ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮ್ಮನೆ ಇರುವೆ...

Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸಾಧಕ, ಇದೀಗಷ್ಟೇ ತಾನು ತಿಂದು ಮುಗಿಸಿದ ಇರುವೆಯ ತಲೆಯ ಬಗ್ಗೆಯೇ ಯೋಚಿಸುತ್ತಿದ್ದ. ಹಾಗೆ ನೋಡಿದರೆ, ಇರುವೆ ತಿನ್ನುವವರೆಗೂ ತಾನು ಇರುವೆ ತಿಂದಿರುವ ಅರಿವೇ ಅವನಿಗಿರಲಿಲ್ಲ. ಅಥವಾ ಗರ್ಭಿಣಿಯರಿಗೆ ಹುಟ್ಟುವಂತೆ ಏನೇನೋ ತಿನ್ನಬೇಕೆಂಬ ಬಯಕೆಯಾಗಿ ಏಕಾಏಕಿ ಇರುವೆ ತಿಂದವನೂ ಅವನಾಗಿರಲಿಲ್ಲ. ಆದರೆ ಅವನ ಸುಪ್ತಪ್ರಜ್ಞೆಯಲ್ಲಿ ಅಂತಹ ಒಂದು ಬಯಕೆ ಉಳಿದುಹೋಗಿದ್ದು ಅಪ್ರಜ್ಞಾಪೂರ್ವಕವಾಗಿ ಅದು ಸಂಭವಿಸಿ ಹೋಯಿತೋ ಹೇಳುವುದು ಹೇಗೆ?

ತಾನು ಹುಟ್ಟಿ, ಬೆಳೆದ ಒಂದು ಊರಿನಲ್ಲಿ ಚಿಗಳಿಕೊಟ್ಟೆ ತಿನ್ನುವವರನ್ನೂ, ಅದಕ್ಕಾಗಿ ಕಾಡಿನಲ್ಲಿ ಅಲೆಯುವವರನ್ನೂ ಬಾಲ್ಯದಿಂದಲೂ ಅತ್ಯಂತ ವಿಸ್ಮಯದಿಂದ ನೋಡುತ್ತಾ ಬೆಳೆದು ಬಂದಿದ್ದನು ಅವನು. ಒಂದು ಸಾಧಾರಣ ಇರುವೆ ಕಚ್ಚಿದರೆ ಮೈಯೆಲ್ಲಾ ಬೊಬ್ಬೆ ಹಾಕುವಂತೆ ಉರಿ ಹತ್ತುವಾಗ, ಕೆಂಪು ಇರುವೆ ಕೊಟ್ಟೆ ಹೇಗೆ ತಿನ್ನುತ್ತಾರೆಂಬ ವಿಚಿತ್ರ ಸತ್ಯ ಅವನ ಬಾಲ್ಯದ ಬಹುಪಾಲು ಮುಗ್ಧತೆಯನ್ನು ಆಕ್ರಮಿಸಿಕೊಂಡ ಜಗತ್ತಿನ ಅತಿ ದೊಡ್ಡ ಸೋಜಿಗವಾಗಿತ್ತು. ಎಷ್ಟೋ ರಾತ್ರಿ ಅವನಿಗೆ ಚಿಗಳಿಕೊಟ್ಟೆಯನ್ನು ತಿಂದು, ಅವನ ದೇಹದೊಳಗಿನ ಅವಯವಕ್ಕೆಲ್ಲಾ ಇರುವೆಗಳು ಕಚ್ಚಿ, ಮೈಯೆಲ್ಲಾ ರಣ ಕೆಂಪಾಗಿ, ಗುರುತು ಸಿಗದಷ್ಟು ಉಬ್ಬಿ, ಚೆಂಡಿನಂತೆ ಮುರುಟಿಕೊಂಡು ಉರುಳಿ ಹೋದಂತೆಯೋ, ಇನ್ಯಾರದ್ದೋ ಕಾಲಿಗೆ ಸಿಕ್ಕಿ ಢಮಾರ್ ಎಂದು ತಾನು ಚೂರು ಚೂರಾದಂತೆಯೋ ಕನಸೊಂದು ಬಿದ್ದು ವಿಚಿತ್ರ ತಳಮಳದಿಂದ ಎಚ್ಚರಗೊಳ್ಳುತ್ತಿದ್ದ. ಅದಕ್ಕೋ ಏನೋ ಅಂತಹ ಕಟ್ಟಿರುವೆ ತಿಂದೂ ಆರಾಮವಾಗಿ ಇನ್ನೂ ಬದುಕುಳಿದವರನ್ನು ಕಂಡಾಗಲೆಲ್ಲಾ ರೋಮಾಂಚನವಾಗಿ, ತನ್ನ ಕಣ್ಣೆದುರೇ ಅತ್ಯದ್ಭುತವಾದದ್ದು ಸಂಭವಿಸಿ, ಅವರೆಲ್ಲರೂ ಈ ಭೂಮಿಯಲ್ಲಿ ನಡೆದಾಡುತ್ತಿರುವ ಅತಿಮಾನುಷರಂತೆ ಅವನಿಗೆ ಭಾಸವಾಗುತ್ತಿತ್ತು. ಒಂದೆರಡು ದಿನ ಅವರ ಹಿಂದಿಂದೆ ಸುತ್ತಿ, ಅತಿಮಾನುಷ ಶಕ್ತಿಯೇನಾದರೂ ಅವರಿಗೆ ಲಭಿಸಿದೆಯೇ ಎಂದು ಸೂಕ್ಮವಾಗಿ ಅವರನ್ನು ಅವಲೋಕಿಸುತ್ತಾ, ಬಾಯಿಯೊಳಗೇನಾದರೂ ಇರುವೆ ಕಚ್ಚಿದ ಗುರುತುಗಳಿವೆಯೇ ಎಂದು ಹುಡುಕುತ್ತಿದ್ದನು.

ಸಂಕ್ರಾಂತಿ ಸಮಯದಲ್ಲಿ ಅವನಮ್ಮ ನಸುಕಿನಲ್ಲೆದ್ದು, ಅಂಗಳದಲ್ಲಿ ಕುಸುರೆಳ್ಳು ಹುರಿಯುವಾಗೆಲ್ಲಾ ಅದರ ಚಟಪಟ ಸದ್ದಿಗೆ, ತೋಟದಾಚೆಯ ಈರ‍್ಯನ ಕೇರಿಯಲ್ಲಿ ಚೀರಿ ಹುರಿವ ಚಿಗಳಿಕೊಟ್ಟೆಯನ್ನು ಸಮೀಕರಿಸಿ, ಹಗಲ ನೀರವವನ್ನು ಕಲಕುತ್ತ ಮುಳ್ಳೇಳುವ ಪ್ರತಿ ಕುಸರೆಳ್ಳಿನ ಸದ್ದಿಗೆ ನಿಮಿರುವ ರೋಮದಿಂದ ರೋಮಾಂಚನಗೊಳ್ಳುತ್ತಾ ಅರ್ಥವಾಗದ ತಲ್ಲಣದಿಂದ ಚಡಪಡಿಸುತ್ತಿದ್ದನು. ಒಂದು ಕುಸುರೆಳ್ಳು ಕದಡಿದ ಬೆಳ್ಳಂಜಾವದ ಮಬ್ಬುಗತ್ತಲು ಕರಗಿ ಅರಿಶಿನದ ಸೂರ್ಯ ಅಂಗಳವನ್ನು ಬಂಗಾರದ ಬಣ್ಣದಲ್ಲಿ ತೊಳೆದ ನಂತರವೂ ಆ ಸದ್ದು ಸಿಡಿಯುತ್ತಲೇ ಇದ್ದದ್ದು ಮೂವತ್ತು ವರುಷಗಳ ನಂತರವೂ ಚಟಪಟಿಸುತ್ತಲೇ ಇದೆಯೆಂದು ಅರಿವಾದದ್ದು ಇಂದು ಬೆಳಿಗ್ಗೆ.

ಹಾಗೆ ನೋಡಿದರೆ, ಅವನು ಇರುವೆ ತಿಂದಿದ್ದು ಇಂದೇ ಮೊದಲಿರಲಿಕ್ಕಿಲ್ಲ. ಈ ಮೊದಲೇ ಅವನಿಗೆ ಅರಿವಿಲ್ಲದಂತೆ ಅದೆಷ್ಟು ಇರುವೆ ಅವನ ಹೊಟ್ಟೆಯೊಳಗೆ ಹೊಕ್ಕು ಹೊರ ಹೋಗಿದ್ದವೋ ಯಾರಿಗೆ ಗೊತ್ತು? ಅವನೂರಿನ ಆಲೆಮನೆ ಸಂದರ್ಭದಲ್ಲಂತೂ ಇರುವೆ ಜೊತೆ ದೊಡ್ಡ ದೊಡ್ಡ ಗೊದ್ದಗಳೆಲ್ಲಾ ಮನೆ ತುಂಬಾ ಹರಿದಾಡುತ್ತಿದ್ದವು. ಉಪ್ಪರಿಗೆಯಲ್ಲಿ ಜೋಡಿಸಿಟ್ಟ ಬೆಲ್ಲದ ತಗಡಿನ ಡಬ್ಬಗಳಿಗೆ ರಾಶಿ ಇರುವೆಗಳು ಮುತ್ತಿಕೊಳ್ಳುತ್ತಿದ್ದರಿಂದ, ಅವನಪ್ಪ ಇರುವೆಗಳನ್ನು ಓಡಿಸಲು ಡಬ್ಬದ ಸುತ್ತಲೂ ಡಿ.ಡಿ.ಟಿ. ಪುಡಿಯನ್ನು ದುಂಡಗೆ ಚೆಲ್ಲಿರುತ್ತಿದ್ದರು. ಅದು ವಿಷವೆಂದು ಶಾಲೆಯಲ್ಲಿ ಕಲಿತು ಬಂದ ದಿವಸ, ಮುಂದುವರಿದ ಅದೆಷ್ಟೋ ದೇಶಗಳು ಅದನ್ನು ಬಹಿಷ್ಕರಿಸಿವೆಯೆಂದು ಜ್ಞಾನವೆಂಬ ಜ್ಞಾನೋದಯವನ್ನು ಪಡೆದ ಕ್ಷಣವೇ ಓಡಿ ಬಂದು ಮನೆ ಮಂದಿಗೆಲ್ಲಾ ಅರುಹಿ, ಅವನಪ್ಪನಿಂದ ಛಡಿಯೇಟುಗಳನ್ನೂ ತಿಂದಿದ್ದನು. ‘ಇವನೊಬ್ಬ ದೊಡ್ಡ ವಿಜ್ಞಾನಿ ಬಾಕಿಯಿದ್ದ. ನಂಗೇ ಹೇಳ್ಲಿಕ್ಕೆ ಬರ್ತಿಯಾ? ಮಾರಾಟ ಆಗ್ದ ಈ ಡಬ್ಬಕ್ಕೆಲ್ಲಾ ಇರ‍್ವೆ ಬರ‍್ದಂಗೆ ಎಂತಾರ ಮಂತ್ರಿಸಿದ್ದ ಪುಡಿ ತಕ್ಕಂಬಾ ನೋಡೋಣ...’ ಸಿಟ್ಟಿನಿಂದ ಕೋಲು ಝಳಪಿಸುತ್ತಾ ಅವನಪ್ಪ ಗಹಗಹಿಸಿ ನಗಾಡಿದ್ದರು.

ಒಂದು ಬೇಸಿಗೆ ಏಳುತ್ತಿದ್ದಂತೇ ಮನೆ ತುಂಬಾ ಇರುವೆಗಳು ಕಾಣಿಸಿಕೊಳ್ಳುತ್ತಿದ್ದವು. ಗೋಡೆ ಕೆಳಗೆ ಸಾಲಾಗಿಯೂ, ಗೋಡೆ ಮೇಲೆ ಅಂಕುಡೊಂಕಾಗಿಯೂ ಹರಿಯುವ ಅವುಗಳದ್ದೇ ಸಾಮ್ರಾಜ್ಞ. ಕೆಲವೊಮ್ಮೆ ಕಪ್ಪಿರುವೆ ಬಿಳಿ ಮೊಟ್ಟೆಯಿಟ್ಟುಕೊಂಡು ಮನೆಯ ಹೆಬ್ಬಾಗಿಲಲ್ಲೋ, ವಾಸ್ತವ ಬಾಗಿಲ ಹೊಸ್ತಿಲಲ್ಲೋ ಗುಂಪಾಗಿ ಕಾಣಿಸಿಕೊಳ್ಳುತ್ತಿತ್ತು. ಕಪ್ಪಿರುವೆ ಎದ್ದರೆ ಶುಭವೆಂದು ಅವನಮ್ಮ ಅವಕ್ಕೆ ಸಕ್ಕರೆ ಹಾಕುವುದನ್ನು ನೋಡಿದ್ದ. ಮನೆಯ ಕೆಲಸದ ನಾಣಿ, ಇರುವೆಯ ನಡುವೆ ಕೈಯಿಟ್ಟು, ಅವನ್ನು ಮೊಣಕೈ ಮೇಲೆ ಹತ್ತಿಸಿಕೊಳ್ಳುತ್ತಾ, ‘ಒಂಚೂರೂ ಕಚ್ಚಲ್ಲ. ಕೈ ಕೊಡಿಯಯ್ಯ’ ಎಂದು ಅವನ ಕೈಯನ್ನು ಎಳೆದುಕೊಳ್ಳಲು ನೋಡುತ್ತಿದ್ದ.

ಆದರೆ ಸಾಧಕ ಎಂದೂ ಇರುವೆಯನ್ನು ಇದುವರೆಗೂ ಮೈಮೇಲೆ ಬಿಟ್ಟುಕೊಂಡವನಲ್ಲ. ಅಡುಗೆಮನೆಯಲ್ಲಿ ಕಚ್ಚುವ ಇರುವೆಗಳ ಹಾವಳಿ ವಿಪರೀತ, ರಾತ್ರಿ ಹಾಸಿಗೆ ಸುತ್ತಲೂ ಅವೇ. ಮಧ್ಯರಾತ್ರಿಯಲ್ಲಿ ಕಚ್ಚಿತೆಂದು ಅವನು ಅಳುವುದೂ, ಅವನಮ್ಮ ಎದ್ದು ಕೊಬ್ಬರಿ ಎಣ್ಣೆ ಹಚ್ಚುತ್ತಾ ಗುಟ್ಟಾಗಿ ರಮಿಸುವುದೂ ದಿನ ನಿತ್ಯ ಸಂಗತಿ. ಅಂತಹದರಲ್ಲಿ ಅವನಮ್ಮ ಮಾಡಿದ ಅಡುಗೆಯಲ್ಲಿ ಇರುವೆ ಬಿದ್ದು ಕೊತಕೊತ ಕುದ್ದು ಅವನ ಹೊಟ್ಟೆ ಸೇರಿರಲಿಕ್ಕೆ ಇಲ್ಲವೆಂದೇನು ಗ್ಯಾರಂಟಿ? ಆದರೂ ಪ್ರಜ್ಞಾಪೂರ್ವಕವಾಗಿ ಇರುವೆ ತಿಂದಿದ್ದು ಅವನ ನೆನಪಿನಲ್ಲಿರಲಿಲ್ಲ.

ಆದರೆ ಇಂದು ಬೆಳಿಗ್ಗೆ ಸುಮಾ ಮಾಡಿಕೊಟ್ಟ ಉಪ್ಪಿಟ್ಟು ತಿನ್ನುತ್ತಿರುವಾಗ ಚಮಚಕ್ಕೆ ಕಪ್ಪಗೆ ಅಂಟಿದ್ದು ಸಾಸಿವೆ ಕಾಳಿನಂತೆ ಕಾಣದೆ, ಏನಿರಬಹುದೆಂದು ಕಣ್ಣಿನ ಹತ್ತಿರ ಚಮಚ ಹಿಡಿದು ನೋಡಿದಾಗ ತಲೆಯಿಲ್ಲದ ಕರಿ ಮುಂಡವೊಂದು ಗೋಚರಿಸಿತ್ತು. ಬಲ ತೋರುಬೆರಳಿನಲ್ಲಿ ಮೆಲ್ಲಗೆ ಅದನ್ನು ಹಿಡಿದು ಸೂಕ್ಷ್ಮವಾಗಿ ಅವಲೋಕಿಸಿದಾಗ, ರುಂಡವಿಲ್ಲದ ಇರುವೆ ಮುಂಡವೊಂದು ನಿರ್ಜೀವವಾಗಿ ಅವನ ಕೈ ಬೆರಳಿಗೆ ಅಂಟಿಕೊಂಡಿತ್ತು. ಮತ್ತು ತನ್ನ ರುಂಡವನ್ನು ತಿಂದವನು ನೀನೇ ಎಂದು ಮುಂಡ ಅವನತ್ತಲೇ ಬೊಟ್ಟು ಮಾಡಿ ತೋರಿಸುತ್ತಿತ್ತು. ಸಾಧಕ ಉಪ್ಪಿಟ್ಟನ್ನು ಅರ್ಧಕ್ಕೆ ಬಿಟ್ಟು ಎದ್ದ. ಸುಮಾಗೆ ಯಾವ ಕಾರಣವೂ ಕೊಡದೇ ಬಾಲ್ಕನಿಗೆ ಹೋಗಿ ನಿಂತ. ಅದೇ ಮನಃಸ್ಥಿತಿಯಲ್ಲಿ ಆಫೀಸಿಗೆ ಹೋದ.

ಕಂಪ್ಯೂಟರ್ ಮುಂದೆ ಕುಳಿತಾಗಲೂ ಆ ಬೊಟ್ಟು ತನ್ನತ್ತಲ್ಲೇ ತೋರುತ್ತಿದೆಯೆನ್ನಿಸಿ, ಚಡಪಡಿಸಿದ. ಬೆರಳಲ್ಲಿದ್ದ ಮುಂಡ ತೊಳೆದುಕೊಂಡಿದ್ದರೂ ಅದಿನ್ನೂ ಹಾಗೇ ಉಳಿದುಬಿಟ್ಟಿರುವಂತೆ ಅನ್ನಿಸಿ, ಎದ್ದು, ವಾಶ್‌ರೂಮಿಗೆ ಹೋಗಿ, ಮಕ್ಕಳ ಥರ ಕೈ ತುಂಬಾ ಲಿಕ್ವಿಡ್ ಸುರುವಿಕೊಂಡು ಗಸಗಸ ಕೈ ತಿಕ್ಕಿ ತಿಕ್ಕಿ ಐದಾರು ಸಲ ತೊಳೆದುಕೊಂಡ. ವಾಪಸು ಬಂದು ಸೀಟಿನಲ್ಲಿ ಕುಳಿತರೂ ಕೆಲಸದಲ್ಲಿ ಗಮನ ಹರಿಸಲಾಗದೇ ವಿಹ್ವಲಗೊಂಡ. ಮನದಲ್ಲಿ ಸೂತಕದ ಛಾಯೆ ಹೊತ್ತ ಸ್ಮಶಾನ ಮೌನ.

ತನ್ನ ಅರಿವಿಲ್ಲದೇ ತನ್ನ ಹೊಟ್ಟೆ ಸೇರಿದ ಇರುವೆ ರುಂಡವೀಗ ದೇಹದೊಳಗೇನು ನಡೆಸಿರಬಹುದು? ಮತ್ತೆ ಸಾಧಕ ಯೋಚಿಸತೊಡಗಿದ. ಮುಂಡ ಕಳೆದುಕೊಂಡು ರುಂಡ ಮಾತ್ರವಾದ ಆ ಇರುವೆಯೀಗ, ಬಹುಶಃ ಸೊಂಟದ ಕೆಳಗಿನ ದೇಹಕ್ಕೆ ಪೆರಾಲಿಸಿಸ್ ಬಡಿದು, ತಲೆ ಮಾತ್ರಾ ಆ್ಯಕ್ಟಿವ್ ಆಗಿರುವಂತಹ ಸ್ಥಿತಿಯಲ್ಲಿರಬಹುದು. ತನ್ನ ನರನಾಡಿಗಳಲ್ಲಿ ಸಂಚರಿಸಿ, ನಿಧಾನವಾಗಿ ಕರಗಿ, ತನ್ನ ರಕ್ತದೊಡನೆ ಬೆರೆಯುತ್ತಿದ್ದಂತೆ ತನಗೂ ಅತಿಮಾನುಷ ಶಕ್ತಿ ಬರಬಹುದೇ? ಸಾಧಕ ಉದ್ವೇಗದಿಂದ ಉಸಿರು ಎಳೆದುಕೊಂಡ. ಅಕ್ಕಪಕ್ಕವಿರುವವರು ತನ್ನನ್ನು ಗಮನಿಸುತ್ತಿರುವರೇ ಅನುಮಾನದಿಂದ ಆಚೀಚೆ ಕ್ಯೂಬಿಕಲ್‌ನಲ್ಲಿರುವವರನ್ನು ಒಮ್ಮೆ ದೃಷ್ಟಿ ಹೊರಳಿಸಿ ನೋಡಿದ.
ಜಗತ್ತು ತಣ್ಣಗಿತ್ತು. ಲಂಚ್ ಬ್ರೇಕ್‌ನಲ್ಲಿ, ಕ್ಯಾಂಟೀನಿನಲ್ಲಿ ಕೂತಾಗ ಅವನಿಗೆ ಮತ್ತೊಂದು ಅಲೋಚನೆ ಬಂತು. ಅಚಾನಕವಾಗಿ ಒಂದು ಇರುವೆ ರುಂಡ ತನ್ನ ನಾಲಿಗೆಗೆ ಬಂದು ಬಿದ್ದರೂ ತನಗ್ಯಾಕೆ ಗೊತ್ತಾಗಲಿಲ್ಲವೆಂಬ ಹೊಸ ಅಲೋಚನೆಯಿಂದ ಚಕಿತಗೊಂಡ. ಉಪ್ಪಿಟ್ಟಿನ ರುಚಿಯಲ್ಲಿ ಯಾವ ಬದಲಾವಣೆಯೂ ಆಗಿರಲಿಲ್ಲವೆಂದು ನೆನಪಾಗಿ, ಇರುವೆಗೆ ತನ್ನದೇ ರುಚಿಯಿಲ್ಲವೆಂದಾದರೆ ಈರ‍್ಯ ಮತ್ತು ಅವನ ಪಾಳ್ಯದವರು ಯಾಕೆ ಕೆಂಜಿರುವೆಗೆ ಮುಗಿಬಿದ್ದು ತಿನ್ನುತ್ತಿದ್ದರು ಎಂದು ತಲೆಯೊಳಗೆ ಇರುವೆ ಬಿಟ್ಟುಕೊಂಡ.

ಪೊಂಗಲ್ಲು, ಮೊಸರನ್ನ ತೆಗೆದುಕೊಂಡವನು ಒಂದೇ ಒಂದು ತುತ್ತೂ ತಿನ್ನದೇ, ಚಮಚದಿಂದ ಸುಮ್ಮನೆ ಕೆದಕುತ್ತಾ, ಪ್ರತಿ ಸಾಸಿವೆ, ಜೀರಿಗೆ, ಕಾಳುಮೆಣಸಿನ ಚೂರುಗಳನ್ನು ಎತ್ತಿ, ಬಲಗೈ ಬೆರಳುಗಳಲ್ಲಿ ಹಿಸುಕಿ, ಅವು ಪ್ರಾಣಿಜನ್ಯವೇ, ಸಸ್ಯಜನ್ಯವೇ ಎಂದು ಪಿಯುಸಿಗೆ ಮೊಟಕುಗೊಂಡಿದ್ದ ತನ್ನ ಜೀವಶಾಸ್ತ್ರ ಜ್ಞಾನವನ್ನೆಲ್ಲಾ ಅದರಲ್ಲಿ ಅರಿಚಿ ಹುಡುಕತೊಡಗಿದ. ಫಕ್ಕನೇ ಕಾಲೇಜಿನ ದಿನಗಳಲ್ಲಿ ಜಿರಳೆಯನ್ನೂ, ಕಪ್ಪೆಯನ್ನೂ ಕತ್ತರಿಸಿದ್ದು ನೆನಪಾಯಿತು. ಯಾಕೆ ಯಾರೊಬ್ಬರೂ ಇರುವೆಯನ್ನು ಕತ್ತರಿಸಲಿಲ್ಲವೆಂದು ಆಶ್ಚರ್ಯಗೊಂಡ. ಎಷ್ಟು ಹುಡುಕಿದರೂ ಏನೂ ಸಿಗದೇ ನಿರಾಶನಾಗಿ, ಒಂದೇ ಒಂದು ಅಗಳೂ ತಿನ್ನದೇ ಅಸಹನೆಯಿಂದಲೇ ತಟ್ಟೆ ದೂಡಿ, ತನ್ನ ಸೀಟಿಗೆ ಬಂದ.

ಮತ್ತೊಮ್ಮೆ ತನ್ನ ಕೈಬೆರಳನ್ನು ನೋಡಿಕೊಂಡ. ಬೆಳಿಗ್ಗೆ ಕೈಗೆ ಅಂಟಿಕೊಂಡ ಇರುವೆಯ ಮುಂಡದಲ್ಲಿ ಚೂರೂ ರಕ್ತದ ಹನಿಯಿರಲಿಲ್ಲವೆನ್ನುವುದು ನೆನಪಾಗಿ, ಇರುವೆಯ ದೇಹದಲ್ಲಿ ರಕ್ತವಿರುವುದೋ ಇಲ್ಲವೋ ಮತ್ತೊಂದು ಅನುಮಾನ ಹುಟ್ಟಿಕೊಂಡಿತು. ಬಹುಶಃ ರಕ್ತವಿದ್ದಿದ್ದರೆ ಅದರ ರುಚಿ ತನಗೆ ಗೊತ್ತಾಗುತ್ತಿತ್ತೇ? ಇರುವೆ ದೇಹದೊಳಗೆ ಸಾಕಷ್ಟು ಮಾಂಸವಿದ್ದಿದ್ದರೆ, ರಕ್ತಮಾಂಸಗಳಿಂದ ತುಂಬಿಕೊಂಡು ಅದೇನಾದರೂ ಬೇರೆಯೇ ರುಚಿ ಕೊಡುತ್ತಿತ್ತೇ?

ಮತ್ತೆ ಅವನ ಕಣ್ಣ ಮುಂದೆ ಬಾಲ್ಯದ ಈರ‍್ಯ ಕುಣಿಯತೊಡಗಿದ. ಚಿಗಳಿಕೊಟ್ಟೆ ಹಿಡಿದು ಸಂಭ್ರಮದಿಂದ ಅವನು ಮನೆಗೆ ಓಡುತ್ತಿದ್ದದ್ದೂ, ಅವನ ಮಕ್ಕಳು ಅವನ ಕೈಕಾಲಿಗೆ ಮುತ್ತಿಗೆ ಹಾಕುತ್ತಿದ್ದದ್ದೂ, ಚೀರಿ ಗಲಗಲ ನಗುತ್ತಾ ಗಂಡನಿಗೆ ಉಣುಗೋಲು ತೆಗೆದು ಸ್ವಾಗತಿಸುತ್ತಿದ್ದದ್ದೂ...

ಸಂಜೆ ವಾಪಸು ಮನೆಗೆ ಹೋಗುವುದಕ್ಕೆ ಮುಂಚೆ, ಆಫೀಸಿನ ಹತ್ತಿರದ ಸೂಪರ್ ಮಾರ್ಕೆಟ್‌ಗೆ ನುಗ್ಗಿದ. ಹಾಗೆ ನೋಡಿದರೆ ಅವನು ಮಾರ್ಕೆಟ್‌ಗೆ ಹೋಗುವುದು ಕಡಿಮೆ. ಹೋದರೂ, ಸುಮಾನೇ ಎಲ್ಲಾ ಸಾಮಾನು ನೋಡಿಕೊಳ್ಳುವವಳು, ಅವನು ಸುತ್ತಮುತ್ತಲ ಜನರನ್ನು ನೋಡುತ್ತಾ, ಸುಮ್ಮನೆ ಗಾಡಿ ದೂಡಿಕೊಂಡು ಅವಳನ್ನು ಹಿಂಬಾಲಿಸುತ್ತಿದ್ದನಷ್ಟೇ.

ಶೆಲ್ಫೆಲ್ಲಾ ತಡಕಾಡಿ ಹುಡುಕಿದರೂ ಹುಡುಕುತ್ತಿರುವುದು ಸಿಗದಾಗ, ಕೌಂಟರ್ ಬಳಿಯ ಸೇಲ್ಸ್ ಗರ್ಲ್‌ಗೆ, ‘ಇರುವೆ ಇದೆಯಾ?’ ಕೇಳಿದ. ಆಕೆ ಅರ್ಥವಾಗದೇ ಕಣ್ಣು ಪಿಳಿಪಿಳಿ ಮಾಡಿದಾಗ, ‘ಡೂ ಯೂ ಸೆಲ್ ಆ್ಯಂಟ್ಸ್?’ ಕೇಳಿದ. ಆಗಲೂ ಉತ್ತರ ಬಾರದಾಗ, ‘ವೇರ್ ಡು ಐ ಗೆಟ್ ಆ್ಯಂಟ್ಸ್?’ ಕೇಳಿದ. ಆಕೆ ವಿಚಿತ್ರವಾಗಿ ಅವನನ್ನು ನೋಡಿದಾಗ ಇರುಸುಮುರಿಸಿನಿಂದಲೇ ಹೊರಬಂದ.

ಮನೆಗೆ ಬಂದ ಮೇಲೂ ಮನಸ್ಸಿನ ತುಂಬಾ ಇರುವೆಯೇ ತುಂಬಿತ್ತು. ಸುಮಾ ಮನೆಗೆ ಬರುವುದಕ್ಕೆ ಮುಂಚೆ ಎಲ್ಲಾದರೂ ಗೋಡೆ ಮೇಲೆ, ಗೋಡೆ ಕೆಳಗೆ ಇರುವೆ ಹರಿಯುತ್ತಿದೆಯಾ ಎಂದು ಸೂಕ್ಷ್ಮವಾಗಿ ಮನೆಯ ಇಂಚಿಂಚನ್ನೂ ಪರೀಕ್ಷಿಸತೊಡಗಿದ. ಅವನ ಪುಣ್ಯವಶಾತ್, ಅಡುಗೆಮನೆ ಕಟ್ಟೆಯ ಒಂದು ಮೂಲೆಯಲ್ಲಿ ಇರುವೆ ಹರಿಯುತ್ತಿತ್ತು. ಒಂದೇ ಒಂದು ಇರುವೆ ಎತ್ತಿಕೊಂಡು ಅಂಗೈ ಮೇಲೆ ಬಿಟ್ಟುಕೊಂಡ. ಅದರ ಕಣ್ಣು, ಮೂಗು, ಕುಂಡಿ ಎಲ್ಲಿದೆ ತಿಳಿಯದೇ, ಮೆಲ್ಲಗೆ ಬೆರಳಲ್ಲಿ ತಿರುಗಿಸಿ ಮುರುಗಿಸಿ ನೋಡಿದ. ತಾನು ಬಾಲ್ಯದಲ್ಲಿ ಕಂಡ ಇರುವೆಗಳ ಮುಂದುವರಿದ ಸಂತತಿ ಇದೇ ಇರಬಹುದೇ ಅನುಮಾನಿಸಿದ. ದಶಕಗಳ ಹಿಂದೆ ಕಂಡ ಇರುವೆಗೂ ಇದಕ್ಕೂ ಏನಾದರೂ ವ್ಯತ್ಯಾಸವಿರಬಹುದೇ? ಅಂಗೈ ಮೇಲೆ ಮತ್ತೊಂದು ಇರುವೆಯೆತ್ತಿ ಬಿಟ್ಟುಕೊಂಡ. ಮೊದಲನೆಯದಕ್ಕೂ, ಎರಡನೆಯದಕ್ಕೂ ಯಾವ ವ್ಯತ್ಯಾಸವೂ ಇರಲಿಲ್ಲ. ಗೋಡೆ ಬದಿ ಶಿಸ್ತಾಗಿ ಹರಿಯುತ್ತಿರುವ ಸಾಲನ್ನೇ ತದೇಕದೃಷ್ಟಿಯಿಂದ ನಿಟ್ಟಿಸಿದ. ಎಷ್ಟು ಇರುವೆಯಿರಬಹುದೆಂದು ಎಣಿಸಲು ಹೋಗಿ ಲೆಕ್ಕ ತಪ್ಪಿದ. ಮತ್ತೊಮ್ಮೆ ಎಣಿಸಲು ಹೋಗಿ ಮತ್ತೆ ಲೆಕ್ಕ ತಪ್ಪಿದ.

ತಾನಂದುಕೊಂಡ ಹಾಗೆ ಕೇವಲ ಕೆಲವೇ ಇರುವೆಯಿಲ್ಲವೆನ್ನುವುದು ಮೊದಲ ಬಾರಿ ಅವನ ಗಮನಕ್ಕೆ ಬಂದು ದಂಗಾದ. ಇರುವೆ ಸಿಂಕ್ ಕೆಳಭಾಗದಿಂದ ಹೊರಟು, ಅಡುಗೆಮನೆ ಕಟ್ಟೆ ಮೇಲೆ ಹರಿದು, ಫ್ರಿಡ್ಜ್ ಕೆಳಗಿಳಿದು, ಬಾಗಿಲ ಸಂದಿಯಿಂದ ರೂಮಿನ ಕಂಪ್ಯೂಟರ್ ಟೇಬಲ್‌ವರೆಗೂ ನಿಗೂಢ ಮೌನದಲ್ಲಿ ಸಾಗಿ ಇದ್ದಕಿದ್ದಂತೇ ಅದೃಶ್ಯವಾಗಿತ್ತು. ತನ್ನ ಮನೆಯೊಳಗೆ ಇರುವೆಗಳ ಇಷ್ಟು ದೊಡ್ಡ ಸರಪಳಿ ಹರಿಯುತ್ತಿದ್ದರೂ ಇದುವರೆಗೂ ಅದು ತನ್ನ ಗಮನಕ್ಕೆ ಬಾರದಿರುವುದನ್ನು ನೆನೆದು ಅವನಿಗೆ ಆಶ್ಚರ್ಯವಾಯಿತು, ಜೊತೆಗೆ ಕಳವಳವೂ.

ತನಗೇ ಗೊತ್ತಿಲ್ಲದ ಯಾವುದಾದರೂ ಗುಪ್ತ ಸಂಚು ತನ್ನ ಮನೆಯಲ್ಲಿ ನಡೆಯುತ್ತಿದೆಯೇ? ಯಾರಾದರೂ ರಹಸ್ಯ ಕಾರ್ಯದ ಮೇಲೆ ಅದನ್ನು ಮನೆಯೊಳಗೆ ತಂದಿಟ್ಟು, ಎಷ್ಟೋ ದಿನಗಳಿಂದ ತನ್ನ ಮನೆಯ ರಹಸ್ಯಗಳನ್ನೆಲ್ಲಾ ಕಲೆ ಹಾಕುವುದರಲ್ಲಿ ನಿರತರಾಗಿರುವರೇ? ಇಲ್ಲವೆಂದರೆ ಏಳನೇ ಅಂತಸ್ತಿನ ಫ್ಫ್ಲ್ಯಾಟ್‌ನೊಳಗೆ ಹೀಗೆ ಇರುವೆ ಮುತ್ತಿ ಹಾಕಿಕೊಳ್ಳುವುದೆಂದರೆ? ಇದ್ದಕ್ಕಿದ್ದಂತೆ ಸಾಧಕನಿಗೆ ಆತಂಕವಾಗತೊಡಗಿತು.

ತನ್ನ ಮನೆಯ ನಿಗೂಢಾತಿ ನಿಗೂಢ ಸಮಾಚಾರಗಳನ್ನೆಲ್ಲಾ ಈ ಇರುವೆ ಯಾರಿಗಾದರೂ ದಾಟಿಸುತ್ತಿದೆಯೆನ್ನುವುದಾದರೆ, ತನ್ನ ಮನೆಯ ಅಂತಹ ನಿಗೂಢ ವಿಚಾರಗಳಾದರೂ ಯಾವುದು? ತನ್ನ ಮನೆಯ ವ್ಯವಹಾರವೇ ತಿಳಿಯದಷ್ಟು ತಾನು ಸ್ಥಿತಪ್ರಜ್ಞನೇ? ಯಾವುದಕ್ಕೂ ತಲೆ ಹಾಕದ ನಿರ್ಲಿಪ್ತತೆಯೇ ಯಾರಿಗಾದರೂ ಬಂಡವಾಳವಾಗಿ ತನ್ನ ಬಗ್ಗೆ ಮಾಹಿತಿ ಕಲೆ ಹಾಕಲು ಕುಮ್ಮಕ್ಕು ಕೊಡುತ್ತಿದೆಯೇ? ತನ್ನ ಮನೆಯ ವ್ಯವಹಾರವೇ ತನಗೆ ತಿಳಿದಿಲ್ಲವೆಂದರೆ? ಅವನ್ನೆಲ್ಲಾ ಕಲೆ ಹಾಕುತ್ತಿರುವವರು ಯಾರು? ಸಾಧಕನಿಗೆ ಎದೆ ಹೊಡೆದುಕೊಳ್ಳಲು ಶುರುವಾಯಿತು.

ತನಗೇ ತಿಳಿಯದ ತನ್ನ ಬದ್ಧ ವೈರಿ ಯಾರು? ಪ್ರಾಜೆಕ್ಟ್ ಮೆನೇಜರ್? ತನ್ನ ಮೇಲೆ ಕಣ್ಣಿಟ್ಟಿರುವ ಬೃಂದಾ ಕರಣೀಕರ್? ಅಪ್ಪ ಎಂದೋ ಸತ್ತಾಗಿತ್ತು. ಸಾವಿನ ಬೆನ್ನಿಗೆ ತನ್ನ ಬದುಕಿನ ಗೊಂದಲವನ್ನೆಲ್ಲಾ ಅಂಟಿಸಿ ಸತ್ತಿದ್ದ. ಈಗ ಪೂರ್ವಾರ್ಜಿತ ಆಸ್ತಿಯಲ್ಲಿ ಸಿಂಹಪಾಲು ಬೇಕೆಂದು ಕೋರ್ಟ್ ಮೆಟ್ಟಿಲೇರಿರುವ ತನ್ನಕ್ಕ, ಭಾವ? ಪುರಾತನ ಮನೆ ಇಬ್ಭಾಗವಾಗಬೇಕೆಂದು ಅಲೆಯುತ್ತಿರುವ ಅವರು? ಕೇಸ್ ಅವರಂತಾಗದಂತೆ ಲಾಯರ್ ಇಟ್ಟುಕೊಂಡು ಓಡಿಯಾಡುತ್ತಿರುವ ತನ್ನ ಹೆಂಡತಿ, ಮತ್ತವಳ ತಮ್ಮ? ಆಫೀಸಿನಲ್ಲಿ ಗುಟ್ಟಾಗಿ ಕತ್ತಿ ಮಸೆಯುತ್ತಿರುವ ಯಾರಾದರೂ?

ಸಾಧಕ ಒಮ್ಮೆ ಭ್ರಮೆಗೂ ವಾಸ್ತವಕ್ಕೂ ಓಲಾಡುತ್ತಾ ಮನೆಯೊಳಗೊಂದು ಸುತ್ತು ಗಸ್ತು ಬಂದ. ಅರ್ಥವಾಗದ ಚಡಪಡಿಕೆಯಲ್ಲೇ ಮತ್ತೆ ಅಡುಗೆಮನೆಗೆ ಬಂದು ಇರುವೆಯ ನಿಗೂಢ ಹೆಜ್ಜೆಯ ಜಾಡನ್ನು ಪತ್ತೆ ಹಚ್ಚುವವನಂತೆ ಸೂಕ್ಮವಾಗಿ ಸರಪಣಿಯನ್ನು ಪರೀಕ್ಷಿಸಿದ. ಇದ್ದಕಿದ್ದಂತೆ ಅದೃಶ್ಯವಾಗಿರುವ ಅವು ಮತ್ತೆಲ್ಲೋ ಹೋಗಿ ಪ್ರತ್ಯಕ್ಷವಾಗಿರಬಹುದೆನ್ನುವ ಜಿಜ್ಞಾಸೆಗೆ ಉತ್ತರ ಸಿಗದೇ ಕಂಗೆಟ್ಟ. ಯೋಚಿಸಿದಷ್ಟೂ ಯಾವುದೋ ವ್ಯವಸ್ಥಿತ ಜಾಲ ತನ್ನ ಸುತ್ತ ಸುತ್ತಿಕೊಂಡಂತೆ ಅವನಿಗೆ ಭಾಸವಾಗತೊಡಗಿತು. ಇದರ ಹಿಂದೆ ದೊಡ್ಡ ಹುನ್ನಾರವಿದ್ದು ತನ್ನನ್ನು ಕೊಲ್ಲಲು ಹತ್ತಿರದವರೇ ಯಾರಿಗೋ ಸುಪಾರಿ ಕೊಟ್ಟಿರಬಹುದೆನ್ನಿಸಿತು. ಸಾಧಕನಿಗೆ ಇದ್ದಕ್ಕಿದ್ದಂತೆ ನಡುಕ ಹುಟ್ಟಿತು. ದೇಹದೊಳಗಿನ ರಕ್ತ ಜಿಲ್ಲೆಂದು ತಣ್ಣಗಾಗಿ, ಶಕ್ತಿ ಕುಂದಿದಂತಾಗಿ ನೆಲಕ್ಕೆ ಕುಸಿದ.

ಈರ‍್ಯ ಕುಣಿಯುತ್ತಾ ಪ್ರತ್ಯಕ್ಷನಾದ. ‘ಅಯ್ಯಾ, ಇಲ್ಲ್ ಕಾಣಿ..!’ ಕೆಂಪಿರುವೆ ತಿಂದು ರಕ್ತಗೆಂಪಾದ ನಾಲಿಗೆ. ಅವನ ಮೈಯೆಲ್ಲಾ ಮುತ್ತಿಕೊಂಡು, ಕೆಂಡದಂತೆ ಧಗಧಗಿಸುತ್ತಿರುವ ಅಸಂಖ್ಯ ಕಡುಗೆಂಪು ಇರುವೆಗಳು, ‘ತಕ್ಕಣಿ ಅಯ್ಯಾ..!’ ಕೈಯಲ್ಲಿ ಚಿಗಳಿಕೊಟ್ಟೆ ಹಿಡಿದು ಮುಂದೆ ಬರುತ್ತಿದ್ದಾನೆ...

ಕುಳಿತಲ್ಲಿಂದ ಸಟ್ಟನೆದ್ದ ಸಾಧಕ. ದೇಹದೊಳಗೆ ದೈವ ಹೊಕ್ಕವನಂತೆ, ಇರುವೆಗಳನ್ನೆಲ್ಲಾ ಸರಸರ ಮೊಗೆದು ನೀರಿರುವ ಪಾತ್ರೆಗೆ ಹಾಕಿದ. ಒಲೆ ಮೇಲೆ ಬಾಣಲೆಯಿಟ್ಟು, ಇರುವೆಗಳನ್ನು ಸುರಿದು ಹುರಿಯತೊಡಗಿದ. ಚಟಪಟ ಸದ್ದು ಮೂಡಿದ್ದೇ ರೋಮಾಂಚನದಿಂದ ರೋಮಗಳೆಲ್ಲಾ ನಿಮಿರಿ ನಿಂತಿತು. ಇರುವೆಗಳನ್ನು ಬೋಗುಣಿಗೆ ಸುರುವಿಕೊಂಡು, ವಿಲಕ್ಷಣ ಉತ್ಕರ್ಷದಲ್ಲಿ ನಿಧಾನವಾಗಿ ತಿನ್ನತೊಡಗಿದನು.

ಹಗಲೆಲ್ಲಾ ಪ್ರಖರ ಬೆಳಕಿನಲ್ಲಿ ನಿಚ್ಚಳ ಚಹರೆ ಹೊತ್ತ ದಿನವೊಂದು ಕ್ಷೀಣಿಸಿ, ಅಸ್ಪಷ್ಟ ಚಹರೆಯ ಭ್ರಾಮಕ ರಾತ್ರಿಯೊಂದು ನಿಗೂಢ ನೆರಳನ್ನು ಹಾಸುತ್ತಾ ಮಗ್ಗುಲಲ್ಲಿ ತೆರೆದುಕೊಳ್ಳುತ್ತಿತ್ತು. ಸಾಧಕನಿಗೆ ನಿಧಾನವಾಗಿ ತನ್ನೊಳಗೇನೋ ಸಂಚಲನ ಉಂಟಾದಂತಾಗಿ ಮೆಲ್ಲನೆದ್ದ. ಅತಿಮಾನುಷ ಶಕ್ತಿಯೊಂದು ಹಾರಿ ತನ್ನ ದೇಹ ಹೊಕ್ಕಂತಹ ಭ್ರಾಂತಿಯೊಂದು ಅವನ ಮುಂದೆ ತೆರೆದುಕೊಳ್ಳುತ್ತಿದ್ದಂತೆ ಯಾರೋ ಮನೆ ಬಾಗಿಲ ಕೀಲಿ ತಿರುಗಿಸಿ, ಬಾಗಿಲು ತೆರೆಯಲು ಪ್ರಯತ್ನಿಸುತ್ತಿರುವುದು ಕೇಳಿಸಿತು.
ಸಾಧಕ ಸಟ್ಟನೆ ಕೈಯಲ್ಲಿ ಹಿಡಿದ ಚಮಚವನ್ನೇ ಚೂರಿಯಂತೆ ಹಿಡಿದುಕೊಂಡು ಮುನ್ನುಗ್ಗುವುದಕ್ಕೂ, ಜಿಲ್ಲನೆ ಹಾರಿದ ರಕ್ತ ಮುಖ ತೋಯಿಸುವುದಕ್ಕೂ ಹೆಚ್ಚೆಂದರೆ ಮೂವತ್ತು ಸೆಂಕೆಂಡ್ ವ್ಯತ್ಯಾಸವಷ್ಟೇ.

ಚಳಿ ಹೆಪ್ಪುಗಟ್ಟುತ್ತಿರುವ ನೀರವ ರಾತ್ರಿಯಲ್ಲಿ, ಢಾಳಾಗಿ ಕಪ್ಪು ಹೊದ್ದು, ಬೆಚ್ಚಗೆ ಮಲಗಿದ್ದ ನಗರದಲ್ಲಿ, ಚಿಟ್ಟನೆ ಕತ್ತಲನ್ನು ಸೀಳುತ್ತಾ ಮೊಳಗಿದ ಆರ್ತನಾದ ಸ್ವಪ್ನಗಳಲ್ಲೋ ದುಃಸ್ವಪ್ನಗಳಲ್ಲೋ ಕಳೆದುಹೋದ ಲೋಕದಲ್ಲಿ ಯಾರ ಕಿವಿಗೂ ತಟ್ಟದೇ ಒಂಟಿಯಾಗಿ ಗಾಳಿಯಲ್ಲಿ ತೇಲಿ ಹೋಯಿತು. ಮತ್ತೆಲ್ಲೋ ನಾಯಿಯೊಂದು ಆಳವಾದ ಧ್ವನಿಯಲ್ಲಿ ಊಳಿಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT