ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ ಕಾಂಗ್ರೆಸ್‌ನಲ್ಲಿ ಬಂಡಾಯದ ವಾಸನೆ

ದ.ಕ.ಉಡುಪಿ: ಹಾಲಿ ಶಾಸಕರು, ಗೋಪಾಲ ಭಂಡಾರಿ, ಮಲ್ಲಿಗೆ ಟಿಕೆಟ್
Last Updated 16 ಏಪ್ರಿಲ್ 2018, 10:20 IST
ಅಕ್ಷರ ಗಾತ್ರ

ಉಡುಪಿ/ಮಂಗಳೂರು: ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ. ಕುತೂಹಲ ಕೆರಳಿಸಿದ್ದ ಕಾರ್ಕಳ ಕ್ಷೇತ್ರದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಭಂಡಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡುಬಿದಿರೆ ಕ್ಷೇತ್ರದಲ್ಲೂ ಯಾವುದೇ ಪವಾಡ ನಡೆಯಲಿಲ್ಲ.

ಕಾರ್ಕಳದಲ್ಲಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಅವರಿಗೆ ನಿರಾಸೆಯಾಗಿದೆ. ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಉದಯ ಅವರು ' ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿ ಸೋಲುವುದನ್ನು ನೋಡಲು ಪಕ್ಷ ಬಯಸುವುದಿಲ್ಲ. ಇದೇ 24ರ ವರೆಗೆ ಕಾಯುತ್ತೇನೆ' ಎಂದರು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೀರ ಎಂಬ ಪ್ರಶ್ನೆಗ ಅವರು ಸ್ಪಷ್ಟ ಉತ್ತರ ನೀಡಲಿಲ್ಲ. ಗೋಪಾಲ ಭಂಡಾರಿ ಅವರು ಕಳೆದ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.

ಉಡುಪಿ, ಕಾಪು ಮತ್ತು ಬೈಂದೂರು ಕ್ಷೇತ್ರದಿಂದ ಹಾಲಿ ಶಾಸಕರಾದ ಕ್ರಮವಾಗಿ ಪ್ರಮೋದ್‌ ಮಧ್ವರಾಜ್, ವಿನಯ ಕುಮಾರ್ ಸೊರಕೆ ಹಾಗೂ ಕೆ. ಗೋಪಾಲ ಪೂಜಾರಿ ಅವರು ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್ ಕಾರ್ಮಿಕ ಘಟಕ ಇಂಟಕ್ ನ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಅವರಿಕೆ ಕುಂದಾಪುರ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಕುಂದಾಪುರದಲ್ಲಿ ಕಳೆದ ಬಾರಿ ಮಲ್ಯಾಡಿ ಶಿವರಾಮ ಶೆಟ್ಟಿ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ 2013ರ ಚುನಾವಣೆಯ ಅಭ್ಯರ್ಥಿಗಳನ್ನೇ ಉಳಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ ಪಕ್ಷ ಟಿಕೆಟ್‌ ಹಂಚಿಕೆ ಕುರಿತು ಎದ್ದಿದ್ದ ವದಂತಿಗಳಿಗೆ ತೆರೆ ಎಳೆದಿದೆ. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಅಭಯಚಂದ್ರ ಅವರನ್ನೇ ಕಣಕ್ಕಿಳಿಸುವ ನಿರ್ಧಾರದಿಂದ ಮುಖ್ಯಮಂತ್ರಿ ಹಿಂದೆ ಸರಿದಿಲ್ಲ.

ಕಳೆದ ಚುನಾವಣೆಯಲ್ಲಿ ಜಿಲ್ಲೆಯ 8ರಲ್ಲಿ ಏಳನ್ನು ಕಾಂಗ್ರೆಸ್‌ ಬಾಚಿ ಕೊಂಡಿತ್ತು. ಸುಳ್ಯದಲ್ಲಿ ಕೇವಲ 1,373 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಬಿ.ರಘು ಸೋಲು ಕಂಡಿ ದ್ದರು. ಎಲ್ಲ ಏಳು ಮಂದಿ ಹಾಲಿ ಶಾಸ ಕರಿಗೆ ಟಿಕೆಟ್‌ ನೀಡಿರುವ ಕಾಂಗ್ರೆಸ್‌, ಸುಳ್ಯದಲ್ಲಿ ಮತ್ತೆ ರಘು ಅವರನ್ನೇ ಕಣಕ್ಕಿಳಿಸಿದೆ.

ಹಾಲಿ ಶಾಸಕರ ಪೈಕಿ ಬೆಳ್ತಂಗಡಿಯ ಕೆ.ವಸಂತ ಬಂಗೇರ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸದೇ ಇರುವ ಇಂಗಿತವನ್ನು ಆಪ್ತ ವಲಯದಲ್ಲಿ ವ್ಯಕ್ತಪಡಿಸಿದ್ದರು. ಆದರೆ, ರಾಜಕೀಯದಲ್ಲಿ ಅವರ ಸಮಕಾಲೀನರೇ ಆಗಿರುವ ಸಿದ್ದರಾಮಯ್ಯ ಖುದ್ದಾಗಿ ಬಂಗೇರ ಅವರನ್ನು ಮನವೊಲಿಸಿದ್ದರು. ಬೆಳ್ತಂಗಡಿಯಲ್ಲಿ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ, ‘ವಸಂತ ಬಂಗೇರ ಅವರೇ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ’ ಎಂದು ಘೋಷಿಸಿ ಊಹಾಪೋಹಗಳಿಗೆ ತೆರೆ ಎಳೆದಿದ್ದರು.

ಮೂಡುಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್‌ ಕೂಡ ಈ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದರು. ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್‌ ರೈ ಅವರಿಗೆ ಕ್ಷೇತ್ರ ಬಿಟ್ಟುಕೊಡುವ ಮುನ್ಸೂಚನೆ ನೀಡಿದ್ದರು. ಅಷ್ಟರಲ್ಲೇ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿಸೋಜ ಮೂಡುಬಿದಿರೆ ಕ್ಷೇತ್ರದ ಟಿಕೆಟ್‌ ಪಡೆಯಲು ಪೈಪೋಟಿ ಆರಂಭಿಸಿದ್ದರು. ಕವಿತಾ ಸನಿಲ್‌ ಕೂಡ ಮಹಿಳೆ ಮತ್ತು ಬಿಲ್ಲವ ಕೋಟಾದ ದಾಳ ಉರುಳಿಸಿದ್ದರು.

ಅಭಯಚಂದ್ರ ಜೈನ್‌ ಅವರೇ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಘೋಷಿಸಿದ ಬಳಿಕವೂ ಮೂಡುಬಿದಿರೆ ಕ್ಷೇತ್ರದಲ್ಲಿ ಪೈಪೋಟಿ ನಿಂತಿರಲಿಲ್ಲ. ಅದು ಆಕಾಂಕ್ಷಿಗಳ ನಡುವೆ ಘರ್ಷಣೆಗೂ ಕಾರಣವಾಗಿತ್ತು. ಕೆಲವು ದಿನಗಳಿಂದ ಅಭಯಚಂದ್ರ ಅವರು ಚುನಾವಣಾ ‍ಪ್ರಚಾರ ಆರಂಭಿಸಿದ ಬಳಿಕವೂ ವದಂತಿಗಳು ನಿಂತಿರಲಿಲ್ಲ. ಈಗ ಅಧಿಕೃತವಾಗಿ ಅಭಯಚಂದ್ರ ಅವರ ಹೆಸರನ್ನೇ ಅಂತಿಮಗೊಳಿಸುವುದ ರೊಂದಿಗೆ ಮೂಡುಬಿದಿರೆಯಲ್ಲಿ ಕಾಂಗ್ರೆಸ್ಸಿಗರ ಪೈಪೋಟಿಗೆ ತೆರೆ ಬಿದ್ದಿದೆ.

ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯಲ್ಲಿ ಈ ಬಾರಿಯೂ ಜಾತಿ ಸಮೀಕರಣ ದಲ್ಲಿ ಯಾವುದೇ ಬದಲಾವಣೆ ಯಾಗಿಲ್ಲ. ಬಂಟ ಸಮುದಾಯದ ಇಬ್ಬರು, ಬಿಲ್ಲವ ಸಮುದಾಯದ ಒಬ್ಬರು, ಇಬ್ಬರು ಮುಸ್ಲಿಮರು, ಒಬ್ಬ ಕ್ರೈಸ್ತ, ಜೈನ ಸಮುದಾಯದ ಒಬ್ಬ ಮತ್ತು ಪರಿಶಿಷ್ಟ ಜಾತಿಯ ಒಬ್ಬರನ್ನು ಕಣಕ್ಕಿಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT