ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚರಿ ತಂದ ಕಾಂಗ್ರೆಸ್ ಟಿಕೆಟ್

ಕೂಡ್ಲಿಗಿ ಬಿಟ್ಟು ಗ್ರಾಮೀಣಕ್ಕೆ ಬಂದ ನಾಗೇಂದ್ರ
Last Updated 16 ಏಪ್ರಿಲ್ 2018, 6:02 IST
ಅಕ್ಷರ ಗಾತ್ರ

ಬಳ್ಳಾರಿ: ‘ಹಾಲಿ ಶಾಸಕರಿಗೆ ಕಾಂಗ್ರೆಸ್‌ ಟಿಕೆಟ್‌ ಖಚಿತ’ ಎಂಬ ನಂಬಿಕೆ ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಬುಡಮೇಲಾಗಿದೆ. ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಗೊಂಡ ಪ್ರಭಾವಿ, ಗಣಿ ಉದ್ಯಮಿಗಳಿಗೆ ಪಕ್ಷವು ಕೆಂಪು ಹಾಸು ಹಾಸಿದೆ. ಕ್ಷೇತ್ರಕ್ಕೆ ಪರಿಚಿತರಲ್ಲದವರಿಗೂ ಈ ಬಾರಿ ಟಿಕೆಟ್‌ ಘೋಷಣೆಯಾಗಿರುವುದು ವಿಶೇಷ.

ಸಿರುಗುಪ್ಪ: ಸಿರುಗುಪ್ಪದಲ್ಲಿ ಹಾಲಿ ಶಾಸಕ ಬಿ.ಎಂ.ನಾಗರಾಜ ಅವರಿಗೆ ಟಿಕೆಟ್‌ ಸಿಕ್ಕಿಲ್ಲ. ಅವರೊಂದಿಗೆ ಅವರ ಕುಟಂಬದ ಸದಸ್ಯರೂ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು. ತೆಕ್ಕಲಕೋಟೆಯ ಎಚ್‌.ಎಂ.ಮಲ್ಲಿಕಾರ್ಜುನ ಟಿಕೆಟ್‌ಗಾಗಿ ತೀವ್ರ ಯತ್ನ ನಡೆಸಿದ್ದರು. ಆದರೆ ಸ್ಥಳೀಯರನ್ನು ಹೊರಗಿಟ್ಟಿರುವ ಪಕ್ಷ, ನಾಗೇಂದ್ರ ಅವರ ಸಹೋದರಿಯ ಮಗ, ಉದ್ಯಮಿ ಮುರಳಿಕೃಷ್ಣ ಅವರಿಗೆ ಟಿಕೆಟ್‌ ನೀಡಿ ಅಚ್ಚರಿ ತಂದಿದೆ. ‘ನಾಗರಾಜ ಅವರು ಗಂಭೀರ ಪ್ರಯತ್ನ ಮಾಡಿದ್ದರೆ ಟಿಕೆಟ್‌ ದೊರಕುತ್ತಿತ್ತು. ಆದರೆ ಅವರು ಯಾರಲ್ಲಿಗೂ ಬರಲಿಲ್ಲ. ಹೀಗಾಗಿ ಹೈಕಮಾಂಡ್‌ ಅವರನ್ನ ಗಂಭೀರವಾಗಿ ಪರಿಗಣಿಸಲಿಲ್ಲ’ ಎಂದು ಮೂಲಗಳು ತಿಳಿಸಿವೆ.

ಕೂಡ್ಲಿಗಿ: ‘ಕೂಡ್ಲಿಗಿ ತೊರೆಯಲಾರೆ’ ಎಂದು ನಾಗೇಂದ್ರ ಅವರು ಅಲ್ಲಿನ ಬೆಂಬಲಿಗರ ಮುಂದೆ ಹೇಳಿದ್ದರೂ, ಈಗ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್‌ ಪಡೆದಿದ್ದಾರೆ. ಟಿಕೆಟ್‌ ಘೋಷಣೆಗೂ ಮುಂಚೆಯೇ ಅವರು ತಮ್ಮ ಹೆಸರನ್ನು ಕೂಡ್ಲಿಗಿಯಿಂದ ಗ್ರಾಮೀಣ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿದ್ದರು. ಆದರೆ ಈ ಸಂಗತಿ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ.

ಕೆಪಿಸಿಸಿ ಕಾರ್ಯದರ್ಶಿಯಾಗಿರುವ ರಘು ಗುಜ್ಜಾಲ್‌ ಈಗ ಕೂಡ್ಲಿಗಿ ಕಾಂಗ್ರೆಸ್‌ ಅಭ್ಯರ್ಥಿ. ಅವರು ಹೊಸಪೇಟೆಯವರು. ಕೂಡ್ಲಿಗಿ ಜನರಿಗೆ ಅಪರಿಚಿತರು. ಅವರನ್ನು ಯಾವ ಮಾನದಂಡದಲ್ಲಿ ಆಯ್ಕೆ ಮಾಡಲಾಗಿದೆ ಎಂಬುದು ಸ್ಪಷ್ಟಗೊಂಡಿಲ್ಲ. ಅಲ್ಲಿ ಹಿಂದಿನ ಎರಡು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಎಸ್‌.ವೆಂಕಟೇಶ್‌, ಸಾಕಷ್ಟು ಪ್ರಚಾರ ನಡೆಸಿದ್ದ ಲೋಕೇಶ್‌ ನಾಯ್ಕ್‌ ಮತ್ತು ನಾಗಮಣಿ ಅವರ ಆಕಾಂಕ್ಷೆ ಈಡೇರಿಲ್ಲ.

ಗ್ರಾಮೀಣ:
ಗ್ರಾಮೀಣ ಕ್ಷೇತ್ರದ ಶಾಸಕ ಎನ್‌.ವೈ.ಗೋಪಾಲಕೃಷ್ಣ ಟಿಕೆಟ್‌ ವಂಚಿತರಾಗಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಅವರು, ಅಲ್ಲಿ ಬಿಜೆಪಿಯು ಬಿ.ಶ್ರೀರಾಮುಲು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ಬಳಿಕ ನಿಲುವು ಬದಲಿಸಿದ್ದರು. ಟಿಕೆಟ್‌ಗಾಗಿ ಅವರೂ ಕೆಲವು ದಿನಗಳಿಂದ ನವದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಅವರನ್ನು ಹಿಂದಿಕ್ಕಿರುವ ನಾಗೇಂದ್ರ ಅಲ್ಲಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಂಡೂರಿನಲ್ಲಿ ಈ ತುಕಾರಾಂ ಅವರೊಬ್ಬರೇ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಅವರಿಗೇ ಟಿಕೆಟ್‌ ಘೋಷಣೆಯಾಗಿದೆ.

ಅನಿಲ್‌ಲಾಡ್‌ ಮತ್ತೆ ಸ್ಪರ್ಧೆ:
ಬಳ್ಳಾರಿ: ‘ಜನರ ನಡುವೆ ಕಾಣಿಸಿಕೊಳ್ಳಲಿಲ್ಲ’ ಎಂಬ ಆರೋಪದ ನಡುವೆಯೂ ಅವರಿಗೆ ಮತ್ತೆ ನಗರ ಕ್ಷೇತ್ರದಲ್ಲಿ ಟಿಕೆಟ್‌ ದೊರಕಿದೆ. ಮಾಜಿ ಶಾಸಕ ಎಂ.ದಿವಾಕರಬಾಬು ತಮ್ಮ ಪುತ್ರ ಹನುಮಕಿಶೋರ್‌ಗೆ ಟಿಕೆಟ್‌ ದೊರಕಿಸಲು ತೀವ್ರ ಪ್ರಯತ್ನ ನಡೆಸಿದ್ದರು.

ಸಿರುಗುಪ್ಪ: ನಾಗೇಂದ್ರ ಅಳಿಯ ಮುರಳಿಕೃಷ್ಣಗೆ ಟಿಕೆಟ್‌

ಕೂಡ್ಲಿಗಿ: ಸದ್ದಿಲ್ಲದೆ ರಘು ಗುಜ್ಜಲ್‌ಗೆ ಅವಕಾಶ

ಬಳ್ಳಾರಿ ಗ್ರಾಮೀಣ: ಗೋಪಾಲಕೃಷ್ಣಗೆ ತಪ್ಪಿದ ಟಿಕೆಟ್‌

ಬಳ್ಳಾರಿ ನಗರ: ಅನಿಲ್‌ಲಾಡ್‌ಗೆ ಮತ್ತೆ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT