ಬಾಗವಾನ
Last Updated 13 ಏಪ್ರಿಲ್ 2018, 14:00 IST
ಅಕ್ಷರ ಗಾತ್ರ

ವಿಜಯಪುರ: ನಾಮಪತ್ರ ಸಲ್ಲಿಕೆ ಆರಂಭದ ಹೊಸ್ತಿಲಲ್ಲಿ; ಎರಡ್ಮೂರು ತಿಂಗಳಿಂದ ಸ್ವಪಕ್ಷೀಯರಿಂದಲೇ ಬಂಡಾಯ, ತೀವ್ರ ಪ್ರತಿರೋಧ ಎದುರಿಸಿದ್ದ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಕ್ಬೂಲ್‌ ಎಸ್‌.ಬಾಗವಾನ, ಎಐಸಿಸಿ ತನ್ನ ಮೊದಲ ಪಟ್ಟಿ ಪ್ರಕಟಿಸುವ ಮುನ್ನ ಗುರುವಾರ ರಾತ್ರಿ ನವದೆಹಲಿಗೆ ತೆರಳಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಬೆಂಗಳೂರಿನಲ್ಲಿ ಬುಧವಾರ, ಗುರುವಾರ ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ, ಸಿಂದಗಿ, ದೇವರಹಿಪ್ಪರಗಿ ಮತ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಸಂಬಂಧ ದಿಢೀರ್‌ ಬೆಳವಣಿಗೆ ನಡೆದಿವೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆಗೆ ಸಂಬಂಧಿಸಿದಂತೆ ಎರಡು ದಿನ ಬಿರುಸಿನ ಚರ್ಚೆ ನಡೆಯಿತು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಬಾಗವಾನ ಬದಲಾವಣೆಗೆ ಒಲವು ವ್ಯಕ್ತಪಡಿಸಿದರೆ; ಶಾಸಕರಾದ ಶಿವಾನಂದ ಪಾಟೀಲ, ಸಿ.ಎಸ್‌.ನಾಡಗೌಡ, ಯಶವಂತರಾಯಗೌಡ ಪಾಟೀಲ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ’ ಎಂದು ಕೆಪಿಸಿಸಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ವರಿಷ್ಠರ ನಿರ್ಧಾರಕ್ಕೆ ತಮ್ಮ ಆಕ್ಷೇಪವಿಲ್ಲ. ಆದರೆ ಜಿಲ್ಲೆಯಲ್ಲಿನ ಪ್ರಮುಖ ಬದಲಾವಣೆ ಸಂದರ್ಭ ನಮ್ಮ ಅಭಿಪ್ರಾಯ ಪಡೆಯುವುದು ಒಳ್ಳೆಯದು. ಚುನಾವಣೆ ಹೊಸ್ತಿಲಲ್ಲೂ ನಿಮ್ಮ ಮನಸ್ಸಿಗೆ ಬಂದಂತೆ ವರ್ತಿಸಬೇಡಿ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಿರಿ ಎಂದು ಮೂವರು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎನ್ನಲಾಗಿದೆ.

ಈ ದಿಢೀರ್‌ ಬೆಳವಣಿಗೆ, ವರಿಷ್ಠರ ಸೂಚನೆಯಂತೆ ಕೆಲ ತಿಂಗಳಿಂದ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬ್ರೇಕ್‌ ಹಾಕಲಾಗಿದ್ದ ತ್ರಿಮೂರ್ತಿ ಶಾಸಕರು–ಸಚಿವ ಎಂ.ಬಿ.ಪಾಟೀಲ ನಡುವಿನ ಶೀತಲ ಸಮರಕ್ಕೆ, ಚುನಾವಣೆ ಹೊತ್ತಲ್ಲಿ ಮತ್ತೆ ಇಂಬು ನೀಡಿದೆ ಎಂಬ ಮಾತು ಕೈ ಪಾಳೆಯದಲ್ಲೇ ಕೇಳಿ ಬರುತ್ತಿವೆ.

‘ಎರಡು ದಿನದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಶಾಸಕ ಬಾಗವಾನ, ಟಿಕೆಟ್‌ ತಪ್ಪುವ ಆತಂಕದಿಂದ ತಮ್ಮ ಚಾಣಾಕ್ಷ್ಯ ರಾಜಕೀಯ ದಾಳ ಉರುಳಿಸಲು ನವದೆಹಲಿಗೆ ದೌಡಾಯಿಸಿದ್ದಾರೆ. ಎರಡ್ಮೂರು ತಿಂಗಳಿಂದ ಯಾವುದೇ ರಾಜಕೀಯ ತಂತ್ರಗಾರಿಕೆ ಹೆಣೆಯದೆ, ವಿರೋಧಿಗಳ ಪ್ರತಿರೋಧಕ್ಕೂ ಪ್ರತಿಕ್ರಿಯಿಸದೆ ಮೌನಕ್ಕೆ ಶರಣಾಗಿದ್ದ ಮಕ್ಬೂಲ್‌, ಕೊನೆ ಕ್ಷಣದಲ್ಲಿ ತಮ್ಮ ಕಸರತ್ತಿನ ಕೌಶಲ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಯಾರ ಭೇಟಿಗೆ ನವದೆಹಲಿಗೆ ಹೋಗಿದ್ದಾರೆ? ಯಾರ ಜತೆ ತೆರಳಿದ್ದಾರೆ? ಯಾವ ತಂತ್ರಗಾರಿಕೆ ಬಳಸಿ ತಮಗೆ ಟಿಕೆಟ್‌ ಖಾತ್ರಿ ಮಾಡಿಕೊಳ್ಳಲಿದ್ದಾರೆ ಎಂಬ ‘ಚಿದಂಬರ ರಹಸ್ಯ’ ಶಾಸಕರ ಆಪ್ತ ವಲಯಕ್ಕೂ ತಿಳಿಯದಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಟಿಕೆಟ್‌ 50–50 ಎಂಬಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ವಿಜಯಪುರದ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡರೊಬ್ಬರನ್ನು ತಮ್ಮ ಬಳಿ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ಎಲ್ಲವೂ ಸುಖಾಂತ್ಯ ಗೊಂಡರೇ ರಿಯಲ್ ಎಸ್ಟೇಟ್‌ ಉದ್ಯಮಿಯೊಬ್ಬರು ಕಾಂಗ್ರೆಸ್‌ ಅಭ್ಯರ್ಥಿಯಾಗುವುದು ಖಚಿತ. ಇಲ್ಲದಿದ್ದರೇ ಮತ್ತೊಮ್ಮೆ ಬಾಗವಾನಗೆ ಅವಕಾಶ ಸಿಕ್ಕರೂ ಸಿಗಬಹುದು’ ಎಂದು ಕೆಪಿಸಿಸಿ ಮುಖಂಡರೊಬ್ಬರು ತಿಳಿಸಿದರು.

‘ಎಐಸಿಸಿ ಶುಕ್ರವಾರ ಅಥವಾ ಶನಿವಾರ ತನ್ನ ಮೊದಲ ಪಟ್ಟಿ ಬಿಡುಗಡೆಗೊಳಿಸಲಿದೆ. ಇದರಲ್ಲಿ ವಿಜಯಪುರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಇರಲಿದೆ.

ಬಬಲೇಶ್ವರ–ಎಂ.ಬಿ.ಪಾಟೀಲ, ಮುದ್ದೇಬಿಹಾಳ–ಸಿ.ಎಸ್‌.ನಾಡಗೌಡ, ಬಸವನಬಾಗೇವಾಡಿ–ಶಿವಾನಂದ ಪಾಟೀಲ, ಇಂಡಿ–ಯಶವಂತರಾಯಗೌಡ ಪಾಟೀಲ, ನಾಗಠಾಣ–ಪ್ರೊ.ರಾಜು ಆಲಗೂರ, ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಹೊಸ ಮುಖ, ಕುರುಬ ಸಮುದಾಯದ ಕೆಂಚಪ್ಪ ಕತ್ನಳ್ಳಿ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತಗೊಂಡಿದೆ’ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

‘ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಬುಧವಾರ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಸ ಛಾಯಾಗೋಳ ಹೆಸರು ಅಂತಿಮಗೊಳಿಸಲಾಗಿತ್ತು. ಆದರೆ ಗುರುವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್‌.ಪಾಟೀಲ, ರಾಜ್ಯ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ, ಮುದ್ದೇಬಿಹಾಳ ಶಾಸಕ ಸಿ.ಎಸ್‌.ನಾಡಗೌಡ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ, ವಿಜಯಪುರ ಜಿಲ್ಲಾ ಸಹಕಾರ ಬ್ಯಾಂಕ್‌ನ ಉಪಾಧ್ಯಕ್ಷ ಬಿ.ಎಸ್‌.ಪಾಟೀಲ ಯಾಳಗಿ
ಹೆಸರು ಅಂತಿಮಗೊಂಡಿದೆ’ ಎಂಬುದು ತಿಳಿದು ಬಂದಿದೆ.

‘ವಿಜಯಪುರ ನಗರ, ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಮೊದಲ ಪಟ್ಟಿಯಲ್ಲಿ ಪ್ರಕಟಗೊಳ್ಳುವುದು ಅನುಮಾನ. ಎರಡನೇ ಪಟ್ಟಿಯಲ್ಲಿ ಘೋಷಣೆಯಾಗಲಿವೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT