ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಚ್ಚವ್ವನಹಳ್ಳಿ:ಸಾಂಕೇತಿಕ ಸಿಡಿ ಆಚರಣೆ

ಸಿಡಿ ಕಂಬಕ್ಕೆ ಮಕ್ಕಳನ್ನು ಮುಟ್ಟಿಸಿ ಭಕ್ತಿ ಸಮರ್ಪಣೆ
Last Updated 15 ಏಪ್ರಿಲ್ 2018, 8:01 IST
ಅಕ್ಷರ ಗಾತ್ರ

ಮಾಯಕೊಂಡ: ಸಮೀಪದ ಹುಚ್ಚವ್ವನಹಳ್ಳಿಯಲ್ಲಿ ಶುಕ್ರವಾರ ಇಟ್ಟಿಗೆ ಕರಿಯಮ್ಮ ದೇವಿಯ ಜಾತ್ರೆ ವಿಜೃಂಭಣೆಯಿಂದ ನೆರವೇರಿತು. ಹುಚ್ಚವ್ವನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ಶುಕ್ರವಾರ ನಡೆಯುವ ಸಿಡಿ, ವೀಕ್ಷಿಸಲು ಸಾವಿರಾರು ಜನ ಜಮಾಯಿಸಿದ್ದರು. ವಿಶೇಷ ಪೂಜೆ ಸಲ್ಲಿಸಿ ಸಿಡಿ ಕಂಬವನ್ನು ಉರುಮೆ, ವಾದ್ಯ ಸಹಿತವಾಗಿ ಮೆರಣಿಗೆಯೊಂದಿಗೆ ಗ್ರಾಮದಿಂದ ಊರ ಹೊರಗಿನ ಕರಿಯಮ್ಮ ದೇವಾಲಯಕ್ಕೆ ತರಲಾಯಿತು. ಸಿಡಿ ಕಂಬವನ್ನು ಹೂಡಿದ ಎತ್ತಿನ ಗಾಡಿಗೆ ವಿಶೇಷ ಪೂಜೆ ಸಲ್ಲಿಸಿ ಸಿಡಿ ಆಡುವ ಬಯಲಿಗೆ ತರಲಾಯಿತು. ಸಿಡಿ ಕಂಬವನ್ನು ತರುತ್ತಿದ್ದಂತೆ ಜನ ಸಿಡಿ ಆಡುವ ಬಯಲಿಗೆ ಕುತೂಹಲದಿಂದ ಧಾವಿಸಿದರು.

ತೆಂಗಿನಕಾಯಿ ಕಟ್ಟಿದ ಸಿಡಿ ಕಂಬವನ್ನು ಹತ್ತಾರು ಸುತ್ತು ತಿರುಗಿಸಲಾಯಿತು. ಪೊಲೀಸರು ಸಿಡಿ ಆಡದಂತೆ ಮುಂಚೆಯೇ ತಿಳಿಸಿದ್ದ ಕಾರಣ, ಭಕ್ತರು ತಮ್ಮ ಮಕ್ಕಳನ್ನು ಸಿಡಿ ಕಂಬಕ್ಕೆ ಮುಟ್ಟಿಸಿ, ಭಕ್ತಿ ಸಮರ್ಪಿಸಿದರು. ಅಕ್ಕಪಕ್ಕದ ಹತ್ತಾರು ಹಳ್ಳಿಗಳ ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು.

ಸಿಡಿ ಇಲ್ಲದೇ ನಿರಾಶೆ, ಆಕ್ರೋಶ: ಕಳೆದ 3–4 ವರ್ಷದಿಂದಲೂ ಈ ಗ್ರಾಮದಲ್ಲಿ ಸಿಡಿ ಆಡುವ ವಿಚಾರ ನಾಡಿನಾದ್ಯಂತ ಸುದ್ದಿ ಮಾಡಿ ತೀವ್ರ ಕುತೂಹಲ ಕೆರಳಿಸಿತ್ತು. ಕಳೆದ ವರ್ಷಗಳಂತೆ ಈವರ್ಷವೂ ಸಿಡಿ ಆಡದಂತೆ ತಡೆಯಲು ಅಧಿಕಾರಿಗಳು, ಪೊಲೀಸರು ಗ್ರಾಮಸ್ಥರೊಂದಿಗೆ ಚರ್ಚಿಸಿ, ಸಿಡಿ ಆಡುವುದನ್ನು ತಡೆದಿದ್ದರು. ಈ ವರ್ಷವೂ ಸಿಡಿ ಆಡದಂತೆ ತೀರ್ಮಾನಿಸಿದ್ದ ಹಿನ್ನೆಲೆಯಲ್ಲಿ
ಸಿಡಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಈ ವರ್ಷವಾದರೂ ಸಿಡಿ ಆಡಲು ಅವಕಾಶ ನೀಡಬಹುದು ಎಂದು ಭಾವಿಸಿದ್ದ ಕೆಲವರಿಗೆ ತೀವ್ರ ನಿರಾಶೆಯಾಯಿತು. ಸಿಡಿ ಆಡದ ಮೇಲೆ ಇದೆಂಥ ಜಾತ್ರೆ ಎಂದು ಕೆಲವರು ಪೊಲೀಸರ ಎದುರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಅನೇಕ ಕಡೆ ಸಿಡಿ ಆಡಿಸಲಾಗುತ್ತದೆ ಅಲ್ಲಿ ಯಾವ ಆಕ್ಷೇಪಣೆ ಇಲ್ಲ, ಆದರೆ ಇಲ್ಲಿ ತಡೆಯುತ್ತಿರುವುದು ತೀರಾ ಅನ್ಯಾಯ ಎಂದು ಕೆಲವರು ನೊಂದು ನುಡಿದರು. ‘ಸಿಡಿ ಆಡುವುದನ್ನು ತಡೆಯುತ್ತಿರುವ ಜಿಲ್ಲಾಡಳಿತದ ಆದೇಶ ಪ್ರಶ್ನಿಸಿ, ಕಾನೂನು ಹೋರಾಟ ಮಾಡುತ್ತೇವೆ. ಗಂಡಸರಿಗಾದರೂ ಸಿಡಿ ಆಡಲು ನ್ಯಾಯಾಲಯದ ಆದೇಶ ಪಡೆಯುತ್ತೇವೆ’ ಎಂದು ರೈತಸಂಘದ ಮುಖಂಡರೊಬ್ಬರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ದೇವದಾಸಿ ಪುನರ್ವಸತಿ ಯೋಜನೆ ಅನುಷ್ಠಾನಾಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಸಂಪ್ರದಾಯ ಮೆರೆವ ಕರಿಯಮ್ಮ ಜಾತ್ರೆ

ಇಟ್ಟಿಗೆ ಕರಿಯಮ್ಮ ದೇವಿ, ಹುಚ್ಚವ್ವನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರ ಆರಾಧ್ಯ ದೈವ. ಪ್ರತಿ ವರ್ಷ ಜಾತ್ರೆಯನ್ನು ವಾರವಿಡೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಸಂಪ್ರದಾಯದಂತೆ ಶುಕ್ರವಾರ ಹಬ್ಬಕ್ಕೆ ಸಾರು ಹಾಕಲಾಯಿತು. ಭಾನುವಾರ, ಸೋಮವಾರ ಮತ್ತು ಮಂಗಳವಾರ ದೇವಿಗೆ ಮದುವಣಗಿತ್ತಿ ಶಾಸ್ತ್ರ ಮಾಡಲಾಯಿತು. ಬುಧವಾರ ‘ಬೇವು -ಬೇಟೆ’ ನಡೆಸಲಾಯಿತು. ಅಂದೇ ಊರ ಹೊರವಲಯದ ದೇವಾಲಯಕ್ಕೆ ಕರೆತರಲಾಯಿತು. ಗುರುವಾರ ಆಂಜನೇಸ್ವಾಮಿ ಮತ್ತು ಕರಿಯಮ್ಮ ದೇವಿಯ ಉಚ್ಛಾಯ ನಡೆಸಲಾಯಿತು. ಶುಕ್ರವಾರ ಅಡ್ಡಪಲ್ಲಕ್ಕಿ ಉತ್ಸವ ನಡೆಸಿ, ಗ್ರಾಮದ ತುಂಬಾ ಮೆರವಣಿಗೆ ಮಾಡಲಾಯಿತು. ಶುಕ್ರವಾರ ಸಂಜೆ ಸಿಡಿ ಆಚರಿಸಲಾಯಿತು. ಶನಿವಾರ ‘ಗಾವು’ ನಡೆಸಲಾಯಿತು. ಶನಿವಾರದಿಂದ ಒಂಬತ್ತು ದಿನ ದೇವಾಲಯದ ಬಾಗಿಲು ಮುಚ್ಚಿ, ಪೂಜೆಯನ್ನೂ ನಿಲ್ಲಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT