ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ಬದಲಾಗಬೇಕಿದೆ ಹಳ್ಳಿಗಳ ಚಿತ್ರಣ

ಕಡೂರು ವಿಧಾನಸಭಾ ಕ್ಷೇತ್ರ: ಡಾ.ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲ್ಲೂಕು
Last Updated 16 ಏಪ್ರಿಲ್ 2018, 7:06 IST
ಅಕ್ಷರ ಗಾತ್ರ

ಬೀರೂರು: ಆ ಕಾಲವೊಂದಿತ್ತು... ಬೀರೂರು ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡ ಕಡೂರು ತಾಲ್ಲೂಕು ತೆಂಗು-ಕಂಗುಗಳ ರಂಗು ಹೊಂದಿ, ಭತ್ತ, ರಾಗಿ, ಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾಗಳಿಂದ ಪಣತಗಳು(ಕಣಜ) ತುಂಬಿದ ರೈತರ ಮನೆ-ಮನಗಳೂ ನಲಿವಿನಲ್ಲಿದ್ದವು. ಕ್ರಮೇಣ ಕೆರೆಗಳು ಬರಿದಾದವು, ಮಳೆ ಕಡಿಮೆಯಾಯಿತು. ರೈತರ ಪಣತಗಳು ಖಾಲಿಯಾಗಿ ರೇಷನ್ ಅಕ್ಕಿಗೆ ಕಾರ್ಡ್ ಹಿಡಿದು ಹೋಗುವ ಕಾಲವೂ ಬಂದಿದೆ.

ರಾಜ್ಯದ ಸಮಗ್ರ ಸ್ಥಿತಿ ಅಧ್ಯಯನ ನಡೆಸಿದ ಡಾ.ಡಿ.ಎಂ.ನಂಜುಂಡಪ್ಪ ಅವರ ತಂಡ ವರದಿ ನೀಡಿದಾಗ ಕಡೂರು ತಾಲ್ಲೂಕು ಹಿಂದುಳಿದ ತಾಲ್ಲೂಕು ಎಂದು ಘೋಷಣೆಯಾಗಿತ್ತು. ನಂತರದ ದಿನಗಳಲ್ಲಿ ಬರಸ್ಥಿತಿಯ ನಿರ್ವಹಣೆಗಾಗಿ ಸರ್ಕಾರಗಳು ಹೆಚ್ಚುವರಿ ಅನುದಾನ ನೀಡುವ ಮೂಲಕ ಪರಿಸ್ಥಿತಿ ಸುಧಾರಿಸಬೇಕಾದ ಸನ್ನಿವೇಶವೂ ಸಾಗಿಬಂದಿದೆ.

2000ನೇ ಇಸವಿಯಿಂದ ಈಚೆಗಂತೂ ತಾಲ್ಲೂಕು ಮಳೆ-ಬೆಳೆಯ ಕೊರತೆ ಎದುರಿಸಿದ್ದೇ ಹೆಚ್ಚು. ತಾಲ್ಲೂಕನ್ನು ಕಬಂಧ ಬಾಹುಗಳಿಂದ ಆವರಿಸಿರುವ ಬರದಿಂದಾಗಿ ರೈತರ ಜತೆಗೆ ಸಾಮಾಜಿಕ ಆರ್ಥಿಕ ಸ್ಥಿತಿಯ ಮೇಲೆಯೂ ಪರಿಣಾಮವಾಗಿದೆ. ಕೈಗಾರಿಕೆಗಳಿಗೆ ಅವಕಾಶವಿಲ್ಲದೆ ಉದ್ಯೋಗ ಸೃಷ್ಟಿಯಾಗದ ಕಾರಣ ಯುವಸಮೂಹ, ಕೃಷಿಯಿಂದ ಖುಷಿ ಕಾಣದ ರೈತಸಮೂಹ ಹತಾಶೆಯ ನಿಟ್ಟುಸಿರಿನಲ್ಲಿ ಬದುಕು ಸವೆಸಬೇಕಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ತಾಲ್ಲೂಕಿನಲ್ಲಿ ಸಖರಾಯಪಟ್ಟಣ ಭಾಗದ ಅಯ್ಯನಕೆರೆ, ಎಮ್ಮೆದೊಡ್ಡಿ ಭಾಗದ ಮದಗದಕೆರೆ, ಪಂಚನಹಳ್ಳಿ ಸಮೀಪದ ಗಂಗನಹಳ್ಳಿಕೆರೆ, ಚೌಳಹಿರಿಯೂರು ಸಮೀಪದ ಕಲ್ಕೆರೆ ಕೆರೆ, ತಂಗಲಿ ಸಮೀಪದ ದೊಡ್ಡಹಳ್ಳ, ಕೆ.ಬಿದರೆ, ಹಿರೇನಲ್ಲೂರು, ಬಳ್ಳೇಕೆರೆ, ಮತಿಘಟ್ಟ ಮೊದಲಾದ ಕಡೆಗಳ ಕೆರೆಗಳು ಜನ, ಜಾನುವಾರು ಮತ್ತು ಕೃಷಿ ಉದ್ದೇಶದ ಪೂರಕ ಕೆರೆಗಳಾಗಿದ್ದವು. ಇಂದು ಈ ಯಾವ ಕೆರೆಯಲ್ಲಿಯೂ ಹನಿ ನೀರಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾ ಪಂಚಾಯಿತಿಯ 6(8), ತಾಲ್ಲೂಕು ಪಂಚಾಯಿತಿಯ 23, 60 ಗ್ರಾಮ ಪಂಚಾಯಿತಿಗಳು, 2 ಪುರಸಭೆಗಳನ್ನು ಹೊಂದಿರುವ ಕಡೂರು ವಿಧಾನಸಭಾ ಕ್ಷೇತ್ರವು ಸಖರಾಯಪಟ್ಟಣ, ದೇವನೂರು ಜಿಲ್ಲಾ ಪಂಚಾಯಿತಿ ಸ್ಥಾನಗಳು ಮತ್ತು ಸಖರಾಯಪಟ್ಟಣ ಹೋಬಳಿಯ 11 ಗ್ರಾಮ ಪಂಚಾಯಿತಿಗಳನ್ನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಬಿಟ್ಟುಕೊಟ್ಟಿದೆ.

ಸದ್ಯ ಏಪ್ರಿಲ್ ತಿಂಗಳಿನಲ್ಲಿ ಕಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 46 ಹಳ್ಳಿಗಳಲ್ಲಿ ಪಂಚಾಯಿತಿಗಳು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದರೆ, ಹಲವೆಡೆ ಕಿರು ನೀರು ಸರಬರಾಜು ಘಟಕಗಳ ಮೂಲಕ ಜನರಿಗೆ ನೀರು ಪೂರೈಸಲಾಗುತ್ತಿದೆ.

ಶಾಸಕ ವೈ.ಎಸ್.ವಿ.ದತ್ತ ಅವರ ಪರಿಶ್ರಮದ ಫಲವಾಗಿ ಕಡೂರು ಮತ್ತು ಬೀರೂರು ಪಟ್ಟಣಗಳು ಭದ್ರಾ ಕುಡಿಯುವ ನೀರು ಪೂರೈಕೆ ಯೋಜನೆಯಿಂದ ಜನರ ದಾಹ ತೀರಿಸುವಲ್ಲಿ ಯಶಸ್ವಿಯಾಗಿವೆ’ ಎಂಬುದು ಜನರ ಹೇಳಿಕೆ. ಜತೆಗೆ ಇದೇ ಸಾಲಿನಲ್ಲಿ ಬರುವ 32 ಹಳ್ಳಿಗಳ ಕುಡಿಯುವ ನೀರು ಪೂರೈಕೆಗೂ ಅನುಮೋದನೆ ದೊರೆತಿದೆ.

ಬಯಲು ಸೀಮೆಯ ಕಡೂರು ತಾಲ್ಲೂಕಿನ ಬಹುತೇಕ ಕೃಷಿಕರು ಮಳೆಯಾಧಾರಿತ ಕೃಷಿ ಪದ್ಧತಿ ಅಥವಾ ಅಂತರ್ಜಲ ಬಳಕೆ ವಿಧಾನದಲ್ಲಿ ಬೆವರು ಹರಿಸಿ ಬೆಳೆಸಿದ್ದ ತೆಂಗಿನ ತೋಟಗಳು ನೀರಿನ ಕೊರತೆಯಿಂದ ಒಣಗಿ ಸಾವಿರಾರು ಹೆಕ್ಟೇರ್ ತೆಂಗುಬೆಳೆ ನಾಶವಾಗಿದ್ದರೆ, ಮದಗದಕೆರೆ, ದೇವನಕೆರೆ, ಅಯ್ಯನಕೆರೆಗಳ ಆಶ್ರಯದಲ್ಲಿ ಮುಗಿಲೆತ್ತರ ಬೆಳೆದಿದ್ದ ಅಡಿಕೆತೋಟಗಳು ಕೆರೆಗಳು ಒಣಗುತ್ತಿದ್ದಂತೆಯೇ ಧರಾಶಾಯಿಯಾಗಿವೆ. ರಾಗಿ, ಜೋಳ, ಸೂರ್ಯಕಾಂತಿ, ಶೇಂಗಾ ಬೆಳೆಗಳು ರೈತರ ಜೇಬು ತುಂಬಿಸುವಲ್ಲಿ ವಿಫಲವಾಗಿವೆ. ಇದು ಜನಜೀವನ ಮತ್ತು ರೈತರ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಕೃಷಿಯ ಜೊತೆಗೆ ಪಶುಸಂಗೋಪನೆಯೂ ಅವನತಿಯತ್ತ ಸಾಗಿ ದನ-ಕರು, ಎಮ್ಮೆಗಳು ಬಿಕರಿಯಾಗುತ್ತಿವೆ.

2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ತಾಲ್ಲೂಕಿನ ಗಡಿ ಭಾಗದ ಸಿಂಗಟಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಪಂಚನಹಳ್ಳಿ ಸಮೀಪದ ಗಂಗನಹಳ್ಳಿ ಕೆರೆಗೆ ಹೊನ್ನವಳ್ಳಿ ಕಾಲುವೆಯಿಂದ ಹೇಮಾವತಿ ನೀರು ಹರಿಸಿ ಕೆರೆ ತುಂಬಿಸುವ ಶಾಶ್ವತ ನೀರಾವರಿ ಯೋಜನೆ ಜಾರಿಯಾಗಲಿದೆ ಎನ್ನುವ ಮಾತು ಕೇಳಿಬಂದಿತ್ತು, ಆದರೆ ಹೊನ್ನವಳ್ಳಿ ಕಾಲುವೆಯಲ್ಲಿ 90ದಿನಗಳು ನೀರು ಹರಿದರೆ ಮಾತ್ರ ಈ ಕೆರೆ ತುಂಬಿಸುವುದು ಸಾಧ್ಯ ಎನ್ನುವ ಸ್ಥಿತಿ ಮತ್ತು ಸರಣಿಯ ಕೊನೆಯ ಕೆರೆ ಎನ್ನುವ ಕಾರಣಕ್ಕಾಗಿ ಮತ್ತು ಯಾವುದೇ ಅಧಿಕೃತ ಅನುಮತಿ ಹೊಂದಿಲ್ಲದ ಕಾರಣ ಗಂಗನಹಳ್ಳಿ ಕೆರೆಗೆ ಹೇಮಾವತಿ ನೀರು ಮರೀಚಿಕೆಯಾಗಿಯೇ ಉಳಿಯಿತು. ಪರಿಣಾಮ ಬರ ಪರಿಸ್ಥಿತಿ ಮುಂದುವರೆದಿದೆ. ಈ ಭಾಗದ ಜನರ ಕುಡಿಯುವ ನೀರಿನ ದಾಹ ಇನ್ನೂ ಆರಿಲ್ಲ. ಸಿಂಗಟಗೆರೆ, ಕೆ.ಬಿದರೆ ದೊಡ್ಡಕೆರೆಗಳನ್ನು ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎನ್ನುವ ಅಳಲೂ ಇದೆ.

  ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲ್ಲೂಕಿನ 32 ಕೆರೆಗಳಿಗೆ ನೀರು ಹರಿಯಲಿದೆ ಎನ್ನುವ ಮಾತುಗಳು ಕಾರ್ಯರೂಪಕ್ಕೆ ಬರುವಲ್ಲಿ ಸಾಕಷ್ಟು ಸಮಯ ಇನ್ನೂ ಬೇಕಾಗಬಹುದು. ಈಗಾಗಲೇ ಬುಕ್ಕಾಂಬುಧಿ ಕೆರೆಗೆ ಭದ್ರಾ ನೀರು ಹರಿಸಲಾಗಿದ್ದು, ಮನಸ್ಸು ಮಾಡಿ ಈ ನೀರನ್ನು ಚೌಳಹಿರಿಯೂರು, ಕಲ್ಕೆರೆ ಕೆರೆಗಳಿಗೆ ಹಾಯಿಸಿದರೆ ಈ ಭಾಗದ ಜನರ ಜೀವ ತಂಪಾಗಬಹುದು, ಆದರೆ ಇದು ಕಾರ್ಯಗತವಾಗುವುದು ಯಾವಾಗ? ಎನ್ನುವ ಪ್ರಶ್ನೆ ಕುಡಿಯುವ ನೀರಿಗೂ ಪಂಚಾಯಿತಿ ಕಳುಹಿಸುವ ಟ್ಯಾಂಕರ್‍ಗಾಗಿ ಕಾದು ಕೂರುವ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿರುವಂತಿದೆ.

ತಂಗಲಿ ಸಮೀಪದ ದೊಡ್ಡಹಳ್ಳಕ್ಕೆ (ವೇದಾವತಿ ನದಿ) ಭದ್ರಾ ನೀರು ಹರಿಸಿ ಮತಿಘಟ್ಟ, ಬಳ್ಳೇಕೆರೆ ಮೊದಲಾದ ಸರಣಿ ಕೆರೆಗಳನ್ನು ತುಂಬಿಸುವ ಘೋಷಣೆಯೂ ಸದ್ಯದ ಮಟ್ಟಿಗೆ ಘೋಷಣೆಯಾಗಿಯೇ ಉಳಿದಿದೆ. ಈ ನೀರಿನ ಕೊರತೆಯ ಪರಿಣಾಮ ಜನರು ಗುಳೇ ಹೋಗುವ ಸ್ಥಿತಿ ಉಂಟಾಗುತ್ತಿದೆ ಎನ್ನುವ ನೋವು ಹಲವರದ್ದು. ಹಿರೇನಲ್ಲೂರು ಹೋಬಳಿ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಕಳೆದ ಬಾರಿ ಸಂಪೂರ್ಣ ಕೈಕೊಟ್ಟ ಮಳೆ ಇಲ್ಲಿನ ರೈತರಿಗೆ ಆಸರೆಯಾಗಿದ್ದ ವಾಣಿಜ್ಯ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿಯನ್ನು ಮಣ್ಣುಗೂಡಿಸಿದರೆ, ಮುಂದೆಯೂ ಇದೇ ಸ್ಥಿತಿ ಎದುರಾದರೆ, ಕುಡಿಯುವ ನೀರಿಗೆ ಆಶ್ರಯವಾಗಿರುವ ಕೊಳವೆಬಾವಿಗಳೂ ಬತ್ತಿದರೆ ಹೋಗುವುದು ಎಲ್ಲಿಗೆ? ಎನ್ನುವ ಪ್ರಶ್ನೆಯಾಗಿ ಜನರನ್ನು ಕಾಡುತ್ತಿದೆ.

ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ವೈ.ಎಸ್.ವಿ.ದತ್ತ ಅವರ ತವರು ಯಗಟಿ, ಯಳ್ಳಂಬಳಸೆಗಳ ವ್ಯಾಪ್ತಿಯ ಕಥೆ ಬೇರೆ ಏನಿಲ್ಲ, ಆದರೆ ಈ ಭಾಗದ ಕೆರೆಗಳನ್ನು ಮತ್ತು ತುಂಬಿಸುವ ಯೋಜನೆಗೆ ಕಳೆದ ತಿಂಗಳಷ್ಟೇ ಯಗಟಿ ಹೋಬಳಿಯ ಬಿಳುವಾಲ ಬಳಿ ಭೂಮಿ ಪೂಜೆ ನಡೆದು ಯಗಟಿ ಮತ್ತು ಕಡೂರು ಕಸಬಾ ವ್ಯಾಪ್ತಿಯ 29 ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಚಾಲನೆ ದೊರೆತಿದೆ. ಸರ್ಕಾರದ ಅನುಮೋದನೆ ದೊರೆತಿರುವ ಕಾರಣ ಈ ಯೋಜನೆ ನಿಧಾನವಾದರೂ ಕಾರ್ಯಗತಗೊಳ್ಳುವ ಭರವಸೆ ಈ ಭಾಗದ ಜನರದ್ದು.

‘ಸದ್ಯದ ಪರಿಸ್ಥಿತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲ್ಲೂಕಿನ 32 ಕೆರೆಗಳಿಗೆ ನೀರು ತುಂಬಿಸುವ  ₹750 ಕೋಟಿ ಯೋಜನೆಗೆ ₹200 ಕೋಟಿ ಮಂಜೂರಾಗಿದ್ದು, ಎರಡು ಏಜೆನ್ಸಿಗಳನ್ನು ಗೊತ್ತುಪಡಿಸಿದ್ದು, ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ಈ ಯೋಜನೆಯಿಂದ ಯಗಟಿ ಹೋಬಳಿಯ ಶೇ 60ಭಾಗ ಕೆರೆಗಳು, ಕಡೂರು ಕಸಬಾ ಪ್ರದೇಶವೂ ಫಲಾನುಭವಿಯಾಗಲಿದೆ’ ಎನ್ನುತ್ತಾರೆ ಶಾಸಕ ವೈ.ಎಸ್‌.ವಿ.ದತ್ತ

‘ಮತಿಘಟ್ಟ, ಸಿಂಗಟಗೆರೆ ಮೊದಲಾದ ಕಡೆಗೆ ನೀರು ಕೊಡಲು ಮದಗದಕೆರೆ ಮತ್ತು ವಿಷ್ಣುಸಮುದ್ರ ಕೆರೆಗಳನ್ನು ತುಂಬಿಸಬೇಕಾದ ಅಗತ್ಯವಿದೆ. ಇದಕ್ಕಾಗಿ ಣಾನು ಖಾಸಗಿಯಾಗಿ ( ಎಂಜಿನಿಯರ್ ತಂಡದ ಸರ್ವೇ ಮೂಲಕ) ಸಿದ್ಧಪಡಿಸಿದ ಸುಮಾರು ₹574 ಕೋಟಿ ವೆಚ್ಚದ ಗೊಂದಿ ಅಣೆಕಟ್ಟೆಯಿಂದ ನೀರು ಹರಿಸುವ ಯೋಜನಾ ವರದಿಗೆ ಸರ್ಕಾರ ಮತ್ತು ನೀರಾವರಿ ನಿಗಮದ ಮಂಜೂರಾತಿ ದೊರೆತಿದೆ' ಎನ್ನುತ್ತಾರೆ ಶಾಸಕರು.

ತಾಲ್ಲೂಕನ್ನು ಬರ, ನಿರುದ್ಯೋಗ ಮೊದಲಾದ ಸಮಸ್ಯೆಗಳಿಂದ ಪಾರು ಮಾಡಲು ಶಾಶ್ವತ ನೀರಾವರಿಯೇ ಪರಿಹಾರ ಎಂಬುದು ಜನರ ಅಭಿಪ್ರಾಯ.

ಯುವಜನರ ಕೈಗೆ ಕೆಲಸ ದೊರೆಯಲು ಉದ್ಯೋಗ ಸೃಷ್ಟಿ ಅನಿವಾರ್ಯ ಎನ್ನುವ ಜನರ ಆಶೋತ್ತರಗಳನ್ನು ಈಡೇರಿಸುವ, ಭರವಸೆಗಳು ಕೇವಲ ಆಶಯ ಅಥವಾ ಆಶ್ವಾಸನೆಗಳಾಗಿ ಉಳಿಯದೇ ಜನರ ಬದುಕು ಹಸನಾಗಿಸಲು ಕಟಿಬದ್ಧವಾಗಿರಲಿ ಎನ್ನುವ, ಆಸೆಗಣ್ಣುಗಳ ಕನಸು ನನಸಾಗಲಿ ಎನ್ನುವುದು ಜನರ ಹಾರೈಕೆ.

ಕೆರೆಗಳ ರಕ್ಷಣೆ ಅನಿವಾರ್ಯ

ಸರಸ್ವತೀಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬಳ್ಳಿಗನೂರು, ಹುಲ್ಲೇಹಳ್ಳಿ, ಜೋಡಿತಿಮ್ಮಾಪುರ ಗ್ರಾಮ ಪಂಚಾಯಿತಿಗಳಲ್ಲಿ ಹಲವು ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ದುರಸ್ತಿ ಕಾರಣದಿಂದ ತಾಲ್ಲೂಕಿನ ಜೀವನಾಡಿ ಮದಗದಕೆರೆ ಸಂಪೂರ್ಣ ಖಾಲಿಯಾಗಿ ಸರಣಿ ಕೆರೆಗಳನ್ನು ತುಂಬಿಸುವ ಮಾತಿರಲಿ, ಈ ಬಾರಿ ತಾನೇ ತುಂಬುವುದು ಅನುಮಾನ ಎನಿಸಿದೆ. ಆತುರವಾಗಿ ನೀರು ಹರಿಸಿ ಅಡಿಕೆ ತೋಟಗಳಿಗೆ ನೀರು ಹಾಯಿಸಿದ್ದು, ಬೆಳೆಗಾರರ ದೃಷ್ಟಿಯಲ್ಲಿ ಸರಿ ಎನಿಸಿದರೂ ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ಪರಿಣಾಮ ಏನು? ಎನ್ನುವ ಪ್ರಶ್ನೆ ಆ ಹಂತದಲ್ಲಿ ಕಾಡದಿದ್ದುದು ಅಚ್ಚರಿಯೇ ಸರಿ. ಸಾವಿರ ಅಡಿ ಕೊಳವೆಬಾವಿ ತೋಡಿಸಿದರೂ ನೀರು ದೊರೆಯದ, ಅಂತರ್ಜಲ ಕುಸಿದ ಈ ಸಂದರ್ಭದಲ್ಲಿ ಜೀವನಾಡಿ ಕೆರೆಗಳನ್ನು ಸಂರಕ್ಷಿಸಬೇಕಾದುದೂ ತುರ್ತು ಅಗತ್ಯವಾಗಿದೆ.

**

ಜನರ ನೋವನ್ನು ಸಂವೇದನಾಶೀಲನಾಗಿ ಸ್ವೀಕರಿಸುವ ಮನೋಭಾವದಿಂದಲೇ ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಶ್ರಮಿಸುವುದು ಗುರಿ – ವೈ.ಎಸ್‌.ವಿ.ದತ್ತ, ಶಾಸಕ.

**

ಎನ್.ಸೋಮೇಖರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT