ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲಲ್ಲೂ ನಿದ್ದೆ!

Last Updated 13 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

1. ನಾನು ಸರ್ಕಾರಿ ನೌಕರ. ನನಗೆ ಕಚೇರಿಯಲ್ಲಿ ಮತ್ತು ಕಾರ್ ಓಡಿಸುವಾಗ ನಿದ್ದೆ ಬರುತ್ತದೆ. ಹಾಗೆಯೇ ಬೇಗ ಕೋಪ ಬರುತ್ತದೆ; ಆಗ ಉದ್ರೇಕದಿಂದ ಮಾತನಾಡುತ್ತೇನೆ. ಈ ಸಮಸ್ಯೆಗೆ ಪರಿಹಾರ ತಿಳಿಸಿ.
-ಹೆಸರು, ಊರು ಬೇಡ

ಉತ್ತರ: ಪ್ರತಿಯೊಬ್ಬರಿಗೂ ಕೆಲವೊಮ್ಮೆ ಹಗಲಿನಲ್ಲೂ ನಿದ್ದೆ ಮಾಡಬೇಕು ಎನ್ನಿಸುವುದು ಸಾಮಾನ್ಯ. ಆದರೆ ಒಮ್ಮೊಮ್ಮೆ ಅತಿಯಾದ ನಿದ್ದೆ ಕಾಡುತ್ತದೆ. ಇದು ಅವರ ದೈನಂದಿನ ಕೆಲಸಕ್ಕೆ ಅಡ್ಡಿಮಾಡುತ್ತದೆ ಮತ್ತು ಬಿಡುವಿನ ವೇಳೆಯಲ್ಲಿ ನಿದ್ರಿಸುವಂತೆ ಮಾಡುತ್ತದೆ. ಇದನ್ನು ‘ಹೈಪರ್‌ ಸೋಮ್ನಿಯಾ’ ಎನ್ನುತ್ತಾರೆ. ಮರುಕಳಿಸುವ ನಿದ್ದೆಯು ಮನುಷ್ಯರಲ್ಲಿ ಪದೇ ಪದೇ ಆಕಳಿಕೆ ಬರುವಂತೆ ಮಾಡುತ್ತದೆ. ಜೊತೆಗೆ ಕೆಲಸದ ಸಮಯದಲ್ಲೂ ಇದು ಮುಂದುವರಿಯುತ್ತದೆ. ರಾತ್ರಿ ವೇಳೆ ನಿದ್ದೆಗೆಡುವುದು ಕೂಡ ಇದಕ್ಕೆ ಕಾರಣವಿರಬಹುದು. ಹಾಗಾಗಿ ನಿಮಗೆ ಶಾಂತವಾಗಿ ನಿದ್ರಿಸಲು ಅಡ್ಡಿಪಡಿಸುವ ಅಂಶಗಳನ್ನು ಗುರುತಿಸಿ. ಈ ಕೆಳಗಿನ ಕೆಲವು ಟಿಪ್ಸ್‌ಗಳನ್ನು ಪಾಲಿಸಿ:

* ರಾತ್ರಿ ಸರಿಯಾದ ಸಮಯಕ್ಕೆ ನಿದ್ದೆ ಮಾಡಿ.
* ಮಲಗುವ ಮುನ್ನ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ದೂರವಿರಿಸಿ.
* ಬೆಳಿಗ್ಗೆ ಏಳಲು ಒಂದು ಸರಿಯಾದ ಸಮಯವನ್ನು ನಿಗದಿಪಡಿಸಿಕೊಳ್ಳಿ.
* ಪ್ರತಿದಿನ ಅದೇ ಸಮಯಕ್ಕೆ ಏಳಲು ಅಭ್ಯಾಸ ಮಾಡಿಕೊಳ್ಳಿ.
* ನಿಮ್ಮ ಆಹಾರಕ್ರಮ ಹಾಗೂ ವ್ಯಾಯಾಮಗಳ ಮೇಲೆ ಗಮನ ಇರಲಿ.
* ಮಧ್ಯಾಹ್ನದ ಹೊತ್ತು ಆಕಳಿಸುವುದನ್ನು ನಿಯಂತ್ರಿಸಲು ಪ್ರಯತ್ನಿಸಿ.

ನೀವು ಈ ಎಲ್ಲ ಟಿಪ್ಸ್‌ಗಳನ್ನು ಅನುಸರಿಸಿದ ಮೇಲೂ ನಿಮ್ಮಲ್ಲಿ ಹಗಲಿನ ವೇಳೆ ನಿದ್ದೆಯನ್ನು ನಿಯಂತ್ರಿಸಲು ಆಗದಿದ್ದರೆ, ಇದು ನಿದ್ರಾಹೀನತೆಗೆ ಕಾರಣವಾಗಬಹುದು. ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ ಮೇಲೂ ಹಗಲಿನ ವೇಳೆ ಅತಿಯಾದ ನಿದ್ದೆ ಬಂದರೆ, ದೈನಂದಿನ ಚಟುವಟಿಕೆ ವೇಳೆ ಯಾವುದೇ ಸೂಚನೆ ಇಲ್ಲದೇ ನಿದ್ದೆ ಆವರಿಸಿದರೆ ನಿಮಗೆ ನಿದ್ದೆಯ ಸಮಸ್ಯೆ ಇದೆ ಎನ್ನುವುದು ಖಚಿತ. ಈ ಸಮಸ್ಯೆ ನಿಮ್ಮಲ್ಲಿ ಇದ್ದರೆ ನೀವು ಒಬ್ಬ ಥೆರಫಿಸ್ಟ್ ಅನ್ನು ಕಾಣುವುದು ಉತ್ತಮ. ಅವರು ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಹುದು.

2. ನನ್ನ ವಯಸ್ಸು 23; ಬಿಸಿಎ ಮುಗಿದಿದೆ. ನಾನು ಒಂದು ಕಡೆ ಕಂಪ್ಯೂಟರ್ ಟೀಚಿಂಗ್ ಮಾಡಬೇಕು ಎಂದುಕೊಂಡಿದ್ದೇನೆ. ಆದರೆ ನನಗೆ ತುಂಬಾ ಭಯ. ಎಲ್ಲ ಕೆಲಸದಲ್ಲೂ ಅಂಜಿಕೆ. ನಾನು ಏನು ಮಾಡಬೇಕು ತಿಳಿಸಿ.
– ಹೆಸರು, ಊರು ಬೇಡ

ಉತ್ತರ: ನಿಮ್ಮ ಮಾತುಗಾರಿಕೆ, ಕಾರ್ಯಕ್ಷಮತೆ ಹಾಗೂ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಕಲಿಯುವುದು ಉತ್ತಮ. ಆದರೆ ಸಾಮಾನ್ಯವಾಗಿ ನಿಮ್ಮ ಭಯವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಲು ಇದರಿಂದ ಮಾತ್ರ ಸಾಧ್ಯವಿಲ್ಲ. ಸಾಮಾಜಿಕವಾಗಿ ಮಾತನಾಡುವಾಗ ಹಾಗೂ ಜನರೊಂದಿಗೆ ಬೆರೆಯುವ ವೇಳೆ ಉಂಟಾಗುವ ಋಣಾತ್ಮಕ ಊಹೆಗಳು, ನಂಬಿಕೆಗಳು, ಯೋಜನೆಗಳು, ಚಿತ್ರಣಗಳು ಹಾಗೂ ಭವಿಷ್ಯವಾಣಿಗಳನ್ನು ಗುರುತಿಸಿ ಮತ್ತು ಅವನ್ನು ಪುನರ್ಮನನ ಮಾಡಿಕೊಳ್ಳಿ. ಎಲ್ಲವನ್ನು ಒಪ್ಪಿಕೊಳ್ಳಲು ಕಲಿಯಿರಿ ಮತ್ತು ನೀವು ಏನು ಎಂಬುದನ್ನು ಇತರರಿಗೆ ಅರ್ಥ ಮಾಡಿಸಬೇಕು ಎಂಬ ಭಾವನೆಯನ್ನು ಮನಸ್ಸಿನಿಂದ ತೆಗೆದು ಹಾಕಿ; ಅದುವೇ ಚಿಕಿತ್ಸೆಯ ಮೂಲ.

ನಿಮ್ಮಿಂದ ಸಾಧ್ಯವಾದರೆ ಭಯವನ್ನು ನಿಯಂತ್ರಿಸಲು ಪ್ರಯ್ನತಿಸಿ. ಭಯದಿಂದ ದೂರ ಇರಲು ಹೊಸ ಕೌಶಲಗಳನ್ನು ಕಲಿಯಿರಿ. ನಿಮ್ಮ ಬಗ್ಗೆ ನಿಮ್ಮೊಳಗೇ ನಂಬಿಕೆಯನ್ನು ಬೆಳೆಸಿಕೊಳ್ಳಿ; ನಿಮ್ಮನ್ನು ನೀವು ನಂಬಿ. ಭಯವನ್ನು ಧೈರ್ಯವಾಗಿ ಎದುರಿಸಿದರೆ ಆತಂಕದಿಂದ ಹೊರಬರಲು ಸಾಧ್ಯ. ಆಗ ಇತರೊಂದಿಗೆ ನೀವು ಭಯವಿಲ್ಲದೇ ಮಾತನಾಡಬಹುದು.

ನನಗೆ ಭಯವಾಗುತ್ತಿದೆ ಎಂದು ನಿಮಗೆ ನೀವೇ ಅಂದುಕೊಳ್ಳುವುದಕ್ಕಿಂತ ನಿಮ್ಮ ಮುಂದಿರುವ ಜನರ ಮೇಲೆ ಹೆಚ್ಚು ಗಮನವನ್ನು ಹರಿಸಿ. ನಾನು ಮಾಡುವ ಕೆಲಸಗಳೆಲ್ಲವೂ ತಪ್ಪಾಗುತ್ತದೆ ಎಂದು ನಿಮ್ಮೊಳಗೆ ನೀವೇ ಆತಂಕ ಪಡುವುದನ್ನು ನಿಲ್ಲಿಸಿ. ಮನಸ್ಸು ಯೋಚನೆಯ ಮೇಲೆ ಕೇಂದ್ರಿತವಾಗಿರಲಿ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಪ್ರಯತ್ನಿಸಿ.

ನಿಮ್ಮನ್ನೇ ನೀವು ಅನುಮಾನಿಸಿಕೊಂಡು, ಆ ಮೂಲಕ ಆತ್ಮವಿಶ್ವಾಸವನ್ನು ಕುಗ್ಗಿಸುವಂಥ ಆಲೋಚನೆಗಳಿಂದ ದೂರವಿರಿ.

ನಿಮ್ಮ ದೇಹ ಹಾಗೂ ಮನಸ್ಸನ್ನು ಶಾಂತವಾಗಿರಿಸುವುದನ್ನು ಅಭ್ಯಾಸ ಮಾಡಿ. ಅದಕ್ಕಾಗಿ ದೀರ್ಘವಾದ ಉಸಿರಾಟ, ಶಾಂತ ಮನಃಸ್ಥಿತಿ, ವ್ಯಾಯಾಮ, ಯೋಗ ಹಾಗೂ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿ.

ನಿಮ್ಮ ಪಾಠಕ್ಕೆ ಬೇಕಾದ ಪರಿಕರಗಳನ್ನು ಮೊದಲೇ ತಯಾರಿಸಿಕೊಳ್ಳಿ; ಗಟ್ಟಿಯಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ‌
ಎಲ್ಲ ವಿಷಯದಲ್ಲೂ ಪರಿಪೂರ್ಣರಾಗಿಯೇ ಇರಬೇಕು ಎಂದುಕೊಳ್ಳಬೇಡಿ. ತಪ್ಪುಗಳಾಗುವುದು ಸಾಮಾನ್ಯ. ಅವನ್ನು ಒಪ್ಪಿಕೊಳ್ಳಿ. ಸಹಜವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳಿ. 

ಏನಾದ್ರೂ ಕೇಳ್ಬೋದು
ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ. ಇಮೇಲ್ ವಿಳಾಸ; bhoomika@prajavani.co.in ವಾಟ್ಸ್ಯಾಪ್: 9482006746

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT