ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಮನಿ– ಕೌಜಲಗಿ ಕುಟುಂಬಗಳ ಜಿದ್ದಾಜಿದ್ದಿ

ಸವದತ್ತಿ ವಿಧಾನಸಭಾ ಕ್ಷೇತ್ರ; ಕಾಂಗ್ರೆಸ್‌ಗೆ– 6, ಪಕ್ಷೇತರರಿಗೆ–4, ಬಿಜೆಪಿಗೆ– 2 ಬಾರಿ ಜಯ
Last Updated 15 ಏಪ್ರಿಲ್ 2018, 5:33 IST
ಅಕ್ಷರ ಗಾತ್ರ

ಬೆಳಗಾವಿ: ಯಲ್ಲಮ್ಮನ ದೇವಸ್ಥಾನದಿಂದ ಪ್ರಸಿದ್ಧಿ ಪಡೆದಿರುವ ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಕುಟುಂಬಗಳ ನಡುವೆ ರಾಜಕೀಯ ಕೇಂದ್ರೀತವಾಗಿದೆ. ಮಾಮನಿ ಹಾಗೂ ಕೌಜಲಗಿ ಕುಟುಂಬಗಳ ನಡುವೆ ಮೂವತ್ತು ವರ್ಷಕ್ಕಿಂತ ಹೆಚ್ಚು ಕಾಲ ಜಿದ್ದಾಜಿದ್ದಿಗೆ ಕ್ಷೇತ್ರವು ಸಾಕ್ಷಿಯಾಗಿದೆ. ಕ್ಷೇತ್ರದ ಜನರು ಪಕ್ಷಕ್ಕಿಂತ ಹೆಚ್ಚು ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ತೊರೆದು, ಪಕ್ಷೇತರರಾಗಿ ನಿಂತವರನ್ನೂ ಗೆಲ್ಲಿಸಿದ್ದಾರೆ.

ಸವದತ್ತಿಗೆ ಮೊದಲು ಪರಸಗಡ ಕ್ಷೇತ್ರವೆನ್ನುವ ಹೆಸರು ಇತ್ತು. 1957ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಸ್‌.ಬಿ. ಪದಕಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರಮಿಳಾ ಕಾಮತ್‌ ಅವರನ್ನು ಸೋಲಿಸಿದ್ದರು. ನಂತರ 1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಎಸ್‌. ತಿಮ್ಮರೆಡ್ಡಿ ಅವರ ಕೈ ಹಿಡಿದಿದ್ದರು. ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಸ್‌.ಬಿ. ಪದಕಿ ಪರಾಭವಗೊಂಡಿದ್ದರು.

1967ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್‌.ವಿ. ಕೌಜಲಗಿ 21,916 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದರು. 20,396 ಮತ ಪಡೆದ ಎಸ್‌.ಬಿ. ಪದಕಿ ತೀವ್ರ ಸ್ಪರ್ಧೆಯೊಡ್ಡಿದ್ದರು. 1972ರ ವೇಳೆಗೆ ಪದಕಿ ಅವರು ಪುನಃ ತಮ್ಮ ಶಕ್ತಿಯನ್ನು ವೃದ್ಧಿಸಿಕೊಂಡು ಆಯ್ಕೆಯಾದರು. 31,810 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ (ನಿಜಲಿಂಗಪ್ಪ ಬಣ) ಟಿ.ಆರ್‌. ಪಾಟೀಲ ಅವರನ್ನು ಸೋಲಿಸಿದರು.

1978ರಲ್ಲಿ ಎಸ್.ಎಚ್‌. ಕೌಜಲಗಿ ಅವರು ಜನತಾ ಪಕ್ಷದಿಂದ ಕಣಕ್ಕಿಳಿದು, 21,698 ಮತಗಳನ್ನು ಪಡೆಯುವ ಮೂಲಕ ಸ್ಪರ್ಧೆಯೊಡ್ಡಿದರು. 23,475 ಮತ ಪಡೆದ ಕಾಂಗ್ರೆಸ್‌ನ (ಐ) ಜಿ.ಕೆ. ಟಕ್ಕೇದ ಜಯಗಳಿಸಿದರು. 1983ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್‌.ವಿ. ಪಾಟೀಲ ಜಯಗಳಿಸಿದರು.

ಹಾಲಿ ಶಾಸಕ ಆನಂದ ಮಾಮನಿ ಅವರ ತಂದೆ ಚಂದ್ರಶೇಖರ ಎಂ. ಮಾಮನಿ ಅವರು 1985ರಲ್ಲಿ ಪಕ್ಷೇತರರಾಗಿ ಕಣಕ್ಕಿಳಿದರು. 41,095 ಮತ ಪಡೆಯುವ ಮೂಲಕ ಕಾಂಗ್ರೆಸ್‌ನ ಆರ್‌.ವಿ. ಪಾಟೀಲ (27,793) ಅವರನ್ನು ಸೋಲಿಸಿದರು. ಸಿಪಿಎಂನಿಂದ ವಿ.ಎನ್‌. ಹಳಕಟ್ಟಿ ಸೇರಿದಂತೆ ಇನ್ನೊಬ್ಬ ಅಭ್ಯರ್ಥಿ ಸ್ಪರ್ಧಿಸಿದ್ದರು.

1989ರಲ್ಲಿ ಜನತಾ ದಳಕ್ಕೆ ಸೇರ್ಪಡೆಯಾದ ಮಾಮನಿ ಅವರು ಚುನಾವಣೆಗೆ ಸ್ಪರ್ಧಿಸಿದರು. 36,627 ಮತ ಪಡೆಯಲು ಮಾತ್ರ ಸಾಧ್ಯವಾಯಿತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಸುಭಾಷ ಕೌಜಲಗಿ 47,777 ಮತ ಪಡೆದು ಜಯಗಳಿಸಿದರು. 7,861 ಮತ ಪಡೆದ ಕರ್ನಾಟಕ ರಾಜ್ಯ ರೈತ ಸಂಘದ (ಕೆಆರ್‌ಆರ್‌ಎಸ್‌) ಮಾನಸಿಂಗ ರಜಪೂತ ಹಾಗೂ ಇನ್ನೊಬ್ಬ ಅಭ್ಯರ್ಥಿ ಕಣದಲ್ಲಿದ್ದರು.

1994ರಲ್ಲಿ ಪುನಃ ಜನತಾ ದಳದಿಂದ ಸ್ಪರ್ಧಿಸಿದ ಚಂದ್ರಶೇಖರ ಮಾಮನಿ ಅವರು 49,568 ಮತ ಪಡೆಯುವ ಮೂಲಕ ಆಯ್ಕೆಯಾದರು. ಕಾಂಗ್ರೆಸ್‌ನ ಸುಭಾಷ ಕೌಜಲಗಿ, ಬಿಜೆಪಿಯ ಎ.ವೈ. ಪಾಟೀಲ ಪರಾಭವಗೊಂಡರು. ಇವರ ಜೊತೆ ಇನ್ನೂ ಎಂಟು ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

1999ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗದ ಕಾರಣ ಪಕ್ಷೇತರರಾಗಿ ಕಣಕ್ಕಿಳಿದ ಸುಭಾಷ ಕೌಜಲಗಿ 39,846 ಮತ ಪಡೆದು ಜಯಭೇರಿ ಬಾರಿಸಿದರು. ಚಂದ್ರಶೇಖರ ಮಾಮನಿ ನಿಧನಾನಂತರ ಕಣಕ್ಕಿಳಿದಿದ್ದ ಅವರ ಪತ್ನಿ ಗಂಗೂತಾಯಿ ಚಂದ್ರಶೇಖರ ಮಾಮನಿ ಅವರಿಗೆ 22,239 ಮತಗಳು ಲಭಿಸಿದ್ದವು. ಕಾಂಗ್ರೆಸ್‌ನ ರಾಮನಗೌಡ ವೆಂಕನಗೌಡ ಪಾಟೀಲ 18,490 ಮತ ಪಡೆದಿದ್ದರು. ಇನ್ನೂ ನಾಲ್ಕು ಜನ ಅಭ್ಯರ್ಥಿಗಳು ಕಣದಲ್ಲಿದ್ದರು.

ಮಾಮನಿ ಅವರ ಸಂಬಂಧಿಕರೇ ಆದ ವಿಶ್ವನಾಥ ಕರಿಬಸಪ್ಪ ಮಾಮನಿ 2004ರ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿದರು. 38,451 ಮತ ಪಡೆಯುವ ಮೂಲಕ ಕಾಂಗ್ರೆಸ್‌ನ ಸುಭಾಷ ಕೌಜಲಗಿ (37,006) ಅವರನ್ನು ಸೋಲಿಸಿದರು. ಬಿಜೆಪಿಯ ವಿರೂಪಾಕ್ಷಪ್ಪ ಬಾಳಿ 21,500 ಮತ ಪಡೆದಿದ್ದರು. ಇನ್ನೂ ಐದು ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

2008ರಲ್ಲಿ ಚಂದ್ರಶೇಖರ ಮಾಮನಿ ಅವರ ಪುತ್ರ ಆನಂದ ಮಾಮನಿ ಬಿಜೆಪಿಯಿಂದ ಸ್ಪರ್ಧಿಸಿ, ಜಯಗಳಿಸಿದರು. 48,255 ಮತ ಪಡೆದಿದ್ದ ಅವರು, ಕಾಂಗ್ರೆಸ್‌ನ ಸುಭಾಷ ಕೌಜಲಗಿ (43,678), ಜೆಡಿಎಸ್‌ನ ಬಸನಗೌಡ ದ್ಯಾಮನಗೌಡರ (11,780) ಅವರನ್ನು ಸೋಲಿಸಿದ್ದರು. ಇನ್ನೂ ಆರು ಅಭ್ಯರ್ಥಿಗಳು ಕಣದಲ್ಲಿದ್ದರು.

2013ರಲ್ಲಿ ಆನಂದ ಮಾಮನಿ ಪುನಃ ಆರಿಸಿಬಂದರು. 46,434 ಮತ ಪಡೆದಿದ್ದರು. ಕಾಂಗ್ರೆಸ್‌ನ ರವೀಂದ್ರ ಯಲಿಗಾರ 30,392, ಪಕ್ಷೇತರ ಅಭ್ಯರ್ಥಿ ಆನಂದಕುಮಾರ ಚೋಪ್ರಾ 29,851 ಮತ ಪಡೆದರು. ಇನ್ನೂ ಏಳು ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಸವದತ್ತಿಯಲ್ಲಿ ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಎಲ್ಲ ಪಕ್ಷಗಳು ಬಹುತೇಕ ಇದೇ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆ. ಮುಂದಿನ ತಿಂಗಳು 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಆನಂದ ಮಾಮನಿ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ಅಂತಿಮಗೊಂಡ ನಂತರ ಚುನಾವಣಾ ಕಣ ರಂಗೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT