ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕ್ಕಾಗಿ ಶವ ಕೊಡದ ಆಸ್ಪತ್ರೆ!

ಖಾಸಗಿ ಆಸ್ಪತ್ರೆ ವಿರುದ್ಧ ಮೃತನ ಸ್ನೇಹಿತರ ಆರೋಪ
Last Updated 14 ಏಪ್ರಿಲ್ 2018, 20:17 IST
ಅಕ್ಷರ ಗಾತ್ರ

ಮಂಗಳೂರು: ಚಿಕಿತ್ಸೆಯ ಹಣ ಪಾವತಿಸದೇ ಶವ ಕೊಡಲು ನಗರದ ಖಾಸಗಿ ಆಸ್ಪತ್ರೆ ನಿರಾಕರಿಸಿರುವ ಆರೋಪ ಕೇಳಿ ಬಂದಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಇದನ್ನು ನಿರಾಕರಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಉಕ್ಕುಂದದಲ್ಲಿ ಶುಕ್ರವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಬೈಕ್‌ ಸವಾರ ಮಣಿಕಂಠ ಊರ್ಫ್‌ ಅಪ್ಪು (26) ಎಂಬಾತನನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಶನಿವಾರ ಆತ ಮೃತಪಟ್ಟಿದ್ದ.

‘ಶನಿವಾರ ಬೆಳಿಗ್ಗೆಯಿಂದಲೂ ಶವವನ್ನು ಕೊಡುವಂತೆ ಮಣಿಕಂಠನ ಸ್ನೇಹಿತರು ಆಸ್ಪತ್ರೆಯ ವೈದ್ಯರನ್ನು ಕೇಳಿದ್ದಾರೆ. ಆದರೆ, ಚಿಕಿತ್ಸೆ ಹಾಗೂ ಮರಣೋತ್ತರ ಪರೀಕ್ಷೆ ಸೇರಿದಂತೆ ಒಟ್ಟು ₹45 ಸಾವಿರ ಬಿಲ್‌ ಆಗಿದ್ದು, ಇದರಲ್ಲಿ ಸರ್ಕಾರದಿಂದ ದೊರೆಯುವ ₹5 ಸಾವಿರ ವಿನಾಯಿತಿ ನೀಡಲಾಗಿದೆ. ಇನ್ನುಳಿದ ₹40 ಸಾವಿರ ಕಟ್ಟುವಂತೆ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದರು. ಅಲ್ಲಿಯವರೆಗೆ ಶವವನ್ನು ಕೊಡದೇ ಸತಾಯಿಸಿದರು’ ಎಂದು ಮಣಿಕಂಠನ ಸ್ನೇಹಿತ ಕಾರ್ತಿಕ್‌ ದೂರಿದ್ದಾರೆ.

‘ಶನಿವಾರ ಬೆಳಿಗ್ಗೆಯಿಂದಲೇ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳೇ ಆಸ್ಪತ್ರೆಗೆ ಕರೆ ಮಾಡಿ, ಶವ ಹಸ್ತಾಂತರಿಸುವಂತೆ ಹೇಳಿದರೂ, ಆಸ್ಪತ್ರೆಯವರು ಕಿವಿಗೊಡಲಿಲ್ಲ. ಊರಿನಿಂದ ಹಣ ಹೊಂದಿಸಿಕೊಂಡು ₹40 ಸಾವಿರ ಕಟ್ಟಿದ ನಂತರವೇ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಹಸ್ತಾಂತರ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಮಣಿಕಂಠನಿಗೆ ತಂದೆ ಮಾತ್ರ ಇದ್ದು, ತುಂಬಾ ಬಡವರಾಗಿದ್ದಾರೆ. ಆತ ಚಾಲಕನಾಗಿದ್ದು, ಹಣ ಇರಲಿಲ್ಲ. ಆದರೆ, ಆಸ್ಪತ್ರೆಯವರ ಕಾಟದಿಂದ
ಬೇಸತ್ತು, ಉಕ್ಕುಂದದ ಚಾಲಕರು, ಶಾಲಾ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ ಆಸ್ಪತ್ರೆಯ ಬಿಲ್‌ ಪಾವತಿಸಿದ್ದೇವೆ’ ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣರಾವ್‌, ‘ಈ ವಿಷಯದ ಕುರಿತು ನಾನು ಆಸ್ಪತ್ರೆಯ ಡೀನ್‌ ಜತೆಗೆ ಮಾತನಾಡಿದ್ದೇನೆ. ಆದರೆ, ಹಣದ ವಿಷಯ ಎಲ್ಲಿಯೂ ಪ್ರಸ್ತಾಪ ಆಗಿಲ್ಲ. ಇದು ರಸ್ತೆ ಅಪಘಾತ ಆಗಿರುವುದರಿಂದ ಪೊಲೀಸರು ಬರಬೇಕು. ಪ್ರಕರಣ ದಾಖಲಾದ ನಂತರವೇ ಮರಣೋತ್ತರ ಪರೀಕ್ಷೆ ನಡೆಸಬೇಕಾಗುತ್ತದೆ. ಅದಕ್ಕಾಗಿ ಕಾಯುತ್ತಿರುವುದಾಗಿ ಡೀನ್ ತಿಳಿಸಿದ್ದರು’ ಎಂದು ಸ್ಪಷ್ಟಪಡಿಸಿದರು.

‘ಇಂತಹ ಪ್ರಕರಣಗಳು ನಡೆದಲ್ಲಿ ಆರೋಗ್ಯ ಇಲಾಖೆ ಕೂಡಲೇ ಸ್ಪಂದಿಸುತ್ತಿದೆ. ನಗರ ವೆನ್ಲಾಕ್‌ ಆಸ್ಪತ್ರೆಯಲ್ಲಿ ಹಣ ಪಡೆಯದೇ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಇಂತಹ ಘಟನೆಗಳು ನಡೆಯಬಾರದು. ಈ ಕುರಿತು ದೂರು ನೀಡಿದಲ್ಲಿ ಖಂಡಿತ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

*
ಗಾಯಾಳು ಮೃತಪಟ್ಟಿದ್ದರೆ, ನಂತರ ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. ಚಿಕ್ಕಮಗಳೂರಿನಿಂದ ಪೊಲೀಸರು ಬರುವುದು ಸ್ವಲ್ಪ ವಿಳಂಬವಾಗಿದೆ. ಬೇರೇನೂ ಇಲ್ಲ.
–ಡಾ.ಜಯಪ್ರಕಾಶ್‌ ಆಳ್ವ, ಆಸ್ಪತ್ರೆಯ ಡೀನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT