ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಕ್ಷೇತ್ರದಲ್ಲಿ ನಿರೀಕ್ಷೆ ತಿರುವು ಮುರುವು

ಐದು ಕ್ಷೇತ್ರಗಳಲ್ಲಿ ಅನುಭವಿಗಳು, ಒಂದು ಕಡೆ ಹೊಸ ಸ್ಪರ್ಧಿ
Last Updated 16 ಏಪ್ರಿಲ್ 2018, 10:44 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಭಾರಿ ಕುತೂಹಲದಿಂದ ಕಾಯುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಭಾನುವಾರ ಹೊರಬಿದ್ದಿದ್ದು, ಲಿಂಗಸುಗೂರು ಮತ್ತು ರಾಯಚೂರು ಗ್ರಾಮೀಣ ಕ್ಷೇತ್ರಗಳಲ್ಲಿ ಜನರ ನಿರೀಕ್ಷೆ ತಿರುವು ಮುರುವಾಗಿದೆ.

ಪ್ರಮುಖವಾಗಿ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ರಾಜಾ ರಾಯಪ್ಪ ನಾಯಕ ಅಥವಾ ರವಿ ಪಾಟೀಲ ಅವರಿಗೆ ಟಿಕೆಟ್ ಕೊಡಬಹುದು ಎನ್ನುವ ಮಾತುಗಳು ಜೋರಾಗಿದ್ದವು. ಪಕ್ಷದ ಮುಖಂಡರ ಮನವೊಲಿಸಿ ರಾಜಾ ರಾಯಪ್ಪ ನಾಯಕ ಅವರು ಈ ಬಾರಿಯೂ ಸ್ಪರ್ಧಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಚಿರಪರಿಚಿತವಾಗಿರುವ ರವಿ ಪಾಟೀಲ ಅವರಿಗೆ ಸತೀಶ ಜಾರಕಿಹೊಳಿ ಅವರ ಬೆಂಬಲವಿದ್ದು, ಈ ಸಲ ಅವರಿಗೇ ಕಾಂಗ್ರೆಸ್ ಟಿಕೆಟ್ ಕೊಡುತ್ತಾರೆ ಎನ್ನುವ ಮಾತುಗಳಿದ್ದವು. ಟಿಕೆಟ್ ಪಡೆದುಕೊಳ್ಳುವ ಬಗ್ಗೆ ಎಲ್ಲಿಯೂ ಸುಳಿವು ಬಿಟ್ಟುಕೊಡದ ಬಸನಗೌಡ ದದ್ದಲ ಅವರು ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ವಿರುದ್ಧ ಚುನಾವಣಾ ಸೆಣಸಾಟಕ್ಕೆ ಸಜ್ಜಾಗಿರುವುದು ಗಮನಾರ್ಹ.

ಲಿಂಗಸುಗೂರು ಕ್ಷೇತ್ರದಲ್ಲಿ ಡಿ.ಎಸ್. ಹುಲಗೇರಿ ಅವರು ಮತ್ತೆ ಕಾಂಗ್ರೆಸ್ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಂದವಾಡಗಿ ಏತನೀರಾವರಿ ಯೋಜನೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಲಗೇರಿ ಅವರಿಗೇ ಟಿಕಟ್ ನೀಡುವ ಭರವಸೆ ನೀಡಿದ್ದರು. ಅದರಂತೆ ಹುಲಗೇರಿ ಅವರಿಗೆ ಟಿಕಟ್ ದೊರಕಿಸಿದ್ದಾರೆ. ಕ್ಷೇತ್ರದಲ್ಲಿ ನಿರ್ಣಾಯಕ ಮತಗಳನ್ನು ಹೊಂದಿರುವ ಅಸ್ಪೃಶ್ಯ ಜಾತಿಗಳ ಎಡ ಮತ್ತು ಬಲ ಸಮುದಾಯಗಳ ಮುಖಂಡರು ಇದೇ ಮೊದಲ ಬಾರಿ ಟಿಕೆಟ್ ನೀಡುವಂತೆ ಬೇಡಿಕೆ ಸಲ್ಲಿಸಿದ್ದರು. ಈ ಬಗ್ಗೆ ಸಾಕಷ್ಟು ಬೆಂಬಲವನ್ನು ಸಂಘ ಸಂಸ್ಥೆಗಳು ನೀಡಿದ್ದವು. ಇದಕ್ಕಾಗಿ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ಮಾಡಲಾಯಿತು. ಈ ಸಲ ಕಾಂಗ್ರೆಸ್ ಪಕ್ಷವು ಅಸ್ಪೃಶ್ಯ ಜಾತಿಯ ಪಾಮಯ್ಯ ಮುರಾರಿ ಅಥವಾ ಎಚ್.ಬಿ. ಮುರಾರಿ ಅವರಿಗೆ ಟಿಕೆಟ್ ಕೊಡಬಹುದು ಎನ್ನುವುದು ಜನರ ನಿರೀಕ್ಷೆಯಾಗಿತ್ತು.

ಸಿಂಧನೂರು, ಮಸ್ಕಿ ಹಾಗೂ ಮಾನ್ವಿ ಕ್ಷೇತ್ರಗಳ ಕಾಂಗ್ರೆಸ್ ಶಾಸಕರಿಗೆ ಮತ್ತೆ ಸ್ಪರ್ಧಿಸುವ ಅವಕಾಶ ನೀಡಲಾಗಿದೆ. ಅದೇ ರೀತಿ, ದೇವದುರ್ಗ ಹಾಗೂ ಲಿಂಗಸುಗೂರು ವಿಧಾನ ಕ್ಷೇತ್ರಗಳಿಗೆ 2013 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸೋತಿದ್ದ ಅಭ್ಯರ್ಥಿಗಳಿಗೆ ಮರಳಿ ಪ್ರಯತ್ನಿಸಲು ಈಗ ಟಿಕೆಟ್ ನೀಡಲಾಗಿದೆ. ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಟಿಕೆಟ್ ಹಂಚಿಕೆ ಮಾಡುವಾಗ ಯಾವ ಸೂತ್ರವನ್ನು ಪರಿಗಣಿಸಿದಂತೆ ಕಾಣುತ್ತಿಲ್ಲ.

ಭುಗಿಲೆದ್ದ ಅಸಮಾಧಾನ: ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾನ್ವಿ ಕ್ಷೇತ್ರದ ಎಂ. ವೀರಣ್ಣ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ರವಿ ಪಾಟೀಲ ಅವರು ಪಕ್ಷದ ಮುಖಂಡರ ನಿರ್ಣಯದ ಬಗ್ಗೆ ತೀವ್ರ ಅಸಮಾಧಾನ ತಾಳಿದ್ದು, ಅವರ ಮುಂದಿನ ನಡೆಯು ಕುತೂಹಲ ಮೂಡಿಸಿದೆ.

ಗ್ರಾಮೀಣ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷವು ಅಭ್ಯರ್ಥಿಗಳ ಹುಡುಕಾಟದಲ್ಲಿತ್ತು. ಇದೀಗ ರವಿ ಪಾಟೀಲ ಅವರು ಜೆಡಿಎಸ್ ಸ್ಪರ್ಧಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಕಾಂಗ್ರೆಸ್‌ ಟಿಕೆಟ್ ಕೊಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸೊಸೆಯನ್ನು ಕಣಕ್ಕೆ ಇಳಿಸುವುದಾಗಿ ಕಾಂಗ್ರೆಸ್ ಮುಖಂಡ ಎಂ. ವೀರಣ್ಣ ಮೊದಲೇ ಘೋಷಣೆ ಮಾಡಿದ್ದಾರೆ.

ನಗರ ಕ್ಷೇತ್ರದಲ್ಲಿ ಬಂಡಾಯದ ಭೀತಿ?

ರಾಯಚೂರು ನಗರ ಕ್ಷೇತ್ರದಿಂದ ಯಾರೂ ಸ್ಪರ್ಧಿಸಬೇಕು ಎಂಬುದು ಕಾಂಗ್ರೆಸ್ ಗೆ ಕಗ್ಗಂಟಾಗಿ ಪರಿಣಮಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋತಿರುವ ಸೈಯದ್ ಯಾಸೀನ್ ಅವರಿಗೇ ಟಿಕೆಟ್ ನೀಡಬೇಕು ಎನ್ನುವ ಒತ್ತಡ ಜೋರಾಗಿದೆ.

ನಗರದಲ್ಲಿ ಅಲ್ಪಸಂಖ್ಯಾತರ ಮತಗಳು ಹೆಚ್ಚಾಗಿರುವುದರಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದಿದ್ದರೆ ಬಂಡಾಯ ಎದ್ದು ಬೇರೆ ಪಕ್ಷ ಅಥವಾ ಪಕ್ಷೇತರವಾಗಿ ಸ್ಪರ್ಧಿಸಿದರೆ ಕಾಂಗ್ರೆಸ್ ನಿಂದ ಸ್ಫರ್ಧಿಸುವ ಬೇರೆ ಧರ್ಮದ ಅಭ್ಯರ್ಥಿ ಗೆಲುವು ಕಷ್ಟ ಎನ್ನಲಾಗುತ್ತಿದೆ.

ಇನ್ನೊಂದು ಕಡೆ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿರುವ ವಿಧಾನ ಪರಿಷತ್ ಸದಸ ಎನ್. ಎಸ್.ಬೋಸರಾಜು ಅವರು ನಗರ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ಇಟ್ಟುಕೊಂಡಿದ್ದಾರೆ. ಇಬ್ಬರಲ್ಲಿ ಯಾರ ಹೆಸರು ಕೈ ಬಿಡಬೇಕು ಎಂಬುದು ಕಾಂಗ್ರೆಸ್ ವರಿಷ್ಠರಿಗೆ ಚಿಂತೆಯಾಗಿದೆ. ಹೀಗಾಗಿ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ರಾಯಚೂರು ನಗರ ಕ್ಷೇತ್ರದ ಅಭ್ಯರ್ಥಿ ಯ ಹೆಸರು ಪ್ರಕಟಿಸಿಲ್ಲ.

ಕಾಂಗ್ರೆಸ್ ಅಭ್ಯರ್ಥಿಗಳು

ರಾಯಚೂರು ಗ್ರಾಮಾಂತರ- ಬಸನಗೌಡ ದದ್ದಲ
ದೇವದುರ್ಗ - ರಾಜಶೇಖರ ನಾಯಕ
ಲಿಂಗಸುಗೂರು- ಡಿ.ಎಸ್. ಹುಲಗೇರಿ
ಸಿಂಧನೂರು- ಹಂಪನಗೌಡ ಬಾದರ್ಲಿ
ಮಾನ್ವಿ - ಹಂಪಯ್ಯ ನಾಯಕ
ಮಸ್ಕಿ - ಪ್ರತಾಪಗೌಡ ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT