ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆ ಪರಿಪೂರ್ಣ ಆಹಾರ

Last Updated 13 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ದೇಹದ ತೂಕವು ತನ್ನ ಎತ್ತರ ಹಾಗೂ ವಯಸ್ಸಿಗೆ ಇರಬೇಕಾದ ತೂಕಕ್ಕಿಂತ ಸುಮಾರು ಹದಿನೈದು ಕೆ.ಜಿ.ಯಷ್ಟು ಹೆಚ್ಚಾದಾಗ ಗೆಳತಿಗೆ ಆತಂಕವಾಗಿತ್ತು. ಈ ಬಾರಿ ವ್ಯಾಯಾಮ ತರಗತಿಗೆ (ಜಿಮ್) ಸೇರಲೇಬೇಕೆಂದು ಮನಸ್ಸು ಮಾಡಿದ್ದಳು. ಸರಿ, ಧೃಡ ನಿಶ್ಚಯದಿಂದ ತರಗತಿಗೆ ಸೇರಿ ತರಬೇತಿಯೇನೋ ಶುರುವಾಯಿತು. ಆದರೆ ಅಲ್ಲಿ ವ್ಯಾಯಾಮ ಶಿಕ್ಷಕರು ಹೇಳಿಕೊಡುವಷ್ಟು ಬಾರಿ ವಿವಿಧ ವ್ಯಾಯಾಮವನ್ನು ಮಾಡಲು ಗೆಳತಿ ಬಹಳವೇ ಕಷ್ಟಪಡುತ್ತಿದ್ದಳು.

ಕೈಕಾಲುಗಳ ಮಾಂಸಖಂಡಗಳಲ್ಲಿ ಆಗುತ್ತಿದ್ದ ಒಂದು ಬಗೆಯ ನೋವು ಹಾಗೂ ಆಯಾಸದಂತಹ ಅನುಭವದಿಂದ ಆಕೆಗೆ ವ್ಯಾಯಾಮವೇ ಬೇಡವಾದಂತಾಗಿತ್ತು. ಅದನ್ನು ವ್ಯಾಯಾಮ ಶಿಕ್ಷಕರಲ್ಲಿ ಹೇಳಿಕೊಂಡಾಗ, ಅವರು ನೀವು ಪ್ರೊಟೀನ್ ಹಾಗೂ ಕ್ಯಾಲ್ಸಿಯಂಯುಕ್ತ ಆಹಾರವನ್ನು ಹೆಚ್ಚು ಸೇವಿಸಿದರೆ ಈ ಬಗೆಯ ನೋವು ಅಥವಾ ದಣಿವು ಆಗುವುದಿಲ್ಲ ಎಂಬ ಸಲಹೆಯಿತ್ತರು.

ಗೆಳತಿ ಸಸ್ಯಾಹಾರಿ, ಶಿಕ್ಷಕರ ಸಲಹೆಯಂತೆ ಸಸ್ಯಾಹಾರಗಳಲ್ಲಿ ಪ್ರೊಟೀನು ಹೆಚ್ಚಾಗಿ ಸಿಗುವ ಮೊಳಕೆ ಬರಿಸಿದ ಕಾಳುಗಳು, ಹಾಲು ಹಾಗೂ ಸೋಯಾಕಾಳಿನ ಆಹಾರಪದಾರ್ಥಗಳನ್ನು ನಿಯಮಿತವಾಗಿ ಉಪಯೋಗಿಸಲಾರಂಭಿಸಿದ್ದೂ ಆಯಿತು. ಆದರೂ ದಣಿವಿನ ಅನುಭವದಲ್ಲಿ ಅಂತಹ ಬದಲಾವಣೆಯಾಗಲಿಲ್ಲ. ನಂತರ ವ್ಯಾಯಾಮ ಶಿಕ್ಷಕರ ಸಲಹೆಯಂತೆ ಬಹಳ ಕಷ್ಟಪಟ್ಟು ಮೊಟ್ಟೆಯ ಬಿಳಿಯ ಭಾಗವನ್ನು ತಿನ್ನಲಾರಂಭಿಸಿದಳು. ಏನಾಶ್ಚರ್ಯ! ಒಂದೆರಡು ದಿನಗಳಲ್ಲಿಯೇ ಆಕೆಯ ನೋವು ಹಾಗೂ ದಣಿವು ಮಾಯವಾಗಿತ್ತು! ಗೆಳತಿ ನಿರಾಯಾಸವಾಗಿ ವ್ಯಾಯಾಮಶಿಕ್ಷಕರು ಹೇಳಿದಷ್ಟು ಬಾರಿ ಎಲ್ಲ ಬಗೆಯ ವ್ಯಾಯಾಮಗಳನ್ನು ಮಾಡಲಾರಂಭಿಸಿದ್ದಳು!

ಬಹಳ ದಿನದ ಆಸೆಯನ್ನು ಪೂರೈಸಿಕೊಳ್ಳಲು ಈ ಬೇಸಿಗೆಯಲ್ಲಿ ಈಜು ಕಲಿಯಲು ಸೇರಿಕೊಂಡಿದ್ದೆ. ಕೆಲವು ದಿನಗಳಲ್ಲಿಯೇ ಈಜುವ ಮುಖ್ಯ ತಂತ್ರಗಳೇನೋ ಕರಗತವಾದವು. ಆದರೆ, ಆ ಈಜುಕೊಳದ ಪೂರ್ಣ ಉದ್ದಕ್ಕೂ ಈಜಲು ಬಹಳ ಕಷ್ಟವಾಗುತ್ತಿತ್ತು. ಕೈ ಹಾಗೂ ಕಾಲುಗಳನ್ನು ಬಹಳ ಸಮಯದವರೆಗೆ ನೀರಿನಲ್ಲಿ ಚಲನೆಯಲ್ಲಿಡುವಾಗ ಮಾಂಸಖಂಡಗಳಲ್ಲಿ ಬಹಳವೇ ನೋವಾಗುತ್ತಿತ್ತು. ಆಗಲೂ ಈಜುಶಿಕ್ಷಕರು ನನಗೆ ಸಲಹೆಯಿತ್ತದ್ದು ಪ್ರೊಟೀನ್‍ಯುಕ್ತ ಆಹಾರದ ಸೇವನೆ. ಸಸ್ಯಾಹಾರಿಯಾದ ನಾನೂ ಬೇಳೆಕಾಳುಗಳ ಆಹಾರಪದಾರ್ಥಗಳನ್ನು ಪ್ರಯತ್ನಿಸಿದ್ದೆ. ಆದರೆ ನಿಜವಾದ ಲಾಭವಾದದ್ದು ಮೊಟ್ಟೆಯ ಬಿಳಿ ಭಾಗವನ್ನು ತಿನ್ನಲು ಪ್ರಾರಂಭಿಸಿದ ಮೇಲೇಯೇ.

ಹೌದು, ಮೊಟ್ಟೆ ಒಂದು ಪರಿಪೂರ್ಣ ಆಹಾರ. ಪೌಷ್ಟಿಕಾಂಶಗಳ ಆಕರ. ಎಲ್ಲ ವಯೋಮಾನದವರಿಗೂ ಒಂದು ಆದರ್ಶಪ್ರಾಯವಾದ ಆಹಾರ ಎಂದರೂ ತಪ್ಪಾಗಲಾರದು. ಒಂದು ಮೊಟ್ಟೆಯಲ್ಲಿ ಕಾರ್ಬೊಹೈಡ್ರೈಟ್ ಮತ್ತು ವಿಟಮಿನ್ ‘ಸಿ’ಯನ್ನು ಹೊರತುಪಡಿಸಿ ನಮ್ಮ ಶರೀರಕ್ಕೆ ಬೇಕಾದ ಉಳಿದೆಲ್ಲ ಅವಶ್ಯ ಪೋಷಕಾಂಶಗಳಿವೆ. ಸುಮಾರು ಅರವತ್ತು ಗ್ರಾಂ ತೂಕವಿರುವ ಮೊಟ್ಟೆಯಲ್ಲಿ ಮುಖ್ಯವಾಗಿ ಆರು ಗ್ರಾಂ ಪ್ರೊಟೀನ್, ಆರು ಗ್ರಾಂ ಕೊಬ್ಬಿನಾಂಶ, ಮೂವತ್ತು ಮಿಲಿಗ್ರಾಂ ಕ್ಯಾಲ್ಸಿಯಂ, 1.5 ಮಿಲಿಗ್ರಾಂ ಕಬ್ಬಿಣಾಂಶ ಇರುತ್ತದೆ. ಒಂದು ಮೊಟ್ಟೆಯ ಸೇವನೆಯು ವ್ಯಕ್ತಿಗೆ ಸರಾಸರಿ 70 ಕಿಲೋ ಕ್ಯಾಲರಿಯಷ್ಟು ಶಕ್ತಿಯನ್ನು ಒದಗಿಸುತ್ತದೆ.

ಆಹಾರತಜ್ಞರು ಮೊಟ್ಟೆಯಲ್ಲಿರುವ ಪ್ರೊಟೀನನ್ನು ಬಹಳ ಉತ್ತಮ ಮಟ್ಟದ ಪ್ರೊಟೀನ್ ಎಂದು ಪರಿಗಣಿಸಿದ್ದಾರೆ. ಏಕೆಂದರೆ, ಇದು ಶರೀರದ ಜೀವಕೋಶಗಳಿಗೆ ಅತ್ಯವಶ್ಯವಾದ ಒಂಬತ್ತು ಉಪ ಪ್ರೊಟೀನ್‌(ಅಮೈನೋ ಆ್ಯಸಿಡ್)ಗಳನ್ನು ಸರಿಯಾದ ಪ್ರಮಾಣದಲ್ಲಿ ಹೊಂದಿದೆ. ಅಲ್ಲದೆ, ಇದರಲ್ಲಿನ ಪ್ರೊಟೀನು ಶರೀರದಲ್ಲಿ ಸಂಪೂರ್ಣವಾಗಿ ಉಪಯೋಗಿಸಲ್ಪಡುತ್ತದೆ. ಹಾಗಾಗಿಯೇ ಇತರ ಆಹಾರಗಳ ಪ್ರೊಟೀನ್ ಗುಣಮಟ್ಟವನ್ನು ಮೊಟ್ಟೆಯ ಪ್ರೊಟೀನ್‍ಗೆ ಹೋಲಿಸಿ ಅಳೆಯುತ್ತಾರೆ.

ಇನ್ನು ವಿಟಮಿನ್‍ಗಳ ವಿಚಾರಕ್ಕೆ ಬಂದರೆ, ಮೊಟ್ಟೆಯಲ್ಲಿ ವಿಟಮಿನ್ ‘ಸಿ’ಯನ್ನು ಹೊರತುಪಡಿಸಿ ಶರೀರಕ್ಕೆ ಅಗತ್ಯವಾದ ಎಲ್ಲ ವಿಟಮಿನ್‍ಗಳೂ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುತ್ತವೆ. ಖನಿಜಾಂಶಗಳಾದ ಕ್ಯಾಲ್ಸಿಯಂ, ಸತು (ಝಿಂಕ್), ಕಬ್ಬಿಣಾಂಶ ಮತ್ತು ರಂಜಕ (ಫಾಸ್ಫರಸ್) ಸಹ ಮೊಟ್ಟೆಯಲ್ಲಿ ಇರುತ್ತವೆ. ಮಾಂಸಾಹಾರ ಮತ್ತು ಹಾಲಿಗೆ ಹೋಲಿಸಿದಾಗ ಮೊಟ್ಟೆಯಲ್ಲಿರುವ ಪ್ರೊಟೀನ್ ಶರೀರದಲ್ಲಿ ಪೂರ್ತಿಯಾಗಿ ಹಾಗೂ ಸುಲಭವಾಗಿ ಜೀರ್ಣವಾಗಬಲ್ಲದು ಎಂಬುದೂ ಅಧ್ಯಯನಗಳಿಂದ ತಿಳಿದು ಬಂದಿದೆ.

ಮೊಟ್ಟೆಯಲ್ಲಿನ ಕೊಬ್ಬಿನಾಂಶದ ಬಗ್ಗೆ ಆತಂಕ ಬೇಕಿಲ್ಲ. ಏಕೆಂದರೆ ಇದು ಶರೀರಕ್ಕೆ ಬೇಕಾದ ಒಳ್ಳೆಯ ಕೊಬ್ಬಿನಾಂಶ(ಎಚ್‌ಡಿಎಲ್ ಕೊಲೆಸ್ಟ್ರಾಲ್)ವನ್ನು ಒದಗಿಸುತ್ತದೆ. ಅಲ್ಲದೆ, ಬೇಯಿಸಿದ ಮೊಟ್ಟೆಯ ಬಿಳಿಯ ಭಾಗದಲ್ಲಿ ಕೊಬ್ಬಿನಾಂಶವಿರುವುದಿಲ್ಲ. ಅದರಲ್ಲಿ ಕೇವಲ ಪ್ರೊಟೀನ್ ಮತ್ತು ವಿಟಮಿನ್‌ಗಳಾದ ವಿಟಮಿನ್ ಬಿ-2, ಬಿ-6 ಮತ್ತು ಬಿ-12 ಹೇರಳವಾಗಿರುತ್ತದೆ. ಆದ್ದರಿಂದ ಕೇವಲ ಮೊಟ್ಟೆಯ ಬಿಳಿಯ ಭಾಗವನ್ನು ತಿನ್ನುವುದರಿಂದ ಕೊಬ್ಬನ್ನು ಹೊರತುಪಡಿಸಿ ಅದರಲ್ಲಿನ ಉಳಿದ ಪೌಷ್ಟಿಕಾಂಶಗಳ ಪ್ರಯೋಜನವನ್ನು ಪಡೆಯಬಹುದು.

ವಿಟಮಿನ್ ಬಿ-12 ನರಗಳ ಆರೋಗ್ಯಕ್ಕೆ ಹಾಗೂ ರಕ್ತಕಣಗಳ ಬೆಳವಣಿಗೆಗೆ ಅತ್ಯವಶ್ಯ. ಅಲ್ಲದೆ, ವಿಟಮಿನ್ ಬಿ-12 ಹೊಂದಿರುವ ಸಸ್ಯಾಹಾರ ಎಂದರೆ ಹಾಲು ಮಾತ್ರ. ಆಹಾರದಲ್ಲಿ ದೀರ್ಘಕಾಲದ ವಿಟಮಿನ್ ಬಿ-12 ಕೊರತೆಯು ರಕ್ತಹೀನತೆ ಹಾಗೂ ಕೆಲವು ಬಗೆಯ ನರ–ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು.

ಮೊಟ್ಟೆಯನ್ನು ಹಸಿಯಾಗಿ ತಿನ್ನುವುದೋ ಅಥವಾ ಬೇಯಿಸಿ ತಿನ್ನುವುದೋ ಎಂಬ ಅಂಶವು ಅನೇಕರನ್ನು ಕಾಡಬಹುದು. ವಿವಿಧ ಕಾರಣಗಳಿಗಾಗಿ ಮೊಟ್ಟೆಯನ್ನು ಬೇಯಿಸಿ ತಿನ್ನುವುದೇ ಉತ್ತಮ. ಮೊಟ್ಟೆಯನ್ನು ಹಸಿಯಾಗಿ ತಿಂದಾಗ ಅದರಲ್ಲಿನ ಶೇ 50ರಷ್ಟು ಪ್ರೊಟೀನ್ ಮಾತ್ರ ದೇಹಕ್ಕೆ ಲಭ್ಯವಾಗುತ್ತದೆ. ಅಲ್ಲದೆ, ಹಸಿ ಮೊಟ್ಟೆಯಲ್ಲಿನ ಅವಿಡಿನ್ ಎಂಬ ಅಂಶವು ಅದರಲ್ಲಿರುವ ಬಯೋಟಿನ್ ಎಂಬ ವಿಟಮಿನ್‍ನೊಂದಿಗೆ ಬೆಸೆದುಕೊಂಡು ಶರೀರಕ್ಕೆ ಅದರ ಲಭ್ಯತೆಯಿಲ್ಲದಂತೆ ಮಾಡುತ್ತದೆ. ಆದರೆ, ಮೊಟ್ಟೆಯನ್ನು ಬೇಯಿಸಿದಾಗ ಅವಿಡಿನ್ ಅಂಶವು ನಶಿಸಿ ಹೋಗುವುದರಿಂದ ಶರೀರಕ್ಕೆ ಬಯೋಟಿನ್ ಕೂಡ ದೊರೆಯುತ್ತದೆ.

ಮೊಟ್ಟೆಯಲ್ಲಿನ ಪ್ರೊಟೀನ್ ಮತ್ತಿತರ ಅಂಶಗಳು ಶರೀರದ ರೋಗನಿರೋಧಕ ವ್ಯವಸ್ಥೆಯನ್ನೂ ಬಲಪಡಿಸುತ್ತವೆ. ಇದು ದೇಹವನ್ನು ಎಲ್ಲ ಬಗೆಯ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಅಣಿ ಮಾಡುತ್ತದೆ. ಅಂತೆಯೇ ಮೊಟ್ಟೆಯಲ್ಲಿ ಕೆಲವು ಆ್ಯಂಟಿ ಆಕ್ಸಿಡೆಂಟ್‍ಗಳೂ ಸಾಕಷ್ಟು ಪ್ರಮಾಣದಲ್ಲಿದ್ದು ಅವು ಶರೀರದ ಅಂಗಾಂಶಗಳ ದುರಸ್ತಿಯಲ್ಲಿ ಸಹಕರಿಸುತ್ತವೆ. ಅಲ್ಲದೆ ಇದು ವ್ಯಕ್ತಿಯ ಲವಲವಿಕೆಯನ್ನು ಹೆಚ್ಚಿಸಿ ಶರೀರದ ಮುಪ್ಪನ್ನು ಮುಂದೂಡುವಲ್ಲೂ ಸಹಕಾರಿ.

ಈ ಎಲ್ಲ ಅಂಶಗಳನ್ನು ಗಮನಿಸಿದಾಗ ವೈಜ್ಞಾನಿಕವಾಗಿ ಮೊಟ್ಟೆಯು ಒಂದು ಪರಿಪೂರ್ಣ, ಅತ್ಯುತ್ತಮ ಹಾಗೂ ಆದರ್ಶಪ್ರಾಯವಾದ ಆಹಾರ ಎಂಬುದು ಧೃಡವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT