ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂದರಿಜೋಗಿ ರಾಜಗೋಪಾಲ್

Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಎಚ್. ವೈ. ರಾಜಗೋಪಾಲ್(1935-2018) ಎಂದಕೂಡಲೇ ಥಟ್ಟನೆ ಮನಸ್ಸಿಗೆ ಬರುವುದು ಅಮೆರಿಕದ ಏಕೈಕ ಸಾಹಿತ್ಯಿಕ ಸಂಸ್ಥೆ ‘ಕನ್ನಡ ಸಾಹಿತ್ಯ ರಂಗ. ಅಂದರೆ ರಾಜಗೋಪಾಲ್ ಮತ್ತು ‘ಕನ್ನಡ ಸಾಹಿತ್ಯ ರಂಗ ಇವೆರಡೂ ಪರ್ಯಾಯ ಪದಗಳಂತೆ. ಅವರು ಕ.ಸಾ.ರಂ.ನ ಸ್ಥಾಪಕ ಅಧ್ಯಕ್ಷರಾಗಿದ್ದ ಕಾರಣಕ್ಕಾಗಿ ಮಾತ್ರವಲ್ಲ, ಅದರ ಬೆಳವಣಿಗೆಗೆ ಕಾರಣ ಮಾತ್ರವಲ್ಲ, ಜೀವನಾಡಿಯಾಗಿಯೂ ಇದ್ದರು. ಅಮೆರಿಕದಲ್ಲಿ ನಡೆಯುವ ಸಾಹಿತ್ಯದ ಕೆಲಸಗಳ ಹಿಂದೆ ರಾಜಗೋಪಾಲ್ ಹೆಸರು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರಸ್ತಾಪವಾಗುತ್ತಿತ್ತು.

ಮೈಸೂರು ಮಕ್ಕಳ ಕೂಟದ ಎಚ್. ವೈ. ಸರಸ್ವತಮ್ಮ ಮತ್ತು ಸಂಸ್ಕೃತ ಪಂಡಿತರೂ, ವಾಗ್ಗೇಯಕಾರರೂ ಆಗಿದ್ದ ಎಚ್. ಯೋಗನರಸಿಂಹಂ ಅವರ ನಾಲ್ಕನೆಯ ಮಗನಾಗಿ ಹುಟ್ಟಿದ ರಾಜಗೋಪಾಲ್ (ಎಚ್. ವೈ. ಶಾರದಾಪ್ರಸಾದ್ ಇವರ ಅಣ್ಣ) ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ ಎಂಜಿನೀರಿಂಗ್, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ಗಳಲ್ಲಿ ಬಿ.ಇ. ಪದವಿ ಪಡೆದರು. ವಾರಂಗಲ್‌ನಲ್ಲಿ ಆರು ವರ್ಷ ರೀಜನಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. 1966ರಲ್ಲಿ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಗಳಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪಿಎಚ್‌.ಡಿ ಪದವಿ ಗಳಿಸಲು ಬಂದ ರಾಜಗೋಪಾಲ್ ಅಮೆರಿಕದಲ್ಲಿಯೇ ನೆಲೆಯೂರಿದರು. ಮುಂದೆ ಮಿಲನೋವಾ ವಿಶ್ವವಿದ್ಯಾನಿಲಯದಲ್ಲಿ ಉಪಪ್ರಾಧ್ಯಾಪಕರಾಗಿ, ಫಿಲಡೆಲ್ಫಿಯಾದ ಖ್ಯಾತ ಎಂಜಿನಿಯರಿಂಗ್ ಸಂಸ್ಥೆ United Engineers & Constructors(Raytheon) ಕಂಪನಿಯಲ್ಲಿ Consulting Engineer ಆಗಿಯೂ, ವಿಲನೋವಾ ವಿಶ್ವವಿದ್ಯಾಲಯದಲ್ಲಿ Adjunct Professor ಆಗಿಯೂ ಕೆಲಸ ಮಾಡಿ ನಿವೃತ್ತರಾದರು. ಕನ್ನಡದ ಲೇಖಕಿ ಮತ್ತು ಜಾನಪದ ಗಾಯಕಿ ಪತ್ನಿ ವಿಮಲಾ (ಎಲ್. ಗುಂಡಪ್ಪ ಅವರ ಮಗಳೂ) ಅವರೊಡನೆ ಮದುವೆಯಾಗಿ ತಮ್ಮ ಜೀವಿತದ ಕೊನೆಯ ದಿನಗಳವರೆವಿಗೂ ತನುಮನಧನಗಳನ್ನು ಕನ್ನಡ ಸಾಹಿತ್ಯ ಸೇವೆಗೆಂದೇ ಮುಡುಪಾಗಿಟ್ಟಿದ್ದರು.

ನನ್ನಂತೆಯೇ ಅರವತ್ತರ ದಶಕದಲ್ಲಿ ಅಮೆರಿಕಕ್ಕೆ ಬಂದ ರಾಜಗೋಪಾಲ್ ಚಿಕ್ಕಂದಿನಿಂದರೂ ರೂಢಿಸಿಕೊಂಡಿದ್ದ ಓದು ಮತ್ತು ಬರವಣಿಗೆಯನ್ನು ಅಮೆರಿಕದಲ್ಲೂ ಮುಂದುವರೆಸಿದರು. ನಾನು 1999ರಲ್ಲಿ ‘ಕಾರಂತ ಚಿಂತನ’ ಎಂಬ ಪುಸ್ತಕದ ತಯಾರಿಯಲ್ಲಿದ್ದಾಗ ಗೆಳೆಯ ಹರಿಹರೇಶ್ವರ ಸೂಚಿಸಿದ ಹೆಸರುಗಳಲ್ಲಿ ರಾಜಗೋಪಾಲ್ ಅವರದು ಮೊದಲನೆಯದು. ಅಲ್ಲಿಂದ ಶುರುವಾದ ಅವರ, ನನ್ನ ಸ್ನೇಹ ಹಲವು ದಿಕ್ಕುಗಳಲ್ಲಿ ಹರಿಯಿತು. ಹಿರಿಯ ವಿಮರ್ಶಕ ಪಿ. ಶ್ರೀನಿವಾಸರಾವ್ ಅವರ ನೆನಪಿಗೆ ‘ಪ್ರಸ್ತಾಪ’ ಎನ್ನುವ ಗುಂಪನ್ನು ಕಟ್ಟಿ ಆಗಾಗ ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು ರಾಜಗೋಪಾಲ್. ಕರ್ನಾಟಕದಿಂದ ಬರುವ ಸಾಹಿತಿಗಳನ್ನು ‘ಪ್ರಸ್ತಾಪ’ಕ್ಕೂ ಆಹ್ವಾನಿಸಿ ಚರ್ಚೆ, ಸಂವಾದಗಳನ್ನು ಏರ್ಪಡಿಸುತ್ತಿದ್ದರು.

ಮುಂದೆ ಅಮೆರಿಕದ ಬರಹಗಾರರ ಸಂಘವೊಂದನ್ನು ಸ್ಥಾಪಿಸುವ ಯೋಚನೆಯನ್ನು ನಾನು ರಾಜಗೋಪಾಲ್ ಅವರಲ್ಲಿ ಪ್ರಸ್ತಾಪಿಸಿದ್ದೆ. 2002ರಲ್ಲಿ ಡೆಟ್ರಾಯ್ಟ್‌ನಲ್ಲಿ ನಡೆದ ‘ಅಕ್ಕ ಸಮ್ಮೇಳನದಲ್ಲಿ ಈ ವಿಚಾರವಾಗಿ ಅವರು ಒಂದು ಹಸ್ತಪತ್ರಿಕೆಯನ್ನು ಹಂಚಿ, ಸಾಹಿತ್ಯಕ್ಕೆಂದೇ ಕೆಲಸ ಮಾಡುವ ಒಂದು ಸಂಸ್ಥೆಯನ್ನು ಪ್ರಾರಂಭಿಸುವ ಯೋಜನೆಗೆ ಚಾಲನೆ ನೀಡಿದ್ದರು. ಅದರ ಪರಿಣಾಮವಾಗಿ 2003ರ ಮೇ- ಜೂನ್ ಸುಮಾರಿಗೆ ನ್ಯೂಜೆರ್ಸಿಯ ಎಚ್. ವಿ. ರಂಗಾಚಾರ್ ಮತ್ತು ಪದ್ಮರ(ಪುತಿನರ ಮಗಳು) ಮನೆಯಲ್ಲಿ ಸೇರಿದ ಕೆಲವು ಸಾಹಿತ್ಯಾಸಕ್ತರು ಅಂತಹ ಸಂಸ್ಥೆಗೆ ನಾಂದಿ ಹಾಡಿದರು. ಅಂದಿನ ಸಭೆಯಲ್ಲಿ, ನಾನು ರಾಜಗೋಪಾಲ್‌ರ ಹೆಸರನ್ನು ಈ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದಾಗ ನಮ್ರತೆಯಿಂದ, ಕರ್ತವ್ಯಪ್ರಜ್ಞೆಯಿಂದ ಆ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದರು. ಎಚ್. ಕೆ. ಚಂದ್ರಶೇಖರ್ ಮತ್ತು ನಾನು ಉಪಾಧ್ಯಕ್ಷ ಸ್ಥಾನಕ್ಕೂ, ಗೋಪಾಲ್ ಕುಕ್ಕೆಯವರು ಕಾರ್ಯದರ್ಶಿ ಸ್ಥಾನಕ್ಕೂ ಆಯ್ಕೆಗೊಂಡೆವು. ಈ ಸಂಸ್ಥೆಗೆ ‘ಕನ್ನಡ ಸಾಹಿತ್ಯ ರಂಗ’ ಎಂದು ಹೆಸರಿಡಲಾಯಿತು. ಫಿಲಿಡೆಲ್ಫಿಯಾದ ವಿಲನೋವಾ ಯೂನಿವರ್ಸಿಟಿಯಲ್ಲಿ ನಡೆದ ಮೊದಲ ‘ವಸಂತೋತ್ಸವ’ ಕ.ಸಾ.ರಂ. ಉಜ್ವಲ ಭವಿಷ್ಯಕ್ಕೆ ದಾರಿಮಾಡಿಕೊಟ್ಟಿತು. ಈ ಸಮ್ಮೇಳನಕ್ಕೆ ಇತ್ತೀಚೆಗೆ ನಮ್ಮನ್ನು ಅಗಲಿದ ಪ್ರಭುಶಂಕರರು ಬಂದಿದ್ದರು. ಅವರು ‘ಕನ್ನಡ ಸಾಹಿತ್ಯ- ಒಂದು ಮಿಂಚು ನೋಟ’ ಎಂಬ ವಿದ್ವತ್‌ಪೂರ್ಣ ಭಾಷಣವನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಶಿಸ್ತು ಮತ್ತು ಕಾರ್ಯಶೀಲತೆಗಳನ್ನು ಮೊದಲಿನಿಂದ ರೂಢಿಸಿಕೊಂಡಿದ್ದ ರಾಜಗೋಪಾಲರು ಭಾಷಣಕಾರರಿಗೆ ಸೂಚನೆ ನೀಡಿ ಅದು ಪ್ರಕಟಿತ ರೂಪದಲ್ಲಿಯೂ ದೊರೆಯುವಂತೆ ಮಾಡುತ್ತಿದ್ದರು. ಅಮೆರಿಕದಲ್ಲಿ ಹರಡಿದ್ದ ಹವ್ಯಾಸಿ ಬರಹಗಾರರಿಗೆ ಪ್ರೊತ್ಸಾಹ ನೀಡುವ ಉದ್ದೇಶದಿಂದ, ಎರಡು ವರ್ಷಕ್ಕೊಮ್ಮೆ ಕ.ಸಾ.ರಂ. ನೇತೃತ್ವದಲ್ಲಿ ನಡೆಯುವ ‘ವಸಂತೋತ್ಸವ’ಗಳಲ್ಲಿ, ಬರಹಗಳನ್ನು ಅಮೆರಿಕನ್ನಡಿಗರಿಂದಲೇ ಬರೆಯಿಸಿ ತಿದ್ದಿ ಪ್ರಕಟ ಮಾಡುವ ಯೋಜನೆಯನ್ನು ಎಚ್‌.ವೈ.ಆರ್ ಪ್ರಾರಂಭಿಸಿದರು. ಆ ಎಲ್ಲ ಪುಸ್ತಕಗಳಲ್ಲಿ ತಾವೂ ಬರೆದು ಅಮೆರಿಕದಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಮುಖ್ಯ ಕಾರಣರಾಗಿದ್ದರು.

‘ಕುವೆಂಪು ಸಾಹಿತ್ಯ ಸಮೀಕ್ಷೆ’ಯಲ್ಲಿನ ಅವರ ‘ಬೊಮ್ಮನಹಳ್ಳಿಯ ಕಿಂದರ ಜೋಗಿ’ ಲೇಖನ ಕನ್ನಡ ಸಾರಸ್ವತ ಲೋಕದಲ್ಲಿ ಕುವೆಂಪು ಅವರ ಸಾಹಿತ್ಯದ ಬಗೆಗೆ ಬಂದ ಲೇಖನಗಳಲ್ಲೇ ಅಪರೂಪದ್ದೆಂಬ ಮೆಚ್ಚುಗೆಗೆ ಪಾತ್ರವಾಯಿತು. ರಾಜಗೋಪಾಲ್ ಮತ್ತು ಎಚ್. ಕೆ. ನಂಜುಂಡಸ್ವಾಮಿ ಸಂಪಾದಿಸಿದ ‘ನಗೆಗನ್ನಡಂ ಗೆಲ್ಗೆ’ ಕೃತಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆಯನ್ನು ಸಮಗ್ರವಾಗಿ ಕಟ್ಟಿಕೊಡುವ ಪುಸ್ತಕವಾಗಿ ರೂಪುಗೊಂಡಿತು. ‘ಮನೆ ಗೆದ್ದು ಮಾರು ಗೆಲ್ಲು’ ಎನ್ನುವ ಮಾತಿನಂತೆ ತಮ್ಮ ಲೇಖನಗಳ ಸಂಗ್ರಹ ‘ಗಾಂಧಿ ಯುಗಕ್ಕೆ ಕನ್ನಡಿ’, ‘ಸೃಷ್ಟಿ - ನಾಲ್ಕು ಜಗತ್ತುಗಳು’(ಅಮೆರಿಕದ ಮೂಲ ನಿವಾಸಿಗಳ ಜಾನಪದ ಮತ್ತು ಪುರಾಣ ಕತೆಗಳ ಅನುವಾದ-ಎರಡು ಪುಸ್ತಕಗಳ ಪ್ರಕಟಣೆ ಅಭಿನವ ಬೆಂಗಳೂರು) ಪುಸ್ತಕಗಳನ್ನು ಪ್ರಕಟಿಸಿದರು. ಅನಾರೋಗ್ಯದ ನಡುವೆಯೂ ತಮ್ಮ ತಾಯಿ ಸರಸ್ವತಮ್ಮನವರ ಕುರಿತ ‘ಹಲವು ಮಕ್ಕಳ ತಾಯಿ(ಈ ಪುಸ್ತಕದ ಮುದ್ರಣ- ವಿನ್ಯಾಸಕ್ಕೆ ರಾಷ್ಟ್ರ್ರಪ್ರಶಸ್ತಿ ಸಂದಿದೆ) ಮತ್ತು ಅಣ್ಣ ಹಿಂದಿ ಪತ್ರಿಕಾರಂಗದ ಮಾರ್ಗದರ್ಶಕ ನಾರಾಯಣದತ್ತರ ಬದುಕು ಜೀವನವನ್ನಾಧರಿಸಿದ ‘ಆಚಾರ್ಯ ಸಂಪಾದಕ ಶ್ರೀನಾರಾಯಣ ದತ್ತ’ ಕೃತಿಗಳನ್ನು ಸಂಪಾದಿಸಿದ್ದರು. ಒಂದು ಪುಸ್ತಕವನ್ನು ಹೇಗೆ ಸಂಪಾದಿಸಬೇಕು ಎನ್ನುವುದಕ್ಕೆ ಈ ಪುಸ್ತಕಗಳು ಮಾದರಿಯಾಗಿವೆ. ಮಾಡುವ ಎಲ್ಲ ಕೆಲಸಗಳಲ್ಲಿಯೂ ಶ್ರದ್ಧೆ, ಸಂಪೂರ್ಣ ತೊಡಗಿಸಿಕೊಳ್ಳುವಿಕೆ, ಅಚ್ಚುಕಟ್ಟುತನ ರಾಜಗೋಪಾಲರ ಕೆಲಸದಲ್ಲಿ ನಾವು ಕಾಣುವ ಗುಣಗಳಾಗಿವೆ.

ಮೈಸೂರಿನಲ್ಲಿ ತಮ್ಮ ಕುಟುಂಬ ವರ್ಗದವರನ್ನೆಲ್ಲ ಸೇರಿಸಿ ‘ದೇವಗೀತಂ ಟ್ರಸ್ಟ್ ಸ್ಥಾಪಿಸಿ ಸಾಹಿತ್ಯ, ಸಂಗೀತ ಮತ್ತು ಸಾಮಾಜಿಕ ಕೆಲಸಗಳಿಗೆ ವೇದಿಕೆಯನ್ನು ಒದಗಿಸಿದ್ದರು. ಅಣ್ಣ ಶಾರದಾಪ್ರಸಾದರನ್ನು ಕುರಿತು ನೆನಪಿನ ಸಂಪುಟ, ಅವರ ತಾಯಿ ಅನುವಾದಿಸಿದ್ದ ‘ಮಕ್ಕಳ ಸಚಿತ್ರ ಭಾರತ’, ‘ಮೊಮ್ಮಕ್ಕಳು ಹೇಳಿದ ಅಜ್ಜಿ ಕಥೆ’ ಪುಸ್ತಕಗಳ ಮರು ಮುದ್ರಣ, ತಮ್ಮ ಮಡದಿ ವಿಮಲಾ ಅವರ ಲೇಖನಗಳ ಸಂಕಲನ, ಅಣ್ಣ ಮೋಹನ್ ರಾಮ್ ಅವರ `Iconic Plants and trees’ ಪುಸ್ತಕದ ಅನುವಾದ ಹೀಗೆ ಹಲವು ಕೆಲಸಗಳ ಕನಸಿದ್ದ ರಾಜಗೋಲಾಲ್ ಏಪ್ರಿಲ್ 2ರಂದು ನಿಧನರಾದರು.

ನನ್ನ ‘ಅಮೆರಿಕದಲ್ಲಿ ಕಂಡ ಕನಸು ಮತ್ತು ಕಟ್ಟಿದ ನೆನಪು’(ಅನುಭವ ಕಥನ) ಹಾಗೂ ‘ಕಲಬೆರೆಕೆ;(ಪ್ರಬಂಧ ಸಂಕಲನ)ದ ಬಗೆಗೆ ಬರೆಯುತ್ತಾ ‘ನಾವಿಬ್ಬರೂ ಅಮೆರಿಕದಲ್ಲಿ ಸಹಪ್ರಯಾಣಿಕರು’ ಎಂದಿದ್ದರು(ನನ್ನನ್ನು ಮಾರ್ಗ ಮಧ್ಯೆ ಬಿಟ್ಟು ಹೋಗಿದ್ದು ನಿಜಕ್ಕೂ ದುಃಖದ ಸಂಗತಿ).

ರಾಜಗೋಪಾಲ್ ಸಾಹಿತ್ಯ ರಂಗದ ಜವಾಬುದಾರಿಯನ್ನು ಬೇರೆಯವರಿಗೆ ವಹಿಸಿದರೂ ಸಲಹೆ ಸೂಚನೆಗಳನ್ನು ಕೇಳಿದರೆ ನಿಸ್ಸಂಕೋಚವಾಗಿ ಕೊಡುತ್ತಿದ್ದರು. ಅವರು ಅಮೆರಿಕದಲ್ಲಿ ಸಲ್ಲಿಸಿದ ಕನ್ನಡ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರ ‘ರಾಜ್ಯೋತ್ಸವ ಪಶಸ್ತಿ (2007) ನೀಡಿತ್ತು. ‘ಆಳ್ವಾಸ್ ವಿಶ್ವ ನುಡಿ ವಿರಾಸತ್ ಪ್ರಶಸ್ತಿ (2013)ಗೌರವವೂ ಒದಗಿ ಬಂದಿತ್ತು. (ಕಳೆದ ವರ್ಷ ಅಂದರೆ 2017ರಲ್ಲಿ ಕನ್ನಡ ಸಾಹಿತ್ಯ ರಂಗ ಕೂಡ ಆತ್ಮೀಯವಾಗಿ ಗೌರವಿಸಿತ್ತು. ಇದನ್ನು ಸ್ವೀಕರಿಸುವಾಗಲೂ ಅವರ ನಮ್ರತೆ ಮತ್ತು ವಿನಯವಂತಿಕೆಗಳು ಎದ್ದು ಕಾಣುತ್ತಿದ್ದವು) ಅವರಿಗೆ ಅಭಿನಂದನಾ ಸಂಪುಟವೊಂದನ್ನು ಹೊರತರುವ ಕುರಿತು ನಾನು ಮತ್ತು ಅಭಿನವ ರವಿಕುಮಾರ್ ಯೋಚಿಸಿದ್ದೆವು. ಆದರೆ ಈಗ ಅದು ಸಂಸ್ಮರಣಾ ಕೃತಿಯಾಗಬೇಕಿದೆ.

ನಾನೂ, ನಳಿನಿ ಮೈಯ ಸಂಪಾದಿಸಿದ ಜಿ. ಎಸ್. ಶಿವರುದ್ರಪ್ಪನವ ಕುರಿತ ಪುಸ್ತಕ ‘ನೆನಪಿನ ಓಣಿಯೊಳಗೆ ಮಿನುಗುತಾವ ದೀಪ...’ ವನ್ನು ರಾಜಗೋಪಾಲ್ ಅವರಿಗೆ ಅರ್ಪಿಸುವಂತೆ ಅಭಿನವ ರವಿಕುಮಾರ್ ಸೂಚನೆ ನೀಡಿದ್ದರು. ಅದನ್ನು ಶಿವರುದ್ರಪ್ಪ ದಂಪತಿಗೆ ಅರ್ಪಣೆ ಮಾಡಲು ಮೊದಲೇ ನಿಶ್ಚಯಿಸಿದುದರಿಂದ ಅದು ಸಾಧ್ಯವಾಗದ್ದಕ್ಕೆ ಈಗ ವ್ಯಥೆಯಾಗುತ್ತಿದೆ.

ಚಿಂತಕ, ಲಕ್ಷ್ಮೀಶ ತೊಳ್ಪಾಡಿಯವರ ಮಾತೊಂದಿದೆ. ‘ಬದುಕೆಂಬ ವೃಕ್ಷ’; ಸಾವೆಂಬ ಫಲ. ‘ಫಲ’ ಉದುರಿದಾಗ, ಅದರೊಳಗಿನ ಬೀಜದಲ್ಲಿ ‘ಬದುಕು’ ಎಂಬ ವೃಕ್ಷ ಅಡಗಿದ್ದು, ಜೀವನ ಚಕ್ರ ಮುಂದುವರೆಯುತ್ತದೆ ಎಂಬುದು ಆ ಮಾತಿನಲ್ಲಿನ ಅರ್ಥ. ಹೌದು, ಹುಟ್ಟಿದವ ಸಾಯಲೇಬೇಕೆಂಬ ಪ್ರಕೃತಿಯ ನಿಯಮವನ್ನು ಒಪ್ಪಿಕೊಂಡರೂ, ನಮ್ಮ ಆತ್ಮೀಯರು ಅಗಲಿದಾಗ ನೋವಾಗುವುದು ಸಹಜ, ಸ್ವಾಭಾವಿಕ. ಈಗ ಎಚ್‌.ವೈ.ಆರ್ ನಮ್ಮನ್ನು ಭೌತಿಕವಾಗಿ ಅಗಲಿದ್ದಾರೆ. ಹೋದವರು ವಾಪಸು ಬರುವುದಿಲ್ಲ! ಆದರೆ, ಅಗಲಿದ್ದರೂ, ನಮ್ಮ ಸ್ಮರಣೆಯಲ್ಲಿ ಜೀವಂತವಾಗಿಯೇ ಉಳಿಯುತ್ತಾರೆ. ಕಾರಂತರ ‘ಅಳಿದ ಮೇಲೆ’ ಕಾದಂಬರಿಯಲ್ಲಿನ ಮಾತೊಂದು ನೆನಪಿಗೆ ಬರುತ್ತಿದೆ: ‘... ಮನುಷ್ಯ, ಸಮಾಜದ ಋಣವನ್ನು ಹೊತ್ತುಕೊಂಡೇ ಬಂದಿದ್ದಾನೆ. ಅದರ ಋಣದಿಂದಲೇ ಬೆಳೆಯುತ್ತಾನೆ. ನಾಳೆ ಸಾಯುವಾಗ, ತಾನು ಪಡೆದುದಕ್ಕಿಂತಲೂ ಹೆಚ್ಚಿನ ಋಣವನ್ನು ಹಿಂದೆ ಸಲ್ಲಿಸಿ ಹೋದರೆ, ಆತ ಹುಟ್ಟಿದ್ದಕ್ಕೊಂದು ಸಾರ್ಥಕ್ಯ...’ ರಾಜಗೋಪಾಲ್ ಸಮಾಜದ ಋಣವನ್ನು ಹಿಂದಕ್ಕೆ ಸಲ್ಲಿಸಿ ಹೋಗಿದ್ದಾರೆಂಬುದು ಸತ್ಯ.!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT