ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚದ ಹಾವಳಿ: ಬೇಸತ್ತ ಮತದಾರರಿಂದ ಪಾಠ

ಕಾಂಗ್ರೆಸ್‌ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಸಮಾರಂಭದಲ್ಲಿ ರಾಮಚಂದ್ರ
Last Updated 16 ಏಪ್ರಿಲ್ 2018, 7:30 IST
ಅಕ್ಷರ ಗಾತ್ರ

ಜಗಳೂರು: ‘ಚುನಾವಣೆ ಸಂದರ್ಭದಲ್ಲಿ ವಿರೋಧಿಗಳು ನನ್ನ ಜಾತಿ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದು, ಕ್ಷೇತ್ರದ ಮತದಾರರು ಶೀಘ್ರವೇ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ ಹೇಳಿದರು.

ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್‌ನ ಉಪ್ಪಾರ ಸಮಾಜದ ಮುಖಂಡರ ಬಿಜೆಪಿ ಸೇರ್ಪಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಂಡ ವಿರೋಧಿಗಳು ಹತಾಶೆಯಿಂದ ಸುಳ್ಳು ಮತ್ತು ದ್ವೇಷದಿಂದ ಜನರಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. 5 ವರ್ಷಗಳ ದುರಾಡಳಿತದಿಂದ ಮತದಾರರು ಬೇಸತ್ತಿದ್ದಾರೆ. ಉಪ್ಪಾರ ಸಮಾಜ, ಯಾದವ ಸಮಾಜ ಒಳಗೊಂಡಂತೆ ಎಲ್ಲಾ ಸಮುದಾಯಗಳ ಮುಖಂಡರು ಬಿಜೆಪಿಯತ್ತ ಮರಳುತ್ತಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯ ಅಲೆ ವ್ಯಾಪಕವಾಗಿದೆ ಎಂದು ಅಭಿಪ್ರಾಯಪಟ್ಟರು.

‘ತಾಲ್ಲೂಕಿನಲ್ಲಿ ಸೂರಿಲ್ಲದವರಿಗೆ ಸೂರು ಕನಸಾಗಿದೆ. ಒಂದು ಮನೆ ಪಡೆಯಲು ಪ್ರತಿ ಫಲಾನುಭವಿ ₹ 20 ಸಾವಿರ ಲಂಚ ನೀಡಬೇಕಾಗಿದೆ. ಲಂಚ ಮತ್ತು ಭ್ರಷ್ಟಾಚಾರದ ಹಾವಳಿಯಿಂದ ಜನತೆ ರೋಸಿ ಹೋಗಿದ್ದಾರೆ. ಈ ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ 14 ಸಾವಿರ ಮನೆಗಳನ್ನು ಬಡವರಿಗಾಗಿ ಮಂಜೂರು ಮಾಡಿಸಿದ್ದೆ. ಉಪ್ಪಾರ ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗೆ ಕ್ರಮ ಕೈಗೊಳ್ಳಲಾಗಿತ್ತು. ಬಿಜೆಪಿಯಿಂದ ನನಗೆ ಟಿಕೆಟ್‌ ಖಚಿತವಾಗಿದ್ದು, ಮತದಾರರ ಆಶೀರ್ವಾದ ಸಿಕ್ಕಲ್ಲಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಶ್ರಮಿಸಲಾಗುವುದು’ ಎಂದು ರಾಮಚಂದ್ರ ಭರವಸೆ ನೀಡಿದರು.

ಉಪ್ಪಾರ ಸಮಾಜದ ಮುಖಂಡ ಕಾಂತರಾಜ್‌ ಮಾತನಾಡಿ, ‘ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕರ ಅವಧಿಯಲ್ಲಿ ಕ್ಷೇತ್ರದಲ್ಲಿ ಉಪ್ಪಾರ ಸಮಾಜದ ಬೆಂಬಲ ಪಡೆದು ಆಯ್ಕೆಯಾಗಿದ್ದು, ನಂತರ ಸಮಾಜವನ್ನು ಕಡೆಗಣಿಸಿದ್ದಾರೆ. ಬಡವರು ಲಂಚ ಕೊಟ್ಟು ಸೌಲಭ್ಯ ಪಡೆಯಬೇಕಾದ ಸ್ಥಿತಿ ಇದ್ದು, ವಿವಿಧ ಯೋಜನೆಗಳ ಫಲಾನುಭವಿಗಳನ್ನು ಸುಲಿಗೆ ಮಾಡಲಾಗಿದೆ’ ಎಂದು ಆರೋಪಿಸಿದರು.

ಮುಖಂಡರಾದ ಎಚ್‌. ನಾಗರಾಜ್‌, ಎಸ್‌.ವಿ. ರಾಮಚಂದ್ರ ಅವರ ವಿರುದ್ಧ ಪ್ರತಿ ಚುನಾವಣೆ ಸಮಯದಲ್ಲಿ ಅನ್ಯಜಾತಿಯವರು ಎಂಬ ಆರೋಪ ಮಾಡಲಾಗುತ್ತದೆ. ಅಪ್ಪಟ ನಾಯಕ ಜನಾಂಗಕ್ಕೆ ಸೇರಿದ ರಾಮಚಂದ್ರ ಅವರ ಜನಪ್ರಿಯತೆಯನ್ನು ಸಹಿಸದೇ ವಿರೋಧಿಗಳು ಕುತಂತ್ರದಲ್ಲಿ ನಿರತರಾಗಿದ್ದಾರೆ’ ಎಂದರು.

ಬಿಜೆಪಿ ಅಧ್ಯಕ್ಷ ಡಿ.ವಿ. ನಾಗಪ್ಪ, ಮುಖಂಡರಾದ ಎಸ್‌.ಕೆ. ಮಂಜುನಾಥ್‌, ಅಮರೇಂದ್ರಪ್ಪ, ಸೋಮನಹಳ್ಳಿ ಶ್ರೀನಿವಾಸ್‌, ಚಟ್ನಳ್ಳಿ ರಾಜಪ್ಪ, ಜೆ.ವಿ. ನಾಗರಾಜ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT