ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶಿ ಶ್ರೀ ವಿರುದ್ಧ ಮತ್ತೊಂದು ದೂರು

ಎಂ.ಬಿ ಪಾಟೀಲರಿಗೆ ಮತ ಹಾಕದಂತೆ ಹೆದರಿಸಿದ ಆರೋಪ
Last Updated 14 ಏಪ್ರಿಲ್ 2018, 20:13 IST
ಅಕ್ಷರ ಗಾತ್ರ

ವಿಜಯಪುರ: ಸಚಿವ ಎಂ.ಬಿ.ಪಾಟೀಲರಿಗೆ ಮತ ಹಾಕದಂತೆ ತಮ್ಮನ್ನು ಹೆದರಿಸಿದ್ದಾಗಿ ಆರೋಪಿಸಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯರು ಹಾಗೂ ಬಬಲೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯರ ವಿರುದ್ಧ ವ್ಯಕ್ತಿಯೊಬ್ಬರು ಚುನಾವಣಾ ಆಯೋಗಕ್ಕೆ ಶನಿವಾರ ದೂರು ನೀಡಿದ್ದಾರೆ.

‘ಸ್ವಾಮೀಜಿಗಳು ಶುಕ್ರವಾರ ಸಂಜೆ ನನ್ನ ಮನೆಗೆ ಬಂದು ಎಲ್ಲರನ್ನೂ ಒಟ್ಟು ಸೇರಿಸಿ, ಧರ್ಮ ಒಡೆದಿರುವ ಎಂ.ಬಿ.ಪಾಟೀಲರಿಗೆ ನೀವು ಮತ ಹಾಕಿದರೆ ನಿಮಗೆ ಕೆಟ್ಟದಾಗುತ್ತದೆ ಎಂದು ಹೆದರಿಸಿದರು. ಬಿಜೆಪಿ ಅಭ್ಯರ್ಥಿ ಪರ ಮತ ಹಾಕುತ್ತೇವೆ ಎಂದು ದೇವರ ಮೇಲೆ ಪ್ರಮಾಣ ಮಾಡಿಸಿದ್ದಾರೆ’ ಎಂದು ಶಾಂತಪ್ಪ ಮಲ್ಲಪ್ಪ ಕೋಟಿ ಎಂಬುವವರು ದೂರಿನಲ್ಲಿ ತಿಳಿಸಿದ್ದಾರೆ.

ಮತದಾರರನ್ನು ಕಾಲಿಗೆ ಬೀಳಿಸಿಕೊಂಡು, ‘ಸಚಿವ ಎಂ.ಬಿ.ಪಾಟೀಲರಿಗೆ ಮತ ಹಾಕುವುದಿಲ್ಲ’ ಹಾಗೂ ‘ಬಿಜೆಪಿಗೆ ಮತ ಹಾಕುತ್ತೇವೆ’ ಎಂದು ಕಾಶಿ ಶ್ರೀಗಳು ಪ್ರತಿಜ್ಞೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ, ಬ್ಲಾಕ್‌ ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಚುನಾವಣಾ ಆಯೋಗಕ್ಕೆ ಶುಕ್ರವಾರವಷ್ಟೇ ದೂರು ನೀಡಿದ್ದರು.

ಯಾರ ಪರವೂ ಪ್ರಚಾರ ನಡೆಸಿಲ್ಲ’‌: ಪಾದಪೂಜೆಗೆ ತೆರಳಿದ ವೇಳೆ‌ ತಾವು ಯಾರ ಪರವಾಗಿಯೂ ಪ್ರಚಾರ ಮಾಡಿಲ್ಲ ಎಂದು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯರು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಭಕ್ತರ ಆಹ್ವಾನದ ಮೇರೆಗೆ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕೆಲ ಗ್ರಾಮಗಳಿಗೆ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ
ಪಾಲ್ಗೊಂಡಿದ್ದೇವೆಯೇ ಹೊರತು ಪ್ರಚಾರಕ್ಕಾಗಿ ಅಲ್ಲ ಎಂದಿರುವ ಅವರು, ಮಾಡಿದ ತಪ್ಪಿನ ಅಳುಕಿನಿಂದ ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸುವ ಯತ್ನ ನಡೆದಿದೆ ಎಂದು ಆಪಾದಿಸಿದರು.

‘ಸ್ವಾಮೀಜಿಗಳು ರಾಜಕೀಯ ಪ್ರವೇಶಿಸಬಾರದು ಎಂಬ ನಿಯಮವೇನಿಲ್ಲ. ಉ. ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪರಂಪರೆ ರಾಜಕೀಯ
ದೊಂದಿಗೆ ತಳುಕು ಹಾಕಿಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರನ್ನಾದರೂ ಸ್ವೀಕರಿಸುವ ನಿರ್ಧಾರ ಮಾಡುವವರು ಪ್ರಜೆಗಳೇ. ಅವರ ನಿರ್ಣಯವೇ ಅಂತಿಮ’ ಎಂದರು.

ಶ್ರೀಗಳ ಜತೆ ಕಾಂಗ್ರೆಸ್‌ ಯುವ ಅಧ್ಯಕ್ಷ
ಕಾಶಿ ಪೀಠದ ಸ್ವಾಮೀಜಿ ಪತ್ರಿಕಾಗೋಷ್ಠಿ ನಡೆಸುವ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ ಖಾದರ್ ಹಾಜರಿದ್ದರು. ‘ನೀವು ಬಬಲೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಏಕೆ ಭೇಟಿ ನೀಡುತ್ತಿದ್ದೀರಿ ? ಉಳಿದ ಕ್ಷೇತ್ರಗಳಿಗ್ಯಾಕೆ ಹೋಗುತ್ತಿಲ್ಲ’ ಎಂದೂ ಸ್ವಾಮೀಜಿಯವರನ್ನು ಖಾದರ್‌ ಪ್ರಶ್ನಿಸುತ್ತಿದ್ದಂತೆಯೇ ಕೆಲ ಪತ್ರಕರ್ತರು ಆಕ್ಷೇಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಅವರ ಬೆಂಬಲಿಗರು ಪತ್ರಕರ್ತರ ಜತೆ ಮಾತಿನ ಚಕಮಕಿ ನಡೆಸಿದರು. ಪೊಲೀಸರು ಖಾದರ್‌ ಅವರನ್ನು ಹೊರ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT