ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಒಡೆದ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ

ಬಿಜೆಪಿ ಕಾರ್ಯಕರ್ತರ ಸಮಾವೇಶ: ಮುಖಂಡ ಕುಮಾರ್ ಬಂಗಾರಪ್ಪ ವಾಗ್ದಾಳಿ
Last Updated 15 ಏಪ್ರಿಲ್ 2018, 8:52 IST
ಅಕ್ಷರ ಗಾತ್ರ

ಶಿಗ್ಗಾವಿ: ವೀರಶೈವ ಮತ್ತು ಲಿಂಗಾಯತ ಮಧ್ಯೆ ಒಡಕು ಮೂಡಿಸುವ ಮೂಲಕ, ಧರ್ಮ ಒಡೆದು ಆಡಳಿತ ನಡೆಸಿರುವ ಕಾಂಗ್ರೆಸ್‌ ಪಕ್ಷಕ್ಕೆ ಈ ಚುನಾವಣೆಯಲ್ಲಿ ಭವಿಷ್ಯವಿಲ್ಲ. ಧರ್ಮ ಒಡೆದವರು ಧರ್ಮದ ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕುಮಾರ ಬಂಗಾರೆಪ್ಪ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದರು.

ತಾಲ್ಲೂಕು ಬಂಕಾಪುರದಲ್ಲಿ ಶುಕ್ರವಾರ ಸಂಜೆ ನಡೆದ ಕುಂದೂರ ಹೋಬಳಿ ಮಟ್ಟದ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ಜಲಸಂಪನ್ಮೂಲ ಸಚಿವ ಬೊಮ್ಮಾಯಿ ಅವರ ನೇತೃತ್ವದಲ್ಲಿ, ಸುಮಾರು 7 ಲಕ್ಷ ಎಕರೆ ಭೂಮಿ ನೀರಾವರಿ ಪ್ರದೇಶವಾಗಿದೆ. ಶಿಗ್ಗಾವಿ ಏತ ನೀರಾವರಿ ಮೂಲಕ 24 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಟ್ಟಿದೆ. ಸಣ್ಣ ನೀರಾವರಿಯ ಅನುದಾನವನ್ನು ₹ 35 ಕೋಟಿಯಿಂದ ₹1300 ಕೋಟಿಗೆ ಹೆಚ್ಚಿಸುವ ಮೂಲಕ ಸಾಕಷ್ಟು ಅಭಿವೃದ್ಧಿ ಮಾಡಿದೆ. ಬೊಮ್ಮಾಯಿ ಅವರ ಅಭಿವೃದ್ಧಿ ಕಾರ್ಯಕ್ಕಾಗಿ, ಮತ್ತೆ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಹಾಡಿ ರಂಜಿಸಿದ ಬಂಗಾರಪ್ಪ: ಸಮಾವೇಶದಲ್ಲಿ ಕುಮಾರ್ ಬಂಗಾರಪ್ಪ ಅವರು, ‘ಅಶ್ವಮೇಧ’ ಚಿತ್ರದ ‘ಹೃದಯ ಸಮುದ್ರ ಕಲಕಿ’ ಗೀತೆಯನ್ನು ಹಾಡಿ, ನರ್ತಿಸುವ ಮೂಲಕ ಕಾರ್ಯಕರ್ತರನ್ನು ರಂಜಿಸಿದರು. ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ವಿದ್ಯುತ್‌, ನೀರಾವರಿ ಹಾಗೂ ರಸ್ತೆ ಸೇರಿದಂತೆ ಅಭಿವೃದ್ಧಿ ಕ್ರಾಂತಿ ಆಗಿದೆ. ಅದಕ್ಕೆ ಈ ಕ್ಷೇತ್ರದ ಮತದಾರರ ಪ್ರೀತಿ, ವಿಶ್ವಾಸ ಹಾಗೂ ಬೆಂಬಲವೇ ಕಾರಣವಾಗಿದೆ. ಹಾಗಾಗಿ, ಬಿಜೆಪಿ ಒಂದು ದೊಡ್ಡ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಅಭಿವೃದ್ಧಿ ಪರ ಕೆಲಸ ಮತ್ತು ಸತ್ಯಕ್ಕೆ ಜಯವಿದೆ ಎಂಬುದನ್ನು ತೋರಿಸಬೇಕಾಗಿದೆ ಎಂದರು. ಮುಖಂಡರಾದ ಎಂ. ಬಸವರಾಜ ಹಾಗೂ ಶಶಿಧರ ಹೊಣ್ಣನವರ ಮಾತನಾಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಸಜ್ಜನ, ಬಿಜೆಪಿ ತಾಲ್ಲೂಕು ಅಧ್ಯಕ್ಷ ದೇವಣ್ಣ ಚಾಕಲಬ್ಬಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮ್ಯಾಗೇರಿ, ಜಿಲ್ಲಾ ಪಂಚಾಯ್ತಿ , ತಾಲ್ಲೂಕು ಪಂಚಾಯ್ತಿ, ಪುರಸಭೆ, ವಿವಿಧ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಇದ್ದರು.  ಗುಡ್ಡಪ್ಪ ಮತ್ತೂರ ನಿರೂಪಿಸಿದರು.

‘ಅಹಿಂದ ಪರ ಕೆಲಸ ಮಾಡದ ಸಿ.ಎಂ’

‘ಅಹಿಂದ ಎಂದು ಹೇಳಿಕೊಂಡು ಆಡಳಿತಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವರೆಗೆ ಅಹಿಂದ ಸಮುದಾಯದ ಬಗ್ಗೆ ಕಾಳಜಿ ವಹಿಸಿಲ್ಲ. ಯಾವುದೇ ಮಹತ್ವದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿಲ್ಲ. ಅಹಿಂದ ನಾಯಕರಿಗೆ ಉನ್ನತ ಸ್ಥಾನಮಾನ ನೀಡಿಲ್ಲ. ಆದರೆ, ಬಿಜೆಪಿ ಪಕ್ಷ ಅಹಿಂದ ಸಮುದಾಯದ ನಾಯಕರನ್ನು ಪ್ರಧಾನಿ ಮಾಡಿದೆ. ರಾಜ್ಯಪಾಲರನ್ನಾಗಿ ಅಹಿಂದಕ್ಕೆ ಸೇರಿದವರನ್ನು ನೇಮಿಸುವ ಮೂಲಕ ಸಾಮಾಜಿಕ ನ್ಯಾಯ ನೀಡಿದೆ’ ಎಂದು ಕುಮಾರ್ ಬಂಗಾರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT