ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಕಾ ಎಂಬ ವಿಶಾಲ ಜಲಾಗಾರ

Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಡಾ. ತೈಲೂರು ದೇವರಾಜ್

ಆಂಧ್ರಪ್ರದೇಶ ದಾಟಿ ಒಡಿಶಾದ ಪುರಿಗೊ ಅಥವಾ ಭುವನೇಶ್ವರಕ್ಕೊ ಹೋಗುವವರಿಗೆ ದಾರಿಯಲ್ಲಿ ಒಂದೆರಡು ಗಂಟೆ ಇತ್ತ ಸಾಗರವೂ ಅಲ್ಲದ ಅತ್ತ ನದಿಯೂ ಅಲ್ಲದ ಉಪ್ಪುನೀರಿನ ಹರವು ವಿಶೇಷ ಅನುಭೂತಿ ನೀಡುತ್ತದೆ. ಸಾಗರದಂತೆ ವಿಶಾಲವಾಗಿದ್ದರೂ ಸಾಗರವಲ್ಲದ ಮಹಾ ಸರೋವರ ಅದು. ಬಂಗಾಳಕೊಲ್ಲಿ ಕೊರೆದುಕೊಂಡು ಒಡಿಶಾದ ವಿಶಾಲ ಭೂಪ್ರದೇಶವನ್ನು ಆವರಿಸಿರುವ ಈ ಚಿಲ್ಕಾ, ಪ್ರಪಂಚದಲ್ಲೇ ಎರಡನೆಯ ದೊಡ್ಡ ಖಾರಿ ಸರೋವರ.

ಸಮುದ್ರದ ನೀರು ಭೂಪ್ರದೇಶದೊಳಗೆ ನುಗ್ಗಿ ನೈಸರ್ಗಿಕವಾಗಿ ನಿರ್ಮಾಣವಾಗುವ ಆಳವಿಲ್ಲದ ಜಲಾವೃತ ರಚನೆಗೆ ಖಾರಿ ಸರೋವರ ಎನ್ನುತ್ತಾರೆ. ‘ಚಿಲ್ಕಾ' ಎಂಬ ಶಬ್ದಕ್ಕೆ ನಾನಾ ಅರ್ಥಗಳಿವೆ. ಬೀಜ, ಕವಚ, ಸಿಪ್ಪೆ, ತೊಗಟೆ ಹೀಗೆ... ಉಪಗ್ರಹ ನಕ್ಷೆ ಮೂಲಕ ನೋಡಿದರೆ ಇಡೀ ಚಿಲ್ಕಾ ಸರೋವರ ಹೆಚ್ಚೂಕಮ್ಮಿ ಪಿಯರ್ ಹಣ್ಣಿನ ಆಕಾರದಲ್ಲಿ ಕಾಣಿಸುತ್ತದೆ. ಒಡಿಶಾ ರಾಜ್ಯದ ಪುರಿ, ಖುರ್ದಾ ಮತ್ತು ಗಂಜಾಂ ಮೂರು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಈ ಜಲಾಗಾರ 64.3 ಕಿ.ಮೀ. ಗಳಷ್ಟು ಉದ್ದವಿದೆ. ಅದರ ವಿಸ್ತೀರ್ಣ ಮಳೆಗಾಲ ಮತ್ತು ಬೇಸಿಗೆ ಕಾಲಗಳಲ್ಲಿ ಕ್ರಮವಾಗಿ ಹಿಗ್ಗಿ ಕುಗ್ಗುತ್ತದೆ. ಮುಂಗಾರಿನಲ್ಲಿ 1165 ಚದರ ಕಿ.ಮೀ.ಗಳಷ್ಟಾಗುವ ಜಲಪ್ರದೇಶ ಬೇಸಿಗೆಯಲ್ಲಿ 906 ಚದರ ಕಿ.ಮೀ. ಗಳಿಗೆ ಇಳಿಯುತ್ತದೆ.

ಅಪರೂಪದ ಗುಣಲಕ್ಷಣ ಮತ್ತು ವಲಸೆ ಪಕ್ಷಿಗಳ ಆವಾಸ ಸ್ಥಾನದಿಂದಾಗಿ ಚಿಲ್ಕಾ ಸರೋವರಕ್ಕೆ ‘ರಾಮ್‍ಸರ್ ಜಲತಾಣ' ಎಂಬ ವಿಶೇಷವಾದ ಮಾನ್ಯತೆ ಲಭಿಸಿದೆ. ದಯಾ, ಭಾರ್ಗವಿ, ಮಕ್ರಾ, ಮಾಲಗುಣಿ ಮತ್ತು ಲೂನಾ ನದಿಗಳು ಈ ಸರೋವರಕ್ಕೆ ಪ್ರಮುಖ ಒಳಹರಿವಿನ ನೀರಿನ ಮೂಲಗಳು. ಅರಖಕುಡಾ ಮತ್ತು ಸಾತ್ಪದ ಎಂಬ ಎರಡು ಜಾಗಗಳಲ್ಲಿ ಬಂಗಾಳಕೊಲ್ಲಿಯೊಂದಿಗೆ ಸಮ್ಮಿಲನಗೊಂಡಿದೆ. ಸಾತ್ಪದ ಸ್ಥಳದಲ್ಲಿ ಸರೋವರ ಮತ್ತು ಸಮುದ್ರ ಅರ್ಧಚಂದ್ರಾಕಾರದಲ್ಲಿ ಸಂಧಿಸಿ ಪ್ರಾಕೃತಿಕವಾಗಿ ನುಗ್ಗುವ ನೀರಿಗೆ ತಡೆ ಒಡ್ಡಿದಂತಿದೆ. ಜನರಿಗೆ ತಲುಪಲು ಮುಕ್ತಮಾರ್ಗ ಇಲ್ಲದಿರುವುದರಿಂದ ಇಲ್ಲಿಯ ಕಿನಾರೆ ತುಂಬಾ ಸ್ವಚ್ಛವಾಗಿದೆ. ಕಡಲತೀರದಲ್ಲಿ ಅಡ್ಡಾಡಿ ಮೂಡುವ ಹೆಜ್ಜೆಗುರುತುಗಳು ಬೆಳ್‍ನೊರೆಯ ಹೊದಿಕೆಯಲ್ಲಿ ಹೊಳೆಯುತ್ತವೆ.

ಚರಿತ್ರೆಯ ಪುಟಗಳಲ್ಲಿ ಚಿಲ್ಕಾ
ಚಾರಿತ್ರಿಕವಾಗಿ ಸಹ ಚಿಲ್ಕಾ ಸರೋವರದ ಬಗ್ಗೆ ಅನೇಕ ಉಲ್ಲೇಖಗಳಿವೆ. ಭೂಗರ್ಭಶಾಸ್ತ್ರದ ಕಾಲಮಾನದ ಪ್ರಕಾರ ಪ್ಲಿಸ್ಟೊಸೀನ್ ಎಂಬ ಅವಧಿಯ ಕಾಲದಲ್ಲೆ (1.8 ಮಿಲಿಯ ವರ್ಷ ಹಿಂದೆ) ಇದು ರೂಪುಗೊಂಡಿದೆ. ಕ್ರಿ.ಪೂ. 2300 ರ ಕಾಲದಿಂದಲೂ ಸಮುದ್ರಯಾನ ಮತ್ತು ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದವು ಎಂಬ ದಾಖಲೆಗಳು ದೊರಕಿವೆ. ಗೊಲಬಾಯಿ ಎಂಬ ಉತ್ಖನನ ಜಾಗ ಸರೋವರದ ದಂಡೆಯಲ್ಲಿದ್ದು, ಅದು ಹಿಂದೆ ದೋಣಿ ನಿರ್ಮಾಣ ಕೇಂದ್ರವಾಗಿತ್ತು.

ಸರೋವರ ಆಳ ಬೇಸಿಗೆಯಲ್ಲಿ ಕೆಲವು ಕಡೆ ಕೇವಲ 1 ಅಡಿಯಷ್ಟಕ್ಕೆ ಇಳಿಯುತ್ತದೆ. ಮಳೆಗಾಲದಲ್ಲಿ 14 ಅಡಿಗಳಷ್ಟು ಇರುತ್ತದೆ. ಆದರೆ ಒಂದು ಕಾಲದಲ್ಲಿ ಸಾಕಷ್ಟು ಆಳವಾಗಿದ್ದು ದೊಡ್ಡ ದೊಡ್ಡ ಜಲಸಾರಿಗೆ ವಾಹನಗಳು ಮಗರ್‍ಮುಖ ಎಂಬ ನಾಲೆ ಮೂಲಕ ಒಳಭಾಗಕ್ಕೂ ಬರುತ್ತಿದ್ದವಂತೆ. ಕೆಸರು ಅಥವಾ ಗೋಡು ಮಣ್ಣಿನ ಶೇಖರಣೆಯಿಂದ ಆಳ ಮತ್ತು ಅಗಲ ಎರಡೂ ಕಿರಿದಾಗುತ್ತಿರುವ ಸರೋವರದ ಒಳಗೆ ಮತ್ತು ಸುತ್ತ 132 ಹಳ್ಳಿಗಳಿದ್ದು 1,50,000 ಅಧಿಕ ಮೀನುಗಾರರಿಗೆ ಜೀವನಾಧಾರವಾಗಿದೆ. ಸುತ್ತಲಿನ ಹಳ್ಳಿಗಳಲ್ಲಿ ವಾಸಿಸುವವರು ಇಂದಿಗೂ ‘ಬಾಲಿ ಯಾತ್ರೆ’ ಎಂಬ ಹಬ್ಬವನ್ನು ಆಚರಿಸುತ್ತಾರಂತೆ. ಅದು ಅವರ ಪೂರ್ವಜರು ದಕ್ಷಿಣ ಏಷ್ಯಾದೊಡನೆ ಹೊಂದಿದ್ದ ವಾಣಿಜ್ಯ ಒಡನಾಟವನ್ನು ಸ್ಮರಿಸಿಕೊಳ್ಳುವ ಆಚರಣೆ ಎನ್ನುತ್ತಾರೆ.

ಅಳಿವೆ ರಚನೆ ಹೊಂದಿರುವ ಸರೋವರ ಅನೇಕ ಕಡೆ ಕೆಸರು ತುಂಬಿ ಒಳ-ಹೊರಗಿನ ಹಾದಿಗಳನ್ನು ಸೃಷ್ಟಿ ಮಾಡಿದೆ. ಮರಳು ಮತ್ತು ಕೆಸರಿನ ದಿಬ್ಬಗಳು ವಿಶಾಲ ಬಯಲುಗಳನ್ನು ನಿರ್ಮಿಸಿದ್ದು ಅಲ್ಲೆಲ್ಲ ಜನವಸತಿ ಮತ್ತು ಮ್ಯಾಂಗ್ರೋವ್ ಮಾದರಿಯ ಸಸ್ಯ ಸಂಪತ್ತನ್ನು ನೋಡಬಹುದು. ಸರೋವರದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಸವಕಳಿಯಾದ ಪೂರ್ವಘಟ್ಟಗಳು ತಡೆಗೋಡೆಗಳಂತಿವೆ.

ಇಡೀ ಸರೋವರದ ಪರಿಸರದಲ್ಲಿ ಅನೇಕ ಸಣ್ಣಪುಟ್ಟ ದ್ವೀಪಗಳಿದ್ದರೂ ಪ್ರಮುಖವಾಗಿ ಆರು ದ್ವೀಪಗಳನ್ನು ಗುರುತಿಸುತ್ತಾರೆ. ಅವುಗಳೆಂದರೆ ಪರಿಕುಡ್, ಪುಲಬಾರಿ, ಬೆರ‍್ರಾಪುರ, ನೌಪರ, ನಲಬಾನ ಮತ್ತು ತಾಮ್ಪರ. ಇವುಗಳಲ್ಲಿ ಪಕ್ಷಿ ಪ್ರಭೇದ ಮತ್ತು ಜೀವ ವೈವಿಧ್ಯದ ದೃಷ್ಟಿಯಿಂದ ನಲಬಾನ ದ್ವೀಪ ಅತಿ ಮುಖ್ಯವಾದದ್ದು. 1987ರಲ್ಲಿ ಇದನ್ನು ಪಕ್ಷಿಧಾಮವೆಂದು ಘೋಷಿಸಲಾಯಿತು. ಪ್ರವಾಸಿಗರು ಅರಖಕುಡಾ ಕಡೆಯಿಂದ ಸರೋವರವನ್ನು ಹೊಕ್ಕಿದರೆ ನಲಬಾನ ದ್ವೀಪದ ಸಮೀಪ ಹೋಗಬಹುದು. ಆದರೆ ಅದೊಂದು ರಕ್ಷಿತ ಪ್ರದೇಶವಾಗಿರುವುದರಿಂದ ಒಳಪ್ರವೇಶಕ್ಕೆ ಅನುಮತಿ ಇಲ್ಲ. ಹದಿನೈದು ಚದರ ಕಿ.ಮೀ.ಗಳಷ್ಟು ವಿಸ್ತಾರವಾಗಿರುವ ನಲಬಾನ ದ್ವೀಪ ಮಳೆಗಾಲದಲ್ಲಿ ನೀರಿನೊಳಗೆ ಮುಳುಗಿಹೋಗಿ ಬೇಸಿಗೆಯಲ್ಲಿ ಮೇಲೆ ಕಾಣುತ್ತದೆ.

ಜೀವವೈವಿಧ್ಯದ ಹಾಟ್‌ಸ್ಪಾಟ್‌!
ಚಿಲ್ಕಾ ಸರೋವರ ಇಡೀ ಭಾರತ ಉಪಖಂಡದಲ್ಲೇ ಚಳಿಗಾಲದಲ್ಲಿ ಅತಿಹೆಚ್ಚು ಪಕ್ಷಿಗಳು ವಲಸೆ ಬರುವ ತಾಣ. ಈ ಪ್ರದೇಶವನ್ನು ಭಾರತದಲ್ಲಿನ ಜೀವವೈವಿಧ್ಯದ ‘ಹಾಟ್ ಸ್ಪಾಟ್' ಎಂದು ಗುರುತಿಸಲಾಗಿದೆ. ಕೆಲವು ಅಪರೂಪದ ಮತ್ತು ಅವನತಿ ಅಂಚಿನಲ್ಲಿರುವ ಜೀವ ಸಂಕುಲಗಳಿಗೆ ಆಶ್ರಯತಾಣವಾಗಿದೆ. ದೂರದ ಸೈಬೀರಿಯಾ, ರಷ್ಯಾ, ಮಂಗೋಲಿಯಾ, ಇರಾನ್, ಇರಾಕ್, ಕ್ಯಾಪ್ಸಿಯನ್ ಸಮುದ್ರ, ಬೈಕಲ್ ಲೇಕ್ ಹಾಗೂ ಹಿಮಾಲಯಗಳಿಂದ ಹಾರಿ ಇಲ್ಲಿಗೆ ಸಂತಾನೋತ್ವತ್ತಿಗೆಂದು ಬರುವ ಖಗಗಳು ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತವೆ. ಸೀ ಈಗಲ್, ಜಕಾನ, ಫ್ಲೆಮಿಂಗೊ ಕೊಕ್ಕರೆಗಳು, ನೀರುಹಕ್ಕಿ, ತಿಳಿನೀಲಿ ಕೊಕ್ಕರೆಗಳು, ಇಂಡಿಯನ್ ರೋಲರ್, ವೈಟ್ ಹೈಬೀಸ್, ಸ್ಪೂನ್‍ಬಿಲ್ಸ್, ಬ್ರಾಹ್ಮಿಣಿ ಬಾತುಗಳು ಹೀಗೆ 160ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳನ್ನು ಗುರುತಿಸಲಾಗಿದೆ.

ಕೇವಲ ಪಕ್ಷಿಗಳಿಗೆ ಮಾತ್ರವಲ್ಲದೆ ಸುಮಾರು 37 ವಿವಿಧ ಜಾತಿಯ ಉಭಯವಾಸಿ ಮತ್ತು ಸರೀಸೃಪಗಳಿಗೂ ಸರೋವರ ಆಶ್ರಯ ನೀಡಿದೆ. ಅಪರೂಪದ ಮೀನು ಬೆಕ್ಕು, ಸಮುದ್ರ ಆಕಳು, ಹಸಿರು ಆಮೆಗಳಲ್ಲದೆ ಕೇವಲ ಇಲ್ಲಿ ಮಾತ್ರ ಕಂಡುಬರುವ ಇರವಾಡಿ ಡಾಲ್ಫಿನ್‍ಗಳು ಇವೆ. ಇವುಗಳ ಸಂಖ್ಯೆ 140ರಷ್ಟಿರಬಹುದೆಂದು ಅಂದಾಜಿಸಲಾಗಿದೆ. ಇರವಾಡಿ ಡಾಲ್ಫಿನ್‍ಗಳನ್ನು ಚಿಲ್ಕಾ ಸರೋವರದ ‘ಫ್ಲಾಗ್‍ಶಿಪ್‌ ಜೀವಿ' ಎಂದು ಕರೆಯುತ್ತಾರೆ. ಪ್ರವಾಸಿಗರಿಗೆ ಡಾಲ್ಫಿನ್‍ಗಳನ್ನು ತೋರಿಸಲೆಂದೆ ಕರೆದೊಯ್ಯಲು ಅನೇಕ ದೋಣಿಗಳು ಸಿದ್ಧವಾಗಿ ನಿಂತಿರುತ್ತವೆ. ಒಂದು ಕುಟುಂಬ ಅಥವಾ ಆರು ಜನ ಜೊತೆಯಾಗಿ ಎರಡೂವರೆ ಸಾವಿರ ರೂಪಾಯಿಗಳನ್ನು ಪಾವತಿಸಿದರೆ ಸರೋವರದೊಳಗೆ ಸರಿಸುಮಾರು 20 ರಿಂದ 25 ಕಿ.ಮೀ.ಗಳಷ್ಟು ದೂರ ನಿಮಗೆ ಅದ್ಭುತ ಜಲಜಗತ್ತು ತೆರೆದುಕೊಳ್ಳುತ್ತದೆ. ಆಕಾಶದಲ್ಲಿ ಹಾರುವ ಹಕ್ಕಿಗಳು ಕೆಳಗಿನ ತಣ್ಣನೆಯ ನೀರಿನಲ್ಲಿ ಪ್ರತಿಬಿಂಬ ಮೂಡಿಸಿ ಮುಂದೆ ಸಾಗುತ್ತವೆ. ನೀರಿನಲ್ಲಿ ಈಜುವ ಮೀನು ಅದಕ್ಕೆ ಕಾದಿರುವ ತೇಲು ಹಕ್ಕಿಗಳು ಮನಸ್ಸಿಗೆ ಮುದನೀಡುತ್ತವೆ.

ನವದಂಪತಿಗಳಿಗೆ ಹನಿಮೂನ್ ಐಲ್ಯಾಂಡ್, ಬ್ರೇಕ್‍ಫಾಸ್ಟ್ ಐಲ್ಯಾಂಡ್, ಆಸ್ತಿಕರಿಗೆ ಕಾಳಿಜೈ ಐಲ್ಯಾಂಡ್, ಪಕ್ಷಿಪ್ರಿಯರಿಗೆ ನಲಬಾನ ಐಲ್ಯಾಂಡ್, ಕೆಂಪು ಏಡಿಗಳಿರುವ ಕ್ರ್ಯಾಬ್ ಐಲ್ಯಾಂಡ್ ಹೀಗೆ ಮುಖ್ಯ ದ್ವೀಪಗಳು ಸೇರಿ ಅನೇಕ ಸಣ್ಣಪುಟ್ಟ ದ್ವೀಪ ಸಮೂಹವೇ ಸರೋವರದೊಳಗೆ ಮೈತಳೆದಿವೆ. ಉಪ್ಪುನೀರಿನ ಪ್ರದೇಶಗಳಲ್ಲಿ ಬೆಳೆಯುವ ಕಾಂಡವನ ಹೇರಳವಾಗಿದ್ದು ನೋಡುಗರನ್ನು ಆಕರ್ಷಿಸುತ್ತವೆ. ಮರಳಿನ ದಿಬ್ಬ, ಮೇಲಿಂದ ಜಾರುವ ಪ್ರವಾಸಿಗರು, ಸ್ವಚ್ಛ ತೀರ, ದೂರದಲ್ಲಿ ಬಲೆಬೀಸುವ ಮೀನುಗಾರ, ಸರೋವರದೊಳಗೆ ನೆಟ್ಟ ಬೊಂಬಿನ ಸಾಲುಗಳು, ಅವುಗಳಿಗೆ ಕಟ್ಟಿದ ಬಲೆಯ ಕಲೆ ನಿಮ್ಮನ್ನು ಸೆಳೆದು ನಿಲ್ಲಿಸಿದರೆ ಆಶ್ಚರ್ಯ ಪಡಬೇಕಿಲ್ಲ.

ನಾವು ಸರೋವರದ ಕಡೆಗೆ ಹೋಗುತ್ತಿರುವಾಗ ಒಂದಷ್ಟು ಎಮ್ಮೆಗಳು ಸರಾಗವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ನೀರಿನೊಳಗೆ ನಡೆದು ಹೋಗುತ್ತಿದ್ದವು. ನಮಗೆ ಆಫ್ರಿಕಾದ ಮಸಾಯಿ ಮಾರದಲ್ಲಿ ನದಿ ದಾಟುವ ಕಾಡೆಮ್ಮೆಗಳ ನೆನಪಾಯಿತು. ನಮ್ಮ ಜೊತೆಗಿದ್ದ ಮಾರ್ಗದರ್ಶಕ ‘ಇಲ್ಲಿ ಇದು ಸಾಮಾನ್ಯ; ಸರೋವರದ ಪಕ್ಕದಲ್ಲಿರುವ ಹಳ್ಳಿಗಳಲ್ಲಿ ವಾಸಿಸುವ ಗೌಳಿಗರು ಎಮ್ಮೆ ಮೇಯಿಸುವುದು ಹೀಗೆಯೇ’ ಎಂದ.

ಸೂಕ್ತ ಕಾಲ ಯಾವುದು?
ಚಿಲ್ಕಾ ಸರೋವರ ನೋಡಲು ಹೋಗುವ ಪ್ರವಾಸಿಗರಿಗೆ ಅಕ್ಟೋಬರ್‌ನಿಂದ ಜನವರಿ ಅಥವಾ ಮೇ ಯಿಂದ ಜೂನ್ ಸರಿಯಾದ ಕಾಲ. ಭುವನೇಶ್ವರ ಮತ್ತು ಪುರಿಯಿಂದ ಪ್ರತಿನಿತ್ಯ ಪ್ರವಾಸದ ಸೌಲಭ್ಯವಿದ್ದರೂ ನಿಮ್ಮದೇ ಸ್ಥಳ ಆಯ್ಕೆಗಳನ್ನು ಇಟ್ಟುಕೊಂಡು ಖಾಸಗಿ ವಾಹನದಲ್ಲಿ ಹೋಗುವುದು ಉತ್ತಮ. ಅದರಿಂದ ನಿಮ್ಮ ಹವ್ಯಾಸಕ್ಕೆ ತಕ್ಕಂತೆ ಸ್ಥಳಗಳನ್ನು ವೀಕ್ಷಿಸಬಹುದು. ದೋಣಿಯವರೊಂದಿಗೆ ಸ್ವಲ್ಪ ಮಾತಾಡಿಕೊಂಡು ಹೋದರೆ ನಾಲ್ಕೈದು ಗಂಟೆಗಳಿಗೆ ಕಮ್ಮಿ ಇಲ್ಲದಂತೆ ಸರೋವರದೊಳಗೆ ವಿಹರಿಸಬಹುದು. ಅಲ್ಲಲ್ಲಿ ಮೀನುಗಾರರು ಕಪ್ಪೆಚಿಪ್ಪುಗಳನ್ನು ನಿಮ್ಮ ಎದುರಿಗೆ ಒಡೆದು ಮುತ್ತುಗಳನ್ನು ತೋರಿಸುತ್ತಾರೆ. ಅವು ಪಕ್ಕಾ ಅಸಲಿ ಮತ್ತು ಅಪರೂಪದ್ದೆಂದು ಹೇಳಿ ಪುರಿ ಜಗನ್ನಾಥನ ನಾಮಸ್ಮರಣೆಯನ್ನು ಮಾಡುತ್ತಾರೆ. ನಾವೇನಾದರೂ ಆಸಕ್ತಿ ತೋರಿದರೆ ಅಂತದೇ ಚಿಪ್ಪುಗಳಿಂದ ಹವಳ, ಪಚ್ಚೆ, ಮರಗತ ಮುಂತಾದ ಕಲ್ಲುಗಳನ್ನು ತೆಗೆದು ತೋರಿಸಿ ಇವೆಲ್ಲ ಕಪ್ಪೆಚಿಪ್ಪಿನೊಳಗೆ ಉದ್ಭವವಾಗಿವೆ, ತುಂಬ ಕಡಿಮೆ ಬೆಲೆಗೆ ಕೊಡುತ್ತೇವೆ ಎನ್ನುತ್ತಾರೆ. ಆದರೆ ಎಲ್ಲವೂ ನಕಲಿಯೇ ಆಗಿರುತ್ತವೆ.

ವಿಶ್ವವಿಖ್ಯಾತ ಖಾರಿ ಸರೋವರವಾಗಿ ಚಿಲ್ಕಾ ಮೊದಲು ನೋಡುವವರಿಗೆ ಅಚ್ಚರಿ– ಆನಂದಗಳ ಆಗರ. ತೇಲುವ ದೋಣಿಯಲ್ಲಿ ಕುಳಿತವರಿಗೆ ಬೀಸುವ ತಣ್ಣನೆಯ ಗಾಳಿಯಲಿ ಯಾನ ಸಾಗಲಿ ಹೀಗೇ ಮುಂದೆ ಮುಂದೆ ಎನ್ನಿಸುತ್ತದೆ. ಸಂಜೆಯಾಗುತ್ತಿದ್ದಂತೆ ನೇಸರ ತನ್ನ ಹೊಂಬಣ್ಣವನ್ನೆಲ್ಲ ಸರೋವರದ ತುಂಬ ಎರಚಿ ಪ್ರಕೃತಿಪ್ರಿಯರ ಕಣ್ಣಿನಲ್ಲಿ ಸಾರ್ಥಕತೆಯ ಭಾವ ಮೂಡಿಸುತ್ತಾನೆ.

ರಾಮ್‍ಸರ್ ವೆಟ್‍ಲ್ಯಾಂಡ್ ಅವಸ್ಥೆ
ರಾಮ್‍ಸರ್ ವೆಟ್‍ಲ್ಯಾಂಡ್ ಸ್ಟೇಟಸ್ (ಅವಸ್ಥೆ) ಎಂಬುದು ಅಮೂಲ್ಯವಾದ ಜಲತಾಣಗಳ ಸಂರಕ್ಷಣೆಗೆಂದು ಇರುವ ಒಂದು ಅಂತರರಾಷ್ಟ್ರೀಯ ಒಡಂಬಡಿಕೆ. ಸರ್ಕಾರಗಳು ಮತ್ತು ಅನೇಕ ಸಂಘ-ಸಂಸ್ಥೆಗಳು ಒಟ್ಟಿಗೆ ಸೇರಿ ಇರಾನಿನ ರಾಮ್‍ಸರ್ ಪಟ್ಟಣದಲ್ಲಿ ಮೊಟ್ಟಮೊದಲ ಬಾರಿಗೆ 1971 ರಲ್ಲಿ ಒಪ್ಪಂದಕ್ಕೆ ಬಂದವು. ಒಪ್ಪಂದದ ಪ್ರಕಾರ ಪ್ರಪಂಚದಾದ್ಯಂತ ಇರುವ ಅಮೂಲ್ಯವಾದ ಜಲಪ್ರದೇಶಗಳನ್ನು ಅಲ್ಲಿಯ ಸರ್ಕಾರಗಳ ಭಾಗಿತ್ವ ಮತ್ತು ಅಂತರರಾಷ್ಟ್ರೀಯ ಸಹಕಾರದೊಂದಿಗೆ ರಕ್ಷಿಸುವುದಾಗಿದೆ. ಸುಸ್ಥಿರ ಅಭಿವೃದ್ಧಿಗೆ ಈ ಜಲಮೂಲಗಳನ್ನು ಬಳಸಿಕೊಳ್ಳುವುದರ ಜೊತೆಗೆ ಅಲ್ಲಿಯ ಜೀವಸಂಕುಲದ ರಕ್ಷಣೆಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲಿಯವರೆಗೆ 169 ದೇಶಗಳು ಒಡಂಬಡಿಕೆಗೆ ಸಹಿ ಹಾಕಿದ್ದು ಪ್ರಪಂಚದಾದ್ಯಂತ 2301 ಜಾಗಗಳು ಈ ಪಟ್ಟಿಯಲ್ಲಿವೆ. ಅವುಗಳ ಒಟ್ಟು ವಿಸ್ತೀರ್ಣ 225,643,711 ಹೆಕ್ಟೇರ್‌ಗಳಷ್ಟು. ಭಾರತದಲ್ಲಿ ಮೊಟ್ಟಮೊದಲಿಗೆ ಚಿಲ್ಕಾ ಸರೋವರಕ್ಕೆ 1981ರ ಅಕ್ಟೋಬರ್ 1 ರಂದು ಈ ಸ್ಥಾನಮಾನ ದಕ್ಕಿತು. ಸದ್ಯ ಭಾರತದಲ್ಲಿ 26 ಜಲಪ್ರದೇಶಗಳನ್ನು ಈ ಪಟ್ಟಿಗೆ ಸೇರಿಸಲಾಗಿದ್ದು ಅವುಗಳ ಒಟ್ಟು ವಿಸ್ತೀರ್ಣ 6,89,131 ಹೆಕ್ಟೇರ್‌ಗಳಷ್ಟಿದೆ. ಕರ್ನಾಟಕದಲ್ಲಿ ಯಾವೊಂದು ಪ್ರದೇಶವೂ ಈ ಪಟ್ಟಿಯಲ್ಲಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT