ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾವಾರು ಮತ ಯಂತ್ರಗಳ ಹಂಚಿಕೆ

ಜಿಲ್ಲೆಯಲ್ಲಿ ಒಟ್ಟು 1,484 ಮತಗಟ್ಟೆಗಳು, ಪ್ರತಿ ಮತಗಟ್ಟೆಗೆ ಶೇ 25 ರಷ್ಟು ಹೆಚ್ಚುವರಿ ಮತಯಂತ್ರಗಳ ಪೂರೈಕೆ
Last Updated 16 ಏಪ್ರಿಲ್ 2018, 9:26 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಭದ್ರತಾ ಕೊಠಡಿಯಲ್ಲಿದ್ದ ಮತಯಂತ್ರಗಳನ್ನು ಭಾನುವಾರ ವಿಧಾನಸಭಾವಾರು ಹಂಚಿಕೆ ಮಾಡಲಾಯಿತು.

ಚುನಾವಣಾ ಕರ್ತವ್ಯ ಹೊಂದಿರುವ ಸಿಬ್ಬಂದಿಗೆ ತರಬೇತಿ ನೀಡುವ ಸಲುವಾಗಿ ಮುಂಚಿತವಾಗಿ ಅವುಗಳನ್ನು ವಿಧಾನಸಭಾ ಕ್ಷೇತ್ರಗಳಿಗೆ ರವಾನಿ
ಸಲಾಯಿತು. ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ಮತದಾನ ಖಾತ್ರಿ ಯಂತ್ರಗಳನ್ನು (ವಿವಿ ಪ್ಯಾಟ್) ಆಯಾ ಕ್ಷೇತ್ರದ ಚುನಾವಣಾಧಿಕಾರಿಗೆ ಹಂಚಿಕೆ ಮಾಡಲಾಯಿತು.

1,790 ಇವಿಎಂ, 1,872 ವಿವಿ ಪ್ಯಾಟ್ ಹಾಗೂ 1,760 ಕಂಟ್ರೋಲ್ ಯೂನಿಟ್‌ಗಳನ್ನು ಆರು ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲು ಸುಮಾರು 200ಕ್ಕೂ ಅಧಿಕ ಸಿಬ್ಬಂದಿ ಸಂಜೆಯವರೆಗೆ ಶ್ರಮ ವಹಿಸಿದರು. ಸುಮಾರು 10ಕ್ಕೂ ಅಧಿಕ ಲಾರಿಗಳ ಮೂಲಕ ಅವುಗಳನ್ನು ಒಯ್ದು, ಆಯಾ ಕ್ಷೇತ್ರಗಳ ಭದ್ರತಾ ಕೊಠಡಿಯಲ್ಲಿ ರಕ್ಷಣೆ ಮಾಡಲಾಯಿತು.

‘ಜಿಲ್ಲೆಯಲ್ಲಿ ಒಟ್ಟು 1,484 ಮತಗಟ್ಟೆಗಳಿದ್ದು, ಪ್ರತಿ ಕ್ಷೇತ್ರಗಳಿಗೆ ಶೇ 25ರಷ್ಟು ಮತಯಂತ್ರಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಏ.22ರಂದು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ತರಬೇತಿ ಕಾರ್ಯ ನಡೆಯಲಿದೆ. ಇದಕ್ಕಾಗಿ ಶೇ 5ರಷ್ಟು ಯಂತ್ರಗಳನ್ನು ಮೀಸಲಿಟ್ಟು
ಕೊಳ್ಳಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ತಿಳಿಸಿದರು.

ಕಾರ್ಯಾಲಯ ಉದ್ಘಾಟನೆ

ಹಳಿಯಾಳ: ಕ್ಷೇತ್ರದಲ್ಲಿ ಕಳೆದ 44 ವರ್ಷಗಳಿಂದ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಚುನಾವಣೆಯಲ್ಲಿ ಜನ ಬೆಂಬಲ ದೊರೆಯುವ ವಿಶ್ವಾಸವಿದೆ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಸ್ಪರ್ಧೆಗಿಳಿದಿರುವ ಟಿ.ಆರ್.ಚಂದ್ರಶೇಖರ ಹೇಳಿದರು.

ಭಾನುವಾರ ಳಿಯಾಳದ ರಾಮದೇವ ಗಲ್ಲಿಯಲ್ಲಿ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ,‘ಕಳೆದ ಹತ್ತು ವರ್ಷಗಳಿಂದ ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನ್ನನ್ನು ಖುದ್ದು ಭೇಟಿಯಾಗಿ ಚುನಾವಣೆಗೆ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದರು. ಆದರೆ, ಈಗ ಬೃರೆಯವರಿಗೆ ಟಿಕೆಟ್‌ ನೀಡಿದ್ದಾರೆ. ಇದರಿಂದ ಬೇಸತತ್ಉ ಹಳಿಯಾಳ ಕ್ಷೇತ್ರದಿಂದಲೇ ಜನರ ಪ್ರೀತಿ ವಿಶ್ವಾಸದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದೇನೆ. ದಾಂಡೇಲಿ, ಜೋಯಿಡಾ ಗ್ರಾಮೀಣ ಭಾಗದ ಎಲ್ಲ ಗ್ರಾಮಗಳಲ್ಲಿ ಸಂಚರಿಸಿದಾಗ ಮತದಾರರು ಅಪಾರ ಬೆಂಬಲ ಸೂಚಿಸಿದ್ದಾರೆ‘ ಎಂದು ಹೇಳೀದರು.

ಮುಖಂಡರಾದ ಕೈತಾನ ಬಾರಬೋಜಾ,ದಾವಲಸಾಬ ಅಂಗಡಿ,ಶಾಂತಾರಾಮ ಕರಂಜೇಕರ,ಶಾಂತರಾಮ ಜಾವಳೆಕರ,ಮಹೇಶ ಜಾಧವ,ಶೋಭಾ ಕೊಳದಾರ,ಬಡೇಸಾಬ ಕಕ್ಕೆರಿ,ಮಹೇಶ ಪಂಡಿತ,ಶಾಲಂಬಿ ಹಳಬ,ಸುಧಾ ಗೌಡಾ,ವಿಶಾಂತಿ ಸಿದ್ದಿ,ರೇಣುಕಾ ಕಅಂಬಳೆ,ಎಸ್.ಜಿ.ಬಿರಾದಾರ,ಮಹೇಶ ಸಾವಂತ,ಪ್ರಭಾಕರ ಶೆಟ್ಟಿ,ರಾಮಜೀ ಕಾಕಡಾ,ಸಂತೋಷ ದೇಸೂರಕರ,ಖೇಕರ ಗುತ್ತೇಣ್ಣವರ,ಸುಭಾಸ ಮುಲವಡಕರ, ಮೇಘರಾಜ ಪಾಟೀಲ, ವಾಲಂತಿ ಸಿದ್ದಿ ಉಪಸ್ಥಿತರಿದ್ದರು.

ದಿನೇಶ್‌ ಗುಂಡೂರಾವ್ ವಿರುದ್ಧ ಕ್ರಮಕ್ಕೆ ಆಗ್ರಹ

ಯಲ್ಲಾಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಕೀಳು ಭಾಷೆ ಪ್ರಯೋಗಿಸಿರುವ ದಿನೇಶ್‌ ಗುಂಡೂರಾವ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ ಆಗ್ರಹಿಸಿದ್ದಾರೆ.

ಭಾನುವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು , ಗೋರಖನಾಥ ಸಂತರು ಭಾರತದ ಮನೆಮಾತಾಗಿದ್ದಾರೆ. ಅಂತಹ ಧೀಮಂತ ಸಂತನ ಬಗ್ಗೆ ಗುಂಡೂರಾವ್‌ ಅವರು ಚಪ್ಪಲಿಯಿಂದ ಹೊಡೆಯಿರಿ ಎಂಬ ಕರೆ ಕೊಟ್ಟಿದ್ದಾರೆ. ಅವರ ಹೇಳಿಕೆ ಕಾಂಗ್ರೆಸ್ ಮನಸ್ಥಿತಿ ಮತ್ತು ಗೂಂಡಾ ಸಂಸ್ಕೃತಿ ತೋರುತ್ತದೆ. ಸಂತರಿಗೆ ಅವಮಾನ ಮಾಡಿದ ಕಾಂಗ್ರೆಸ್‌ಗೆ ಮತದಾರರು ಬುದ್ಧಿ ಕಲಿಸುವ ಕಾಲ ಬರಲಿದೆ ಎಂದು ಹೇಳಿದ್ದಾರೆ.

ಸಂಸ್ಥೆ ದುರುಪಯೋಗ ಮಾಡಿಲ್ಲ

ಸಿದ್ದಾಪುರ : ‘ನಾವು ಶಿಕ್ಷಣ ಸಂಸ್ಥೆಯನ್ನಾಗಲಿ ಅಥವಾ ಶಂಕರಮಠವನ್ನಾಗಲಿ ರಾಜಕೀಯವಾಗಿ ದುರುಪಯೋಗ ಮಾಡಿಕೊಂಡಿಲ್ಲ’ ಎಂದು ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ವಿನಾಯಕರಾವ್ ಜಿ.ಹೆಗಡೆ ದೊಡ್ಮನೆ ಹೇಳಿದ್ದಾರೆ.

ಬಿಜೆಪಿ ಮುಖಂಡ ರವಿ ಹೆಗಡೆ ಹೂವಿನಮನೆ ಸುದ್ದಿಗೋಷ್ಠಿಯಲ್ಲಿ ಮಾಡಿದ್ದ ಆರೋಪಕ್ಕೆ ವಿನಾಯಕರಾವ್ ಹೆಗಡೆ ಪತ್ರಿಕಾ ಪ್ರಕಟಣೆ ಮೂಲಕ ತಿರುಗೇಟು ನೀಡಿದ್ದಾರೆ. ‘ಶಿಕ್ಷಣ ಪ್ರಸಾರಕ ಸಮಿತಿಯ ವಿದ್ಯಾಸಂಸ್ಥೆಗಳಲ್ಲಿ ನಾವು ಯಾವುದೇ ರಾಜಕೀಯ ಚಟುವಟಿಕೆ ನಡೆಸಿಲ್ಲ. ಉಪವಿಭಾಗಾಧಿಕಾರಿಗೆ ಬಿಜೆಪಿಯವರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಅವರು ಪರಿಶೀಲನೆ ನಡೆಸಿ, ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ರಾಜಕೀಯ ಚಟುವಟಿಕೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು ಎಂದು ತಿಳಿಸಿದ್ದಾರೆ.

‘ ಶಾಲೆಗಳಿಗೆ ರಜೆ ಇರುವ ಸಂದರ್ಭದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಎಲ್ಲಾ ಪಕ್ಷದವರು ಕಾರ್ಯಕ್ರಮ ನಡೆಸಿದ್ದಾರೆ. ನಾವು ಉಚಿತವಾಗಿ ಎಲ್ಲರಿಗೂ ಅವಕಾಶ ಕೊಟ್ಟಿದ್ದೇವೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲು ಜೆಡಿಎಸ್ ಪಕ್ಷದ ಎಚ್.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ರಮದ ನಂತರ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ನೀತಿ ಸಂಹಿತೆಗೆ ವಿರುದ್ಧವಾಗಿ ಯಾವುದೇ ಚಟುವಟಿಕೆ ನಡೆಸಿಲ್ಲ. ನನ್ನ ಸೋದರ ವಿಜಯ ಹೆಗಡೆ ಧರ್ಮಾಧಿಕಾರಿಯಾಗಿರುವ ಶೃಂಗೇರಿ ಶಂಕರಮಠದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಕಾರ್ಯಕ್ರಮ ನಡೆಸುತ್ತಾ ಬಂದಿವೆ’ ಎಂದು ವಿವರಣೆ ನೀಡಿದ್ದಾರೆ.

ಭಟ್ಕಳ: ‘ತಾಲ್ಲೂಕು ಹಾಗೂ ಜಿಲ್ಲಾಡಳಿತ ಕಚೇರಿಗಳು ಕಾಂಗ್ರೆಸ್‌ ಪಕ್ಷದ ಕಾರ್ಯಾಲಯಗಳಾಗಿ ಮಾರ್ಪಟ್ಟಿವೆ. ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ವಕ್ತಾರರಂತೆ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ. ಡಿ ನಾಯ್ಕ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಟ್ಕಳದ ತಹಶೀಲ್ದಾರ್‌ ಕಾರ್ಯಾಲಯದಲ್ಲಿ 15-20 ವರ್ಷದಿಂದ ಠಿಕಾಣಿ ಹೂಡಿರುವ ಅಧಿಕಾರಿಗಳಿದ್ದಾರೆ. ಅಂಥವರು ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರಿಗೆ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕುವಂತೆ ದುಂಬಾಲು ಬೀಳುತ್ತಿದ್ದಾರೆ. ಇದು ಚುನಾವಣೆ ಮೇಲೆ ನೇರ ಪರಿಣಾಮ ಬೀರುತ್ತಿದ್ದೆ. ಕೂಡಲೇ ಚುನಾವಣಾ ಆಯೋಗ ಅಂಥ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದರು.

ಪಕ್ಷದ ಯುವ ಘಟಕದ ಅಧ್ಯಕ್ಷ ಪಾಂಡುನಾಯ್ಕ ಮಾತನಾಡಿ, ‘ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಅವ್ಯವಹಾರ ನಡೆಯುತ್ತಿದೆ. ಒಂದೇ ಕುಟುಂಬಕ್ಕೆ ಪ್ರತ್ಯೇಕ ಎರಡು ಆದಾಯ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ಅಪ್ರಾಪ್ತ ಬಾಲಕ ಹಾಗೂ ತಾಯಿಗೆ ₹2ಲಕ್ಷ ಆದಾಯ ಪ್ರಮಾಣಪತ್ರ ನೀಡಿದ ಎರಡನೇ ದಿನ, ಅದೇ ಕುಟುಂಬದ ತಂದೆಯ ಹೆಸರಿಗೆ ಕೇವಲ ₹20ಸಾವಿರ ಆದಾಯ ಪ್ರಮಾಣ ಪತ್ರ ನೀಡಲಾಗಿದೆ. ಸರ್ಕಾರಿ ರಜೆ ದಿನ ಈ ಕಾರ್ಯ ನಡೆದಿದೆ. ಇದರಿಂದಾಗಿ ಇಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ತೋರುತ್ತದೆ’ ಎಂದು ದಾಖಲೆ ಸಹಿತ ಆರೋಪಿಸಿದರು.

ಮುಖಂಡ ಕೃಷ್ಣಾನಂದಾ ಪೈ ಮಾತನಾಡಿ, ‘ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ 26 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಿದ್ದಾರೆ. ಅವರೂ ಕೂಡ ಇಲ್ಲಿ ಹತ್ತಾರು ವರ್ಷಗಳಿಂದ ಬೀಡುಬಿಟ್ಟಿದ್ದು, ಒಂದು ಪಕ್ಷದ ಪರವಾಗಿ ಒಲವು ಹೊಂದಿದ್ದಾರೆ. ಈ ಕುರಿತು ರಾಜ್ಯ ಚುನಾವಣಾಧಿಕಾರಿಗೆ ದೂರನ್ನು ನೀಡಿದ ಹಿನ್ನೆಲೆಯಲ್ಲಿ ಇಬ್ಬರನ್ನು ಮಾತ್ರ ವರ್ಗಾಯಿಸಿದ್ದು, ಇನ್ನು 24 ಅಧಿಕಾರಿಗಳನ್ನು ತಾತ್ಕಾಲಿಕವಾಗಿಯಾದರೂ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

ಪಕ್ಷದ ಘೋಷಿತ ಅಭ್ಯರ್ಥಿ ಇನಾಯತುಲ್ಲಾ ಶಾಬಂದ್ರಿಗೆ ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ. ಹಳ್ಳಿ ಹಳ್ಳಿಗಳಲ್ಲಿ ಪಕ್ಷದ ಪರವಾಗಿ ಮತ್ತು ಅಭ್ಯರ್ಥಿ ಪರವಾಗಿ ಜನರು ಒಲವು ತೋರಿಸುತ್ತಿದ್ದು, ಈ ಬಾರಿ ಗೆಲುವು ನಮ್ಮದೇ’ ಎಂದರು. ಪ್ರಮುಖರಾದ ದೇವಯ್ಯ ನಾಯ್ಕ, ಗಣಪತಿ ಭಟ್, ಅಬ್ದುಸ್ಸಮದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT