ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

99ನೇ ವಯಸ್ಸಿನಲ್ಲೂ ತಪ್ಪದ ಕಾಯಕ ನಿಷ್ಠೆ

ಮೂರೂವರೆ ಎಕರೆ ಭೂಮಿಯಲ್ಲಿ ತರಕಾರಿ ಬೆಳೆದು, ಮಾರಾಟ ಮಾಡಿ ಬದುಕುತ್ತಿರುವ ಹಿರಿಯಮ್ಮ
Last Updated 16 ಏಪ್ರಿಲ್ 2018, 8:52 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಇನ್ನೊಂದು ವರ್ಷ ಕಳೆದರೆ, ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿಯ ಹಿರಿಯಮ್ಮ ಶಿವಪ್ಪ ತೆಂಬದ ಅವರು ಶತಾಯುಷಿ. ಆದರೆ, ‘ಕಾಯಕವೇ ಕೈಲಾಸ’ ಎಂಬ ತತ್ವದಲ್ಲಿ ನಿಷ್ಠೆ ಇರಿಸಿದ ಅವರು, ಸ್ವತಃ ತರಕಾರಿ ಬೆಳೆದು ಮಾರಾಟ ಮಾಡಿಯೇ ಜೀವನ ನಡೆಸುತ್ತಿದ್ದಾರೆ. ತಮ್ಮ ಕುಟುಂಬಕ್ಕೂ ನೆರವಾಗಿದ್ದಾರೆ. 99ರ ಹರೆಯದಲ್ಲೂ ‘ಕಾಯಕ ನಿಷ್ಠೆ’ ಮೆರೆಯುತ್ತಿರುವ ಸ್ವಾಭಿಮಾನಿ, ಸ್ವಾವಲಂಬಿ ಹಿರಿಯಮ್ಮ, ಬಸವಣ್ಣನವರ ವಚನದ ಮೇಲೆ ನಂಬಿಕೆ ಇರಿಸಿ, ಪಾಲಿಸುತ್ತಿರುವ ಮಹಿಳೆ.

ಮೂರು ಎಕರೆ ಭೂಮಿಯಲ್ಲಿ ಕೊಳವೆ ಬಾವಿಯ ನೀರನ್ನು ಬಳಸಿಕೊಂಡು, ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಆ ಬಳಿಕ ದಲ್ಲಾಳಿಗಳ ಮೊರೆ ಹೋಗದೇ, ತಾವೇ ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಹೀಗಾಗಿ ‘ತರಕಾರಿ ಹಿರಿಯಕ್ಕ’ ಎಂದೇ ಜನಪ್ರಿಯರಾಗಿದ್ದಾರೆ. ಹೊಲದಲ್ಲಿ ಪಾಲಕ್, ಮೆಂತೆ, ಸಬ್ಸಿಗೆ, ಪುದೀನ, ನುಗ್ಗೆ ಸೊಪ್ಪು, ಸಾರಿನ ಸೊಪ್ಪು, ಹುಳಿಚಿಕ್ಕು, ಈರುಳ್ಳಿ, ಹಾಗಲಕಾಯಿ, ಸೌತೆಕಾಯಿ, ಟೊಮೆಟೊ, ಹಸಿ ಮೆಣಸಿನಕಾಯಿ, ಬೆಂಡೆಕಾಯಿ, ಹೀರೆಕಾಯಿ, ಅವರೆ ಕಾಯಿ, ಮುಳಗಾಯಿ, ಚೌಳಿಕಾಯಿ, ಕುಂಬಳಕಾಯಿ ಇತ್ಯಾದಿ ಬೆಳೆಯುತ್ತಾರೆ.

ಚಳಗೇರಿ ಗ್ರಾಮದ ಸೊಪ್ಪಿನ ಪೇಟೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ 6.30 ರಿಂದ 8.30ರವರೆಗೆ ತರಕಾರಿ ಮಾರಾಟ ಮಾಡುತ್ತಾರೆ. ಇವರ 12 ಮಕ್ಕಳ ಪೈಕಿ
4 ಪುತ್ರರು ಮತ್ತು 5 ಪುತ್ರಿಯರುಇದ್ದಾರೆ. ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳು ಸೇರಿ 50 ಜನರ ತುಂಬು ಕುಟುಂಬ ಹೊಂದಿದ್ದಾರೆ. ಮನೆಯಲ್ಲಿ ಅಜ್ಜಿಗೆ ಮಕ್ಕಳು, ಮೊಮ್ಮಕ್ಕಳು ಮತ್ತು ಸೊಸೆಯಂದಿರು ಸಹಕಾರ ನೀಡುತ್ತಾರೆ.

‘ಅವ್ವಾ ನಿನಗೆ ವಯಸ್ಸಾಗಿದೆ ತರಕಾರಿ ಮಾರುವುದನ್ನು ಬಿಟ್ಟು ಬಿಡು ಎಂದರೂ ಬಿಡುತ್ತಿಲ್ಲ. ಸಾಯುವವರೆಗೂ ದುಡಿದು ತಿನ್ನುತ್ತೇನೆ ಎನ್ನುವ ಅವ್ವ, ಬೆಳಿಗ್ಗೆ ನಾಲ್ಕೂವರೆ ಗಂಟೆಗೆ ತರಕಾರಿ ವ್ಯಾಪಾರಕ್ಕೆ ಸಿದ್ಧಳಾಗುತ್ತಾಳೆ. ಪ್ರತಿನಿತ್ಯ ಹೊಲಕ್ಕೆ ಹೋಗಿ ಬರುತ್ತಾಳೆ. ಈಗಲೂ ಅವಳಿಗೆ ಕಣ್ಣು ನಿಚ್ಚಳವಾಗಿ ಕಾಣುತ್ತವೆ. ಕಿವಿ ಕೇಳಿಸುತ್ತವೆ. ಲೆಕ್ಕದಲ್ಲೂ ಪಕ್ಕಾ’ ಎನ್ನುತ್ತಾರೆ ಹಿರಿಯಮ್ಮ ಅವರ ಮಗ ಜಟ್ಟೆಪ್ಪ ತೆಂಬದ.

ಅಜ್ಜಿಯ ಕಾಯಕ ನಿಷ್ಠೆಗೆ ಮೆಚ್ಚಿ ಧರ್ಮಸ್ಥಳ ಸಂಘ, ಚೆನ್ನೇಶ್ವರಮಠದ ಜ್ಞಾನವಾಹಿನಿ, ದಾನೇಶ್ವರಿ ಅಕ್ಕನ ಬಳಗ ಮತ್ತು ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿವೆ.

‘ಸಂತೆಯಲ್ಲೇ ಜೀವನ ಕಳೆದಿದ್ದೇನೆ’

‘ಮದುವೆಯಾದಾಗ ಭಾರಿ ಕಷ್ಟ ಇತ್ತು. ಎಲ್ಲರೂ ದುಡಿದು ತಿನ್ನಬೇಕಾಗಿತ್ತು. ಹೀಗಾಗಿ, ಯಜಮಾನ ಮತ್ತು ಮಕ್ಕಳನ್ನು ಕರೆದುಕೊಂಡು ಗೆಣಸು ಮಾರಾಟಕ್ಕೆ ಹೋಗುತ್ತಿದ್ದೆವು. ಸಂತೆಗೆ ಹೋದ ಊರಿನಲ್ಲಿಯೇ ಶಾಲೆ, ಗುಡಿ, ಚಾವಡಿಗಳಲ್ಲಿ ರಾತ್ರಿ ಉಳಿದುಕೊಳ್ಳುತ್ತಿದ್ದೆವು. ಸಣ್ಣ ಮಕ್ಕಳನ್ನು ದೊಡ್ಡ ಮಕ್ಕಳು ನೋಡಿಕೊಳ್ಳುತ್ತಿದ್ದರು' ಎಂದು ಹಿರಿಯಮ್ಮ ಶಿವಪ್ಪ ತೆಂಬದ ಹಳೇ ನೆನಪುಗಳನ್ನು ‘ಪ್ರಜಾವಾಣಿ’ ಜೊತೆ ಮೆಲುಕು ಹಾಕಿದರು.

ಎರಡು –ಮೂರು ದಿನಗಳಲ್ಲಿ ಗೆಣಸು ಮಾರಾಟಗೊಂಡ ಬಳಿಕ ಚಳಗೇರಿಗೆ ಬರುತ್ತಿದ್ದೆವು. ಬರುವಾಗ ಊಟಕ್ಕೆ ಭತ್ತ, ದನಕರುಗಳಿಗೆ ಹುಲ್ಲು ತರುತ್ತಿದ್ದೆವು. ಆಗ, ಹರಿಹರ, ದಾವಣಗೆರೆ, ರಾಣೆಬೆನ್ನೂರು ತಾಲ್ಲೂಕುಗಳ ಸುತ್ತಲು ಸಂತೆ ಮಾಡಿದ್ದೇನೆ. ಹೀಗೆ ಸಂತೆಯಲ್ಲೇ ಅನೇಕ ವರ್ಷ ಜೀವನ ಕಳೆದಿದ್ದೇನೆ’ ಎಂದು ಅವರು ಹೇಳಿದರು.

**

ಹೊಲಕ್ಕೆ ಸರ್ಕಾರಿ ಗೊಬ್ಬರ ಹೆಚ್ಚಿಗೆ ಬಳಸಬ್ಯಾಡ್ರಿ. ದನ ಕರುಗಳನ್ನು ಕಟ್ರಿ, ಹೈನುಗಾರಿಕೆ ಮಾಡಿ, ಹೊಲಕ್ಕೆ ಸಗಣಿ ಗೊಬ್ಬರ ಹಾಕ್ರಿ ಬಾಳ ಚಲೋ ಬೆಳೆ ಬರುತ್ತವೆ  – ಹಿರಿಯಮ್ಮ ಶಿವಪ್ಪ ತೆಂಬದ, ಹಿರಿಯ ಮಹಿಳೆ.
**

ಮುಕ್ತೇಶ್ವರ ಪಿ. ಕೂರಗುಂದಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT