ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಬರೆದವರು, ಹೆಚ್ಚು ಬಾರಿ ಗೆದ್ದವರು...

ವಿಧಾನಸಭೆ ಚುನಾವಣೆ: ಹಲವು ಕ್ಷೇತ್ರದಲ್ಲಿ ಗೆದ್ದವರನ್ನೇ ಗೆಲ್ಲಿಸಿರುವ ಮತದಾರರು
Last Updated 16 ಏಪ್ರಿಲ್ 2018, 5:59 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಹಲವು ಮುಖಂಡರು ವಿಧಾನಸಭಾ ಚುನಾವಣೆಗಳಲ್ಲಿ ಅತಿಹೆಚ್ಚು ಬಾರಿ ಗೆಲುವಿನ ಸವಿ ಕಂಡಿದ್ದಾರೆ. ಪಕ್ಷಗಳ ಬೆಂಬಲ ಹಾಗೂ ವೈಯಕ್ತಿಕ ವರ್ಚಸ್ಸು ವೃದ್ಧಿಸಿಕೊಂಡು ಪದೇ ಪದೇ ಗೆಲ್ಲುತ್ತಿದ್ದಾರೆ. ಕೆಲವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದ್ದರೂ ಅವರಿಗೆ ಮತದಾರರು ಆಶೀರ್ವದಿಸಿದ್ದಾರೆ. ಕೆಲವರು ಪಕ್ಷ ನಿಷ್ಠೆಯನ್ನೂ ಉಳಿಸಿಕೊಂಡು, ಜನರ ಬೆಂಬಲವನ್ನೂ ಪಡೆದುಕೊಳ್ಳುತ್ತಾ ಆಯ್ಕೆಯಾಗುತ್ತಿದ್ದಾರೆ. ಪ್ರಭಾವಿ ನಾಯಕರಾಗಿ ಹೊರಹೊಮ್ಮಿರುವ ಅವರಲ್ಲಿ ಬಹುತೇಕರು ಈ ಬಾರಿಯೂ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ.

ಕೆಲವು ಕ್ಷೇತ್ರಗಳ ಮತದಾರರು, ಗೆಲ್ಲಿಸಿದವರನ್ನೇ ಮತ್ತೆ ಮತ್ತೆ ಗೆಲ್ಲಿಸಿರುವ ಉದಾಹರಣೆಗಳೂ ಇವೆ. ಮತ್ತೊಂದು ಚುನಾವಣೆಗೆ ಕದನ ಕಣ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ, ದಾಖಲೆ ಬರೆದವರು ಹಾಗೂ ಗೆಲುವಿನ ಸರದಾರರ ಸಂಕ್ಷಿಪ್ತ ಪರಿಚಯದ ಹಿನ್ನೋಟ ಇಲ್ಲಿದೆ.

7 ಬಾರಿ ಗೆದ್ದ ಕತ್ತಿ:

ಈ ಭಾಗದ ಪ್ರಭಾವಿ ನಾಯಕರಲ್ಲಿ ಒಬ್ಬರು. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕು ಎಂದು ಆಗಾಗ ಸೊಲ್ಲೆತ್ತುತ್ತಾ ಬರುತ್ತಿದ್ದಾರೆ. ಸದ್ಯ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿ ಪ್ರತಿನಿಧಿಸುತ್ತಿದ್ದಾರೆ. ತಂದೆ ವಿಶ್ವನಾಥ ಕತ್ತಿ ನಿಧನದಿಂದ ತೆರವಾದ ಹುಕ್ಕೇರಿ ಕ್ಷೇತ್ರಕ್ಕೆ 1985ರಲ್ಲಿ ನಡೆದ ಉಪಚುನಾವಣೆಯಲ್ಲಿ ಜನತಾಪಕ್ಷದಿಂದ ಗೆದ್ದಿದ್ದರು. 1989 ಹಾಗೂ 1994ರಲ್ಲಿ ಜನತಾದಳ, 1999ರಲ್ಲಿ ಜೆಡಿಯು ಪಕ್ಷದಿಂದ ಗೆದ್ದು ಮೊದಲ ಹ್ಯಾಟ್ರಿಕ್‌ ಗೆಲುವಿನ ಸಾಧನೆ ಮಾಡಿದ್ದರು. 2008ರಲ್ಲಿ ಜೆಡಿಎಸ್‌, ಅದೇ ವರ್ಷ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ 2013ರಲ್ಲಿ ಬಿಜೆಪಿಯಿಂದ ಆಯ್ಕೆಯಾದವರು. ಎರಡು ಉಪಚುನಾವಣೆ ಸೇರಿದಂತೆ 7 ಬಾರಿ ಗೆದ್ದಿದ್ದಾರೆ. ಸಚಿವರೂ ಆಗಿದ್ದರು. ಪಕ್ಷಾಂತರ ಮಾಡಿಯೂ ಗೆಲ್ಲುತ್ತಲೇ (2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು) ಬಂದಿರುವುದು ಅವರ ಹೆಗ್ಗಳಿಕೆ.

ದಿ.ವಿ.ಎಸ್‌. ಕೌಜಲಗಿ:

ಕಾಂಗ್ರೆಸ್‌ನ ಪ್ರಭಾವಿ ಮುಖಂಡರಾಗಿದ್ದ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ವಿಧಾನಸಭಾಧ್ಯಕ್ಷರಾಗಿದ್ದರು. ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರು ಅರಬಾವಿ ಕ್ಷೇತ್ರದಲ್ಲಿ 1972, 1978, 1983ಯಲ್ಲಿ ಗೆದ್ದು ಮೊದಲ ಹ್ಯಾಟ್ರಿಕ್‌ ಮಾಡಿದ್ದರು. ನಂತರ, 1989, 1994 ಮತ್ತು 1999ರಲ್ಲಿ ವಿಜೇತರಾಗಿ 2ನೇ ಬಾರಿ ಹ್ಯಾಟ್ರಿಕ್ ಸಾಧಿಸಿದ್ದರು. ಅವರು 6 ಬಾರಿಯೂ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಗೆದ್ದಿರುವುದು ವಿಶೇಷ. ಡಿ.ಬಿ. ಇನಾಮದಾರ: ಕಿತ್ತೂರ ಮತಕ್ಷೇತ್ರದಲ್ಲಿ 1983ರಲ್ಲಿ ಚುನಾವಣಾ ಕಣಕ್ಕಿಳಿದವರು. ಈವರೆಗೆ ಐದು ಬಾರಿ ಗೆದ್ದಿದ್ದಾರೆ. 1983, 1985ರಲ್ಲಿ ಜನತಾಪಕ್ಷ, 1994, 1999 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದವರು.

3ಕ್ಕಿಂತ ಹೆಚ್ಚು ಬಾರಿ ಗೆದ್ದವರು:

ಪ್ರಕಾಶ ಹುಕ್ಕೇರಿ: ಸದಲಗಾ ಕ್ಷೇತ್ರವಿದ್ದಾಗ 1994, 1999 ಹಾಗೂ 2004ರವರೆಗೆ ಸತತ ಮೂರು ಬಾರಿ ಕಾಂಗ್ರೆಸ್‌ನಿಂದಲೇ ಗೆದ್ದವರು. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ನಂತರ ರಚನೆಯಾದ ಚಿಕ್ಕೋಡಿ–ಸದಲಗಾ ಕ್ಷೇತ್ರದಿಂದಲೂ 2008 ಹಾಗೂ 2013ರಲ್ಲಿ ಗೆದ್ದಿದ್ದರು. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಆಯ್ಕೆಯಾಗಿ, ಸಂಸದರಾಗಿದ್ದಾರೆ.

ಬಾಲಚಂದ್ರ ಜಾರಕಿಹೊಳಿ: ಅರಬಾವಿ ಕ್ಷೇತ್ರದಲ್ಲಿ 2004ರಿಂದಲೂ ಆಯ್ಕೆಯಾಗುತ್ತಿದ್ದಾರೆ. ಒಂದು ಉಪಚುನಾವಣೆ ಸೇರಿ ಸತತ 4 ಬಾರಿ ಗೆದ್ದವರು. ಸಚಿವರೂ ಆಗಿದ್ದರು. ಜೆಡಿಎಸ್‌ ಹಾಗೂ ಬಿಜೆಪಿಯಿಂದ ತಲಾ 2 ಬಾರಿ ಪ್ರತಿನಿಧಿಸಿದ್ದಾರೆ. ಹಿಂದಿನ ಫಲಿತಾಂಶಗಳನ್ನು ಗಮನಿಸಿದರೆ, ಮತ ಗಳಿಕೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿರುವುದು ಸ್ಪಷ್ಟವಾಗಿದೆ. ಈ ಬಾರಿಯೂ ಬಿಜೆಪಿಯಿಂದಲೇ ಸ್ಪರ್ಧೆಗಳಿದಿದ್ದಾರೆ.

ಬಿ.ಐ. ಪಾಟೀಲ: ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಕಣಕ್ಕಿಳಿದದಿದ್ದವರು. 1983, 1985, 1989 ಹಾಗೂ 1994ರ ಚುನಾವಣೆಯಲ್ಲಿ ಸತತ 4 ಬಾರಿ ಆಯ್ಕೆಯಾದವರು.

ರಮೇಶ ಜಾರಕಿಹೊಳಿ: ಪ್ರಭಾವಿ ಜಾರಕಿಹೊಳಿ ಕುಟುಂಬದ ನಾಯಕ. ಗೋಕಾಕದಲ್ಲಿ 1999ರಿಂದ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಸತತ 4 ಬಾರಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಸ್ಥಾನವನ್ನೂ ಪಡೆದುಕೊಂಡಿದ್ದಾರೆ.

ಭರಮಗೌಡ ಕಾಗೆ: 1999ರಲ್ಲಿ ನಡೆದ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಪಾಸಗೌಡ ಅಪ್ಪಗೌಡ ಪಾಟೀಲ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ 2000ದಲ್ಲಿ ನಡೆದ ಉಪಚುನಾವಣೆಯಲ್ಲಿ ಸಂಯುಕ್ತ ಜನತಾದಳದಿಂದ ಮೊದಲ ಬಾರಿಗೆ ಗೆದ್ದವರು. ರಾಜು ಕಾಗೆ ಎಂದೇ ಖ್ಯಾತರಾಗಿರುವ ಅವರು ಉಪಚುನಾವಣೆಯಲ್ಲದೇ, ಸತತ 3 ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಮೂರು ಬಾರಿ ಆಯ್ಕೆಯಾದವರು:

ಶ್ಯಾಮ್‌ ಬಿ. ಘಾಟಗೆ: ರಾಯಬಾಗ ಮತಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸತತ 3 ಬಾರಿ (1989, 1994 ಮತ್ತು 1999) ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಎ.ಆರ್‌. ಪಂಚಗಾವಿ: ಕಾಂಗ್ರೆಸ್‌ ನಾಯಕ. ಸತತ 3 ಬಾರಿ ಗೆದ್ದವರು. ಗೋಕಾಕ–2 ಕ್ಷೇತ್ರವಿದ್ದಾಗ 1957 ಹಾಗೂ 1962ರಲ್ಲಿ ಗೆದ್ದವರು. ಅರಬಾವಿ ಕ್ಷೇತ್ರವಾದ ನಂತರವೂ 1967ರಲ್ಲೂ ಆಯ್ಕೆಯಾಗಿದ್ದರು.

ಕಾಕಾಸಾಹೇಬ ಪಾಟೀಲ: ನಿಪ್ಪಾಣಿ ಮತಕ್ಷೇತ್ರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಪ್ರಭಾವದ ನಡುವೆ ಕಾಂಗ್ರೆಸ್‌ನಿಂದ ಆಯ್ಕೆಯಾದವರು. ಸತತ 3 ಬಾರಿ (1999, 2004 ಹಾಗೂ 2008) ಗೆದ್ದಿದ್ದಾರೆ.

ಲಕ್ಷ್ಮಣ ಸವದಿ: 2004, 2008 ಹಾಗೂ 2013ರ ಚುನಾವಣೆಯಲ್ಲಿ ಸತತ 3 ಬಾರಿ ಗೆದ್ದಿದ್ದಾರೆ. ಸಹಕಾರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

ಎನ್‌.ಬಿ. ಸರದೇಸಾಯಿ: ಖಾನಾಪುರ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಂಇಎಸ್‌ ಬೆಂಬಲಿತ ಅಭ್ಯರ್ಥಿ 1967, 1972 ಹಾಗೂ 1978ರಲ್ಲಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ.

ಇನ್ನೂ ಹಲವರು:

ಬಿ.ಬಿ. ಸಾಯನಾಯ್ಕ: ಎಂಇಎಸ್‌ ಬೆಂಬಲಿತರಾಗಿ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 1967, 1972 ಹಾಗೂ 1978ರಲ್ಲಿ ಸತತ ಮೂರು ಬಾರಿ ಗೆದ್ದಿದ್ದಾರೆ.

ಶಿವಾನಂದ ಕೌಜಲಗಿ: ಬೈಲಹೊಂಗಲ ಕ್ಷೇತ್ರದಲ್ಲಿ 1985ರಲ್ಲಿ ಜನತಾ ಪಕ್ಷ, 1989 ಹಾಗೂ 1994ರಲ್ಲಿ ಜನತಾದಳದಿಂದ ಆಯ್ಕೆಯಾಗಿ ಹ್ಯಾಟ್ರಿಕ್‌ ಗೆಲುವು ಕಂಡಿದ್ದಾರೆ.

ಆರ್‌.ಎಸ್‌. ಪಾಟೀಲ: ರಾಮದುರ್ಗದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದ ಅವರು 1962, 1972 ಮತ್ತು 1978ರಲ್ಲಿ ಆಯ್ಕೆಯಾಗಿದ್ದರು.

ಪಿ.ಪಿ. ಹೆಗರೆ: ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಚಿಕ್ಕೋಡಿ ಕ್ಷೇತ್ರದಲ್ಲಿ 1972 ಹಾಗೂ 1978ರಲ್ಲಿ ಕಾಂಗ್ರೆಸ್‌, 1983ರಲ್ಲಿ ಜನತಾಪಕ್ಷದಿಂದ ಸತತ 3 ಬಾರಿ ಆಯ್ಕೆಯಾಗಿದ್ದರು.

ಡಿ.ಬಿ. ಪವಾರ ದೇಸಾಯಿ: ಅಥಣಿ ಕ್ಷೇತ್ರದಲ್ಲಿ 1962, 1967, 1978, 1983ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು.

ಹ್ಯಾಟ್ರಿಕ್‌ ಹೊಸ್ತಿಲಲ್ಲಿರುವವರು...

ರಾಮದುರ್ಗದ ಕಾಂಗ್ರೆಸ್‌ ಶಾಸಕ ಅಶೋಕ ಪಟ್ಟಣ, ಬೆಳಗಾವಿ ಉತ್ತರ ಪ್ರತಿನಿಧಿಸುತ್ತಿರುವ ಕಾಂಗ್ರೆಸ್‌ನ ಫಿರೋಜ್‌ ಸೇಠ್‌, ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ ಪಾಟೀಲ, ರಾಯಬಾಗದ ಬಿಜೆಪಿ ಪ್ರತಿನಿಧಿ ದುರ್ಯೋಧನ ಐಹೊಳೆ, ಯಮಕನಮರಡಿ ವಿಧಾನಸಭಾ ಕ್ಷೇತ್ರದಿಂದ ಸತೀಶ ಜಾರಕಿಹೊಳಿ ಸತತ 3ನೇ ಗೆಲುವಿನ ಬಯಕೆಯಲ್ಲಿದ್ದಾರೆ.

ಹೆಚ್ಚು ಬಾರಿ ಶಾಸಕಿಯಾದವರು

ಜಿಲ್ಲೆಯಲ್ಲಿ ಕೆಲವೇ ಮಹಿಳೆಯರಿಗಷ್ಟೇ ಹೆಚ್ಚಿನ ಗೆಲುವಿನ ಅವಕಾಶ ದೊರೆತಿದೆ. ಕಾಂಗ್ರೆಸ್‌ನ ಚಂಪಾಬಾಯಿ ಬೋಗಲೆ ಹುಕ್ಕೇರಿ ದ್ವಿಸದಸ್ಯ ಕ್ಷೇತ್ರವಿದ್ದಾಗ, ಸಂಕೇಶ್ವರ ಕ್ಷೇತ್ರವಿದ್ದಾಗ ಒಮ್ಮೆ ಗೆದ್ದಿದ್ದರು. ನಂತರ 1967ರಲ್ಲಿ ಕಾಗವಾಡ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಜಿಲ್ಲೆಯಲ್ಲಿ ಮೂರು ಬಾರಿ ಗೆದ್ದಿರುವ ನಾಯಕಿ ಎನ್ನುವ ದಾಖಲೆಯೂ ಅವರದು. ಲೀಲಾದೇವಿ ಆರ್‌. ಪ್ರಸಾದ್‌ ಅಥಣಿ ಕ್ಷೇತ್ರದಲ್ಲಿ 1985ರಲ್ಲಿ ಜನತಾಪಕ್ಷ ಹಾಗೂ 1994ರಲ್ಲಿ ಜನತಾ ದಳದಿಂದ ಗೆದ್ದಿದ್ದರು. ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಾಂಗ್ರೆಸ್‌ನಿಂದ ಶಾರದಾ ಪಟ್ಟಣ (ರಾಮದುರ್ಗ), ಜನತಾ ಪಕ್ಷದಿಂದ ಶಕುಂತಲಾ ತುಕಾರಾಂ ಚೌಗಲೆ (ಚಿಕ್ಕೋಡಿ), ಬಿಜೆಪಿಯಿಂದ ಶಶಿಕಲಾ ಜೊಲ್ಲೆ (ನಿಪ್ಪಾಣಿ) ತಲಾ ಒಂದೊಂದು ಬಾರಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT